logo
ಕನ್ನಡ ಸುದ್ದಿ  /  ಕರ್ನಾಟಕ  /  Bandipur Gun Shot: ಬಂಡೀಪುರ ಕಾಡಿನಲ್ಲಿ ಕಡವೆ ಬೇಟೆ, ಗುಂಡೇಟಿಗೆ ಯುವಕ ಬಲಿ, ಉಳಿದವರು ಪರಾರಿ

Bandipur Gun shot: ಬಂಡೀಪುರ ಕಾಡಿನಲ್ಲಿ ಕಡವೆ ಬೇಟೆ, ಗುಂಡೇಟಿಗೆ ಯುವಕ ಬಲಿ, ಉಳಿದವರು ಪರಾರಿ

Umesha Bhatta P H HT Kannada

Nov 05, 2023 11:33 AM IST

google News

ಬಂಡೀಪುರದಲ್ಲಿ ಬೇಟೆಗೆ ಬಂದವರ ಮೇಲೆ ಗುಂಡು ಹಾರಿಸಲಾಗಿದ್ದು,. ಒಬ್ಬಾತ ಮೃತಪಟ್ಟಿದ್ಧಾನೆ

    • Bandipur poaching ಬಂಡೀಪುರ ಹುಲಿ ಧಾಮದಲ್ಲಿ( Bandipur tiger reserve) ಕಡವೆ( Sambar deer) ಬೇಟೆಯಾಡಿದ್ದ ಗುಂಪಿನ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ( Karnataka Forest department) ಗುಂಡಿನ ದಾಳಿ ನಡೆಸಿದ್ದು ಒಬ್ಬಾತ ಮೃತಪಟ್ಟಿದ್ಧಾನೆ.
ಬಂಡೀಪುರದಲ್ಲಿ ಬೇಟೆಗೆ ಬಂದವರ ಮೇಲೆ ಗುಂಡು ಹಾರಿಸಲಾಗಿದ್ದು,. ಒಬ್ಬಾತ ಮೃತಪಟ್ಟಿದ್ಧಾನೆ
ಬಂಡೀಪುರದಲ್ಲಿ ಬೇಟೆಗೆ ಬಂದವರ ಮೇಲೆ ಗುಂಡು ಹಾರಿಸಲಾಗಿದ್ದು,. ಒಬ್ಬಾತ ಮೃತಪಟ್ಟಿದ್ಧಾನೆ

ಗುಂಡ್ಲುಪೇಟೆ: ಬಂಡೀಪುರ ಅರಣ್ಯದಲ್ಲಿ ಬೇಟೆಗೆ ಇಳಿದಿದ್ದ ಗುಂಪಿನ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಭಾನುವಾರ ಬೆಳಗಿನ ಜಾವ ಗುಂಡಿನ ದಾಳಿ ನಡೆಸಿ̧ದ್ದು ಯುವಕನೊಬ್ಬ ಮೃತಪಟ್ಟಿದ್ದಾನೆ. ಇನ್ನೂ ಆರಳೇ ಮಂದಿ ಅಲ್ಲಿಂದ ಪರಾರಿಯಾಗಿದ್ದಾರೆ.

ಈ ಘಟನೆ ನಡೆದಿರುವ ಬಂಡೀಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಮದ್ದೂರು ವಲಯದ ಚನ್ನಮಲ್ಲಪುರ ರಸ್ತೆಯಲ್ಲಿ. ಗುಂಡೇಟಿಗೆ ಬಲಿಯಾದವನನ್ನು ಗುಂಡ್ಲುಪೇಟೆ ತಾಲ್ಲೂಕು ಭೀಮನಬೀಡು ಗ್ರಾಮದ ಮನು(26 ) ಎಂದು ಗುರುತಿಸಲಾಗಿದೆ.

ಮಾಂಸದೊಂದಿಗೆ ಪರಾರಿಯಾಗುವ ವೇಳೆ ಘಟನೆ ನಡೆದಿದೆ. ಘಟನೆ ನಡೆದ ಸ್ಥಳದಲ್ಲಿಯೇ ಶವ ಇದ್ದು,ಪ್ರತಿಭಟನೆ ನಡೆಯಬಹುದು ಎನ್ನುವ ಕಾರಣಕ್ಕೆ ಭಾರೀ ಪೊಲೀಸ್‌ ಭದ್ರತೆಯನ್ನು ಹಾಕಲಾಗಿದೆ. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಧಾವಿಸಿದ್ದಾರೆ.

