Forest Tales: ತಂಬಾಕು ಬೆಳೆಗಾರರಿಗೆ ಆಸರೆಯಾದ ವನತೋಟಗಾರಿಕೆಯ ಲಕ್ಷ್ಮಣ ರೇಖೆ, ನಿವೃತ್ತ ಅರಣ್ಯಾಧಿಕಾರಿ ಪ್ರಕೃತಿ ಪ್ರೀತಿಗೆ ಪಿಂಚಣಿ ಮೀಸಲು
May 31, 2024 12:41 AM IST
ತಂಬಾಕಿಗೆ ಪರ್ಯಾಯವಾಗಿ ವನತೋಟಗಾರಿಕೆಗೆ ಒತ್ತು ನೀಡಿದ ಲಕ್ಷ್ಮಣ.
- world no tobacco day 2024 ಮೈಸೂರು ಭಾಗ ಉತ್ಕೃಷ್ಟ ತಂಬಾಕಿಗೆ ಹೆಸರುವಾಸಿ. ಆದರೆ ಬದುಕು ಉತ್ಕೃಷ್ಟವಾಗಬೇಕಲ್ಲವೇ. ಇದೇ ಕಾರಣದಿಂದ ನಿವೃತ್ತ ಅರಣ್ಯ ಕಾರ್ಯದರ್ಶಿ ಎ.ಸಿ.ಲಕ್ಷ್ಮಣ ವನತೋಟಗಾರಿಕೆಗೆ ಒತ್ತು ನೀಡಲು ಬಳಸಿದ್ದು ತಮ್ಮ ಪಿಂಚಣಿ ಹಣವನ್ನು. ಅರಣ್ಯದ ಮೇಲಿನ ಒತ್ತಡ ತಗ್ಗಿಸಿ, ಪರಿಸರಕ್ಕೂ ಕೊಡುಗೆ ನೀಡಿದ್ದಾರೆ. ಕಾಡಿನ ಕಥೆಯಲ್ಲಿ ಲಕ್ಷ್ಮಣರೇಖೆ ಯಶೋಗಾಥೆ.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ರೈತ ದಿನೇಶ್ ಕುಟುಂಬ ತಲೆಮಾರುಗಳಿಂದಲೂ ತಂಬಾಕು ಬೆಳೆಯುತ್ತಿದೆ. ಸಮೀಪವೇ ಅರಣ್ಯ. ಕಾಡು ಪ್ರಾಣಿಗಳ ಉಪಟಳ ಬೇರೆ. ಪರ್ಯಾಯವಿಲ್ಲದೇ ತಂಬಾಕು( Tobacco) ಬೆಳೆಯುವಲ್ಲಿ ಕುಟುಂಬ ನಿರತವಾಯಿತು. ದರವೂ ಸಿಗುತ್ತಿತ್ತು. ಎಷ್ಟು ದಿನ ಇದೇ ತಂಬಾಕು ಬೆಳೆಯೋದು ಎನ್ನುವ ಪ್ರಶ್ನೆ ಅವರನ್ನು ಕಾಡುತ್ತಲೇ ಇತ್ತು. ವಿಶ್ವ ಆರೋಗ್ಯ ಸಂಸ್ಥೆಯು ತಂಬಾಕು ಬೆಳೆಗೆ ಮಿತಿ ಹೇರಲಿದೆ ಎನ್ನುವ ಮಾತುಗಳು ಕೆಲವು ವರ್ಷಗಳಿಂದ ಕೇಳಿ ಬರುತ್ತಲೇ ಇತ್ತು. ಒಮ್ಮೆ ಪಿರಿಯಾಪಟ್ಟಣಕ್ಕೆ ನಿವೃತ್ತ ಅಧಿಕಾರಿಯೊಬ್ಬರು ಬರುತ್ತಾರೆ. ಅವರು ಈ ಭಾಗದಲ್ಲಿಯೇ 70 ರ ದಶಕದಲ್ಲಿ ಕೆಲಸ ಮಾಡಿದವರೇ. ಅವರು ತಂಬಾಕು ಪರ್ಯಾಯ ಬೆಳೆಗಳ ಬಗ್ಗೆ ಹೇಳುತ್ತಾರೆ. ಮಾರ್ಗದರ್ಶನ ಮಾಡಿಸಿ ಸಸಿಗಳನ್ನೂ ಕೊಡುತ್ತಾರೆ ಎನ್ನುವುದು ದಿನೇಶ್ ಅವರ ಕಿವಿ ಮೇಲೆ ಬಿದ್ದಿತ್ತು. ಕಾರ್ಯಕ್ರಮಕ್ಕೆ ಹೋದರೆ ನಿಜಕ್ಕೂ ಅದು ಅವರ ನಿರೀಕ್ಷೆಯಂತೆಯೇ ಬದಲಾವಣೆಯನ್ನು ಬಿತ್ತಿತ್ತು.
