logo
ಕನ್ನಡ ಸುದ್ದಿ  /  ಕರ್ನಾಟಕ  /  Cm Bommai On Reservation: ಮೀಸಲಾತಿಯಲ್ಲಿ ಯಾರಿಗೂ ಅನ್ಯಾಯವಾಗುವುದಿಲ್ಲ; ಅಂತಿಮ ಆದೇಶ ಬಂದಾಗ ಎಲ್ಲವೂ ತಿಳಿಯುತ್ತೆ: ಸಿಎಂ ಬೊಮ್ಮಾಯಿ

CM Bommai on Reservation: ಮೀಸಲಾತಿಯಲ್ಲಿ ಯಾರಿಗೂ ಅನ್ಯಾಯವಾಗುವುದಿಲ್ಲ; ಅಂತಿಮ ಆದೇಶ ಬಂದಾಗ ಎಲ್ಲವೂ ತಿಳಿಯುತ್ತೆ: ಸಿಎಂ ಬೊಮ್ಮಾಯಿ

HT Kannada Desk HT Kannada

Jan 01, 2023 04:49 PM IST

google News

ಸಿಎಂ ಬಸವರಾಜ ಬೊಮ್ಮಾಯಿ ಮಾಧ್ಯಮಗಳೊಂದಿಗೆ ಮಾತನಾಡಿದರು.

  • ವಿರೋಧ ಪಕ್ಷದ ನಾಯಕರು ಮೀಸಲಾತಿ ಬೇಡಿಕೆಗಳನ್ನು ತಮ್ಮ ಸರ್ಕಾರ ಇದ್ದಾಗ ಈಡೇರಿಸಲು ಸಾಧ್ಯವಾಗಿರಲಿಲ್ಲ. ನಾವು ಮಾಡುತ್ತಿರುವುದರಿಂದ ಅವರಿಗೆ ಸಮಸ್ಯೆಯಾಗಿದೆ ಎಂದು ಸಿಎಂ ಬೊಮ್ಮಾಯಿ ವಿಪಕ್ಷ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ ಮಾಧ್ಯಮಗಳೊಂದಿಗೆ ಮಾತನಾಡಿದರು.
ಸಿಎಂ ಬಸವರಾಜ ಬೊಮ್ಮಾಯಿ ಮಾಧ್ಯಮಗಳೊಂದಿಗೆ ಮಾತನಾಡಿದರು.

ಹುಬ್ಬಳ್ಳಿ: ಮೀಸಲಾತಿ ಬಗ್ಗೆ ಅಂತಿಮ ಆದೇಶ ಬಂದಾಗ ಎಲ್ಲವೂ ತಿಳಿಯುತ್ತದೆ. ಮಧ್ಯಂತರ ಆದೇಶದಲ್ಲಿ ನಮ್ಮ ಸರ್ಕಾರದ ಉದ್ದೇಶ ಹೇಳಿದ್ದು, ಅಂಕಿಅಂಶಗಳು ಅಂತಿಮ ವರದಿಯಲ್ಲಿ ಬರುತ್ತದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