ಆಗಿದ್ದೇನು

ಕೇರಳ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಬಂಡೀಪುರದ ಮದ್ದೂರು ವಲಯದಲ್ಲಿ ಕಳ್ಳಬೇಟೆ ನಡೆಯುವ ಕುರಿತು ಅರಣ್ಯ ಇಲಾಖೆಗೆ ಮಾಹಿತಿ ಇತ್ತು. ಅದರಲ್ಲೂ ಅಕ್ಕಪಕ್ಕದ ಗ್ರಾಮದ ಕೆಲ ಯುವಕರು ಬೇಟೆಯಾಡಿ ಮಾಂಸ ಮಾರಾಟ ಮಾಡುತ್ತಿರುವ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳು ವಿವರ ಕಲೆಹಾಕಿದ್ದರು.

ಶನಿವಾರ ರಾತ್ರಿಯೂ ಏಳೆಂಟು ಜನರ ಗುಂಪು ಮಧ್ಯರಾತ್ರಿ ಬೇಟೆಗೆಂದು ಬಂದಿತ್ತು. ಈ ಹಿನ್ನೆಲೆಯಲ್ಲಿ ಮದ್ದೂರು ವಲಯದ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ತಂಡ ರಾತ್ರಿಯಿಡೀ ಎಚ್ಚರಿಕೆಯಲ್ಲೇ ಇತ್ತು. ಸಮೀಪದಲ್ಲೇ ಇದ್ದ ಬೇಟೆ ತಡೆ ಶಿಬಿರದಲ್ಲಿ ಕೆಲವರು ಇದ್ದರೆ, ಇನ್ನು ಕೆಲವರು ಗಸ್ತಿನಲ್ಲಿದ್ದರು. ಈ ನಡುವೆ ಮಧ್ಯರಾತ್ರಿ ಹೊತ್ತಿಗೆ ಗುಂಪು ಕಾಡಿನೊಳಕ್ಕೆ ನುಗ್ಗಿ ಕಡವೆಯೊಂದನ್ನು ಬೇಟೆಯಾಡಿದ್ದು. ಅದನ್ನು ಹೊತ್ತುಕೊಂಡು ಓಡುತ್ತಿರುವುದು ಕಂಡು ಬಂದಿದೆ. ಬೆಳಗಿನ 3.30 ರಿಂದ 4ರವರೆಗೂ ಅರಣ್ಯ ಇಲಾಖೆಯವರು ಅವರನ್ನು ಬೆನ್ನಟ್ಟಿಕೊಂಡು ಹೋಗಿದ್ದಾರೆ. ಆರ್‌ಎಫ್‌ಎ ಮಲ್ಲೇಶ್‌ ಹಾಗೂ ಸಿಬ್ಬಂದಿ ನೇತೃತ್ವದಲ್ಲಿ ದಾಳಿ ಮಾಡಿದರೂ ಬೇಟೆಗಾರರು ಜಗ್ಗದೇ ಅಲ್ಲಿಂದ ಮಾಂಸದೊಂದಿಗೆ ಪರಾರಿಯಾಗಲು ಯತ್ನಿಸಿದ್ದಾರೆ. ಬೇಟೆಗಾರರಿಗೆ ಸೂಚನೆ ನೀಡಿದರೂ ನಿಲ್ಲದೇ ಓಡಲು ಯತ್ನಿಸಿದಾಗ ಗುಂಡು ಹಾರಿಸಲಾಗಿದೆ. ಈ ವೇಳೆ ಮನು ಎಂಬಾತನ ದೇಹಕ್ಕೆ ಗುಂಡು ಹೊಕ್ಕು ಆತ ಅಲ್ಲಿಯೇ ಮೃತಪಟ್ಟಿದ್ದಾನೆ. ಜತೆಯಲ್ಲಿದ್ದ ಇತರರು ಪರಾರಿಯಾಗಿದ್ದಾರೆ. ಮನು ಬಿದ್ದ ಸ್ಥಳದಲ್ಲಿಯೇ ಚೀಲದಲ್ಲಿ ಕಡವೆ ಮಾಂಸ ಕೂಡ ಇರುವುದು ಕಂಡು ಬಂದಿದೆ. ಕೂಡಲೇ ಓಡಿಹೋದವರನ್ನು ಹಿಡಿಯಲು ಅರಣ್ಯ ಸಿಬ್ಬಂದಿ ಪ್ರಯತ್ನಿಸಿದರೂ ಅವರು ತಪ್ಪಿಸಿಕೊಂಡಿದ್ದಾರೆ.