ಹುಣಸೂರು ತಾಲ್ಲೂಕಿನ ಉಯಿಲಾಳು ಗ್ರಾಮದ ಚನ್ನಬಸಪ್ಪ ಸಹಿತ ಕೆಲವು ಕುಟುಂಬಗಳಲ್ಲಿಯೂ ಹೀಗೆ ತಂಬಾಕಿನ ವ್ಯಾಮೋಹ. ಅಪ್ಪ ಹಾಕಿದ ಆಲದ ಮರದಂತೆ ತಂಬಾಕೇ ಅವರ ಬದುಕಿಗೆ ಆಸರೆ. ಅದನ್ನೇ ಮುಂದುವರೆಸಿಕೊಂಡು ಹೋದರೂ ಬದಲಾವಣೆಗೆ ಮನಸು ಬಯಸುತ್ತಲೇ ಇತ್ತು. ಅವರ ಅವರಿಗೆ ಹಾದಿ ತೋರಿಸಿದ್ದು ವನತೋಟಗಾರಿಕೆಯ ಪ್ರಯೋಗ. ಶ್ರೀಗಂಧ, ಹೆಬ್ಬೇವು ಸಹಿತ ಹಲವು ಆದಾಯ ಕೊಡುವ ಗಿಡಗಳನ್ನು ಬೆಳೆಸುವ ಮಾರ್ಗದರ್ಶನವೂ ಸಿಕ್ಕಿತ್ತು.
ಲಕ್ಷ್ಮಣರ ಸುಸ್ಥಿರತೆ ಹಾದಿಯಲ್ಲಿ
ಮೈಸೂರು ಭಾಗದ ನಾಲ್ಕೈದು ಜಿಲ್ಲೆಗಳ ನೂರಾರು ಕುಟುಂಬಗಳು ತಂಬಾಕಿನಿಂದ ಪರಿವರ್ತನೆಯಾದ ಯಶಸ್ಸಿನ ಕಥೆಯಿದು. ಇದರ ಹಿಂದೆ ಇರುವ ರೂವಾರಿ ಅರಣ್ಯ ಇಲಾಖೆಯ ಕಾರ್ಯದರ್ಶಿಯಾಗಿ ನಿವೃತ್ತರಾಗಿರುವ, 84 ಇಳಿ ವಯಸ್ಸಿನಲ್ಲೂ ರೈತ ಪರವಾಗಿ ಯೋಚಿಸುವ ಎ.ಸಿ.ಲಕ್ಷ್ಮಣ( AC Lakshmana) ಅವರು. 90ರ ದಶಕದಲ್ಲಿಯೇ ಅವರು ಸೇವೆಯಿಂದ ನಿವೃತ್ತರಾದರು. ಲಕ್ಷಗಟ್ಟಲೇ ಪಿಂಚಣಿ ಹಣವೇ ಬರುವ ಸಮಯದಲ್ಲಿ ಒಂದು ಕಡೆ ಸೀಮಿತವಾಗಿ ಇದ್ದುಬಿಡಬಹುದಿತ್ತು. ಅವರು ಐಎಫ್‌ಎಸ್ ಅಧಿಕಾರಿಯಾಗಿ ಹುಣಸೂರು, ಚಾಮರಾಜನಗರ, ಕೊಡಗು, ಚಿಕ್ಕಮಗಳೂರು. ಹಾಸನ ಭಾಗದಲ್ಲಿ ಕೆಲಸ ಮಾಡುವಾಗ ರೈತರು ತಂಬಾಕು ಬೆಳೆಗೆ ಸಿಲುಕಿರುವುದನ್ನು ಗಮನಿಸಿದ್ದರು. ಅದರಲ್ಲೂ ಮೈಸೂರು ಭಾಗದಲ್ಲಂತೂ ತಂಬಾಕು ಎನ್ನುವುದು ಯಾರನ್ನೋ ಖುಷಿಪಡಿಸಲು ಇಲ್ಲಿನ ರೈತರನ್ನು ಸಿಲುಕಿಸಿದಂತೆಯೇ ಇತ್ತು. ಅವರ ಕಷ್ಟದ ಬದುಕನ್ನು ಕಂಡಿದ್ದರು. ತಂಬಾಕು ಸುಡಲು ಅವರು ಅರಣ್ಯದ ಉರುವಲನ್ನೇ ಆಶ್ರಯಿಸಬೇಕು. ಒಂದು ಕಡೆ ಅರಣ್ಯ ನಾಶ, ಮತ್ತೊಂದು ಕಡೆ ತಂಬಾಕು ಬೆಳೆದು ಜನರ ಬದುಕು ಹಾಳು. ಇದಕ್ಕೆ ಏನಾದರೂ ಮಾಡಬಹುದೇ ಎನ್ನುವ ಯೋಚನೆ ಲಕ್ಷ್ಮಣ ಅವರ ತಲೆಯಲ್ಲಿತ್ತು. ಅರಣ್ಯ ಇಲಾಖೆಯಲ್ಲಿದ್ದಾಗಲೂ ರೈತರು ವನತೋಟಗಾರಿಕೆಯತ್ತ ಆಕರ್ಷಿಸಲು ಪ್ರಯತ್ನಿಸಿದ್ದರು.
ನಿವೃತ್ತಿ ನಂತರದ ಸೇವೆಯ ಬದುಕು
ನಿವೃತ್ತರಾದ ನಂತರ ಲಕ್ಷ್ಮಣ ಅವರು ಇದಕ್ಕೆ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡರು. ವನತೋಟಗಾರಿಕೆಯ ಪಾಠ ಶುರು ಮಾಡಿದರು. ರೈತರಿಗೆ ಬರೀ ಮಾರ್ಗದರ್ಶನ ನೀಡಲಿಲ್ಲ. ತಾವೇ ಖುದ್ದು ಕರ್ನಾಟಕದ ನಾನಾ ನರ್ಸರಿಗಳಿಂದ ಸಸಿಗಳನ್ನು ತರಿಸಿದರು. ಕೊಯಮತ್ತೂರಿನ ಸಂಶೋಧನಾ ಕೇಂದ್ರದವರೊಂದಿಗೆ ಚರ್ಚಿಸಿ ಅಲ್ಲಿಂದಲೂ ಸಸಿಗಳನ್ನು ತರಿಸಿದರು. ವಿಜ್ಞಾನಿಗಳು, ಸಂಶೋಧಕರನ್ನು ಕ್ಷೇತ್ರಕ್ಕೆ ಕರೆಯಿಸಿಕೊಂಡರು.
