Tiger Day: ಹುಲಿ ದಿನದ ಸುತ್ತಮುತ್ತ - ಭಾರತದ ಹುಲಿ ಯೋಜನೆಗೆ ಐವತ್ತು: ಕಾಡಿನ ಅನಭಿಷಿಕ್ತ ದೊರೆಗೆ ತಪ್ಪಲಿ ಆಪತ್ತು
Jul 29, 2023 07:09 AM IST
ಭಾರತದಲ್ಲಿ ಹುಲಿಗಳು ಹಾಗೂ ಹುಲಿ ಯೋಜನೆ ಹಾದಿಯ ನೋಟ.. ಚಿತ್ರ: ಸಂತೋಷ್ ಸಾಲಿಗ್ರಾಮ
- ಭಾರತದಲ್ಲಿ ಐದು ದಶಕದ ಹಿಂದೆ ಶುರುವಾದ ಹುಲಿ ಯೋಜನೆ( Project Tiger) ಫಲವಾಗಿ ಭಾರತದಲ್ಲಿ ಹುಲಿ ಸಂರಕ್ಷಣೆ ಹಾಗೂ ಪ್ರವಾಸೋದ್ಯಮ ಗಟ್ಟಿ ನೆಲೆ ಕಂಡುಕೊಂಡಿದೆ. ಹದಿಮೂರು ವರ್ಷದಿಂದ ಜುಲೈ 29 ರಂದು ಆಚರಿಸಲಾಗುತ್ತಿರುವ ಹುಲಿ ದಿನ ( Tiger Day) ಈಗ ಮತ್ತೆ ಬಂದಿದೆ. ಭಾರತದಲ್ಲಿ ಹುಲಿ ಹಾಗೂ ಹುಲಿ ಯೋಜನೆ ಏನಾಗಿದೆ ಎನ್ನುವ ವಿವರ ಇಲ್ಲಿದೆ.
ಕಾಡಿನ ಅನಭಿಷಿಕ್ತ ದೊರೆಯಂತೆ ಭಾರತದ 53 ಪ್ರಮುಖ ಅರಣ್ಯ ಪ್ರದೇಶಗಳಲ್ಲಿ ನೆಲೆ ಕಂಡುಕೊಂಡಿದ್ದಾನೆ ಹುಲಿರಾಯ.
ಇಡೀ ಅರಣ್ಯ ಪ್ರದೇಶ ಹಾಗೂ ಅಲ್ಲಿನ ಜೀವರಾಶಿಯ ಅಳಿವು ಉಳಿವಿನ ನಾಯಕನಂತೆ ಕಾಣುವ ಹುಲಿ ಸಂರಕ್ಷಣೆಯ ಧ್ವನಿ ಭಾರತದಲ್ಲಿ ಜೋರಾಗಿದೆಯೇ ಇದೆ. ಹುಲಿಯ ಹೆಸರಿನಲ್ಲಿ ಪ್ರವಾಸೋದ್ಯಮವೂ ಬೆಳೆದು ವನ್ಯಜೀವಿಗಳನ್ನು ನೋಡುವ ತವಕವೂ ಈಗ ಹೆಚ್ಚಿದೆ.
ಅದು 20 ನೇ ಶತಮಾನದ ಆರಂಭ. ಆಗ ಹುಲಿಗಳ ಸಂಖ್ಯೆ ಬರೋಬ್ಬರಿ 10 ಸಾವಿರದಷ್ಟು ಎನ್ನುವ ಅಂದಾಜಿತ್ತು. ದೇಶದ ಬಹುತೇಕ ಅರಣ್ಯದಲ್ಲಿ ಹುಲಿ ಯಥೇಚ್ಛವಾಗಿಯೇ ಇದ್ದವು. ಬರು ಬರುತ್ತಾ ಹುಲಿಯ ಮೇಲೆ ಮನುಷ್ಯನ ಸವಾರಿ ಹೆಚ್ಚಾಗತೊಡಗಿದಂತೆ ಸಂಖ್ಯೆಯೂ ಕ್ಷೀಣವಾಗುತ್ತಾ ಬಂದಿತು.
1970 ರ ಹೊತ್ತಿಗೆ ಹುಲಿಗಳ ಕಾಳಜಿ ಧ್ವನಿಯೂ ಕೇಳಿ ಬರತೊಡಗಿತು. ದೇಶದಲ್ಲಿ ಹುಲಿಗಳ ಸಂಖ್ಯೆ ಎಷ್ಟಿರಬಹುದು ಎನ್ನುವ ಅಂಶವೊಮ್ಮೆ ಕೇಂದ್ರ ಸರಕಾರದ ಮಟ್ಟದಲ್ಲಿ ಚರ್ಚೆಗೆ ಬಂದಿತು. ಇದರ ಭಾಗವಾಗಿಯೇ ಆಗ ಹುಲಿ ಹತ್ಯೆಯನ್ನು ರಾಷ್ಟಿಯವಾಗಿ ನಿಷೇಧಿಸಲಾಯಿತು. ಹುಲಿ ಸಂರಕ್ಷಣೆಯ ಮೊದಲ ಹೆಜ್ಜೆಯಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಮೊದಲ ಸೂಚನೆಯಿದು.
ಹುಲಿಗಳ ಖಚಿತ ಅಂಕಿ ಅಂಶಗಳನ್ನು ಪಡೆದುಕೊಳ್ಳಲೆಂದೇ, ಒಮ್ಮೆ ಗಣತಿಯಾಗಿಬಿಡಲಿ ಎಂದು ತೀರ್ಮಾನಿಸಲಾಯಿತು. 1972ರಲ್ಲಿ ಮೊದಲ ಬಾರಿ ನಡೆದದ್ದು ಹುಲಿ ತಲೆ ಎಣಿಸುವ ಲೆಕ್ಕ. ಆಗ ಸಿಕ್ಕ ಸಂಖ್ಯೆಗಳು ಆತಂಕಕಾರಿಯೇ ಆಗಿದ್ದವು. 1972ರಲ್ಲಿ ಸಿಕ್ಕ ಹುಲಿಗಳ ಸಂಖ್ಯೆ 1827. ಇದರಿಂದ ಗಾಬರಿಗೊಂಡ ಕೇಂದ್ರ ಸರಕಾರ 1972-73ರಲ್ಲಿ ವನ್ಯಜೀವಿ ಸಂರಕ್ಷಣೆ ಕಾಯಿದೆಯನ್ನು ಕಟ್ಟು ನಿಟ್ಟಾಗಿ ಜಾರಿಗೆ ಬಂದಿತು. ಆಗ ಹುಲಿ ಉಳಿಸುವ ಕಾರ‍್ಯಪಡೆಯೂ ರಚನೆಯಾಯಿತು. ಅದು ಹುಲಿ ಸಂರಕ್ಷಣೆಗೆ ಇಟ್ಟ 2ನೇ ಹೆಜ್ಜೆ.
ಇದರ ಮುಂದುವರೆದ ಭಾಗವೇ 1973ರಲ್ಲಿ ಚಾಲನೆಗೆ ದೊರೆತಿದ್ದು ಹುಲಿ ಯೋಜನೆ. ದೇಶದಲ್ಲಿ ಹುಲಿಗೆ ಪ್ರತ್ಯೇಕ ಇರುವ ಆವಾಸ ಸ್ಥಾನವನ್ನು ಸಂರಕ್ಷಿಸುವುದು.ಮಿತಿ ಮೀರಿದ್ದ ಕಳ್ಳ ಬೇಟೆ ತಡೆಯುವುದು ಉದ್ದೇಶವಾಗಿತ್ತು. ಈ ಕಾರಣಕ್ಕಾಗಿ ಹುಲಿಯ ಮೂಲ ನೆಲೆಯನ್ನು ಗಟ್ಟಿಗೊಳಿಸಲೆಂದೇ ಕೋರ್ ಪ್ರದೇಶ ರೂಪಿಸಲಾಯಿತು.
ಎಲ್ಲೆಲ್ಲಿ ಹುಲಿ ಯೋಜನೆ
1973ರ ಆರಂಭದಲ್ಲಿ ದೇಶದ 9 ಹುಲಿ ಸಂರಕ್ಷಿತ ಪ್ರದೇಶಗಳನ್ನು ಘೋಷಿಸಲಾಯಿತು. ಅದರಲ್ಲಿ ಕರ್ನಾಟಕದ ಬಂಡೀಪುರವೂ ಒಂದು. ಮನಾಸ್(ಅಸ್ಸಾಂ), ಪಲಮಾವು(ಬಿಹಾರ), ಸಿಮ್ಲಿಪಾಲ್(ಒರಿಸ್ಸಾ), ಕಾರ್ಬೆಟ್(ಉತ್ತರಾಂಚಲ), ಕನ್ಹಾ(ಮಧ್ಯಪ್ರದೇಶ), ಮೇಲಘಾಟ್(ಮಹಾರಾಷ್ಟ್ರ), ರಣತಾಂಭೋರ್(ರಾಜಸ್ತಾನ), ಸುಂದರಬನ್ಸ್(ಪಶ್ಚಿಮಬಂಗಾಲ) ಹುಲಿ ಯೋಜನೆ ವ್ಯಾಪ್ತಿಗೆ ಬಂದ ರಾಷ್ಟ್ರೀಯ ಉದ್ಯಾನವನಗಳು. ಆಗ ಇದ್ದ ಹುಲಿ ಸಂರಕ್ಷಣೆ ಪ್ರದೇಶ ಸುಮಾರು 16339 ಚದರ ಕಿಮಿ. ಇದ್ದ ಹುಲಿಗಳ ಸಂಖ್ಯೆ 268. ಅಲ್ಲಿಂದ ಇದು 27 ಸಂರಕ್ಷಿತ ಪ್ರದೇಶಗಳಿಗೆ ವಿಸ್ತರಣೆಯಾಯಿತು. ಆಗ 37761 ಚದರ ಕಿ.ಮಿ. ವ್ಯಾಪ್ತಿಯನ್ನು ಸೇರಿಸಿಕೊಳ್ಳಲಾಯಿತು. ಈ ವ್ಯಾಪ್ತಿಯಲ್ಲಿದ್ದ ಹುಲಿಗಳ ಸಂಖ್ಯೆ 1498. ಸದ್ಯ 53 ಸಂರಕ್ಷಿತ ಪ್ರದೇಶಗಳಿಗೆ ಇದನ್ನು ವಿಸ್ತರಿಸಲಾಗಿದೆ. ಬಂಡೀಪುರ, ರಣತಾಂಭೂರ್ ಹಾಗೂ ಕನ್ಹಾ ಹುಲಿ ಯೋಜನೆ ಪ್ರದೇಶವೂ ಮನುಷ್ಯ ಮುಕ್ತವಾಗಿ ಘೋಷಣೆಯಾಗಿವೆ.
ಕರ್ನಾಟಕದಲ್ಲಿ ಹುಲಿ
ಕರ್ನಾಟಕದಲ್ಲೂ ಹುಲಿ ಹೆಜ್ಜೆ ಪ್ರಬಲವಾಗಿಯೇ ಇದೆ. ಸುಮಾರು 600 ರಷ್ಟು ಹುಲಿಗಳಿರುವ ಅಂದಾಜಿದೆ. ಬಂಡೀಪುರ, ನಾಗರಹೊಳೆ, ಭದ್ರಾ, ಉತ್ತರ ಕನ್ನಡದ ಅಣಶಿ-ದಾಂಡೇಲಿ , ಬಿಳಿರಂಗನಬೆಟ್ಟ ವನ್ಯಜೀವಿ ಪ್ರದೇಶವೂ ಈಗ ಹುಲಿ ಯೋಜನೆ ವ್ಯಾಪ್ತಿಗೆ ಸೇರಿಸಲಾಗಿದೆ. ಕುದುರೆಮುಖ ಹಾಗೂ ಚಾಮರಾಜನಗರ ಜಿಲ್ಲೆಯ ಮಲೈ ಮಹಾದೇಶ್ವರ ವಿಭಾಗವನ್ನೂ ಹುಲಿ ಯೋಜನೆಗೆ ಸೇರಿಸುವ ಅಧಿಕೃತ ಘೋಷಣೆ ಬಾಕಿಯಿದೆ. ಕರ್ನಾಟಕದಲ್ಲಿ ಈಗ ಹುಲಿ ಯೋಜನೆ ಅರಣ್ಯ ಪ್ರದೇಶ 4 ಸಾವಿರ ಚದರ ಕಿ.ಮಿನಷ್ಟು.
ಕರ್ನಾಟಕದ ಬಂಡೀಪುರದಲ್ಲಿ ವರ್ಷಗಳ ಹಿಂದೆಯೇ ಅರಣ್ಯ ಪ್ರದೇಶದಲ್ಲಿದ್ದ ಎಲ್ಲಾ ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.ಅದೇ ರೀತಿ ಭದ್ರಾ ವನ್ಯಜೀವಿ ವಲಯದಲ್ಲೂ ಸ್ಥಳಾಂತರ ಕರ‍್ಯ ಮುಗಿಸಲಾಗಿದೆ. ತಡವಾಗಿ ಹುಲಿ ಯೋಜನೆಗೆ ಸೇರ್ಪಡೆಯಾದ ನಾಗರಹೊಳೆ ವನ್ಯಜೀವಿ ವಿಭಾಗದಲ್ಲಿ ಸದ್ಯ ಕುಟುಂಬಗಳ ಸ್ಥಳಾಂತರ ಪ್ರಗತಿಯಲ್ಲಿದೆ. ಒಂದು ಸಾವಿರಕ್ಕೂ ಹೆಚ್ಚು ಕುಟುಂಬಗಳನ್ನು ಗುರುತಿಸಿ ಶೇ. 70 ರಷ್ಟು ಪ್ರಕ್ರಿಯೆ ಮುಗಿಸಲಾಗಿದೆ. ಸ್ಥಳಾಂತರಗೊಂಡ ಕುಟುಂಬಗಳಿಗೆ ತಲಾ 15ಲಕ್ಷ ರೂ ಆರ್ಥಿಕ ನೆರವು, ಕೃಷಿ ಭೂಮಿ ಹಾಗೂ ವಸತಿ ಸೌಲಭ್ಯ ಕಲ್ಪಿಸಿ ಮೂಲಸೌಕರ್ಯಗಳನ್ನು ನೀಡಲಾಗಿದೆ.
ಹುಲಿ ಯೋಜನೆ ಆಯ್ಕೆ ಹೇಗೆ
ಹುಲಿಯೋಜನೆ ಸಂರಕ್ಷಿತ ಪ್ರದೇಶ ಆಯ್ಕೆಗೆ ಮಾನಂದಡವಾಗಿದ್ದು ಹುಲಿಗಳ ಸಂಖ್ಯೆಯ ಜತೆಗೆ ವಾಸಕ್ಕೆ ಪೂರಕವಾದ ಅಲ್ಲಿನ ದಟ್ಟಾರಣ್ಯದ ಪ್ರಮಾಣ. ಇದನ್ನು ಗಮನಿಸಿಯೇ ಮೊದಲ ಹಂತದಲ್ಲಿ 9 ಪ್ರದೇಶ ಗುರುತಿಸಲಾಯಿತು. ಇನ್ನಷ್ಟು ಅರಣ್ಯಗಳಲ್ಲಿ ಹುಲಿ ಸಂರಕ್ಷಣೆ ಸಾಧ್ಯವಿದೆ ಎನ್ನುವ ಮಾಹಿತಿ ಆಧರಿಸಿ ವಿಸ್ತರಿಸಲಾಗಿದೆ. ಅದರಲ್ಲೂ ಹುಲಿ ಯೋಜನೆಯನ್ನು ಪ್ರಮುಖ ವಂಶಾವಳಿ ರಕ್ಷಣಾ ಪ್ರದೇಶ ಎಂದೇ ಹೇಳಲಾಗುತ್ತದೆ.
