Fact Check: ಬಿಜೆಪಿಗೆ ಲಿಂಗಾಯತರ ಅಗತ್ಯವಿಲ್ಲ ಎಂಬ ಹೇಳಿಕೆಯನ್ನು ಬಿಎಲ್ ಸಂತೋಷ್ ಕೊಟ್ಟಿಲ್ಲ; ವೈರಲ್ ಪತ್ರಿಕಾ ತುಣುಕಿನಲ್ಲಿ ಸುಳ್ಳು ಮಾಹಿತಿ
Jan 05, 2024 06:06 AM IST
ಬಿಜೆಪಿ ನಾಯಕ ಬಿ.ಎಲ್.ಸಂತೋಷ್ (ಎಡಚಿತ್ರ). ಸಂತೋಷ್ ಹೇಳಿಕೆ ಎಂದು ಹಲವರು ಹಂಚಿಕೊಂಡಿದ್ದ ಪತ್ರಿಕಾ ತುಣುಕು (ಬಲಚಿತ್ರ)
- Karnataka Assembly Elections: ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಲಿಂಗಾಯತರ ಕುರಿತು ನೀಡಿರುವ ಹೇಳಿಕೆ ಇದೆ ಎನ್ನಲಾದ ಪತ್ರಿಕಾ ತುಣುಕೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡಿದೆ. ಇದು ಸುಳ್ಳು ಎಂದು ಬಿಜೆಪಿ ಸ್ಪಷ್ಟಪಡಿಸಿದೆ.
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Elections) ಇಡೀ ದೇಶದ ಗಮನ ಸೆಳೆದಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಈ ಚುನಾವಣೆಯನ್ನು ಪ್ರತಿಷ್ಠೆಯನ್ನಾಗಿ ಪರಿಗಣಿಸಿವೆ. ಈವರೆಗೆ ಪ್ರಕಟವಾಗಿರುವ ಹಲವು ಸಮೀಕ್ಷೆಗಳು ಕಾಂಗ್ರೆಸ್‌ಗೆ ಅವಕಾಶ ಇವೆ ಎಂದು ಅಭಿಪ್ರಾಯಪಟ್ಟಿವೆ. ಮತ್ತೊಂದೆಡೆ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಹೆಬ್ಬಾಗಿಲು ಎನಿಸಿರುವ ಕರ್ನಾಟಕದಲ್ಲಿ ಅಧಿಕಾರ ಉಇಸಿಕೊಳ್ಳಲು ನಾಯಕರು ಹಗಲಿರುಳು ಶ್ರಮಿಸುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಎಂದಿನಂತೆ ಹರಿದಾಡುವ ಸುಳ್ಳುಸುದ್ದಿ ಈ ಬಾರಿಯೂ ಕಂಡುಬಂದಿದೆ. ಈ ಪೈಕಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಲಿಂಗಾಯತರ ಕುರಿತು ನೀಡಿರುವ ಹೇಳಿಕೆ ಇದೆ ಎನ್ನಲಾದ ಪತ್ರಿಕಾ ತುಣುಕೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡಿದೆ. ಇಂಥ ಹೇಳಿಕೆಯನ್ನು ಸಂತೋಷ್ ಅವರು ನೀಡಿಲ್ಲ. ಇದು ಸುಳ್ಳು ಮಾಹಿತಿ ಎಂದು ಬಿಜೆಪಿಯ ಮೈಸೂರು ಮಹಾನಗರದ ವಕ್ತಾರ ಎಂ.ಎನ್.ಮೋಹನ್ ಮಾಧ್ಯಮ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಹವಾ ಎಬ್ಬಿಸಿದ ಪತ್ರಿಕಾ ತುಣುಕಿನ ಮಾದರಿ
