Hijab Case Timeline: ಕರ್ನಾಟಕದಲ್ಲಿ ಹಿಜಾಬ್ ನಿಷೇಧ ಆದೇಶ ವಾಪಸ್ ಎಂದ ಸಿಎಂ, ಘಟನಾವಳಿಗಳ ಕಡೆಗೊಂದು ಹಿನ್ನೋಟ
Dec 22, 2023 10:33 PM IST
ಹಿಜಾಬ್ ನಿಷೇಧ ಆದೇಶ ಹಿಂಪಡೆಯುವುದಾಗಿ ಘೋಷಿಸಿದ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ (ಸಾಂಕೇತಿಕ ಚಿತ್ರ)
ಕರ್ನಾಟಕದಲ್ಲಿ ಹಿಜಾಬ್ ನಿಷೇಧ ಆದೇಶ ವಾಪಸ್ ಪಡೆಯಲು ಸೂಚಿಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು. ಈ ಆದೇಶವನ್ನು ನಿಮಿತ್ತವಾಗಿಟ್ಟುಕೊಂಡು ಈ ವಿವಾದದ ಕಡೆಗೊಂದು ಹಿನ್ನೋಟ ಬೀರಲು ಇದು ಸಕಾಲ.
ಬೆಂಗಳೂರು: ಕರ್ನಾಟಕದಲ್ಲಿ ಹಿಜಾಬ್ ನಿಷೇಧ ಆದೇಶ ಹಿಂಪಡೆಯುವುದಾಗಿ ಮೈಸೂರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಡಿ.22) ಘೋಷಿಸಿದರು. ಇದರೊಂದಿಗೆ ಈ ಹಿಂದಿನ ಬಿಜೆಪಿ ಸರ್ಕಾರ ಜಾರಿಗೊಳಿಸಿದ ಹಿಜಾಬ್ ನಿಷೇಧ ಆದೇಶ ರದ್ದುಗೊಳ್ಳಲಿದ್ದು, ಶಾಲಾ, ಕಾಲೇಜುಗಳಲ್ಲಿ ಪರೀಕ್ಷೆಗಳಿಗೆ ಮುಸ್ಲಿಂ ವಿದ್ಯಾರ್ಥಿಗಳು ಹಿಜಾಬ್ ಧರಿಸಿಕೊಂಡುವುದು ಹೋಗುವುದಕ್ಕೆ ಅವಕಾಶ ಸಿಗಲಿದೆ.
ಹಿಜಾಬ್ ನಿಷೇಧ ಆದೇಶ ಹಿಂಪಡೆಯುತ್ತಿರುವ ಕಾರಣ, ಈ ಹಿಜಾಬ್ ವಿವಾದ ಶುರುವಾದ ಅಂದಿನಿಂದ ಇದುವರೆಗಿನ ಘಟನಾವಳಿಗಳ ಕಿರು ಅವಲೋಕನ ಮಾಡುವುದಕ್ಕೆ ಈ ಹೊತ್ತು ಒಂದು ನಿಮಿತ್ತ.
ಈ ವಿವಾದ ಶುರುವಾಗಿದ್ದು 2022ರ ಜನವರಿಯಲ್ಲಿ. ಉಡುಪಿಯ ಕಾಲೇಜಿನಿಂದ ಶುರುವಾದ ಹಿಜಾಬ್ ವಿವಾದ ದೇಶದ ಅಲ್ಲಲ್ಲಿ ಪುನರಾವರ್ತನೆಯಾಗಿತ್ತು. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ತನಕ ಹೋಗಿತ್ತು. ಕೊನೆಗೆ ಸರ್ಕಾರದ ತೀರ್ಮಾನವನ್ನು ಎತ್ತಿಹಿಡಿದ ತೀರ್ಪು ಪ್ರಕಟವಾಗಿತ್ತು.
ಹಿಜಾಬ್ ನಿಷೇಧ ವಿವಾದದ ಕಡೆಗೊಂದು ಹಿನ್ನೋಟ
2023 ಡಿಸೆಂಬರ್ - ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಲ್ಲಿ, ಹಿಜಾಬ್ ನಿಷೇಧ ಆದೇಶ ಹಿಂಪಡೆಯಲು ಸೂಚನೆ ನೀಡಿರುವುದಾಗಿ ಘೋಷಿಸಿದರು.
