logo
ಕನ್ನಡ ಸುದ್ದಿ  /  ಕರ್ನಾಟಕ  /  World Elephant Day2023: ಬುದ್ದಿವಂತ, ಸಂಘ- ಭಾವನಾ ಜೀವಿ ಆನೆಗೂ ಒಂದು ದಿನ: ನಮ್ಮಲ್ಲಿ ಹೀಗಿದೆ ಆನೆ ಬದುಕು ಯೋಜನೆಯ ಹಾದಿ

World Elephant Day2023: ಬುದ್ದಿವಂತ, ಸಂಘ- ಭಾವನಾ ಜೀವಿ ಆನೆಗೂ ಒಂದು ದಿನ: ನಮ್ಮಲ್ಲಿ ಹೀಗಿದೆ ಆನೆ ಬದುಕು ಯೋಜನೆಯ ಹಾದಿ

Umesha Bhatta P H HT Kannada

Aug 12, 2023 06:45 AM IST

google News

ಆನೆಗಳು ಸಾಮಾನ್ಯವಾಗಿ ಸಂಘಜೀವಿಗಳು. ಅವುಗಳ ಬದುಕೇ ವಿಶಿಷ್ಟ. ನಾಗರಹೊಳೆಯಲ್ಲಿ ಕ್ಯಾಮರಾ ಕಣ್ಣಿಗೆ ಕಂಡ ಗಜಪಡೆ.

    • Elephants in India ಏಷ್ಯಾದಲ್ಲಿ ಅತಿ ಹೆಚ್ಚು ಆನೆ ಹೊಂದಿದ ದೇಶ ಭಾರತ. ಏಷ್ಯಾದ ಆನೆಗಳು ಭಾರತದ 16 ರಾಜ್ಯಗಳಲ್ಲಿವೆ. ದೇಶಾದ್ಯಂತ 32 ಸಾವಿರದಷ್ಟು ಆನೆ ಸಂಖ್ಯೆ ಇದೆ ಎನ್ನುವುದು ಗಣತಿಯಿಂದ ಸಿಕ್ಕ ಅಂದಾಜು. ಇದರಲ್ಲಿ ಕರ್ನಾಟಕದ ಪಾಲು ದೊಡ್ಡದು.  ತಮಿಳುನಾಡು-ಕೇರಳದಲ್ಲೂ ಹೆಚ್ಚು ಆನೆಗಳಿವೆ. ಆಗಸ್ಟ್‌ 12 ವಿಶ್ವ ಆನೆ ದಿನ ಹಿನ್ನೆಲೆಯಲ್ಲಿ ಒಂದಿಷ್ಟು ಮಾಹಿತಿ...
ಆನೆಗಳು ಸಾಮಾನ್ಯವಾಗಿ ಸಂಘಜೀವಿಗಳು. ಅವುಗಳ ಬದುಕೇ ವಿಶಿಷ್ಟ. ನಾಗರಹೊಳೆಯಲ್ಲಿ ಕ್ಯಾಮರಾ ಕಣ್ಣಿಗೆ ಕಂಡ ಗಜಪಡೆ.
ಆನೆಗಳು ಸಾಮಾನ್ಯವಾಗಿ ಸಂಘಜೀವಿಗಳು. ಅವುಗಳ ಬದುಕೇ ವಿಶಿಷ್ಟ. ನಾಗರಹೊಳೆಯಲ್ಲಿ ಕ್ಯಾಮರಾ ಕಣ್ಣಿಗೆ ಕಂಡ ಗಜಪಡೆ.

ಆನೆ.. ಮನುಷ್ಯನಂತೆಯೇ ಭಾವನೆಗಳ ನಡುವೆ ಬದುಕುವ ಸಂಘಜೀವಿ ಪ್ರಾಣಿ. ತಾನು, ತನ್ನ ಕುಟುಂಬದ ಸದಸ್ಯರು ಎಂದರೆ ಆನೆಗೆ ಇನಿಲ್ಲದ ಪ್ರೀತಿ. ಆನೆಗಳು ದೈತ್ಯವಾಗಿ ಹೊರನೋಟಕ್ಕೆ ಕಂಡರೂ ಅತೀ ಸೂಕ್ಷ್ಮ ಜೀವಿಗಳು. ಕ್ಷಣಮಾತ್ರದಲ್ಲಿ ವಾಸನೆಯ ಜಾಡು ಹಿಡಿಯಬಲ್ಲ, ಅದಕ್ಕೆ ಸ್ಪಂದಿಸಬಲ್ಲ ದೈತ್ಯಾಕಾರದ ಪ್ರಾಣಿ.