ತೋಟಗಾರಿಕೆ, ಅರಣ್ಯ,ಕೃಷಿ ಇಲಾಖೆ ಅಧಿಕಾರಿಗಳನ್ನು ಜತೆಯಲ್ಲಿಯೇ ಕರೆದುಕೊಂಡು ಹಳ್ಳಿಗಳತ್ತ ಹೊರಟರು. ನಮ್ಮ ರೈತರೂ ಲಕ್ಷಾಧಿಪತಿಗಳಾಬೇಕು ಎನ್ನುವ ಆಶಯದೊಂದಿಗೆ ಎಸ್. ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಶ್ರೀಗಂಧ ಬೆಳಯಲು ಇದ್ದ ಕೆಲವು ಮಿತಿಗಳನ್ನು ಲಕ್ಷ್ಮಣ ತೆಗೆಸಿ ಹಾಕಿಸಿದರು.
ಇದರೊಟ್ಟಿಗೆ ಪ್ಲೇವುಡ್ ಉದ್ಯಮಕ್ಕೆ ಬೇಕಾಗಿರುವ ಹೆಬ್ಬೇವು ಬೆಳೆಸಲು ಉತ್ತೇಜಿಸಿದರು. ಬಹುಪಾಲು ಪಿಂಚಣಿ ಹಣವನ್ನು ಇದಕ್ಕಾಗಿ ವಿನಿಯೋಗಿಸಿದರು. ರೈತರಿಗೆ ಸಸಿ ಕೊಡಿಸಿದರೆ ಆಯಿತೇ. ಅವರಿಗೆ ಆದಾಯದ ಮಾರ್ಗವನ್ನೂ ತೋರಿಸಬೇಡವೇ. ಲಕ್ಷ್ಮಣ್ ಅವರು ಹಲವಾರು ಮಂದಿ ಮಾರಾಟಗಾರರೊಂದಿಗೂ ಮಾತನಾಡಿದರು. ಎಲ್ಲ ವಲಯದವರನ್ನು ಸೇರಿಸಿಕೊಂಡು ಹೊರಟರು.
ಅರಣ್ಯ ಉರುವಲು ತಗ್ಗಿತು
ಮೈಸೂರು, ಹಾಸನ, ಚಾಮರಾಜನಗರ, ಕೊಡಗು ಜಿಲ್ಲೆಯ ಅರಣ್ಯಕ್ಕೆ ಹೊಂದಿಕೊಂಡಂತೆ ಬದುಕು ಕಟ್ಟಿಕೊಂಡವರಿಗೆ ಕಾಡುಪ್ರಾಣಿಗಳ ಉಪಟಳ. 10ಕ್ಕೂ ಅಧಿಕ ತಾಲ್ಲೂಕಿನವರಿಗೆ ಆನೆ ಹಾವಳಿ ಮಾತ್ರವಲ್ಲ.ಕಾಡು ಹಂದಿ, ಕಾಡೆಮ್ಮೆ, ಜಿಂಕೆ, ಕಡವೆಗಳಿಂದ ತೊಂದರೆ. ಏನು ಬೆಳೆದರೂ ವನ್ಯಜೀವಿಗಳ ಕಾಟದಿಂದ ಹೆಚ್ಚು ಭಾಗ ಕಳೆದುಕೊಳ್ಳುವ ಆತಂಕ. ಈ ಕಾರಣದಿಂದಲೋ ಏನು ರೈತರಿಗೆ ಹೊಸತನಕ್ಕೆ ಹಾದಿಯೂ ಬೇಕಾಗಿತ್ತು. ತಂಬಾಕು ಬಿಡಬೇಕಾಗಿತ್ತು. ಕೆಲವರು ಆಸಕ್ತಿ ತೋರಿಸಿ ಬೆಳೆಯಲು ಆರಂಭಿಸಿದರು. ಹೆಬ್ಬೇವನ್ನು ತಮ್ಮ ಜಮೀನುಗಳ ಏರಿ ಮೇಲೆ ಬೆಳೆಸಿದರು. ಶ್ರೀಗಂಧವನ್ನೂ ಬೆಳೆದರು. ಹಣ್ಣುಗಳ ಗಿಡಗಳನ್ನು ಹಾಕಿದರು. ಇವೆಲ್ಲವೂ ಏಕಾಏಕಿ ಬೆಳೆಯುವ ಸಸಿಗಳಲ್ಲಿ ಒಮ್ಮೆ ಆದಾಯ ಶುರುವಾದರೆ ನಿಲ್ಲುವುದೂ ಇಲ್ಲ. ತಾಳ್ಮೆಯೊಂದಿದ್ದರೆ ಜಗತ್ತನ್ನೇ ಗೆಲ್ಲಬಹುದು ಎನ್ನುವ ಮಾತಿದೆ. ಕೆಲವೇ ಅವಧಿಯಲ್ಲಿ ರೈತರ ಪ್ರಯತ್ನಗಳಿಗೆ ಫಲವೂ ದೊರೆಯಿತು. ಉರುವಲಿಗೆ ಅರಣ್ಯದ ಮೇಲಿನ ಒತ್ತಡವೂ ತಗ್ಗಿತು.