ಹುಬ್ಬಳ್ಳಿಯಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿರುವ ಸಿಎಂ, ಅಂಕಿ ಅಂಶಗಳು ಅಂತಿಮ ವರದಿ ಬಂದ ನಂತರ ಸಂಬಂಧಿಸಿದವರೊಂದಿಗೆ ಚರ್ಚೆ ಮಾಡಲಾಗುತ್ತದೆ. ಯಾವುದೇ ಕಾರಣಕ್ಕೂ ಈಗಿರುವ ಹಿಂದುಳಿದ ವರ್ಗಗಳಿಗೆ ಯಾವುದೇ ತೊಂದರೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬಹಳ ವರ್ಷಗಳಿಂದ ಶಿಕ್ಷಣ ಮತ್ತು ಉದ್ಯೋಗದ ಬಗ್ಗೆ ಹಿನ್ನೆಡೆಯಾಗಿದ್ದು, ಮಧ್ಯಂತರ ಆದೇಶವನ್ನು ಒಪ್ಪಿಕೊಂಡಿದ್ದೇವೆ. ಅಗತ್ಯ ಬಿದ್ದರೆ ಸ್ಪಷ್ಟೀಕರಣವನ್ನೂ ನೀಡಲಾಗುವುದು. ಅಂತಿಮ ವರದಿ ಬಂದಾಗ ಎಲ್ಲವೂ ಸ್ಪಷ್ಟವಾಗುತ್ತದೆ. ಇದರಲ್ಲಿ ಯಾರಿಗೂ ಅನ್ಯಾಯ ವಾಗುವುದಿಲ್ಲ. ವಿರೋಧ ಪಕ್ಷದ ನಾಯಕರು ಈ ಬೇಡಿಕೆಗಳನ್ನು ತಮ್ಮ ಸರ್ಕಾರ ಇದ್ದಾಗ ಈಡೇರಿಸಲು ಸಾಧ್ಯವಾಗಿರಲಿಲ್ಲ. ನಾವು ಮಾಡುತ್ತಿರುವುದರಿಂದ ಅವರಿಗೆ ಸಮಸ್ಯೆಯಾಗಿದೆ ಎಂದು ವಿಪಕ್ಷ ನಾಯಕರಿಗೆ ತಿರುಗೇಟು ನೀಡಿದರು.

ಹೊಸ ವರ್ಷ ಎಲ್ಲರಿಗೂ ಹರ್ಷ, ಸುಖ, ಶಾಂತಿ, ನೆಮ್ಮದಿಯನ್ನು ತರಲಿ

ಹೊಸ ವರ್ಷ ಎಲ್ಲರಿಗೂ ಹರ್ಷ, ಸುಖ, ಶಾಂತಿ, ನೆಮ್ಮದಿಯನ್ನು ತರಲಿ. ಕರ್ನಾಟಕ ಹಿಂದೆಂದಿಗಿಂತಲೂ ಹೆಚ್ಚಿನ ಪ್ರಗತಿಯನ್ನು ತರಲಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹಾರೈಸಿದರು.

ಕಳಸಾ ಬಂಡೂರಿ: ಲೋಪದೋಷ ಹುಡುಕುವುದು ಕಾಂಗ್ರೆಸ್ ಮನಸ್ಥಿತಿ

ಕಳಸಾ ಬಂಡೂರಿ ಡಿಪಿಆರ್ ಕುರಿತು ಕಾಂಗ್ರೆಸ್ ಮಾಡಿರುವ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿರುವ ಸಿಎಂ, ಯಾವ ವಿಷಯಕ್ಕೆ ನಾವು ಹಾಗೂ ಅವರು ಹೋರಾಟ ಮಾಡಿ ತಾರ್ಕಿಕ ಅಂತ್ಯ ದೊರೆತು ಕೆಲಸ ಮಾಡುವ ಪ್ರಸಂಗ ಬಂದಿದೆ. 25 ವರ್ಷಗಳ ಹೋರಾಟಕ್ಕೆ ವಿಜಯ ದೊರೆತಿದೆ. ಇದರಲ್ಲಿ ಲೋಪದೋಷಗಳನ್ನು ಹುಡುಕುವುದು ಕಾಂಗ್ರೆಸ್ ಮನಸ್ಥಿತಿಯನ್ನು ಅದು ತೋರಿಸುತ್ತದೆ. ಅವರ ಟೀಕೆ ಟಿಪ್ಪಣಿ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ನಮ್ಮ ದಾರಿ ಸ್ಪಷ್ಟವಾಗಿದೆ. ಡಿಪಿಆರ್ ಆಗಿದೆ, ಆರ್ಥಿಕ ಇಲಾಖೆ ಅನುಮೋದನೆ ಪಡೆದು ಕೆಲಸ ಪ್ರಾರಂಭ ಮಾಡುತ್ತೇವೆ ಎಂದು ಹೇಳಿದರು.

