logo
ಕನ್ನಡ ಸುದ್ದಿ  /  ಕರ್ನಾಟಕ  /  Ysv Datta: 'ಕಾಂಗ್ರೆಸ್​​ನಿಂದ ಅನ್ಯಾಯ': ಸ್ವತಂತ್ರ ಅಭ್ಯರ್ಥಿಯಾಗಿ ವೈಎಸ್‌ವಿ ದತ್ತ ಸ್ಪರ್ಧೆ.. ಭಿಕ್ಷೆ ಬೇಡಿದ ಜೆಡಿಎಸ್‌ ಮಾಜಿ ನಾಯಕ

YSV Datta: 'ಕಾಂಗ್ರೆಸ್​​ನಿಂದ ಅನ್ಯಾಯ': ಸ್ವತಂತ್ರ ಅಭ್ಯರ್ಥಿಯಾಗಿ ವೈಎಸ್‌ವಿ ದತ್ತ ಸ್ಪರ್ಧೆ.. ಭಿಕ್ಷೆ ಬೇಡಿದ ಜೆಡಿಎಸ್‌ ಮಾಜಿ ನಾಯಕ

Meghana B HT Kannada

Apr 10, 2023 08:31 AM IST

google News

ವೈಎಸ್‌ವಿ ದತ್ತ

    • ಕಾಂಗ್ರೆಸ್​​ನಿಂದ ಟಿಕೆಟ್​ ಸಿಗದ ಕಾರಣ ವೈಎಸ್‌ವಿ ದತ್ತ ಎಂದೇ ಜನಪ್ರಿಯರಾಗಿರುವ ಮಾಜಿ ಶಾಸಕ ಯಗಟಿ ಸೂರ್ಯನಾರಾಯಣ ವೆಂಕಟೇಶ ದತ್ತ ಅವರು ಚಿಕ್ಕಮಗಳೂರು ಜಿಲ್ಲೆಯ ಕಡೂರು ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಭಾನುವಾರ ಘೋಷಿಸಿದ್ದಾರೆ.
ವೈಎಸ್‌ವಿ ದತ್ತ
ವೈಎಸ್‌ವಿ ದತ್ತ

ಕಡೂರು (ಚಿಕ್ಕಮಗಳೂರು) : ವೈಎಸ್‌ವಿ ದತ್ತ ಎಂದೇ ಜನಪ್ರಿಯರಾಗಿರುವ ಮಾಜಿ ಶಾಸಕ ಯಗಟಿ ಸೂರ್ಯನಾರಾಯಣ ವೆಂಕಟೇಶ ದತ್ತ ಅವರು ಚಿಕ್ಕಮಗಳೂರು ಜಿಲ್ಲೆಯ ಕಡೂರು ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಭಾನುವಾರ ಘೋಷಿಸಿದ್ದಾರೆ. ಚುನಾವಣೆ ಖರ್ಚಿಗಾಗಿ ಟವೆಲ್​ ಹಿಡಿದು ಭಿಕ್ಷೆ ಕೂಡ ಎತ್ತಿದ್ದಾರೆ.

ಹೆಚ್​ ಡಿ ದೇವೇಗೌಡರ ಮಾನಸಪುತ್ರ (ಮಗನಂತಿದ್ದ) ವೈಎಸ್​​ವಿ ದತ್ತ ಅವರು ಕಳೆದ ವರ್ಷ ಡಿಸೆಂಬರ್​ನಲ್ಲಿ ಜೆಡಿಎಸ್​ ತೊರೆದು ಕಾಂಗ್ರೆಸ್​ ಸೇರ್ಪಡೆಯಾಗಿದ್ದರು ಹಾಗೂ ಪ್ರಬಲ ಟಿಕೆಟ್​ ಆಕಾಂಕ್ಷಿಯಾಗಿದ್ದರು. ಕಡೂರಿನಿಂದ ದತ್ತ ಅವರಿಗೆ ಟಿಕೆಟ್​ ಫಿಕ್ಸ್​ ಎಂದು ರಾಜಕೀಯ ವಲಯದಲ್ಲಿ ಸುದ್ದಿ ಹರಿದಾಡುತ್ತಿತ್ತು. ಆದರೆ ಕಾಂಗ್ರೆಸ್​​ ಪಕ್ಷ ಅವರಿಗೆ ಮಣೆಹಾಕಿಲ್ಲ.