ತಂಡ ಪ್ರಯತ್ನದ ಫಲ
ವನತೋಟಗಾರಿಕೆಯ ಪ್ರಯೋಗವೂ ಹಲವು ಕಡೆ ಯಶಸ್ವಿಯಾಯಿತು. ಪಿರಿಯಾಪಟ್ಟಣ, ಹುಣಸೂರು, ಗುಂಡ್ಲುಪೇಟೆ,ಎಚ್.ಡಿ.ಕೋಟೆ, ಕೊಳ್ಳೇಗಾಲ, ಶ್ರೀರಂಗಪಟ್ಟಣ, ಅರಕಲಗೂಡು ಸಹಿತ ಹಲವು ಕಡೆಗಳಲ್ಲಿ ರೈತರ ಮೊಗದಲ್ಲಿ ಸಂತಸ ಅರಳಿತು. ಮನೆಯ ಮುಂದೆ ಬಂದು ಹೆಬ್ಬೇವು ಖರೀದಿಸುವ ಸನ್ನಿವೇಶವೂ ನಿರ್ಮಾಣವಾಯಿತು. ಶ್ರೀಗಂಧ ಬೆಳೆದವರಿಗೂ ಇನ್ನಿಲ್ಲದ ಬೇಡಿಕೆ. ಖರೀದಿ ಮಾಡಿದವರೀಗೂ ಸಾಮಾಜಿಕ ಹೊಣೆ ನಿಗದಿಪಡಿಸಿ ಅವರೂ ಇಂತಿಷ್ಟು ಲಾಭಾಂಶವನ್ನು ನೀಡಿ ಅದನ್ನು ಸಸಿಗಳ ಸಂಶೋಧನೆ, ಸಾಗಣೆಗೆ ನೀಡಬೇಕು ಎನ್ನುವ ಸೂಚನೆಗಳನ್ನೂ ನೀಡಿದರು. ಅವರೂ ಪ್ರೀತಿಯಿಂದ ಹಣ ನೀಡಿದರು. ಇದು ಹತ್ತಾರು ಹಳ್ಳಿಗಳೂ ವಿಸ್ತರಣೆಯಾಗಿದೆ. ಉತ್ತರ ಕರ್ನಾಟಕದ ಹಲವು ಜಿಲ್ಲೆಗಳವರೂ ಇಲ್ಲಿಗೆ ಬಂದು ಸಸಿಗಳನ್ನು ಕೇಳಿ ಪಡೆದುಕೊಂಡು ತಾವೂ ವನ ತೋಟಗಾರಿಕೆಯ ಪ್ರಯೋಗ ಮಾಡಿದ್ದಾರೆ. ಇದು ದೊಡ್ಡ ಮಟ್ಟದಲ್ಲಿಯೇ ಬೆಳೆದಿದೆ.