ಒಕ್ಕಲಿಗ, ಪಂಚಮಸಾಲಿ ಸಮುದಾಯಗಳಿಗೆ ನೀಡಿರುವ ಮೀಸಲಾತಿ ಚುನಾವಣೆ ಗಿಮಿಕ್

ಈಗ ನೀಡಿರುವ ಮೀಸಲಾತಿ ಯಾರಿಗೂ ಅರ್ಥ ಆಗಲಿಲ್ಲ. ಒಕ್ಕಲಿಗ, ಪಂಚಮಸಾಲಿ ಸಮುದಾಯಗಳಿಗೆ ನೀಡಿರುವ ಮೀಸಲಾತಿ ಚುನಾವಣೆ ಗಿಮಿಕ್ ಎಂದು ಬಿಜೆಪಿ ನಾಯಕರ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ದಾವಣಗೆರೆಯಲ್ಲಿ 2022ರ ಡಿ.30 ರಂದು ಈ ಬಗ್ಗೆ ಮಾತನಾಡಿರುವ ಅವರು, ಬಿಜೆಪಿ ಸರ್ಕಾರ ಮೀಸಲಾತಿ ಘೋಷಣೆ ಮಾಡಿದೆ. ಆದರೆ, ಎಲ್ಲಿಂದ ಮೀಸಲಾತಿ ಕೊಡುತ್ತಾರೆ ಎನ್ನವುದು ಗೊತ್ತಿಲ್ಲ. ಆರ್ಥಿಕವಾಗಿ ಹಿಂದುಳಿದ ವಲಯದಿಂದ ತೆಗೆದುಕೊಡುತ್ತಾರಾ ಎಂಬ ಬಗ್ಗೆಯೂ ಕೂಡ ತೀರ್ಮಾನ ಆಗಿಲ್ಲ. ಮೀಸಲಾತಿ ನೀಡಿವ ಬಗ್ಗೆ ಸಂವಿಧಾನ ಬದ್ಧವಾಗಿ ತೀರ್ಮಾನ ಆಗಬೇಕಿದೆ. ಯಾಕೆಂದರೆ 1994 ರಲ್ಲಿ ಇಂದ್ರಾ ಸಾಹ್ನಿ ಪ್ರಕರಣದಲ್ಲಿ ಮೀಸಲಾತಿ ಶೇ. 50 ಕ್ಕಿಂತ ಮೀಸಲಾತಿ ಹೆಚ್ಚಾಗಬಾರದು ಎಂಬಾ ಆದೇಶ ಆಗಿದೆ. ಹಾಗೆಯೇ 1992 ರಲ್ಲಿ ಸುಪ್ರೀಂ ಕೋರ್ಟ್ ನ 09 ಜನ ನ್ಯಾಯಮೂರ್ತಿಗಳ ಪೀಠದಲ್ಲಿ ಶೇ 50 ಕ್ಕಿಂತ ಮೀಸಲಾತಿ ಹೆಚ್ಚಾಗಬಾರದು ಎಂದು ತೀರ್ಮಾನ ಆಗಿದೆ ಎಂಬುದನ್ನು ಸಿದ್ದರಾಮಯ್ಯ ನೆನಪಿಸಿದ್ದಾರೆ.

ಚಾಕೊಲೇಟ್ ಕೊಡುವ ಕೆಲಸ

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕುಮಾರ್ ಕೂಡ ಈ ಬಗ್ಗೆ ಮಾತನಾಡಿ, ಸರ್ವರಿಗೂ ಸಮಬಾಳು, ಸಮಪಾಲು. ಜನಸಂಖ್ಯೆ ಆಧಾರದ ಮೇಲೆ ಎಲ್ಲರೂ ತಮ್ಮ ಹಕ್ಕು ಕೇಳ್ತಾರೆ. ಮೀಸಲಾತಿ ಅಂತಾ ಹೇಳಿ ಬಿಜೆಪಿಯವರು ಚಾಕೊಲೇಟ್ ಕೊಡುವ ಕೆಲಸ ಮಾಡುತ್ತಿದ್ದಾರೆ. ಜಾರಿಯಾಗದ ಮೀಸಲಾತಿ ತಂದು ಕರ್ನಾಟಕವನ್ನು ಲಿಟಿಗೇಷನ್ ರಾಜ್ಯ ಮಾಡುತ್ತಿದ್ದಾರೆ ಎಂದು ವಾಗ್ದಾಳಿ‌‌ ನಡೆಸಿದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