ಮಾಂಸ ಬೇಟೆ ಜಾಲ

ಗುಂಡ್ಲುಪೇಟೆ ತಾಲ್ಲೂಕಿನ ಅರಣ್ಯದಂಚಿನ ಕೆಲವು ಹಳ್ಳಿಗಳಲ್ಲಿ ಯುವಕರ ಗುಂಪು ಹೀಗೆ ವನ್ಯಜೀವಿಗಳನ್ನು ಬೇಟೆಯಾಡಿ ಮಾಂಸವನ್ನು ಗುಂಡ್ಲುಪೇಟೆ, ಮೈಸೂರು, ಕೇರಳಕ್ಕೆ ಮಾರಾಟ ಮಾಡುವ ದಂದೆ ನಡಸುತ್ತಿದೆ. ಅದರಲ್ಲೂ ರಾತ್ರಿ ವೇಳೆ ಕಾಡಿಗೆ ನುಗ್ಗಿ ಜಿಂಕೆ ಇಲ್ಲವೇ ಕಡವೆಯನ್ನು ಬೇಟೆಯಾಡುವುದು ನಡೆದುಕೊಂಡು ಬಂದಿದೆ. ಈ ಗುಂಪೂ ಕೂಡ ಇಂತಹದೇ ಬೇಟೆಯಲ್ಲಿ ತೊಡಗಿತ್ತು.

ಈ ರೀತಿ ಕೆಲವು ದಿನಗಳಿಂದ ಬೇಟೆಯಾಡುವುದು ನಡೆದಿದೆ. ಬೇಟೆಗಾರರ ಗುಂಪು ಹಿಡಿಯಲು ನಾವು ಪ್ರಯತ್ನಿಸಿದೆವು. ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದರು. ಇದರಲ್ಲಿ ವೃತ್ತಿಪರವಾಗಿ ಬೇಟೆಯಾಡುವ ಕೆಲವರಿದ್ದು. ಅವರೆಲ್ಲಾ ತಲೆಮರೆಸಿಕೊಂಡಿದ್ದಾರೆ. ಅವರ ಮಾಹಿತಿ ಸಂಗ್ರಹಿಸುತ್ತಿದ್ದು, ಎಲ್ಲರನ್ನೂ ಬಂಧಿಸಲಾಗುವುದು ಎಂದು ಅರಣ್ಯ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಈಗಷ್ಟೇ ಮದುವೆಯಾಗಿದ್ದ

ಬೇಟೆಯಾಡಲು ಹೋಗಿ ಸಿಕ್ಕಿಬಿದ್ದು ಗುಂಡೇಟಿಗೆ ಬಲಿಯಾಗಿರುವ ಭೀಮನ ಬೀಡು ಗ್ರಾಮದ ಮನು ಎಂಬಾತ ಮದುವೆಯಾಗಿ ವರ್ಷವಾಗಿದೆ. ಸಣ್ಣ ಮಗುವಿದೆ. ಮನೆಯಲ್ಲಿ ಆತನ ಸಾವಿನ ಸುದ್ದಿ ಕೇಳಿ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.

ಈತನಿಗೆ ಇವೆಲ್ಲಾ ಗೊತ್ತಿರಲಿಲ್ಲ. ಊರಿನ ಕೆಲವರು ಸೇರಿಕೊಂಡು ಬೇಟೆಗೆ ಕರೆದುಕೊಂಡು ಹೋಗಿದ್ಧಾರೆ. ಈತ ಸಿಕ್ಕಿಬಿದ್ದು ಜೀವ ಕಳೆದುಕೊಂಡಿದ್ದಾನೆ. ಈತನಿಗೂ ಏನೂ ಗೊತ್ತಿರಲಿಲ್ಲ.ಅಮಾಯಕ ಜೀವ ಕಳೆದುಕೊಂಡಿದ್ಧಾನೆ ಎಂದು ಸ್ಥಳೀಯರು ಬೇಸರದಿಂದಲೇ ಹೇಳಿದರು.

ಅಧಿಕಾರಿಗಳ ದೌಡು

ಘಟನೆ ನಡೆದ ಸ್ಥಳಕ್ಕೆ ಬಂಡೀಪುರ ಹುಲಿಯೋಜನೆ ನಿರ್ದೇಶಕ ಡಾ.ಪಿ.ರಮೇಶ್‌ ಕುಮಾರ್‌, ಎಸಿಎಫ್‌ ರವೀಂದ್ರ, ಚಾಮರಾಜನಗರ ಎಸ್ಪಿ ಪದ್ಮಿನಿಸಾಹು, ಗುಂಡ್ಲುಪೇಟೆ ಇನ್ಸ್‌ಪೆಕ್ಟರ್‌ ಪರಶಿವಮೂರ್ತಿ, ಎಸ್‌ಐ ಸಾಹೇಬಗೌಡ ಮತ್ತಿತರರು ಭೇಟಿ ನೀಡಿದ್ದರು . ಈ ಕುರಿತು ಗುಂಡ್ಲುಪೇಟೆ ಠಾಣೆಯಲ್ಲಿ ದೂರು ದಾಖಲಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