ಶತಮಾನಗಳಿಂದ ಭಾರತದ ಕಾಡುಗಳಲ್ಲಿ ತನ್ನ ಇರುವಿಕೆಯನ್ನು ತೋರಿಸಿಕೊಂಡು ಬಂದಿರುವ ಗಜರಾಜ ಈಗಲೂ ಅದೇ ಶ್ರೇಷ್ಠತೆ, ಹಿರಿಮೆ ಉಳಿಸಿಕೊಂಡಿದ್ದಾನೆ. ಏಷ್ಯಾದಲ್ಲಿ ಅತಿ ಹೆಚ್ಚು ಆನೆಗಳಿರುವುದು ಭಾರತದಲ್ಲಿ. ಭಾರತದ ದಕ್ಷಿಣ ಭಾಗವಂತೂ ಆನೆಗಳ ಆಡುಂಬೋಲ. ಕರ್ನಾಟಕ- ಕೇರಳ-ತಮಿಳುನಾಡಿನ ನೀಲಗಿರಿ ಜೀವವೈವಿಧ್ಯ ತಾಣದಲ್ಲಿ ಆನೆಗಳ ದಂಡೇ ನೆಲೆಸಿದೆ.

ಬಂದಿತು ಆನೆ ಯೋಜನೆ

ಹಿಂದೆಲ್ಲಾ ಆನೆಗಳ ಗಣತಿಯನ್ನೇನೂ ಮಾಡಿರಲಿಲ್ಲ. ಆದರೂ 60 ಸಾವಿರಕ್ಕೂ ಹೆಚ್ಚು ಗಜರಾಜರು ಭಾರತದಲ್ಲಿ ನೆಲೆ ಕಂಡುಕೊಂಡಿದ್ದಾರೆ ಎನ್ನುವ ಮಾಹಿತಿಯಿತ್ತು. ಆಗಲೇ ದೇಶದ ಹಲವು ಕಡೆ ಆನೆಗಳು ನಾಡಿಗೆ ನುಗ್ಗುವ ಪ್ರಸಂಗಗಳು ಎದುರಾಗಿದ್ದವು. ಕಾಡಾನೆ ಹಾವಳಿಯಿಂದ ಬೆಳೆ, ಜೀವ ಹಾನಿಯಾಗುತ್ತಲೇ ಇದ್ದವು. ಕಾಡಾನೆಗಳು ಸತತವಾಗಿ ಪ್ರಾಣ ಕಳೆದುಕೊಳ್ಳುವುದೂ ನಡೆದಿತ್ತು. ಹುಲಿಯಂತೆಯೇ ಆನೆಗೊಂದು ಜೀವ ನೀಡುವ ಪ್ರಯತ್ನ ಶುರುವಾಯಿತು. ಆನೆಯಂಥ ವಿಶಿಷ್ಟ ಪ್ರಾಣಿಯನ್ನು ಮುಂದಿನ ಜನಾಂಗಕ್ಕೂ ಉಳಿಸಬೇಕು. ಆನೆಗಳು ಆನೆಗಳಂತೆಯೇ ತಮ್ಮದೇ ಸಾಮ್ರಾಜ್ಯದಲ್ಲಿ ಬದುಕಿ ಮರುಸೃಷ್ಟಿ ಮಾಡುತ್ತಲೇ ಅಳಿಯಬೇಕು ಎನ್ನುವ ಆಶಯದೊಂದಿಗೆ ಶುರುವಾಗಿದ್ದು ಆನೆ ಯೋಜನೆ(project Elephant).