ಇಷ್ಟೆಲ್ಲಾ ಮಾಡಿದರೂ ಸರ್ಕಾರದ ಬೆಂಬಲವಿಲ್ಲದೇ ಯಾವ ಪ್ರಯೋಜನವೂ ಆಗದು. ಇನ್ನೇನು ತಂಬಾಕು ಬೆಳೆಯುವುದು ಈ ಭಾಗದಲ್ಲಿ 2020 ಹೊತ್ತಿಗೆ ಕಡಿಮೆಯಾಗಲಿದೆ ಎನ್ನುವ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿತ್ತು. ವಿಶ್ವ ಸಂಸ್ಥೆಯೂ ಇದೇ ಗುರಿಯನ್ನು ನಿಗದಿಪಡಿಸಿತ್ತು. ನಮ್ಮವರಿಗೆ ಸುಲಭದ ಆದಾಯವೂ ಮುಖ್ಯ. ಆ ನೀತಿ ಬದಲಾಗಿ ಈಗ ತಂಬಾಕು ನಿಗ್ರಹದ ಅವಧಿ ವಿಸ್ತರಣೆಯಾಗುತ್ತಲೇ ಇದೆ.
ಮೈಸೂರು ಭಾಗದಲ್ಲಿ ಬೆಳೆಯುವ ವರ್ಜಿನಿಯಾ ತಂಬಾಕಿಗೆ ವಿದೇಶದಲ್ಲಿ ಇನ್ನಿಲ್ಲದ ಬೇಡಿಕೆ. ಇಲ್ಲಿನ ಹವಾಮಾನ, ಮಣ್ಣಿನ ಗುಣಕ್ಕೆ ಉತ್ಕೃಷ್ಟ ತಂಬಾಕು ಬೆಳೆಯುವುದರಿಂದ ಆಂಧ್ರಕ್ಕಿಂಥ ನಮ್ಮ ತಂಬಾಕು ಹೆಚ್ಚಿನ ಬೆಲೆಗೆ ಖರೀದಿಯಾಗುತ್ತದೆ. ಬೇಡಿಕೆಗಿಂತಲೂ ಲಾಬಿ ಪ್ರಮಾಣವೂ ಹೆಚ್ಚು ಇರುವುದರಿಂದ ತಂಬಾಕು ಪ್ರದೇಶ ಇಳಿಕೆಯಾಗುತ್ತಿಲ್ಲ. ವನ ತೋಟಗಾರಿಕೆಯಲ್ಲಿ ತೊಡಗಿಸಿಕೊಂಡವರು ಮುಂದುವರೆದಿದ್ದಾರೆ. ಬಹುಪಾಲು ರೈತರು ಹಿಂದಿನ ಗೊಂದಲದಲ್ಲಿಯೇ ಇರುವುದನ್ನು ಬಿಟ್ಟು ಇತರೆಡೆಗೆ ಹೋಗಿ ಏನು ಮಾಡುವುದು ಎಂದು ತಂಬಾಕು ಬೆಳೆಗೆ ಜೋತು ಬಿದ್ದಿದ್ದಾರೆ.