2023 ಅಕ್ಟೋಬರ್ - ಶಿಕ್ಷಣ ಸಚಿವ ಎಂಸಿ ಸುಧಾಕರ್ ಅವರು ಹಿಜಾಬ್ ನಿಷೇಧ ಹಿಂಪಡೆಯುವ ವಿಚಾರ ಸರ್ಕಾರದ ಗಮನದಲ್ಲಿದೆ ಎಂಬ ಸುಳಿವು ನೀಡಿದ್ದರು.
2023 ಜೂನ್ - ಚುನಾವಣಾ ಗೆಲುವಿನ ಬಳಿಕ ಕಾಂಗ್ರೆಸ್ ಸರ್ಕಾರ ರಚನೆಯಾದ ಬೆನ್ನಿಗೆ, ಸಚಿವ ಪ್ರಿಯಾಂಕ್ ಖರ್ಗೆ ಹಿಜಾಬ್ ನಿಷೇಧ ಆದೇಶ ಹಿಂಪಡೆಯುವ ಕುರಿತು ಸರ್ಕಾರ ಚಿಂತನೆ ನಡೆಸಲಿದೆ ಎಂದು ಹೇಳಿದ್ದರು.
2023ರ ಏಪ್ರಿಲ್ - ಮೇ: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಹಿಜಾಬ್ ನಿಷೇಧವನ್ನು ಪ್ರಚಾರದ ವಿಷಯವನ್ನಾಗಿ ಕಾಂಗ್ರೆಸ್ ಬಳಸಿತು. ಅಧಿಕಾರಕ್ಕೆ ಬಂದರೆ ನಿಷೇಧ ಹಿಂಪಡೆಯುವುದಾಗಿ ಘೋಷಿಸಿತು.
2023 ಮಾರ್ಚ್ - ಹೈಕೋರ್ಟ್ ತೀರ್ಪಿಗೆ ತಡೆ ಇಲ್ಲದೇ ಇದ್ದ ಕಾರಣ, ಕರ್ನಾಟಕ ಸರ್ಕಾರ ಹಿಜಾಬ್ ನಿಷೇಧ ಕ್ರಮವನ್ನು ಮುಂದುವರಿಸಿತು. ಮಾರ್ಚ್, ಏಪ್ರಿಲ್‌ನಲ್ಲಿ ನಡೆದ ಬೋರ್ಡ್ ಪರೀಕ್ಷೆಗಳಲ್ಲಿ ಶಾಲಾ, ಕಾಲೇಜು ನಿಯಮಗಳನ್ನು ಪಾಲಿಸುವಂತೆ ಆದೇಶ ನೀಡಿತು. ಹಿಜಾಬ್ ಧರಿಸಿ ಬಂದವರಿಗೆ ಪರೀಕ್ಷೆ ಬರೆಯಲು ಅವಕಾಶ ಇಲ್ಲ ಎಂಬುದನ್ನು ಶಾಲಾ, ಕಾಲೇಜುಗಳೂ ಪಾಲಿಸಿದವು.
ಈ ನಡುವೆ, ಸುಪ್ರೀಂ ಕೋರ್ಟ್‌ನಲ್ಲಿ ಈ ಕೇಸ್ ಅನ್ನು ವಿಚಾರಣೆಗೆ ಎತ್ತಿಕೊಳ್ಳುವಂತೆ ಒತ್ತಡ ಹೇರಲಾಗಿತ್ತು. ಸಿಜೆಐ ನ್ಯಾಯಮೂರ್ತಿ ಡಿವೈ ಚಂದ್ರಚೂಡ ಅವರು ಮಾರ್ಚ್ 3ರಂದು, ಈ ಕೇಸ್ ವಿಚಾರಣೆ ಮಾರ್ಚ್ 17ರಂದು ನಡೆಸುವುದಾಗಿ ತಿಳಿಸಿದ್ದರು. ಮಾರ್ಚ್ 9ಕ್ಕೆ ಪರೀಕ್ಷೆ ನಡೆಯುತ್ತದೆ ಎಂದಾಗ ಮಾರ್ಚ್ 13ಕ್ಕೆ ನೋಡೋಣ ಎಂದಿದ್ದರು. ಅಲ್ಲದೆ, ಖಚಿತವಾಗಿ ಸಾಂವಿಧಾನಿಕ ಪೀಠ ರಚಿಸುತ್ತೇವೆ ಎಂದು ಹೇಳಿದ್ದರು.
2022ರ ಅಕ್ಟೋಬರ್ 13 - ಹಿಜಾಬ್ ನಿಷೇಧಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ವಿಭಜಿತ ತೀರ್ಪನ್ನು ನೀಡಿದ್ದಲ್ಲದೆ, ಕರ್ನಾಟಕ ಹೈಕೋರ್ಟ್ ತೀರ್ಪಿಗೆ ಸಂಬಂಧಿಸಿ ವಿಸ್ತೃತ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸುವಂತೆ ಸಿಜೆಐಗೆ ವಹಿಸಿತು.
ಸೆಪ್ಟೆಂಬರ್ 22- ಹಿಜಾಬ್ ನಿಷೇಧಕ್ಕೆ ಸಂಬಂಧಿಸಿದ ಎಲ್ಲ ಅರ್ಜಿಗಳ ವಿಚಾರಣೆ ನಡೆಸಿದ ಬಳಿಕ ತೀರ್ಪನ್ನು ಕಾಯ್ದಿರಿಸಿತು ಸುಪ್ರೀಂ ಕೋರ್ಟ್.
ಜುಲೈ 13 - ಕರ್ನಾಟಕ ಹೈಕೋರ್ಟ್ ತೀರ್ಪಿನ ವಿರುದ್ಧ ಸಲ್ಲಿಕೆಯಾದ ಅರ್ಜಿಗಳನ್ನು ವಿಚಾರಣೆಗೆ ಎತ್ತಿಕೊಳ್ಳಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿತು.
ಮಾರ್ಚ್ 15 - ಕರ್ನಾಟಕ ಹೈಕೋರ್ಟ್ ಹಿಜಾಬ್ ಅಗತ್ಯ ಇಸ್ಲಾಮಿಕ್ ಧಾರ್ಮಿಕ ಆಚರಣೆಯ ಭಾಗವಲ್ಲ ಎಂಬುದನ್ನು ಗಮನಿಸಿತು. ಶಿಕ್ಷಣ ಸಂಸ್ಥೆಗಳಲ್ಲಿ ಶಿರವಸ್ತ್ರವನ್ನು ಧರಿಸುವುದರ ಮೇಲಿನ ರಾಜ್ಯ ಸರ್ಕಾರದ ನಿಷೇಧವನ್ನು ಎತ್ತಿಹಿಡಿಯಿತು. ಹೈಕೋರ್ಟ್‌ನ ಈ ಆದೇಶವನ್ನು ಕೆಲವೇ ಗಂಟೆಗಳಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಯಿತು.
ಫೆಬ್ರವರಿ 11 - ಹೈಕೋರ್ಟ್ ಮಧ್ಯಂತರ ಆದೇಶವನ್ನು ಕಾಯ್ದಿರಿಸಿದ್ದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾದವು.
ಫೆಬ್ರವರಿ 10 - ಕರ್ನಾಟಕ ಹೈಕೋರ್ಟ್ ಶಾಲಾ-ಕಾಲೇಜುಗಳನ್ನು ಪುನರಾರಂಭಿಸುವಂತೆ ಮಧ್ಯಂತರ ಆದೇಶವನ್ನು ನೀಡಿತು. ಆದಾಗ್ಯೂ, ಪ್ರಕರಣದ ವಿಚಾರಣೆ ನಡೆಯುತ್ತಿರುವಾಗಲೇ ಅವರು ಹಿಜಾಬ್ ನಿಷೇಧವನ್ನು ಮುಂದುವರಿಸಲು ಅವಕಾಶ ಮಾಡಿಕೊಟ್ಟರು. ಪ್ರಕರಣದ ವಿಚಾರಣೆಯನ್ನು ಫೆಬ್ರವರಿ 25 ರಂದು ಪೂರ್ಣಗೊಳಿಸಿ ಆದೇಶವನ್ನು ಕಾಯ್ದಿರಿಸಲಾಗಿತ್ತು.