ಏಪ್ರಿಲ್​ 6 ರಂದು ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದ ಕಾಂಗ್ರೆಸ್​​ ದತ್ತ ಅವರ ಬದಲಾಗಿ 2018ರ ಚುನಾವಣೆಯಲ್ಲಿ ಸೋಲುಂಡಿದ್ದ, ಕುರುಬ ಸಮುದಾಯಕ್ಕೆ ಸೇರಿದ ಕೆ.ಎಸ್.ಆನಂದ ಅವರಿಗೆ ಟಿಕೆಟ್​ ನೀಡಿತ್ತು.

ಕಾಂಗ್ರೆಸ್​​ನಿಂದ ಟಿಕೆಟ್​ ನೀಡುವ ಭರವಸೆ ಸಿಕ್ಕ ಬಳಿಕ ವೈಎಸ್‌ವಿ ದತ್ತ ಜೆಡಿಎಸ್​ ತೊರೆದಿದ್ದರು. ಒಂದು ಕಾಲದಲ್ಲಿ ಹೆಚ್​ ಡಿ ದೇವೇಗೌಡರ ಕುಟುಂಬಕ್ಕೆ ಬಹಳ ಆಪ್ತರಾಗಿದ್ದ ವೈಎಸ್‌ವಿ ದತ್ತ ಅವರು ಜೆಡಿಎಸ್‌ನಿಂದ ಹೊರಬರಲು ದೇವೇಗೌಡರ ಕುಟುಂಬದೊಂದಿಗಿನ ಆಂತರಿಕ ಭಿನ್ನಾಭಿಪ್ರಾಯವೂ ಒಂದು ಕಾರಣ ಎಂದು ಹೇಳಲಾಗಿದೆ. ಮೂಲಗಳ ಪ್ರಕಾರ ಕೆಪಿಸಿಸಿ ಕಾರ್ಯಾಧ್ಯಕ್ಷ ಡಿಕೆ ಶಿವಕುಮಾರ್ ದತ್ತ ಅವರಿಗೆ ಟಿಕೆಟ್ ನಿರಾಕರಿಸಿದ್ದಾರೆ.

ಕಾಂಗ್ರೆಸ್​​ನಿಂದ ಟಿಕೆಟ್ ಕೈ ತಪ್ಪಿದ್ದರಿಂದ ಅಸಮಾಧಾನಗೊಂಡ ದತ್ತ ಅವರು ಭಾನುವಾರ ಕಡೂರಿನಲ್ಲಿ ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಿದ ನಂತರ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದರು.

ಕಾಂಗ್ರೆಸ್​​​ನಿಂದ ತಮಗೆ ಆಗಿರುವ ಅನ್ಯಾಯದ ಬಗ್ಗೆ ವಿಷಾದ ವ್ಯಕ್ತಪಡಿಸಿದ ಅವರು, ಮುಂದಿನ ಕ್ರಮದ ಬಗ್ಗೆ ಕಾರ್ಯಕರ್ತರ ಬಳಿ ಸಲಹೆ ಕೇಳಿದರು. ಇವರೆಲ್ಲರೂ ಈ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಮೂಲಕ ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ತಕ್ಕ ಪಾಠ ಕಲಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು ಎಂದು ತಿಳಿದುಬಂದಿದೆ.

ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ದತ್ತ, ''ಚುನಾವಣೆ ಗೆಲ್ಲಲು ಮತದಾರರಿಗೆ ಕೋಟಿಗಟ್ಟಲೆ ಖರ್ಚು ಮಾಡಲು ಮತ್ತು ಲಂಚ ನೀಡಲು ನನ್ನ ಬಳಿ ಇಲ್ಲ. ಹಾಗಾಗಿ ನನ್ನ ಬೆಂಬಲಿಗರ ಮುಂದೆ ಟವೆಲ್ ಇಟ್ಟು ಭಿಕ್ಷೆ ಬೇಡುತ್ತಿದ್ದೇನೆ.'' ಎಂದರು.

''ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನನ್ನು ಕಾಂಗ್ರೆಸ್‌ಗೆ ಆಹ್ವಾನಿಸಿದ್ದರು ಮತ್ತು ಕಡೂರು ಕ್ಷೇತ್ರದಿಂದ ಟಿಕೆಟ್ ನೀಡುವ ಭರವಸೆಯನ್ನೂ ನೀಡಿದ್ದರು. ಆದರೆ ಪಕ್ಷವು ನನಗೆ ಟಿಕೆಟ್ ನಿರಾಕರಿಸುತ್ತದೆ ಎಂದು ನಾನು ಎಂದಿಗೂ ನಿರೀಕ್ಷಿಸಿರಲಿಲ್ಲ. ಕಾಂಗ್ರೆಸ್​​​ನಿಂದ ಅನ್ಯಾಯವಾಗಿದೆ'' ಎಂದು ದತ್ತ ಭಾನುವಾರ ಸುದ್ದಿಗಾರರಿಗೆ ತಿಳಿಸಿದರು.