"ಬಿಜೆಪಿ ನಂಬಿಕೆ ಇಟ್ಟಿರುವುದು ಪಕ್ಷವನ್ನು ಕಟ್ಟಿರುವುದು ಹಿಂದುತ್ವದ ಆಧಾರದ ಮೇಲೆಯೇ ಹೊರತು, ಯಾವುದೋ ನಾಯಕನ ಜಾತಿಯ ಮೇಲಲ್ಲ" ಎಂದು ಆರಂಭವಾಗುವ ಪತ್ರಿಕಾ ತುಣುಕು ಮಾದರಿಯು ಈ ಹೇಳಿಕೆಯನ್ನು ಸಂತೋಷ್ ಅವರೇ ನೀಡಿದ್ದಾರೆ ಎಂದು ತಿಳಿಸುತ್ತದೆ. "ನಾವು ಹಿಂದುತ್ವದಲ್ಲಿ ಮುಂದುವರಿಯುತ್ತೇನೆ, ಲಿಂಗಾಯತರ ಅಗತ್ಯವಿಲ್ಲ" ಎಂಬ ಶೀರ್ಷಿಕೆಯನ್ನು ಈ ಸುದ್ದಿಗೆ ನೀಡಲಾಗಿದೆ. "ಯಡಿಯೂರಪ್ಪ ಏನು ಚಿರಂಜೀವಿಯಲ್ಲ, ಬಿಜೆಪಿ ಅವರನ್ನೇ ನಂಬಿ ಕೂರುವುದಿಲ್ಲ, ನಾವು ಇನ್ನೆಷ್ಟು ದಿನ ಲಿಂಗಾಯತರ ಓಲೈಕೆ ಮಾಡಿಕೊಂಡಿರಬೇಕು" ಎಂದು ಸಂತೋಷ್ ಅವರು ಪ್ರಶ್ನಿಸಿದಂತೆ ಭಾಸವಾಗುವ ರೀತಿಯಲ್ಲಿ ಇಂಟ್ರೊ ಕೊಡಲಾಗಿದೆ. ಸುದ್ದಿಯ 2ನೇ ಪ್ಯಾರಾದಲ್ಲಿ ಸಂತೋಷ್ ಎಲ್ಲಿ ಮಾತನಾಡಿದ್ದಾರೆ ಎನ್ನುವ ಉಲ್ಲೇಖವಿದ್ದು, "ಬೆಂಗಳೂರಿನ ಖಾಸಗಿ ಹೊಟೆಲ್‌ನಲ್ಲಿ ನಡೆದ ಹೋಬಳಿ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು" ಎಂದು ಹೇಳಲಾಗಿದೆ.
ಸುದ್ದಿಯ ಕೊನೆಯಲ್ಲಿ "ಈ ಮಾತಿಗೆ ಅಸಮಾಧಾನ ವ್ಯಕ್ತಪಡಿಸಿದ ಹುಬ್ಬಳ್ಳಿ, ಧಾರವಾಡ, ಮೈಸೂರು, ಶಿವಮೊಗ್ಗ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಕಾರ್ಯಕರ್ತರು ಸಭೆಯಿಂದ ಹೊರ ನಡೆದರು" ಎಂದು ಹೇಳಲಾಗಿದೆ.
ಹಂಚಿಕೊಂಡವರು ಹಲವರು
ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಅವರ ಆಪ್ತರಾಗಿದ್ದ ಹಿರಿಯ ಪತ್ರಕರ್ತರೊಬ್ಬರೂ ಸೇರಿದಂತೆ ಹಲವಾರು ಜನರು ಈ ತುಣುಕನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು. ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದ ಹಲವರು, "ಸುಳ್ಳು ಸುದ್ದಿ ಇರಬಹುದು" ಎಂದು ಶಂಕೆ ವ್ಯಕ್ತಪಡಿಸಿದಾಗ, "ಸಂತೋಷ್ ಹಾಗೆಂದು ಹೇಳಲಿ, ನಂತರ ತೆಗೆಯುತ್ತೇವೆ" ಎಂದು ಪ್ರತಿಕ್ರಿಯಿಸಿದ್ದರು. ಆದರೆ ಬಿಜೆಪಿ ನಾಯಕ ಸಂತೋಷ್ ತಮ್ಮ ಹೆಸರಿನಲ್ಲಿ ಹರಿದಾಡುತ್ತಿರುವ ಪತ್ರಿಕಾ ತುಣುಕಿಗೆ ಯಾವುದೇ ಸ್ಪಷ್ಟನೆ ನೀಡಲಿಲ್ಲ. ಸುಳ್ಳು ಹೇಳಿಕೆ ಹೊತ್ತ ಪತ್ರಿಕಾ ತುಣುಕು ಹಂಚಿಕೊಂಡಿದ್ದ ಕೆಲವರ ಮೇಲೆ ಬಿಜೆಪಿ ಕಾರ್ಯಕರ್ತರು ದೂರು ದಾಖಲಿಸಿದ ನಂತರ ಹಲವು ತಮ್ಮ ವಾಲ್‌ಗಳಿಂದ ಈ ಪತ್ರಿಕಾ ತುಣುಕು ಡಿಲೀಟ್ ಮಾಡಿದರು.
