ಡೆಂಗ್ಯೂವನ್ನು ಸಾಂಕ್ರಾಮಿಕ ರೋಗ ಎಂದು ಘೋಷಿಸಿದ ಕರ್ನಾಟಕ ಸರ್ಕಾರ; ಸೊಳ್ಳೆ ಉತ್ಪತ್ತಿಗೆ ಕಾರಣರಾದರೆ ದಂಡ ಖಚಿತ
Sep 03, 2024 05:24 PM IST
ಡೆಂಗ್ಯೂವನ್ನು ಸಾಂಕ್ರಾಮಿಕ ರೋಗ ಎಂದು ಘೋಷಿಸಿದ ಕರ್ನಾಟಕ ಸರ್ಕಾರ
- ಕರ್ನಾಟಕದಲ್ಲಿ ಡೆಂಗ್ಯೂವನ್ನು ಸಾಂಕ್ರಾಮಿಕ ರೋಗ ಎಂದು ಕಾಂಗ್ರೆಸ್ ಸರ್ಕಾರ ಅಧಿಕೃತ ಘೋಷಣೆ ಮಾಡಿದೆ. ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ 2020ರ ಅಡಿಯಲ್ಲಿ ಡೆಂಗ್ಯೂ ಜ್ವರವನ್ನು ಮಹಾಮಾರಿ ಎಂದು ಘೋಷಿಸಲಾಗಿದೆ.
ಕರ್ನಾಟಕ ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ದಶಕದಲ್ಲೇ ಡೆಂಗ್ಯೂ ಪ್ರಕರಣಗಳು ಭೀಕರ ರೀತಿಯಲ್ಲಿ ಹರಡುತ್ತಿದೆ. ಹೀಗಾಗಿ ರಾಜ್ಯ ಸರ್ಕಾರವು ಮಹತ್ವದ ನಿರ್ಧಾರ ಕೈಗೊಂಡಿದೆ. ರಾಜ್ಯದಲ್ಲಿ ಡೆಂಗ್ಯೂವನ್ನು ಸಾಂಕ್ರಾಮಿಕ ರೋಗ ಎಂದು ಘೋಷಿಸಿದೆ. ಕಾಂಗ್ರೆಸ್ ಸರ್ಕಾರವು ಅಧಿಸೂಚನೆ ಪ್ರಕಟಿಸಿದ್ದು, ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ 2020ರ ಅಡಿಯಲ್ಲಿ ಡೆಂಗ್ಯೂ ಜ್ವರವನ್ನು ಮಹಾಮಾರಿ ಎಂದು ಅಧಿಸೂಚನೆ ಹೊರಡಿಸಲಾಗಿದೆ.
ಈ ನಿರ್ಧಾರಂದಂತೆ, ಮನೆಗಳು, ವಾಣಿಜ್ಯ ಸಂಸ್ಥೆಗಳು ಮತ್ತು ನಿರ್ಮಾಣ ಹಂತದ ಸ್ಥಳಗಳಲ್ಲಿ ಸೊಳ್ಳೆ ಉತ್ಪತ್ತಿಯಾಗುವುದಕ್ಕೆ ಕಡಿವಾಣ ಹಾಕಲು ಮಹತ್ವದ ಕ್ರಮ ಕೈಗೊಳ್ಳಲಾಗಿದೆ. ಒಂದು ವೇಳೆ ಸೊಳ್ಳೆ ಉತ್ಪತ್ತಿಯಾಗುವ ತಾಣಗಳನ್ನು ಕಡಿಮೆ ಮಾಡಲು ಉದ್ದೇಶಿಸಲಾದ ನಿಯಮಗಳನ್ನು ಅನುಸರಿಸದಿದ್ದಲ್ಲಿ ರಾಜ್ಯ ಸರ್ಕಾರವು ದಂಡವನ್ನು ವಿಧಿಸುತ್ತದೆ.
ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಈ ವರ್ಷ 24,500 ದಾಟಿದೆ. ಇದು 2023ರಲ್ಲಿ ವರದಿಯಾದ ಒಟ್ಟು ಪ್ರಕರಣಗಳಿಗಿಂತ ಸುಮಾರು 5,000 ಹೆಚ್ಚು. ಸಾವು ಪ್ರಕರಣಗಳು ತುಂಬಾ ಹೆಚ್ಚಿಲ್ಲ. ಆದರೆ ಸರ್ಕಾರವು ಈಗಲೇ ಎಚ್ಚೆತ್ತುಕೊಂಡಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಮೊದಲು ನಿರ್ಣಾಯಕ ಕ್ರಮ ಕೈಗೊಂಡಿದೆ.
ಸರ್ಕಾರದ ಮಾರ್ಗಸೂಚಿಗಳೇನು?
- ಮನೆ ಮಾಲೀಕರು ಕಟ್ಟಡ ನಿರ್ಮಾಣ ಸ್ಥಳದಲ್ಲಿ ನೀರನ್ನು ಶೇಖರಿಸಿ ಇಡುವ ಸಂಪ್ ಮತ್ತು ಟ್ಯಾಂಕ್‌ಗಳನ್ನು ಸ್ವಚ್ಛವಾಗಿ ಇಡಬೇಕು. ಸೊಳ್ಳೆ ಉತ್ಪತ್ತಿಯಾಗದಂತೆ ಕ್ರಮ ವಹಿಸಬೇಕು.
- ಮನೆ ಮಾಲೀಕರು, ಸಾರ್ವಜನಿಕರು ಮನೆಯ ಸುತ್ತಮುತ್ತ ಮಳೆ ನೀರು ನಿಲ್ಲದಂತೆ, ಟೈರ್‌ಗಳಲ್ಲಿ ನೀರು ನಿಲ್ಲದಂತೆ ಕ್ರಮ ವಹಿಸಬೇಕು.
- ಶಿಕ್ಷಣ ಸಂಸ್ಥೆಗಳು, ಶಾಲಾ ಕಾಲೇಜುಗಳು, ಕಟ್ಟಡ ಮಾಲೀಕರು ಸೊಳ್ಳೆ ಉತ್ಪತ್ತಿ ತಾಣಗಳನ್ನು ನಿಯಂತ್ರಿಸಬೇಕು.
ದಂಡದ ವಿವರ
ಡೆಂಗ್ಯೂ ನಿಯಂತ್ರಣಕ್ಕಾಗಿ ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆಗೊಳಿಸಿದೆ. ಸರ್ಕಾರದ ಗೈಡ್‌ಲೈನ್ಸ್ ಉಲ್ಲಂಘಿಸಿದವರ ಮೇಲೆ ದಂಡ ಪ್ರಯೋಗ ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ. ಅಲ್ಲದೆ ದಂಡದ ಮೊತ್ತವನ್ನು ನಿಗದಿ ಮಾಡಿದೆ. ಯಾವುದೇ ಲೋಪ ಕಂಡುಬಂದಲ್ಲಿ, ಅಧಿಕಾರಿಗಳು 400 ರಿಂದ 2,000 ರೂಪಾಯಿವರೆಗೆ ದಂಡವನ್ನು ವಿಧಿಸಬಹುದು. ಹೂಕುಂಡಗಳು, ಬಕೆಟ್‌ಗಳು ಅಥವಾ ಕಾಂಪೌಂಡ್‌ನ ಒಳಗಿನ ಯಾವುದೇ ಪ್ರದೇಶದಲ್ಲಿ ನೀರು ನಿಲ್ಲದಂತೆ ನಿಯಮ ಪಾಲಿಸದ ಮನೆಗಳಿಗೆ ದಂಡ ವಿಧಿಸಲಾಗುತ್ತದೆ. ನಗರ ಪ್ರದೇಶಗಳಿಗೆ 400 ಮತ್ತು ಗ್ರಾಮೀಣ ಪ್ರದೇಶಗಳಿಗೆ 200 ರೂ ದಂಡ ವಿಧಿಸಲಾಗುತ್ತದೆ.