ಜನಸಮುದಾಯದಿಂದ ಮುಕ್ತವಾದ ವನ್ಯಜೀವಿಗಳಿಗೆ ಮಾತ್ರ ಮೀಸಲಾದ ಸ್ಥಳ ನಿಗದಿಪಡಿಸುವ(ಕೋರ್ ಬಫರ್) ಲೆಕ್ಕಾಚಾರದ ಮೇಲೆಯೇ ಹುಲಿ ಸಂರಕ್ಷಿತ ಪ್ರದೇಶ ಗುರುತಿಸಲಾಗಿದೆ. ಅಲ್ಲಿ ಮನುಷ್ಯನ ವಾಸ ಹಾಗೂ ಅರಣ್ಯ ಚಟುವಟಿಕೆಗಳನ್ನು ನಿಷೇಧಿಸುವುದು ಪ್ರಮುಖವಾದದ್ದು. ಸಣ್ಣ ಸಣ್ಣ ಅರಣ್ಯ ಪ್ರದೇಶದಲ್ಲಿ ಮನುಷ್ಯನ ಸಂಪರ್ಕ ಯಥೇಚ್ಛವಾಗಿರುತ್ತದೆ. ಅರಣ್ಯದ ಅವಲಂಬನೆಯೂ ಇದಕ್ಕೆ ಕಾರಣ. ಆದರೆ ಬಫರ್ ವಲಯವನ್ನು ಬಹುಪಯೋಗಿ ಪ್ರದೇಶ ಎಂದು ಗುರುತಿಸಿ, ಹುಲಿಗಳು ಸಹಜವಾಗಿ ಹುಟ್ಟಿ ಬೆಳೆದ ಬೀಡು ಪ್ರದೇಶವನ್ನಾಗಿಯೇ ಉಳಿಸುವುದು. ಇದರಿಂದ ಹುಲಿಗಳ ವನ್ಯತ್ವ ಯಥಾರೀತಿ ಉಳಿಸಿಕೊಳ್ಳಲು ಸಹಕಾರಿ. ಅದೇ ರೀತಿ ಅರಣ್ಯಕ್ಕೆ ಹೊಂದಿಕೊಡ ಪ್ರದೇಶದಲ್ಲಿರುವ ಜನ ವಸತಿಯನ್ನು ಬೇರ್ಪಡಿಸಿ ಹುಲಿ ಆವಾಸಸ್ಥಾನಕ್ಕೆ ಮುಕ್ತವಾಗಿಸುವುದು ಸೇರಿದೆ.
ಹುಲಿ ಯೋಜನೆಗೂ ಆರ್ಥಿಕ ಹೊಡೆತ
ಹುಲಿ ಯೋಜನೆ ಎಂದೂ ಆರ್ಥಿಕ ಕೊರತೆ ಎದುರಿಸಿದ್ದಿಲ್ಲ. ಆರಂಭದಲ್ಲಿ ಇದು ಸಂಪೂರ್ಣ ಕೇಂದ್ರ ಆರ್ಥಿಕ ನೆರವಿನ ಕಾರ‍್ಯಕ್ರಮವಾಗಿತ್ತು, 1980-81ರಲ್ಲಿ ಕೇಂದ್ರ ಸರಕಾರ ಪ್ರಾಯೋಜಿತ ಯೋಜನೆಯಾಗಿ ಬದಲಾಯಿತು. ಇದರಿಂದಾಗಿಯೇ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸಹಭಾಗಿತ್ವ ಹುಲಿ ಯೋಜನೆಗೆ ಬಂದಿತು. ವಿಶ್ವ ವನ್ಯಜೀವಿ ನಿಧಿ(ವರ್ಲ್ಡ್ ವೈಲ್ಡ್ಲೈಫ್ ಫಂಡ್) ರೂಪದಲ್ಲಿ 1 ಮಿಲಿಯನ್ ಅಮೆರಿಕನ ಡಾಲರ್ ಆರ್ಥಿಕ ನೆರವನ್ನು ಅತ್ಯಾಧುನಿಕ ಯಂತ್ರೋಪಕರಣಗಳು, ತಜ್ಞರ ಬಳಕೆ ಹಾಗೂ ಸಾಹಿತ್ಯ ವಸ್ತುಗಳ ಸಿದ್ದತೆಗೆಂದು ನೀಡಿತು. ಅರಣ್ಯ ಕರ‍್ಯಕ್ರಮಗಳ ಅಡಿಯೂ ರಾಜ್ಯ ಸರಕಾರಗಳು ಹುಲಿ ಯೋಜನೆ ಆರ್ಥಿಕ ಸಹಾಯ ಒದಗಿಸುತ್ತಾ ಬಂದಿವೆ