ಈ ಘಟನೆಯ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅವರ ಮಾಧ್ಯಮ ಸಲಹೆಗಾರರಾಗಿದ್ದ ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು, ಹಂಚಿಕೊಂಡಿದ್ದ ಬೈರಪ್ಪ ಹರೀಶ್‌ಕುಮಾರ್, ಹೇಮಂತ್‌ಕುಮಾರ್, ಬಿಂದುಗೌಡ ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಿಸಲಾಯಿತು. ಸುಳ್ಳು ಹೇಳಿಕೆ ಇದ್ದ ವರದಿಯನ್ನು ಪತ್ರಿಕಾ ತುಣುಕಿನ ಮಾದರಿಯಲ್ಲಿ ವಿನ್ಯಾಸ ಮಾಡಿದ್ದ ಮೈಸೂರಿನ ದಿಲೀಪ್ ಗೌಡ ಎಂಬಾತನನ್ನು ಪೊಲೀಸರು ಬಂಧಿಸಿದರು. ಈ ಕುರಿತು ಮೈಸೂರಿನ ಬಿ.ನಿರಂಜನಮೂರ್ತಿ ಎನ್ನುವವರು ಪೊಲೀಸರಿಗೆ ದೂರು ಕೊಟ್ಟಿದ್ದರು.
ಇದು ಸುಳ್ಳು ಸುದ್ದಿ ಏಕೆ?
ಈ ಪತ್ರಿಕಾ ತುಣುಕು ಏಕೆ ಸುಳ್ಳು ಸುದ್ದಿಯನ್ನು ಹೊಂದಿದೆ ಎಂದು ನ್ಯೂಸ್‌ಮೀಟರ್ ಜಾಲತಾಣ ವಿವರವಾಗಿ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ. ಅದರಂತೆ ಈ ಸುದ್ದಿಯ ಬಗ್ಗೆ ಅನುಮಾನ ವ್ಯಕ್ತವಾಗಲು ಇರುವ ಕಾರಣಗಳು ಇವು.
1) ಈ ಪತ್ರಿಕೆಯ ಹೆಸರು ಯಾವುದು ಎಂದು ತಿಳಿಯುವುದಿಲ್ಲ.
2) ಖಾಸಗಿ ಹೊಟೆಲ್‌ನಲ್ಲಿ ಸಭೆ ಯಾವ ದಿನಾಂಕ, ವಾರದಂದು ನಡೆದಿದೆ ಎಂಬ ಉಲ್ಲೇಖ ಇಲ್ಲ.
3) ಒಂದೆಡೆ ಯಡಿಯೂರಪ್ಪ ಹೆಸರು ಹೇಳದೆ ವ್ಯಂಗ್ಯವಾಡಿದರು ಎಂಬ ಉಲ್ಲೇಖವಿದ್ದರೆ ಮತ್ತೊಂದೆಡೆ ಅವರ ಇಬ್ಬರು ಮಕ್ಕಳನ್ನು ಬೆಳೆಸಿದರು ಎಂಬ ಉಲ್ಲೇಖವಿದೆ. ಇದು ಅನುಮಾನಕ್ಕೆ ಕಾರಣವಾಗುತ್ತದೆ.
4) ಸುದ್ದಿ ಒಂದು ಪ್ಯಾರಾಕ್ಕೂ ಮತ್ತೊಂದು ಪ್ಯಾರಾಕ್ಕೂ ಸಂಬಂಧವೇ ಇಲ್ಲದಂತೆ ಒಕ್ಕಣೆಯಿದೆ.
5) ಮೇಲಿನ ನಾಲ್ಕೂ ಅಂಶಗಳೊಂದಿಗೆ ಬಿಜೆಪಿಯ ಕಾರ್ಯಕರ್ತರು ಅಧಿಕೃತವಾಗಿ ಸುದ್ದಿಯನ್ನು ಅಲ್ಲಗಳೆದಿದ್ದಾರೆ. ಹೀಗಾಗಿ ಇದು ಸುಳ್ಳು ಸುದ್ದಿ ಎಂಬ ನಿರ್ಣಯಕ್ಕೆ ಬರಲಾಗಿದೆ.
ಇದನ್ನೂ ಓದಿ: Fact Check: ರೈತರ ಅಕೌಂಟ್ಗೆ ಎಲ್ಲಿ ಬಂತು 3 ಲಕ್ಷ; ಬಿಜೆಪಿ ನಾಯಕ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಅನುಮಾನದ ಮಾಸ್ಕ್ ತೊಡಿಸಿದ ಫೇಸ್ಬುಕ್
ಕರ್ನಾಟಕ ವಿಧಾನಸಭಾ ಚುನಾವಣೆಯ ಸಂಪೂರ್ಣ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
ಎಚ್ಟಿ ಕನ್ನಡ ವಾಟ್ಸಾಪ್ ಕಮ್ಯುನಿಟಿ ಸೇರಿ. ಫೇಸ್ಬುಕ್ ಪೇಜ್ ಲೈಕ್ ಮಾಡಿ, ಟ್ವಿಟರ್ನಲ್ಲಿ ಫಾಲೊ ಮಾಡಿ. ಯುಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ.