logo
ಕನ್ನಡ ಸುದ್ದಿ  /  ಕರ್ನಾಟಕ  /  Graft Charges Against Bjp Mla: ಸರ್ಕಾರಿ ಗುತ್ತಿಗೆಗಳಲ್ಲಿ ಕಮಿಷನ್‌ ಆರೋಪ; ಶಾಸಕ ತಿಪ್ಪಾರೆಡ್ಡಿ ಹೇಳಿರುವುದೇನು?

Graft Charges against BJP MLA: ಸರ್ಕಾರಿ ಗುತ್ತಿಗೆಗಳಲ್ಲಿ ಕಮಿಷನ್‌ ಆರೋಪ; ಶಾಸಕ ತಿಪ್ಪಾರೆಡ್ಡಿ ಹೇಳಿರುವುದೇನು?

HT Kannada Desk HT Kannada

Jan 17, 2023 12:03 PM IST

google News

ಗುತ್ತಿಗೆದಾರರ ಸಂಘದ ಕಾರ್ಯಾಧ್ಯಕ್ಷ ಆರ್.ಮಂಜುನಾಥ್‌, ಬಿಜೆಪಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ

  • Graft Charges against BJP MLA: ಆರ್‌.ಮಂಜುನಾಥ್‌ ಅವರು ಸೋಮವಾರ ಸುದ್ದಿಗಾರರ ಜತೆಗೆ ಮಾತನಾಡುತ್ತ, ಚಿತ್ರದುರ್ಗದಲ್ಲಿ ಬಿಜೆಪಿ ಶಾಸಕ ಜಿ.ಎಚ್.‌ ತಿಪ್ಪಾರೆಡ್ಡಿ ಭ್ರಷ್ಟಾಚಾರ ಶುರುಮಾಡಿದರು. 2019ರಿಂದೀಚೆಗೆ ತಿಪ್ಪಾರೆಡ್ಡಿಗೆ 90 ಲಕ್ಷ ರೂ. ಕೊಟ್ಟಿದ್ದೇನೆ ಎಂದು ಹೇಳಿದ್ದರು. ತಿಪ್ಪಾರೆಡ್ಡಿ, “ಇದು ವೈಯಕ್ತಿಕ ದ್ವೇಷದ ಹೇಳಿಕೆ” ಎಂದು ಪ್ರತಿಕ್ರಿಯಿಸಿದ್ದಾರೆ.

ಗುತ್ತಿಗೆದಾರರ ಸಂಘದ ಕಾರ್ಯಾಧ್ಯಕ್ಷ ಆರ್.ಮಂಜುನಾಥ್‌, ಬಿಜೆಪಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ
ಗುತ್ತಿಗೆದಾರರ ಸಂಘದ ಕಾರ್ಯಾಧ್ಯಕ್ಷ ಆರ್.ಮಂಜುನಾಥ್‌, ಬಿಜೆಪಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ

ಬೆಂಗಳೂರು: ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ(ಕೆಎಸ್‌ಸಿಎ)ದ ಕಾರ್ಯಾಧ್ಯಕ್ಷ ಆರ್‌.ಮಂಜುನಾಥ್‌ ಸುದ್ದಿಗೋಷ್ಠಿ ನಡೆಸಿ, ಲಂಚದ ಬೇಡಿಕೆ ಸಂಬಂಧ ಚಿತ್ರದುರ್ಗ ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಜತೆಗೆ ಮಾತನಾಡಿದ ಆಡಿಯೋ ರಿಲೀಸ್‌ ಮಾಡಿದ್ದರು.

ಸರ್ಕಾರಿ ಗುತ್ತಿಗೆ ಪಡೆಯಬೇಕಾದರೆ ಲಂಚ ಮತ್ತು ಕಮಿಷನ್‌ ನೀಡಬೇಕಾಗಿ ಬಂದಿರುವ ಪರಿಸ್ಥಿತಿಯ ಕಡೆಗೆ ಮಂಜುನಾಥ್‌ ಗಮನಸೆಳೆಯಲು ಪ್ರಯತ್ನಿಸಿ, ಈ ಆಡಿಯೋ ರಿಲೀಸ್‌ ಮಾಡಿದ್ದರು.