ಪರಿವರ್ತನೆ ಹಾದಿ ಕಡಿಮೆಯೇ
ರಾಜ್ಯ ಸರ್ಕಾರಗಳ ವರದಿಗಳ ಪ್ರಕಾರ, ತಂಬಾಕು ಪ್ರದೇಶವನ್ನು ಇತರ ಬೆಳೆಗಳಿಗೆ ವರ್ಗಾಯಿಸಲಾಗಿದೆ. ಆಂಧ್ರಪ್ರದೇಶದಲ್ಲಿ 1,16,635 ಹೆಕ್ಟೇರ್, ಬಿಹಾರದಲ್ಲಿ 446 ಹೆಕ್ಟೇರ್, ಗುಜರಾತ್‌ನಲ್ಲಿ 13,858 ಹೆಕ್ಟೇರ್, ಕರ್ನಾಟಕದಲ್ಲಿ 1500 ಹೆಕ್ಟೇರ್, ತಮಿಳುನಾಡಿನಲ್ಲಿ 636 ಹೆಕ್ಟೇರ್, ತಮಿಳುನಾಡಿನಲ್ಲಿ 120 ಹೆಕ್ಟೇರ್, ತೆಲಂಗಾಣದಲ್ಲಿ 2072 ಹೆಕ್ಟೇರ್ ಮತ್ತು ಉತ್ತರ ಪ್ರದೇಶದಲ್ಲಿ 2928 ಹೆಕ್ಟೇರ್ ಮತ್ತು ಪಶ್ಚಿಮ ಬಂಗಾಳದಲ್ಲಿ 2928 ಹೆಕ್ಟೇರ್. ಇದಲ್ಲದೆ, ಒಡಿಶಾ ರಾಜ್ಯ ಸರ್ಕಾರವು 2001-02 ರಿಂದ 2017-18 ರವರೆಗೆ 5370 ಹೆಕ್ಟೇರ್ ಪ್ರದೇಶದಲ್ಲಿ ತಂಬಾಕು ಪ್ರದೇಶವನ್ನು ಪರ್ಯಾಯ ಬೆಳೆಗಳಿಗೆ ಬದಲಿಸಿರುವ ಬಗ್ಗೆ ವರದಿ ಮಾಡಿದೆ. ಆಂಧ್ರಕ್ಕೆ ಹೋಲಿಸಿದರೆ ಕರ್ನಾಟಕದ ಪ್ರಯತ್ನ ಕಡಿಮೆಯೇ ಎನ್ನುವುದನ್ನೂ ಅಂಕಿ ಅಂಶಗಳೂ ಕೂಡ ಹೇಳುತ್ತವೆ.
ಬೇಸರದ ಮಾತು
ನಾನು ಅರಣ್ಯ ಸೇವೆಯಿಂದ ನಿವೃತ್ತರಾದ ನಂತರ ಎರಡು ದಶಕದಿಂದ ಜೀವವೈವಿಧ್ಯ ರಕ್ಷಣೆ, ಪರಿಸರ ಸಂರಕ್ಷಣೆಯಲ್ಲಿ ನನ್ನನ್ನು ತೊಡಗಿಸಿಕೊಂಡು ಬಂದಿದ್ದೇನೆ. ಭೂಮಿ ತಾಯಿಯ ರಕ್ಷಣೆ, ನಮ್ಮ ರೈತರ ಉಳಿವಿನ ಆಶಯವೂ ನನ್ನ ಪ್ರಯತ್ನದ ಹಿಂದಿರುವ ಉದ್ದೇಶವಷ್ಟೇ. ನಿಜಕ್ಕೂ ಅದೆಷ್ಟೋ ರೈತರು ತಂಬಾಕು ಬಿಟ್ಟು ವನತೋಟಗಾರಿಕೆ ಹಾದಿ ಹಿಡಿದಿರುವುದು ಖುಷಿ ತಂದಿದೆ ಎನ್ನುವುದು ಲಕ್ಷ್ಮಣ ಅವರ ಅಭಿಮಾನದ ನುಡಿ.