''ಕ್ಷೇತ್ರದಲ್ಲಿ ಸಾವಿರಾರು ಬೆಂಬಲಿಗರು ಇರುವುದರಿಂದ ನಾನು ಸ್ವತಂತ್ರವಾಗಿ ಸ್ಪರ್ಧಿಸುತ್ತೇನೆ. ಅವರು ನನ್ನನ್ನು ಚುನಾವಣೆಯಲ್ಲಿ ಗೆಲ್ಲಿಸುತ್ತಾರೆ ಎಂಬ ನಂಬಿಕೆಯಿದೆ. ಟವೆಲ್ ನನ್ನ ಗುರುತು. ಟವಲ್ ಹಿಡಿದು ನಿಮ್ಮ ಮನೆಗೆ ಬರುತ್ತೇನೆ'' ಎಂದು ಸಾಂಕೇತಿಕವಾಗಿ ನೆರೆದಿದ್ದ ಬೆಂಬಲಿಗರಿಗೆ ಟವಲ್ ಹಿಡಿದು ಭಿಕ್ಷೆ ಬೇಡಿದರು.

ದೇಣಿಗೆ ನೀಡಿದ ಬೆಂಬಲಿಗರು

ದತ್ತ ಅವರು ಜನಪ್ರಿಯ ನಾಯಕರಾಗಿದ್ದು, ಸಭೆಯಲ್ಲಿ ಬೆಂಬಲಿಗರು 100 ರೂಪಾಯಿಯಿಂದ ಹಿಡಿದು 2 ಲಕ್ಷ ರೂ. ಚೆಕ್​​ಗಳನ್ನು ನೀಡಿದರು. ಅಲ್ಲದೇ, ಚುನಾವಣಾ ವೆಚ್ಚವನ್ನು ಭರಿಸಲು ತಮ್ಮ ನಾಯಕನಿಗೆ ಹೆಚ್ಚಿನ ನೆರವು ನೀಡುವುದಾಗಿ ಬೆಂಬಲಿಗರು ಭರವಸೆ ನೀಡಿದ್ದಾರೆ.

‘‘ಸಭೆಯಲ್ಲಿ ಆಮ್ ಆದ್ಮಿ ಪಕ್ಷ ಸೇರುವ ಅಥವಾ ಸ್ವತಂತ್ರವಾಗಿ ಸ್ಪರ್ಧಿಸುವ ಬಗ್ಗೆ ಚರ್ಚೆ ನಡೆದಿದೆ. ಹೆಚ್ಚಿನ ಬೆಂಬಲಿಗರು ಅವರು ಸ್ವತಂತ್ರವಾಗಿ ಸ್ಪರ್ಧಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕಾಗಿ ಬೆಂಬಲಿಗರು ಅವರಿಗೆ ದೇಣಿಗೆ ನೀಡುತ್ತಾರೆ'' ಎಂದು ದತ್ತ ಅವರ ಬೆಂಬಲಿಗ ವೆಂಕಟೇಶ್ ಹೇಳಿದ್ದಾರೆ.

ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಲು ಒಪ್ಪದ ಹೆಚ್​ಡಿಕೆ

ಜೆಡಿಎಸ್ ನಾಯಕರಾದ ಸಂಸದ ಪ್ರಜ್ವಲ್ ರೇವಣ್ಣ, ನಿಖಿಲ್​​ ಕುಮಾರಸ್ವಾಮಿ ದತ್ತ ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಲು ಯತ್ನಿಸಿದರೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇದಕ್ಕೆ ಒಪ್ಪಿಗೆ ನೀಡಿಲ್ಲ ಎನ್ನಲಾಗಿದೆ. ನಮ್ಮದು ಸಣ್ಣ ಪಕ್ಷ, ಅವರು ಇಂಟರ್​ನ್ಯಾಷನಲ್​ ಪಕ್ಷ ಸೇರಲು ಹೋದವರು. ನಮ್ಮ ಪಕ್ಷದಲ್ಲಿ ಅವರಿಗೇನು ಸಿಗುತ್ತದೆ ಎಂದು ಬೀರೂರಿನಲ್ಲಿ ಸುದ್ದಿಗಾರರಿಗೆ ಹೆಚ್​ಡಿಕೆ ಹೇಳಿದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