ಹೇಗಿದೆ ಆನೆ ಯೋಜನೆ ಸ್ಥಿತಿಗತಿ

ಆನೆಗಳ ನೆಲೆಗೆ ಶಕ್ತಿ ನೀಡಲೇಬೇಕೆಂದು ಹಲವು ದಶಕದಿಂದ ಇದ್ದ ಚಿಂತನೆ ಸಾಕಾರಗೊಂಡಿದ್ದು 3 ದಶಕದ ಹಿಂದೆ. 1991-92ರಲ್ಲಿ ಆನೆ ಯೋಜನೆಯನ್ನು ಕೇಂದ್ರ ಸರಕಾರ ಹಲವಾರು ದೂರದೃಷ್ಟಿಯ ಕ್ರಮಗಳೊಂದಿಗೆ ಪ್ರಕಟಿಸಿತು. ಆನೆ ಯೋಜನೆ ಎನ್ನುವುದು ಕೇವಲ ಕಾರ‍್ಯಕ್ರಮವಾಗಿ ಒಂದಷ್ಟು ಕಾಲ ನಡೆಸುವುದು ಇದರ ಉದ್ದೇಶವಾಗಿರಲಿಲ್ಲ. ಇದಕ್ಕೆ ಬೇಕಾದ ಆರ್ಥಿಕ ನೆರವು, ಸ್ಪಷ್ಟ ಕಾರ‍್ಯಕ್ರಮ, ಸಂಶೋಧನಾ ಹಾದಿಗಳನ್ನು ಸಾಕಷ್ಟು ಸಂಸ್ಥೆಗಳ ಸಹಭಾಗಿತ್ವದೊಂದಿಗೆ ಕೇಂದ್ರ ಸರಕಾರ ನೀಡಿತು. ಕೇಂದ್ರ ಸರಕಾರದ ಪರಿಸರ ಹಾಗೂ ಅರಣ್ಯ ಮಂತ್ರಾಲಯ ಇದಕ್ಕೆ ಬೇಕಾದಆರ್ಥಿಕ ನೆರವು, ತಾಂತ್ರಿಕ ಹಾಗೂ ವನ್ಯಜೀವಿ ನಿರ್ವಹಣೆ ಸಲಹೆ ಸಹಕಾರಗಳನ್ನು ನೀಡುತ್ತಾ ಬಂದಿದೆ.

ಏಷಿಯಾದ ಕಾಡಾನೆಗಳು ತಮ್ಮದೇ ಪ್ರದೇಶದಲ್ಲಿ ನೆಲೆಸಬೇಕು, ಒಂದು ಕಡೆಯಿಂದ ಮತ್ತೊಂದು ಕಡೆ ಮುಕ್ತವಾಗಿ ಸಂಚರಿಸಲು ಅನುವಾಗಬೇಕು.ಆನೆ ಯೋಜನೆ ಮೂಲಕ ಆನೆಗಳ ಸಂತತಿಯನ್ನು ಸಂರಕ್ಷಿಸುವ ಧೀರ್ಘಕಾಲಿನ ಕಾರ‍್ಯಕ್ರಮವಿದು. ತಮ್ಮದೇ ನೆಲೆಯನ್ನು ಉಳಿಸುವುದು ಸೇರಿದೆ. ಅವುಗಳ ವಲಸೆ ಹೆದ್ದಾರಿ ಹಾಗೂ ಸಂತತಿ ರಕ್ಷಿಸುವತ್ತ ಗಮನ ಹರಿಸಲಾಗಿದೆ.

ಇದು ಒಂದು ಕಡೆಯಾದರೆ ಆನೆಗಳ ಮೇಲಿನ ಸಂಶೋಧನೆ, ಅವುಗಳ ನಿರ್ವಹಣೆ ಪ್ರಮುಖ ವಾದದ್ದು. ಸ್ಥಳೀಯವಾಗಿ ಆನೆಗಳ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವುದು. ಇದರ ಜತೆಗೆ ಬಂಧಿಯಾಗಿರುವ ಆನೆಗಳಿಗೆ ಸುಧಾರಿತ ಹಾಗೂ ಸೂಕ್ತ ಚಿಕಿತ್ಸೆ ಕೊಡಿಸುವುದು ಸೇರಿದೆ.