ಇದೇ ವೇಳೆ ಕಚೇರಿಗಳು, ಶಿಕ್ಷಣ ಸಂಸ್ಥೆಗಳು, ಹೋಟೆಲ್‌ಗಳು, ರೆಸಾರ್ಟ್‌ಗಳು, ಅಂಗಡಿಗಳು, ಮಾಲ್‌ಗಳು, ಸಿನಿಮಾ ಹಾಲ್‌ಗಳು ಸೇರಿದಂತೆ ನಗರ ಪ್ರದೇಶಗಳ ವಾಣಿಜ್ಯ ಸಂಸ್ಥೆಗಳಿಗೆ 1,000 ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 500 ದಂಡವನ್ನು ಪಾವತಿಸಬೇಕಾಗುತ್ತದೆ.
ಡೆಂಗ್ಯೂ ಲಕ್ಷಣಗಳು
ತೀವ್ರ ತಲೆನೋವು, ದೇಹದ ತಾಪಮಾನ ಹೆಚ್ಚಾಗುವುದು, ಕೀಲು ಮತ್ತು ಸ್ನಾಯುಗಳಲ್ಲಿ ನೋವು, ಕೆಲವು ಸಲ ರಕ್ತಸ್ರಾವ ಮತ್ತು ವಾಕರಿಕೆ ಕಾಣಿಸಿಕೊಳ್ಳುವುದು ಡೆಂಗ್ಯೂ ರೋಗದ ಪ್ರಮುಖ ಲಕ್ಷಣಗಳು.
ಡೆಂಗ್ಯೂ ತಡೆಗಟ್ಟುವುದು ಹೇಗೆ?
ಮುಂಜಾಗ್ರತಾ ಕ್ರಮದಿಂದ ಡೆಂಗ್ಯೂ ಜ್ವರವನ್ನು ತಡೆಗಟ್ಟಬಹುದು. ಇದಕ್ಕೆ ಸೊಳ್ಳೆಗಳು ಉತ್ಪತ್ತಿಯಾಗುವುದನ್ನು ತಡೆಯಬೇಕು. ಮನೆ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಅಂಗಳ ಹಾಗೂ ಮನೆ ಸಮೀಪ ಎಸೆದ ತೆಂಗಿನ ಚಿಪ್ಪು, ಹಳೆಯ ವಸ್ತುಗಳಲ್ಲಿ ನೀರು ಸಂಗ್ರಹವಾಗದಂತೆ ನೋಡಬೇಕು. ನೀರಿನ ತೊಟ್ಟಿ ಆಗಾಗ ಖಾಲಿ ಮಾಡುವುದು, ಸೊಳ್ಳೆ ಉತ್ಪತ್ತಿಯಾಗದಂತೆ, ಸೊಳ್ಳೆಗಳು ಮರಿ ಇಡದಂತೆ ಎಚ್ಚರ ವಹಿಸುವ ಮೂಲಕ ಡೆಂಗ್ಯೂ ಜ್ವರವನ್ನು ತಡೆಗಟ್ಟಬಹುದಾಗಿದೆ.
ತೀವ್ರ ಹೊಟ್ಟೆ ನೋವು, ನಿರಂತರ ವಾಂತಿ, ಮೂಗು ಅಥವಾ ಒಸಡುಗಳಿಂದ ರಕ್ತಸ್ರಾವವಾಗುವುದು, ಅರೆನಿದ್ರಾವಸ್ಥೆ, ಉಸಿರಾಟದ ತೊಂದರೆ ಕಂಡುಬಂದರೆ ನಿರ್ಲಕ್ಷಿಸಬಾರದು. ಇಂತಹ ಯಾವುದೇ ರೋಗಲಕ್ಷಣಗಳು ಕಂಡುಬಂದರೆ, ದಯವಿಟ್ಟು ತಕ್ಷಣವೇ ವೈದ್ಯರನ್ನು ಭೇಟಿ ಮಾಡಿ.