logo
ಕನ್ನಡ ಸುದ್ದಿ  /  ಕರ್ನಾಟಕ  /  Caste Census Report: ಜಾತಿ ಜನಗಣತಿ ವರದಿ ಬರುವ ಮುನ್ನವೇ ವೈಜ್ಞಾನಿಕವಲ್ಲ ಎನ್ನುವುದು ಸರಿಯೇ: ಸಿದ್ದರಾಮಯ್ಯ ಪ್ರಶ್ನೆ

Caste census report: ಜಾತಿ ಜನಗಣತಿ ವರದಿ ಬರುವ ಮುನ್ನವೇ ವೈಜ್ಞಾನಿಕವಲ್ಲ ಎನ್ನುವುದು ಸರಿಯೇ: ಸಿದ್ದರಾಮಯ್ಯ ಪ್ರಶ್ನೆ

HT Kannada Desk HT Kannada

Dec 17, 2023 03:58 PM IST

google News

ಗದಗದಲ್ಲಿ ಬಾಲಕಿಯರ ಬಾಲ ಮಂದಿರ ಉದ್ಘಾಟಿಸಲು ಆಗಮಿಸಿದ ಸಿಎಂ ಸಿದ್ದರಾಮಯ್ಯ ಅವರನ್ನು ಮಕ್ಕಳು ಆತ್ಮೀಯವಾಗಿ ಸ್ವಾಗತಿಸಿದರು.

    • Siddaramaiah speaks ಕರ್ನಾಟಕದ ಸಿಎಂ ಸಿದ್ದರಾಮಯ್ಯ ಭಾನುವಾರ ಗದಗದಲ್ಲಿ ಬಾಲಕಿಯರ ಬಾಲ ಮಂದಿರ ಉದ್ಘಾಟಿಸಲು ಆಗಮಿಸಿದ್ದರು. ಈ ವೇಳೆ ಹಲವು ವಿಷಯಗಳ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದರು.
ಗದಗದಲ್ಲಿ ಬಾಲಕಿಯರ ಬಾಲ ಮಂದಿರ ಉದ್ಘಾಟಿಸಲು ಆಗಮಿಸಿದ ಸಿಎಂ ಸಿದ್ದರಾಮಯ್ಯ ಅವರನ್ನು ಮಕ್ಕಳು ಆತ್ಮೀಯವಾಗಿ ಸ್ವಾಗತಿಸಿದರು.
ಗದಗದಲ್ಲಿ ಬಾಲಕಿಯರ ಬಾಲ ಮಂದಿರ ಉದ್ಘಾಟಿಸಲು ಆಗಮಿಸಿದ ಸಿಎಂ ಸಿದ್ದರಾಮಯ್ಯ ಅವರನ್ನು ಮಕ್ಕಳು ಆತ್ಮೀಯವಾಗಿ ಸ್ವಾಗತಿಸಿದರು.

ಗದಗ: ಜಾತಿ ಗಣತಿಗೆ ಸಂಬಂಧಿಸಿದಂತೆ ಇನ್ನೂ ಅಂತಿಮ ವರದಿಯೇ ಸರ್ಕಾರಕ್ಕೆ ಸಲ್ಲಿಕೆಯಾಗಿಲ್ಲ. ಆಗಲೇ ಜಾತಿ ಜನಗಣತಿ ವರದಿ ವೈಜ್ಞಾನಿಕವಾಗಿಲ್ಲ ಎನ್ನುವುದು ಸರಿ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಗದಗ ನಗರದಲ್ಲಿ ಭಾನುವಾರ ಬಾಲಕಿಯರ ಬಾಲಮಂದಿರ ಕಟ್ಟಡದ ಉದ್ಘಾಟನೆ ಮಾಡಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಕಾಂತರಾಜು ವರದಿಯ ಕುರಿತು ಮಾತನಾಡಿ ವರದಿ ಇನ್ನೂ ಸಲ್ಲಿಸಿಲ್ಲವಾದ್ದರಿಂದ ಸ್ವೀಕಾರ ಮಾಡುವುದು ಹೇಗೆ. ವರದಿ ಕೊಟ್ಟ ಮೇಲೆ ಸ್ವೀಕಾರ ಮಾಡುವ ಪ್ರಶ್ನೆ ಉದ್ಭವವಾಗುತ್ತದೆ. ಶಾಶ್ವತ ಹಿಂದುಳಿದ ವರ್ಗಗಳ ಆಯೋಗವು ವರದಿ ಕೊಟ್ಟಿಲ್ಲ. ಕೊಡಲು ಬಂದಾಗ ವಿಚಾರ ಮಾಡುತ್ತೇವೆ ಎಂದು ಹೇಳಿದರು.

ಕೆಲವರು ವರದಿ ವೈಜ್ಞಾನಿಕವಲ್ಲ ಎಂದು ವಿಚಾರ ಮಾಡುತ್ತಿದ್ದು, ವರದಿ ಬಾರದೆ, ಏನಿದೆ ಎಂದು ತಿಳಿಯದೇ ಊಹಾಪೋಹದ ಮೇಲೆ ನಿರ್ಧಾರ ಮಾಡುತ್ತಿದ್ದಾರೆ. ವರದಿ ಬರಲಿ. ಆನಂತರ ಅದರ ಬಗ್ಗೆ ನೋಡೋಣ ಎಂದು ತಿಳಿಸಿದರು.

ಶ್ರೀ ಶೈಲ ಜಗದ್ಗುರು ಚನ್ನಸಿದ್ಧರಾಮ ಸ್ವಾಮೀಜಿ 2 ವರ್ಷಗಳ ನಂತರ ವರದಿ ಬಿಡುಗಡೆ ಮಾಡಲಿ ಎಂದು ಹೇಳುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಅವರಿಗೆಯಾಗಲಿ ನನಗೇ ಆಗಲಿ ವರದಿಯಲ್ಲಿ ಏನಿದೆ ಎಂದು ತಿಳಿದಿಲ್ಲ. ವರದಿ ಬರುವ ಮುನ್ನವೇ ವೈಜ್ಞಾನಿಕ ವಲ್ಲ ಎನ್ನುವುದು ಸರಿಯಲ್ಲ ಎಂದರು.

ಭ್ರಷ್ಟಾಚಾರ ಪ್ರಕರಣ ತನಿಖೆ

ರಾಜ್ಯದಲ್ಲಿ ಯಾವುದೇ ಭ್ರಷ್ಟಾಚಾರದ ಪ್ರಕರಣ ಗಳಿದ್ದರೆ ಅದನ್ನು ಸುಮ್ಮನೆ ನೋಡುತ್ತಾ ಕುಳಿತುಕೊಳ್ಳುವುದಿಲ್ಲ. ತನಿಖೆ ಮಾಡಿಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಕ.ರ.ಸಾ.ನಿಗಮದಲ್ಲಿ ಸಾಕಷ್ಟು ಬಸ್ ಕೆಟ್ಟು ನಿಂತಿದ್ದು ಚಾಲಕರಿಗೆ ಡ್ಯೂಟಿ ಸಿಗುತ್ತಿಲ್ಲ. ಡ್ಯೂಟಿ ಹಾಕಲು ಅಧಿಕಾರಿಗಳು ಹಣ ಕೇಳುತ್ತಾರೆ ಎಂದು ಚಾಲಕರೇ ಆರೋಪಿಸುವ ಬಗ್ಗೆ ಪ್ರತಿಕ್ರಿಯೆ ನೀಡಿ ಈಗಾಗಲೇ ನಾವು ಹಿಂದಿನ ಸರ್ಕಾರದ 40% ಭ್ರಷ್ಟಾಚಾರ ಪ್ರಕರಣವನ್ನು ತನಿಖೆ ಮಾಡಿಸುತ್ತಿದ್ದೇವೆ. ಆರೋಪಗಳು ಸಾಬೀತಾದ ಮೇಲೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು. ಡ್ಯೂಟಿ ಹಾಕಲು ಲಂಚ ಕೇಳಿದ ಪ್ರಕರಣವನ್ನೂ ತನಿಖೆ ಮಾಡಿಸಲಾಗುವುದು ಎಂದರು.