ಆನೆ ಉಳಿಸಿಕೊಳ್ಳಲು ಹಲ ಮಾರ್ಗ

ಭಾರತದಲ್ಲಿನ ಆನೆಗಳ ಸಂತತಿ ಹಾಗೂ ಸಂಖ್ಯೆಯನ್ನು ಸಂರಕ್ಷಿಸಿ ವೃದ್ಧಿಸಲು ವೈಜ್ಞಾನಿಕ ನಿರ್ವಹಣಾ ಯೋಜನೆ ರೂಪಿಸುವುದು. ಮನುಷ್ಯ ಹಾಗೂ ವನ್ಯಜೀವಿಗಳ ನಡುವಿನ ಸಂಘರ್ಷ ತಗ್ಗಿಸಿ ಅದಕ್ಕೆ ಕಾಲಕಾಲಕ್ಕೆ ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳುವುದು. ಆನೆ ಪ್ರದೇಶದಲ್ಲಿ ಮಾನವ ಚಟುವಟಿಕೆ ತಗ್ಗಿಸುವುದು. ಕಾಡಾನೆಗಳನ್ನು ಹಂತಕರಿಂದ ಸಂರಕ್ಷಿಸುವುದು. ಅನ್ಯ ಕಾರಣಗಳಿಗೆ ಆಗುವ ಸಾವನ್ನು ನಿಯಂತ್ರಿಸಿ ಆನೆಗಳನ್ನು ರಕ್ಷಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವುದು. ಆನೆಗಳ ರಕ್ಷಣೆಗೆ ಸಾರ್ವಜನಿಕ ಶೈಕ್ಷಣಿಕ ಹಾಗೂ ಜಾಗೃತಿ ಕಾರ‍್ಯಕ್ರಮಗಳನ್ನು ರೂಪಿಸುವುದು ಆನೆ ಯೋಜನೆಯ ಆಶಯ.

ಯೋಜನೆಯಡಿ ಪರಿಸರ ಪ್ರವಾಸೋದ್ಯಮ ಪುನಶ್ಚೇತನಗೊಳಿಸಿ ಅದರಿಂದ ಬರುವ ಆದಾಯವನ್ನು ಆನೆಗಳ ಸಂತಾನಾಭಿವೃದ್ಧಿಗೆ ಬಳಸಲಾಗುತ್ತಿದೆ. ಯೋಜನೆ ಅಡಿ ಸಾಕಷ್ಟು ಕೆಲಸಗಳೂ ಆಗಿವೆ. ಅತ್ಯಾಧುನಿಕ ತಂತ್ರಜ್ಞಾನದ ಭಾಗವಾದ ಮೈಕ್ರೋಚಿಪ್ ಬಳಸಿ ಸಾಕಾನೆಗಳ ನೊಂದಣಿ ಆರಂಭಿಸಿ ಅಧ್ಯಯನ ಮಾಡಲಾಗುತ್ತಿದೆ. ಮೈಕ್ರೋಚಿಪ್ ಆನೆಯ ಎಲ್ಲಾ ವಿವರಗಳನ್ನು ಒದಗಿಸಲಿದೆ. ಅಸ್ಸಾಂ, ಅರುಣಾಚಲ ಪ್ರದೇಶ, ಪಶ್ಚಿಮಬಂಗಾಲ, ಅಂಡಮಾನ್ ಹಾಗೂ ನಿಕೋಬಾರ ನಲ್ಲಿ ಆಗಿದೆ. ಇದಕ್ಕಾಗಿ ತರಬೇತಿಯನ್ನೂ ನೀಡಿ ಗುಣಮಟ್ಟದ ಮೈಕ್ರೋಚಿಪ್‌ಗಳನ್ನು ಬಳಸಲಾಗಿದೆ.

ಕಾರಿಡಾರ್‌ಗಳಿಗೆ ಒತ್ತು

ಯೋಜನೆ ವ್ಯಾಪ್ತಿಗೆ ಸದ್ಯ 16 ರಾಜ್ಯಗಳನ್ನು ಸೇರಿಸಲಾಗಿದೆ. ಆಂಧ್ರಪ್ರದೇಶ, ಅರುಣಾಚಲಪ್ರದೇಶ, ಅಸ್ಸಾಂ, ಜಾರ್ಖಂಡ್, ಕರ್ನಾಟಕ, ಕೇರಳ. ಮೇಘಾಲಯ, ನಾಗಾಲ್ಯಾಂಡ್, ಒರಿಸ್ಸಾ, ತಮಿಳುನಾಡು, ಉತ್ತರಾಂಚಲ, ಉತ್ತರ ಪ್ರದೇಶ ಹಾಗೂ ಪಶ್ಚಿಮಬಂಗಾಲ ರಾಜ್ಯಗಳು ಆನೆ ಯೋಜನೆ ಫಲಾನುಭವಿಗಳು. ಇದರಡಿ ಪ್ರತಿ ವರ್ಷ ಒಂದೊಂದು ರಾಜ್ಯಕ್ಕೆ 10ರಿಂದ 20 ಕೋಟಿ ರೂವರೆಗೆ ಆರ್ಥಿಕ ನೆರವು ಸಿಗುತ್ತದೆ. ಕಡಿಮೆ ಆನೆ ಇರುವ ರಾಜ್ಯಗಳಿಗೆ ಅನುದಾನದ ಪ್ರಮಾಣವೂ ಅಷ್ಟೇ ನೀಡಲಾಗುತ್ತದೆ. 8ನೇ ಪಂಚವಾರ್ಷಿಕ ಯೋಜನೆಗೆ 23 ಕೋಟಿ ರೂ.ಗಳನ್ನು ಆನೆ ಯೋಜನೆಗೆ ಮೀಸಲಿಡಲಾಗಿತ್ತು. ಇದು 10ನೇ ಯೋಜನೆ ಹೊತ್ತಿಗೆ 60 ಕೋಟಿ ರೂ.ಗೆ ಏರಿಕೆಯಾಯಿತು. 12ನೇ ಪಂಚ ವಾರ್ಷಿಕ ಯೋಜನೆಯಲ್ಲಿ ಸಿಕ್ಕಿದ್ದು 100 ಕೋಟಿ ರೂ. ಆನಂತರ 2017 ರಲ್ಲಿ 200 ಕೋಟಿ ರೂ.ಗೆ ಏರಿಸಲಾಯಿತು. ಈಗ ಹುಲಿ ಹಾಗೂ ಆನೆ ಯೋಜನೆ ಸೇರಿ ಅನುದಾನ ನೀಡುವ ಪದ್ದತಿ ಜಾರಿಯಾಗಿದ್ದು, ಆನೆ ಯೋಜನೆ ಅನುದಾನ ಬಹುಪಾಲು ಕಡಿಮೆಯಾಗಿದೆ.