ಫೆಬ್ರವರಿ 8 - ಉಡುಪಿ ಜಿಲ್ಲೆಯ ಕಾಲೇಜಿನಲ್ಲಿ ಎರಡು ಸಮುದಾಯದ ವಿದ್ಯಾರ್ಥಿಗಳ ನಡುವೆ ಘರ್ಷಣೆ ನಡೆಯಿತು. ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿದ ನಂತರ ಸಾರ್ವಜನಿಕ ಸಭೆಗಳನ್ನು ನಿರ್ಬಂಧಿಸಲು ಶಿವಮೊಗ್ಗದಲ್ಲಿ ಸೆಕ್ಷನ್ 144 ವಿಧಿಸಲಾಗಿತ್ತು. ಈ ವಿದ್ಯಮಾನಗಳ ಹಿನ್ನೆಲೆಯಲ್ಲಿ ಪ್ರಕರಣ ನ್ಯಾಯಾಲಯದಲ್ಲಿದ್ದ ಕಾರಣ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯದ ಶಾಲಾ ಕಾಲೇಜುಗಳಿಗೆ 3 ದಿನ ರಜೆ ಘೋಷಿಸಿದ್ದರು.
ಫೆಬ್ರವರಿ 7 - ಸರ್ಕಾರದ ಈ ಆದೇಶವನ್ನು ಫೆಬ್ರವರಿ 7 ರಂದು ಕರ್ನಾಟಕ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಯಿತು.
ಫೆಬ್ರವರಿ 5 - ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆ, ಸಮಗ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಯ ಹಕ್ಕನ್ನು ಉಲ್ಲಂಘಿಸುವ ಉಡುಪುಗಳ ಮೇಲೆ ಕರ್ನಾಟಕ ಸರ್ಕಾರ ನಿಷೇಧ ಹೇರಿತು.
ಜನವರಿ 31 -ವಿದ್ಯಾರ್ಥಿನಿಯೊಬ್ಬರು ಅಮಾನತುಗೊಳಿಸಿದ್ದನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು. ಭಾರತದ ಸಂವಿಧಾನದ ಪ್ರಕಾರ ಹಿಜಾಬ್ ಧರಿಸುವುದು ಮೂಲಭೂತ ಹಕ್ಕಿನ ವ್ಯಾಪ್ತಿಗೆ ಬರುತ್ತದೆ ಎಂದು ವಾದ ಮುಂದಿಟ್ಟಿದ್ದರು.
ಜನವರಿ 26 - ಕರ್ನಾಟಕ ಸರ್ಕಾರವು ಈ ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿಯಲು ತಜ್ಞರ ಸಮಿತಿಯನ್ನು ರಚಿಸಿತು.
ಜನವರಿ 2 - ಕಾಲೇಜು ಆಡಳಿತದ ನಿರ್ಧಾರ ಖಂಡಿಸಿ ಪ್ರತಿಭಟಿಸಿದ ಆರು ವಿದ್ಯಾರ್ಥಿನಿಯರನ್ನು ಅಮಾನತುಗೊಳಿಸಲಾಗಿತ್ತು.
2022ರ ಜನವರಿ 1 - ಉಡುಪಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಓದುತ್ತಿರುವ ಕೆಲವು ಮುಸ್ಲಿಂ ವಿದ್ಯಾರ್ಥಿನಿಯರು ಕ್ಯಾಂಪಸ್‌ನಲ್ಲಿ ಹಿಜಾಬ್ ಧರಿಸಿ ಓಡಾಡುವುದನ್ನು ನಿಷೇಧಿಸಲಾಗಿತ್ತು. ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿ ಬರುತ್ತಿದ್ದು, ಪ್ರತ್ಯೇಕತೆ ಬೇಡ ಎಂಬ ಕಾರಣಕ್ಕೆ ಸರ್ಕಾರದ ಮಾರ್ಗಸೂಚಿ ಪ್ರಕಾರ ಸೂಚನೆ ನೀಡಿತ್ತು. ಇದನ್ನು ವಿರೋಧಿಸಿ ವಿದ್ಯಾರ್ಥಿನಿಯರು ಬೀದಿಗಿಳಿದು ಪ್ರತಿಭಟನೆ ಶುರುಮಾಡಿದರು.