ಈ ಆರೋಪದ ಬಗ್ಗೆ ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಪ್ರತಿಕ್ರಿಯೆ ನೀಡಿದ್ದು, "ಮಂಜುನಾಥ್‌ಗೆ ನನ್ನ ಬಗ್ಗೆ ವೈಯಕ್ತಿಕ ದ್ವೇಷ ಇದೆ. ಕಳೆದ 10-20 ವರ್ಷದಿಂದ ನನಗೂ ಮಂಜುನಾಥ್‌ಗೂ ಭಿನ್ನಾಭಿಪ್ರಾಯ ಇದೆ. ಏನು ಕೆಲಸ ಮಾಡಿದ್ರೂ, ಅದರಲ್ಲಿ ಆತನದ್ದೇ ಅಂತಿಮ ಮಾತಿರಬೇಕು ಎಂಬ ಧೋರಣೆ ಹೊಂದಿದ ವ್ಯಕ್ತಿ ಮಂಜುನಾಥ್‌. ಅವರು ಜಿಲ್ಲಾ ಅಧ್ಯಕ್ಷರಾಗಿದ್ದಾಗ ಅಧಿಕಾರಿಗಳನ್ನು ಬೆದರಿಸುತ್ತಿದ್ದರು. ಸಣ್ಣ ಗುತ್ತಿಗೆದಾರರಿಗೆ ಬಹಳ ಕಿರುಕುಳ ಕೊಟ್ಟಿದ್ದಾರೆ. ಯಾವ ಪಕ್ಷಕ್ಕೆ ಬೆಂಬಲ ನೀಡುತ್ತೀರಿ ಎಂದು ಕೇಳಿ ಸತಾಯಿಸುವ ಕೆಲಸವನ್ನೂ ಮಂಜುನಾಥ್‌ ಮಾಡುತ್ತಿದ್ದರು ಎಂದು ಪ್ರತ್ಯಾರೋಪ ಮಾಡಿದ್ದಾರೆ.

ಮಂಜುನಾಥ್‌ ನನ್ನನ್ನು ಸಂಪರ್ಕಿಸಿ ರಿಯಲ್‌ ಎಸ್ಟೇಟ್‌ ಬಿಜಿನೆಸ್‌ ಪಾಲುದಾರಿಕೆ ಮಾಡಲು ಆಹ್ವಾನಿಸಿದ್ದ. ಅದನ್ನು ನಾನು ನಿರಾಕರಿಸಿದ್ದೆ. ಬೆದರಿಸಿ ಕೆಲಸ ಮಾಡಿಸುವುದು ಆತನ ನಡವಳಿಕೆ. ಈಗ ಮಾಡಿರುವ ಆರೋಪ ಅದು ವೈಯಕ್ತಿಕ ದ್ವೇಷ ಆರೋಪ ಎಂದು ತಿಪ್ಪಾರೆಡ್ಡಿ ವಿವರಿಸಿದರು.

ಆರ್‌.ಮಂಜುನಾಥ್‌ ಅವರು ಸೋಮವಾರ ಸುದ್ದಿಗಾರರ ಜತೆಗೆ ಮಾತನಾಡುತ್ತ, ಚಿತ್ರದುರ್ಗದಲ್ಲಿ ಈ ಹಿಂದೆ ಭ್ರಷ್ಟಾಚಾರ ಇರಲಿಲ್ಲ. ಬಿಜೆಪಿ ಶಾಸಕ ಜಿ.ಎಚ್.‌ ತಿಪ್ಪಾರೆಡ್ಡಿ ಅದನ್ನು ಶುರುಮಾಡಿದರು. 2019ರಿಂದೀಚೆಗೆ ತಿಪ್ಪಾರೆಡ್ಡಿ ಅವರಿಗೆ 90 ಲಕ್ಷ ರೂಪಾಯಿ ಕೊಟ್ಟಿದ್ದೇನೆ ಎಂದು ಹೇಳಿದ್ದರು.