ಈಗಲು ಭಾರತದಲ್ಲಿ 33 ಆನೆ ಮೀಸಲು ಪ್ರದೇಶ ಹಾಗೂ 100 ಕ್ಕೂ ಹೆಚ್ಚು ಆನೆ ಹೆದ್ದಾರಿ( Elephants Corridor)ಗಳ ನಿರ್ವಹಣೆ ಆನೆ ಯೋಜನೆಯಡಿ ಆಗುತ್ತಿದೆ. ಆನೆಗಳಿಗೆ ಪ್ರತ್ಯೇಕ ಹೆದ್ದಾರಿಯನ್ನು ರೂಪಿಸುವುದು. ಇದಕ್ಕಾಗಿಯೇ ಪ್ರಮುಖ ಅರಣ್ಯ ಪ್ರದೇಶದ ಸುತ್ತಮುತ್ತಲಿನ ಖಾಸಗಿ ಜಮೀನು ಸ್ವಾಧೀನಪಡಿಸಿಕೊಳ್ಳುವುದು ಪ್ರಮುಖವಾದದ್ದು ಇದೆಲ್ಲವೂ ಪೂರ್ಣಪ್ರಮಾಣದಲ್ಲಿ ಆಗಿಲ್ಲ. ಆನೆ ಕಾರಿಡಾರ್‌ ಯೋಜನೆಗಳು ಕೆಲವು ಕಡೆ ಆರಂಭಗೊಂಡು ನಂತರ ನಿಂತು ಹೋಗಿವೆ.

ಕರ್ನಾಟಕದಲ್ಲಿ ಕರಿ ಮಾರ್ಗ

ಭಾರತದಲ್ಲಿ 3 ದಶಕದ ಹಿಂದೆಯೇ ಆನೆ ಯೋಜನೆ ಅನುಷ್ಠಾನಗೊಂಡರೂ ಕರ್ನಾಟಕದಲ್ಲಿ ದಶಕದ ಹಿಂದೆಯಷ್ಟೇ ಇದಕ್ಕೊಂದು ರೂಪ ನೀಡಲಾಗಿದೆ. ಮೈಸೂರು ಕೇಂದ್ರವಾಗಿ ಆರಂಭಗೊಂಡ ಆನೆ ಯೋಜನೆ ನಿರ್ದೇಶಕರ ಕಚೇರಿ ಬೆಂಗಳೂರಿಗೆ ಸ್ಥಳಾಂತಗೊಂಡಿದೆ. ಸದ್ಯ ಎಪಿಸಿಸಿಎಫ್‌ ದರ್ಜೆಯ ಅಧಿಕಾರಿ ಶಾಶ್ವತಿ ಮಿಶ್ರ ಆನೆ ಯೋಜನೆ ನಿರ್ದೇಶಕರು. ಕಳೆದ ವರ್ಷ ಇಲ್ಲಿ ಆನೆ ಗಣತಿ ನಡೆಸಲಾಗಿದೆ. ಭದ್ರಾದಿಂದ ಆರಂಭಗೊಂಡು ಹಾಸನ, ಕೊಡಗು, ಬಂಡೀಪುರ, ನಾಗರಹೊಳೆ, ಚಾಮರಾಜನಗರ, ಬನ್ನೇರಘಟ್ಟವರೆಗಿನ ವ್ಯಾಪ್ತಿಯಲ್ಲಿ ಇರುವ ಆನೆಗಳ ಸಂಖ್ಯೆ 6,395. ಮೂರು ದಿನದ ಹಿಂದೆಯಷ್ಟೇ ಅರಣ್ಯ ಸಚಿವ ಈಶ್ವರ ಖಂಡ್ರೆ ಅಧಿಕೃತ ಗಣತಿ ವರದಿಯನ್ನೂ ಬಿಡುಗಡೆ ಮಾಡಿದ್ದು, ಸಂರಕ್ಷಣಾ ಚಟುವಟಿಕೆಗಳ ನಡುವೆ ಕರ್ನಾಟಕದಲ್ಲಿ ಆನೆ ಸಂಖ್ಯೆ ಏರಿಕೆಯಾಗುತ್ತಿದೆ.