ಅನುದಾನದ ಕೊರತೆ ಇಲ್ಲ

ಶಕ್ತಿ ಯೋಜನೆಗೆ ಸರ್ಕಾರ ಮೀಸಲಿಟ್ಟ ಹಣ ಪೂರ್ಣಗೊಂಡಿದೆ ಎಂಬ ಬಗ್ಗೆ ಉತ್ತರಿಸಿ ಯೋಜನೆಗೆ ಎಷ್ಟು ಹಣ ಖರ್ಚಾಗುತ್ತದೆಯೋ ಅಷ್ಟು ಹಣ ಒದಗಿಸಲಾಗುವುದು ಎಂದರು. ಶಕ್ತಿ ಯೋಜನೆಗೆ ಪ್ರತಿ ವರ್ಷ ವೆಚ್ಚವಾಗುವ ಹಣವನ್ನು ಕೆ.ಎಸ್.ಆರ್.ಟಿ. ಸಿಗೆ ಸರ್ಕಾರ ತುಂಬಿ ಕೊಡಲಾಗುವುದು. ಬಸ್ಸುಗಳ ದುರಸ್ತಿ ಹಾಗೂ ಹೊಸ ಬಸ್ಸುಗಳ ಖರೀದಿಯೂ ಆಗಲಿದೆ ಎಂದರು. ರಿಪೇರಿಗೆ ಅನುದಾನವನ್ನು ಒದಗಿಸಲಾಗಿದೆ ಎಂದರು. ಅನುದಾನವಿಲ್ಲ ಎಂದಿರುವ ಅಧಿಕಾರಿಗಳ ಹೆಸರು ನೀಡಿದರೆ ಪರಿಶೀಲನೆ ನಡೆಸಲಾಗುವುದು. ನಮ್ಮ ಸರ್ಕಾರದಲ್ಲಿ ಘೋಷಿಸಿರುವ ಯೋಜನೆಗಳಿಗೆ ಅನುದಾನದ ಕೊರತೆ ಇಲ್ಲ .ಅಭಿವೃದ್ಧಿ ಕೆಲಸಗಳು ನಿಂತಿಲ್ಲ ಎಂದರು.

ಕೊಟ್ಟ ಮಾತಿನಂತೆ ನಡೆದಿದ್ದೇವೆ

ನವೆಂಬರ್ ಅಂತ್ಯದವರೆಗೆ ಹಿಂದಿನ ಸರ್ಕಾರ 70,814 ಕೋಟಿ ರೂ.ಗಳನ್ನು ಅಭಿವೃದ್ಧಿಗೆ ಖರ್ಚು ಮಾಡಿತ್ತು. ನಮ್ಮ ಸರ್ಕಾರ 73, 928 ಕೋಟಿ ರೂ.ಗಳನ್ನು ವೆಚ್ಚ ಮಾಡಿದೆ. ಹಣವನ್ನು ಖರ್ಚು ಮಾಡಿಲ್ಲ ಎನ್ನುವುದು ಸುಳ್ಳು. 3000 ಕೋಟಿ ರೂ.ಗಳಷ್ಟು ಮೊತ್ತವನ್ನು ಹೆಚ್ಚು ವೆಚ್ಚ ಮಾಡಿದ್ದೇವೆ. ನಾವು ಸರ್ಕಾರ ರೂಪಿಸಿದ್ದು ಮೇ 20 ಕ್ಕೆ, ಬಜೆಟ್ ಮಂಡಿಸಿದ್ದು ಜುಲೈ ನಲ್ಲಿ, ಅದು ಜಾರಿಯಾಗಿದ್ದು ಆಗಸ್ಟ್ 1 ರಿಂದ . 4 ಗ್ಯಾರಂಟಿ ಗಳನ್ನು ಜಾರಿ ಮಾಡಿದ್ದು, 5 ನೇ ಗ್ಯಾರಂಟಿ ಜನವರಿಯಲ್ಲಿ ಪ್ರಾರಂಭವಾಗಿದೆ. ಕೊಟ್ಟ ಮಾತಿನಂತೆ ನಡೆದಿದ್ದೇವೆ ಎಂದರು.

ನಮ್ಮ ಪೊಲೀಸರು ಸಮರ್ಥರಿದ್ದಾರೆ

ಬೆಳಗಾವಿಯಲ್ಲಿ ಮಹಿಳೆ ಮೇಲಾದ ದೌರ್ಜನ್ಯ ಪ್ರಕರಣವನ್ನು ಎಲ್ಲಿಗೆ ಬೇಕಾದರೂ ವಹಿಸಲು ಸಿದ್ದ ಎಂದರು. ತನಿಖೆಯಾಗಿ ತಪ್ಪಿತಸ್ಥ ರಿಗೆ ಶಿಕ್ಷೆಯಾಗಬೇಕು. ನಮ್ಮ ಪೊಲೀಸರು ತನಿಖೆ ಮಾಡಲು ಸಮರ್ಥರಿದ್ದಾರೆ ಎಂದು ಸಿಎಂ ತಿಳಿಸಿದರು.

ಪರಿಹಾರ ಸೂತ್ರ

ಉನ್ನತ ಶಿಕ್ಷಣ ಮತ್ತು ಪ್ರಾಥಮಿಕ ಶಿಕ್ಷಣ ಇಲಾಖೆಗಳು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಒಂದು ಸೂತ್ರ ರೂಪಿಸುತ್ತಿದ್ದಾರೆ. ಈ ಸಂಬಂಧ ಸಭೆ ನಡೆಸಿದ ನಂತರ ಪರಿಹಾರ ಸೂತ್ರವನ್ನು ಸರ್ಕಾರಕ್ಕೆ ನೀಡುತ್ತಾರೆ. ತದನಂತರ ಸರ್ಕಾರ ಪರಿಶೀಲನೆ ನಡೆಸಲಿದೆ.ಈ ಕೆಲಸವನ್ನು ತ್ವರಿತವಾಗಿ ನಡೆಸಲು ಸೂಚಿಸಲಾಗಿದೆ ಎಂದರು

ಸುಳ್ಳು ಹೇಳುವ ಕೆಲಸ

ಬಿಜೆಪಿ ಸಂಘ ಪರಿವಾರದ ಎಬಿವಿಪಿ, ಬಜರಂಗ ದಳ, ಯುವ ಮೋರ್ಚಾ ಎಲ್ಲಾ ಸುಳ್ಳಿನ ಕಾರ್ಖಾನೆ. ವಿದ್ಯಾರ್ಥಿಗಳಿಗೆ ಶಕ್ತಿ ಯೋಜನೆಯಿಂದ ತೊಂದರೆಯಾಗಿರುವ ಬಗ್ಗೆ ಮಾತನಾಡಿ ಎಬಿವಿಪಿ ಬಿಜೆಪಿಯ ವಿದ್ಯಾರ್ಥಿ ಸಂಘಟನೆಯಾಗಿದ್ದು, ಸುಳ್ಳು ಹೇಳುವುದೇ ಅವರ ಕೆಲಸ ಎಂದು ಸಿಎಂ ಟೀಕಿಸಿದರು

ಹಿಂದೂ ರಾಷ್ಟ್ರ ಬಿಜೆಪಿ ಸಿದ್ದಾಂತ

ಭಾರತ ಉಳಿಯಬೇಕೆಂದರೆ ಹಿಂದೂ ರಾಷ್ಟವಾಗಬೇಕು ಎಂದು ಪೇಜಾವರ ಶ್ರೀಗಳು ಹೇಳಿಕೆ ನೀಡಿರುವ ಬಗ್ಗೆ ಮಾತನಾಡಿ ಅದು ಬಿಜೆಪಿಯ ಘೋಷವಾಕ್ಯ. ಹಿಂದೂ ರಾಷ್ಟ್ರ ವಾಗಬೇಕೆಂದು ಜನಸಂಘ 1950ರಲ್ಲಿ ಪ್ರಾರಂಭವಾದಾಗಲೇ ಹೇಳಿದರು. ನಮ್ಮ ದೇಶದಲ್ಲಿ ಬರೀ ಹಿಂದೂಗಳಲ್ಲಿ ಕ್ರಿಶ್ಚಿಯನ್ , ಮುಸ್ಲಿಂ, ಜೈನರು, ಭೌದ್ಧರು ಇದ್ದಾರೆ. ನಮ್ಮ ದೇಶ ಬಹುತ್ವದ ದೇಶ. ಬರೀ ಹಿಂದುಗಳ ರಾಷ್ಟ್ರ ಮಾಡಿದರೆ ಆಗೋಲ್ಲ. ಅದು ಬಿಜೆಪಿಯ ಸಿದ್ದಾಂತ. ದೇಶವನ್ನು ಹಿಂದೂಗಳ ರಾಷ್ಟ್ರ ಮಾಡೋಕ್ಕೆ ಆಗೋಲ್ಲ ಎಂದರು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