ಆದರೆ ಮೂರ್ನಾಲು ವರ್ಷದಿಂದ ದೇಶದ ರಾಷ್ಟ್ರೀಯ ಪ್ರಾಣಿಯಾಗಿರುವ ಹುಲಿ ಸಂರಕ್ಷಣೆಗೆ ಪ್ರತಿ ವರ್ಷ ಕೇಂದ್ರ ಸರ್ಕಾರ ನೀಡುತ್ತಿರುವ ಅನುದಾನ ಕಡಿತವಾಗುತ್ತಲೇ ಇದೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ( ಎನ್‌ಟಿಸಿಎ) 2015-16ರಲ್ಲಿ 350 ಕೋಟಿ ರೂ. ಅನುದಾನ ಒದಗಿಸಿ ಪೂರ್ತಿ ಬಿಡುಗಡೆ ಮಾಡಲಾಗಿತ್ತು. ಹಿಂದಿನ ವರ್ಷ 300 ಕೋಟಿ ರೂ. ಪ್ರಕಟಿಸಿದರೂ ಬಿಡುಗಡೆಯಾಗಿದ್ದು 150 ಕೋಟಿ ರೂ. ಮಾತ್ರ. ಅಂದರೆ ಶೇ.50ರಷ್ಟು ಕಡಿತ. ಈ ವರ್ಷ 280 ಕೋಟಿ ರೂ. ಘೋಷಿಸಲಾಗಿದ್ದು, ಎಷ್ಟು ಬಿಡುಗಡೆಯಾಗಬಹುದು ಎನ್ನುವ ಆತಂಕ ಎನ್‌ಟಿಸಿಎ ವಲಯದಲ್ಲಿದೆ. ಆಯಾ ಹುಲಿ ಸಂರಕ್ಷಿತ ಪ್ರದೇಶಗಳೇ ಸುಸ್ಥಿರತೆ ಕಾಪಾಡಿಕೊಳ್ಳಲಿ ಎನ್ನುವ ಉದ್ದೇಶವಿದ್ದರೂ ಏಕಾಏಕಿ ಅನುದಾನ ಕಡಿತ ಸರಿಯಲ್ಲ ಎನ್ನುವ ಅಭಿಪ್ರಾಯವೂ ಇದೆ.
ಯೋಜನೆ ಫಲವೇನು:
ಹುಲಿ ಯೋಜನೆ ಅನುಷ್ಠಾನಗೊಂಡ ನಂತರ ಸಂಪೂರ್ಣ ಅಳಿವಿನ ಅಂಚಿಗೆ ತಲುಪಿದ್ದ ಹುಲಿಯನ್ನು ಸಂರಕ್ಷಿಸಲು ಸಾಧ್ಯವಾಗಿದೆ. ಈಗ ಹುಲಿಗೂ ತನ್ನದೇ ಪ್ರದೇಶದಲ್ಲಿ ನೆಮ್ಮದಿಯಿಂದ ಬದುಕುವ ಅವಕಾಶ. ಬಂಡೀಪುರ , ನಾಗರಹೊಳೆ, ರಣ ತಾಂಭೋರ್, ಕನ್ಹಾ ಸೇರಿದಂತೆ ಹಲವು ಹುಲಿ ಯೋಜನೆ ಪ್ರದೇಶದಲ್ಲಿ ಹುಲಿಗಳ ಸಂತಾನಾಭಿವೃದ್ಧಿಯಿಂದ ವಂಶಾವಳಿ ವೈವಿಧ್ಯತೆ ಕಾಪಾಡಲು ಸಾಧ್ಯವಾಗಿದೆ. ಹುಲಿ ಯೋಜನೆ ಜಾರಿಗೊಳಿಸಿದ ಕೆಲವೇ ವರ್ಷದಲ್ಲಿ ಸುರಕ್ಷಿತ ವಲಯ ರೂಪುಗೊಂಡು ಹುಲಿಗಳ ಸಂಖ್ಯೆಯಲ್ಲೂ ಗಣನೀಯ ಏರಿಕೆ ಕಂಡು ಬಂದಿದೆ.