ಹವಾಮಾನ ವೈಪರಿತ್ಯದಿಂದ ನಾವು ಜೀವವೈವಿಧ್ಯವನ್ನು ಕಳೆದುಕೊಳ್ಳುತ್ತಿದ್ದೇವೆ. ತಂಬಾಕು ಬೆಳೆಯುವುದರಿಂದ ಯಾವುದೋ ದೇಶದ ಶ್ರೀಮಂತರ ಕ್ಷಣ ಖುಷಿಯಾಗಬಹುದು. ಆದರೆ ನಮ್ಮ ಭೂಮಿ ಹಾಳಾಗುವುದರಿಂದ ಹಿಡಿದು ಪರಿಸರದ ಮೇಲೆ ಆಗುವ ಪರಿಣಾಮವನ್ನು ತಿಳಿಸುವುದು ಕಷ್ಟವೇ. ವನತೋಟಗಾರಿಕೆಯಿಂದ ಕನಿಷ್ಠ ಒಂದು ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವನ್ನು ತಗ್ಗಿಸಬಹುದು. ಆದಾಯ ಪಡೆಯುತ್ತಲೇ ಆರೋಗ್ಯವನ್ನು ಕಾಪಾಡಬಹುದು. ಜನರ ಆರೋಗ್ಯ ಕಾಪಾಡುವುದು ಮುಖ್ಯವಲ್ಲವೇ. ಭಾರತದಲ್ಲಿ ಏನೇ ನೀತಿ ಮಾಡಿದರೂ ಅದನ್ನು ಜಾರಿ ಮಾಡುವಲ್ಲಿ ಇರುವ ಮಾರ್ಗೋಪಾಯಗಳೇ ನಮ್ಮನ್ನು ಹಾಳು ಮಾಡುತ್ತಿದೆ ನೋಡಿ ಎಂದು ಲಕ್ಷ್ಮಣ ಕೊಂಚ ಅಸಹನೆಯಿಂದಲೇ ಹೇಳುತ್ತಾರೆ.
ನಿಲ್ಲದ ಕಾಯಕ
ಲಕ್ಷ್ಮಣ ಅವರಿಗೆ ವನತೋಟಗಾರಿಕೆಯನ್ನು ಹಲವು ರೈತರು ಅನುಸರಿಸಿ ತಂಬಾಕಿನಿಂದ ದೂರವಾಗಿ ಅರಣ್ಯದ ಮೇಲೆ ಆಗುತ್ತಿದ್ದ ಕೊಂಚವಾದರೂ ಒತ್ತಡ ತಗ್ಗಿಸಿದ ಸಮಾಧಾನವಿದೆ. ಮೂರ್ನಾಲ್ಕು ವರ್ಷದಿಂದ ತಮ್ಮ ಚಟುವಟಿಕೆಯನ್ನು ಲಕ್ಷ್ಮಣ ತಗ್ಗಿಸಿದರೂ ಅವರ ಉತ್ಸಾಹ ಮಾತ್ರ ಕುಗ್ಗಿಲ್ಲ. ಈಗಲೂ ಯಾರೇ ಕರೆದರೂ ತಾವೇ ಕಾರು ಓಡಿಸಿಕೊಂಡು ಹೋಗಿ ಅವರ ತೋಟ, ಜಮೀನುಗಳಲ್ಲಿ ಕಳೆದು ಬರುತ್ತಾರೆ.
ರೈತರು ಶ್ರೀಮಂತರಾಗಬೇಕು. ಪ್ರಕೃತಿ ಮುಂದಿನ ಪೀಳಿಗೆಗೂ ಉಳಿಯಬೇಕು ಎಂದು ನನ್ನ ಪಿಂಚಣಿ ಹಣವನ್ನು ಪ್ರೀತಿಯಿಂದ ಖರ್ಚು ಮಾಡಿದ್ದೇನೆ ಎಂದು ಲಕ್ಷ್ಮಣ್ ಅವರು ಗಹನವಾಗಿ ನಗುತ್ತಾರೆ. ಆ ನಗುವೇ ಅದೆಷ್ಟೋ ಕುಟುಂಬಗಳಿಗೆ ಆಸರೆಯಾಗಿರುವುದು, ಪ್ರಕೃತಿ ಮೇಲಿನ ಪರಿಣಾಮ ತಗ್ಗಿಸಿರುವುದಂತೂ ಸತ್ಯ.
-ಕುಂದೂರು ಉಮೇಶಭಟ್ಟ, ಮೈಸೂರು
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)