ಭವಿಷ್ಯದತ್ತ ಆನೆ..

ಇಷ್ಟೆಲ್ಲ ಪ್ರಯತ್ನಗಳು ದೇಶದಲ್ಲಿ ಆನೆ ಉಳಿಸಲು ನಡೆದುಕೊಂಡೇ ಬಂದಿವೆ. ಆನೆಗಳ ಸಂತತಿ ಹೆಚ್ಚಾಗಿರುವ ರಾಜ್ಯಗಳಲ್ಲಿ ಯೋಜನೆಗೆ ಪ್ರತ್ಯೇಕ ತಂಡವನ್ನೇ ರೂಪಿಸುವುದು. ಆಯಾ ರಾಜ್ಯದಲ್ಲಿ ತಲೆ ತೋರುವ ಕಾಡಾನೆ ಹಾಗೂ ಮಾನವ ಸಂಘರ್ಷವನ್ನು ತಗ್ಗಿಸಲು ಹೇಗೆ ಕ್ರಮ ಕೈಗೊಳ್ಳಬಹುದು ಗಂಭೀರ ಪ್ರಶ್ನೆಗಳಿಗೆ ಆನೆ ಯೋಜನೆ ಉತ್ತರಗಳನ್ನು ಕಂಡುಕೊಳ್ಳಲು ಮುಂದಾಗಿದೆ.

ಆದರೆ ಕೇಂದ್ರ ಸರ್ಕಾರ ನಾಲ್ಕು ತಿಂಗಳ ಹಿಂದೆ ಹುಲಿ ಹಾಗೂ ಆನೆ ಯೋಜನೆಗಳನ್ನು ವಿಲೀನಗೊಳಿಸಿ ಒಂದೇ ಯೋಜನೆ ರೂಪಿಸುವಂತಹ ಚಟುವಟಿಕೆ ರೂಪಿಸಿದೆ.‌ ಅನುದಾನವನ್ನೂ ಕಡಿತಗೊಳಿಸಲು ಮುಂದಾಗಿದೆ. ಸದ್ಯ ಕೆಳಹಂತದಲ್ಲಿ ಹುಲಿ ಹಾಗೂ ಆನೆ ಯೋಜನೆಗಳು ಪ್ರತ್ಯೇಕವಾಗಿದ್ದರೂ ಒಂದೆರಡು ವರ್ಷದಲ್ಲಿ ಬದಲಾವಣೆಗೂ ದಾರಿಯಾಗಬಹುದು ಎನ್ನುವ ಚರ್ಚೆಗಳು ನಡೆದಿವೆ. ಇದರ ನಡುವೆ ಗಜರಾಜ ಹವಾಮಾನ ವೈಪರಿತ್ಯ, ಪರಿಸರ ಪ್ರವಾಸೋದ್ಯಮದ ಒತ್ತಡ, ಆಹಾರದ ಕೊರತೆ, ಕಳ್ಳಬೇಟೆ, ವಿದ್ಯುತ್‌ ಅವಘಡಗಳ ನಡುವೆ ಜೀವ ಕಳೆದುಕೊಳ್ಳುತ್ತಾ ಕಾಡು ಹಾಗೂ ಕಾಡಿನ ಸುತ್ತಮುತ್ತಲೇ ಬದುಕು ಕಂಡುಕೊಂಡಿದ್ದಾನೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