ಹುಲಿ ಯೋಜನೆ ಪ್ರದೇಶಗಳಲ್ಲಿ ಪರಿಣಾಮಕಾರಿ ಭದ್ರತೆ ಹಾಗೂ ಕಾಳಜಿಯುಕ್ತ ಸಂರಕ್ಷಣಾ ಕ್ರಮಗಳ ಫಲವಾಗಿ ಸಾಕಷ್ಟು ಬದಲಾವಣೆ ಕಂಡು ಬಂದಿರುವುದು ನಿಜ. ಸಂತತಿ ಕ್ಷೀಣಿಸುವುದು ತಗ್ಗಿದೆ. ನೀರಿನ ಮೂಲಗಳು ಅಭಿವೃದ್ಧಿಯಾಗಿದೆ. ಒಟ್ಟಾರೆ ಹುಲಿಗಳಿಗೆ ಮೀಸಲಾದ ಪ್ರದೇಶ ರೂಪುಗೊಂಡಿದೆ. ಇನ್ನು ಹುಲಿ ಪ್ರದೇಶದಲ್ಲಿ ನಡೆಯುವ ಸಣ್ಣ ಪುಟ್ಟ ಅಭಿವೃದ್ಧಿ ಕಾಮಗಾರಿಗಳ ಫಲವಾಗಿ ಸಮೀಪದ ಗ್ರಾಮಗಳವರಿಗೂ ಉದ್ಯೋಗ ಖಾತ್ರಿಯಾಗಿದೆ. ಇದರಿಂದ ಅರಣ್ಯ ಅವಲಂಬನೆ ಪ್ರಮಾಣ ತಗ್ಗಿದೆ. ಜತೆಗೆ ಸ್ಥಳೀಯ ಸಹಭಾಗಿತ್ವವೂ ಯೋಜನೆ ಅನುಷ್ಠಾನದಲ್ಲಿ ದೊರೆತಿದೆ.
ಹುಲಿ ಯೋಜನೆಯಡಿ ಸದ್ಯ ಸಾಕಷ್ಟು ಸೌಲಭ್ಯಗಳೂ ಬಂದಿವೆ. ಹುಲಿ ಯೋಜನೆ ವಿಭಾಗಗಳಲ್ಲಿ ಸಂಪರ್ಕ ಸಾಧಿಸಲು ನಿಸ್ತಂತು ಸೇವೆ, ತಂತ್ರಜ್ಞಾನ ಆಧರಿತ ವ್ಯವಸ್ಥೆಗಳನ್ನು ಒದಗಿಸಲಾಗಿದೆ. ಗಡಿ ಭಾಗದಲ್ಲಿ ಗಸ್ತು ತಿರುಗಲು ವಾಹನ ಸೌಲಭ್ಯವನ್ನು ನೀಡಲಾಗಿದೆ. ಇದರಿಂದ ಹುಲಿ ಕಳ್ಳಬೇಟೆ ಪ್ರಮಾಣ ತಗ್ಗಿಸಲು ಸಹಕಾರಿಯಾಗಿದೆ. ಇದೇ ರೀತಿ ಬೇಸಿಗೆಗೆ ಮುನ್ನ ಕಾಡಿನ ಬೆಂಕಿ ತಗ್ಗಿಸಲು ಪೂರ್ವಭಾವಿ ತಯಾರಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ. ಇದರಿಂದ ಹುಲಿ ಆವಾಸ ಸ್ಥಾನ ಬೆಂಕಿಗೆ ಆಹುತಿಯಾಗುವುದನ್ನು ತಪ್ಪಿಸಲಾಗಿದೆ.
ಹುಲಿ ಯೋಜನೆ ಜಾರಿಯ ನಂತರ ಅರಣ್ಯ ಸಂರಕ್ಷಣೆಯತ್ತ ಗಮನಹರಿಸಿದ್ದರಿಂದ ಇತರೆ ವನ್ಯಜೀವಿಗಳ ವೃದ್ಧಿಗೂ ಪರೋಕ್ಷವಾಗಿ ಕಾರಣವಾಗಿದೆ. ಪ್ರವಾಸೋದ್ಯಮವೂ ಗಟ್ಟಿ ಸ್ವರೂಪ ಪಡೆದು ಆದಾಯ ಬಂದು ಸ್ಥಳೀಯ ಅಭಿವೃದ್ದಿಗೂ ದಾರಿಯಾಗುತ್ತಿದೆ. ಹುಲಿ ಪ್ರದೇಶದ ವಿಸ್ತರಣೆ, ಸ್ಥಳೀಯರ ಪಾಲ್ಗೊಳ್ಳುವಿಕೆ ಪ್ರಮಾಣ ಇನ್ನಷ್ಟು ಹೆಚ್ಚಿಸಿದರೆ ಹುಲಿ ಹಾಗೂ ಮನುಷ್ಯದ ಪಯಣ ಸುದೀರ್ಘವಾಗಿರಲಿದೆ. ಹುಲಿ ಯೋಜನೆ ಇನ್ನಷ್ಟು ಸುಸ್ಥಿರತೆಯನ್ನು ಕಾಣಲಿದೆ.