ತಿಪ್ಪಾರೆಡ್ಡಿ ಅವರ ವಿರುದ್ದ ಲೋಕಾಯುಕ್ತದಲ್ಲಿ ಈಗಾಗಲೇ ದೂರು ದಾಖಲಿಸಿದ್ದೇನೆ. ಈ ಆರೋಪಕ್ಕೆ ಪೂರಕವಾಗಿ ಇರುವಂತಹ ವಾಟ್ಸ್‌ಆಪ್‌ ಚಾಟ್ಸ್‌ ಮತ್ತು ಆಡಿಯೋ ರೆಕಾರ್ಡ್‌ಗಳು ನನ್ನ ಬಳಿ ಇವೆ. ಇದುವರೆಗೆ ಚಿತ್ರದುರ್ಗ ಜಿಲ್ಲೆಯಲ್ಲಿ 700 ರಿಂದ 800 ಕೋಟಿ ರೂಪಾಯಿ ಮೌಲ್ಯದ ಕಾಮಗಾಋಿ ಆಗಿದೆ. ಕಮಿಷನ್‌ ಶೇಕಡ 5ರಿಂದ ಶೇಕಡ 25ರ ತನಕ ನೀಡಲಾಗಿದೆ. ಪಿಡಬ್ಲ್ಯುಡಿ ಕೆಲಸದಲ್ಲಿ ಶೇಕಡ 15, ಕಟ್ಟಡ ನಿರ್ಮಾಣ ಕಾಮಗಾರಿ ಶೇಕಡ 5ರಿಂದ ಶೇಕಡ 10 ಕಮಿಷನ್‌ ಇದೆ. ಸಣ್ಣ ನೀರಾವರಿ ಇಲಾಖೆಯಲ್ಲಾದರೆ ಶೇಕಡ 25 ಕಮಿಷನ್‌ ಚಾಲ್ತಿಯಲ್ಲಿದೆ ಎಂದು ಮಂಜುನಾಥ್‌ ಆರೋಪಿಸಿದ್ದಾರೆ.

ಕಮಿಷನ್‌ ಪಾವತಿಗೆ ಹೇಗೆ ಸಂಕೇತಗಳು ಬಳಕೆಯಾಗುತ್ತವೆ ಎಂಬುದನ್ನು ವಿವರಿಸಿದ ಮಂಜುನಾಥ್‌, ಕೈ ಬೆರಳುಗಳ ಮೂಲಕ ಪರ್ಸಂಟೇಜ್‌ ಎಷ್ಟೆಂಬ ವಿವರ ರವಾನೆಯಾಗುತ್ತದೆ. ಚಿತ್ರದುರ್ಗದಲ್ಲಿ ನಾನು ಪಿಡಬ್ಲ್ಯುಡಿ ಕಚೇರಿ ನಿರ್ಮಿಸಿಕೊಟ್ಟಿದ್ದೇನೆ. ಇದನ್ನು ಸಚಿವ ಸಿ.ಸಿ.ಪಾಟೀಲ್‌ ಇತ್ತೀಚೆಗೆ ಉದ್ಘಾಟಿಸಿದರು. ಆದಾಗ್ಯೂ, ಈ ಕಾಮಗಾರಿಯ ಅಂತಿಮ ಪಾವತಿ ಇನ್ನೂ ಸಿಕ್ಕಿಲ್ಲ. ಈ ಬಗ್ಗೆ ಸಚಿವ ಸಿ.ಸಿ.ಪಾಟೀಲ್‌ ಉತ್ತರಿಸಬೇಕು ಎಂದು ಹೇಳಿದರು.

ಈ ವಿಚಾರವಾಗಿ ಸಿಸಿ ಪಾಟೀಲ್‌ ಅವರನ್ನು HT ಸಂಪರ್ಕಿಸಿದ್ದು, ತತ್‌ಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ.

Graft charge shrouds Bommai govt: ಮಂತ್ರಿಗಳು ಲಂಚ ಕೇಳ್ತಿದ್ದಾರೆ ಎಂದು ಆರೋಪಿಸಿದ ಗುತ್ತಿಗೆದಾರರ ಸಂಘ

ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ(ಕೆಎಸ್‌ಸಿಎ)ದ ಕಾರ್ಯಾಧ್ಯಕ್ಷ ಆರ್‌.ಮಂಜುನಾಥ್‌ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ಸರ್ಕಾರದ 3-4 ಸಚಿವರು, 13-14 ಶಾಸಕರ ವಾಟ್ಸ್‌ಆಪ್‌ ಮೆಸೇಜ್‌, ಆಡಿಯೋ ಕ್ಲಿಪ್‌ ಗುತ್ತಿಗೆದಾರರ ಸಂಘದಲ್ಲಿದೆ ಎಂದು ಹೇಳಿದರು. ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿ ಅವರ ಆಡಿಯೋ ಕ್ಲಿಪ್‌ ರಿಲೀಸ್‌ ಮಾಡಿದರು. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