Gruha Lakshmi: ಗೃಹಲಕ್ಷ್ಮಿ ಯೋಜನೆಗೆ ನಾಳೆಯಿಂದ ಅರ್ಜಿ ಸ್ವೀಕಾರ; ಇವಿಷ್ಟೂ ದಾಖಲೆ ರೆಡಿ ಮಾಡಿಕೊಳ್ಳಿ, ಸುಲಭ ನೋಂದಣಿಗೆ ಹೀಗೆ ಮಾಡಿ
Jul 31, 2023 01:19 PM IST
ಗೃಹಲಕ್ಷ್ಮಿ ಯೋಜನೆಗೆ ನಾಳೆಯಿಂದ ಅರ್ಜಿ ಸ್ವೀಕಾರ
- Gruha Lakshmi Scheme: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ(Gruhalakshmi Scheme)ಗೆ ಜುಲೈ 19 ರಿಂದ ಅರ್ಜಿ ಸ್ವೀಕಾರ ಆರಂಭವಾಗಲಿದೆ. ಅರ್ಜಿ ಸಲ್ಲಿಸಲು ಯಾವೆಲ್ಲಾ ದಾಖಲೆಗಳು ಬೇಕು, ಸುಲಭ ನೋಂದಣಿ ಹೇಗೆ ಇಲ್ಲಿದೆ ವಿವರ.
ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ನಾಳೆ ಅಂದರೆ ಜುಲೈ 19 ರಿಂದ ಅರ್ಜಿ ಸ್ವೀಕಾರ ಆರಂಭವಾಗಲಿದೆ. ಇದು ಕಾಂಗ್ರೆಸ್ ಸರ್ಕಾರದ ನಾಲ್ಕನೇ ಗ್ಯಾರಂಟಿ ಯೋಜನೆಯಾಗಿದ್ದು, ಈ ಯೋಜನೆಯಡಿ ಮನೆಯೊಡತಿಯು ತಿಂಗಳಿಗೆ 2000 ರೂ ಪಡೆಯಲಿದ್ದಾಳೆ.
ʼಯೋಜನೆಯ ನೋಂದಣಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ ಹಾಗೂ ಅರ್ಜಿ ಸಲ್ಲಿಸಲು ಡೆಡ್‌ಲೈನ್ ಕೂಡ ನಿಗದಿ ಪಡಿಸಿಲ್ಲʼ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕ್ಕರ್ ಜುಲೈ 15 ರಂದು ತಿಳಿಸಿದ್ದರು.
ಈ ವಿಷಯಕ್ಕೆ ಸಂಬಂಧಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು ʼರೇಷನ್ ಕಾರ್ಡ್‌ನಲ್ಲಿ ನಮೂದಿಸಿರುವ ಮನೆಯ ಹಿರಿಯ ಮಹಿಳೆಯು ಈ ಯೋಜನೆಯ ಫಲಾನುಭವಿಯಾಗಲಿದ್ದಾರೆ. ಎಪಿಎಲ್, ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್‌ನವರು ಇದಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಆದರೆ ಫಲಾನುಭವಿ ಅಥವಾ ಅವಳ ಪತಿ ತೆರಿಗೆ ಅಥವಾ ಜಿಎಸ್‌ಟಿ ಪಾವತಿದಾರರು ಆಗಿರಬಾರದು. ಸುಮಾರು 1.28 ಕೋಟಿ ಕುಟುಂಬಗಳು ಈ ಯೋಜನೆ ಪ್ರಯೋಜನ ಪಡೆಯಲಿದ್ದಾರೆʼ ಎಂದು ಅವರು ತಿಳಿಸಿದ್ದಾರೆ.
ಆಗಸ್ಟ್ 16 ರಿಂದ ಬ್ಯಾಂಕ್ ಖಾತೆಗೆ ನೇರ ಹಣ ವರ್ಗಾವಣೆ
ಫಲಾನುಭವಿಯು ತನ್ನ ಬ್ಯಾಂಕ್ ಖ್ಯಾತೆಯೊಂದಿಗೆ ಲಿಂಕ್ ಮಾಡಿರುವ ರೇಷನ್ ಕಾರ್ಡ್ ಸಂಖ್ಯೆ ಹಾಗೂ ಆಧಾರ್ ಕಾರ್ಡ್ ಸಂಖ್ಯೆಯನ್ನು ನೀಡಬೇಕು. ಫಲಾನುಭವಿ ತನ್ನ ಇನ್ನೊಂದು ಬ್ಯಾಂಕ್ ಖಾತೆಗೆ ಹಣವನ್ನು ಸ್ವೀಕರಿಸಲು ಬಯಸಿದರೆ, ನೋಂದಣಿ ಸಮಯದಲ್ಲಿ ಅವಳು ಆ ಖಾತೆಯ ಪಾಸ್ ಪುಸ್ತಕದೊಂದಿಗೆ ಬ್ಯಾಂಕ್ ಖಾತೆಯ ವಿವರಗಳನ್ನು ನೀಡಬೇಕು.
2,000 ರೂ ನಗದು ಹಣವನ್ನು ಫಲಾನುಭವಿಯ ಆಧಾರ್ ಸಂಖ್ಯೆಗೆ ಲಿಂಕ್ ಮಾಡಿದ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ಆಗಸ್ಟ್ 16 ರಿಂದ ನೇರ ಲಾಭ ವರ್ಗಾವಣೆ (ಡಿಬಿಟಿ) ಮೂಲಕ ವರ್ಗಾಯಿಸಲಾಗುತ್ತದೆ. ಫಲಾನುಭವಿಯು ಹೊಸ ಬ್ಯಾಂಕ್ ಖಾತೆಯನ್ನು ಒದಗಿಸಿದ್ದರೆ (ಆಕೆಯ ಆಧಾರ್ ಸಂಖ್ಯೆಗೆ ಲಿಂಕ್ ಮಾಡಲಾದ ಖಾತೆಯನ್ನು ಹೊರತುಪಡಿಸಿ), ಮೊತ್ತವನ್ನು ಆರ್‌ಟಿಜಿಎಸ್ ಮೂಲಕ ವರ್ಗಾಯಿಸಲಾಗುತ್ತದೆ” ಎಂದು ಸಚಿವರು ಹೇಳಿದರು.
ʼಜುಲೈ 19 ರಂದು ನಮ್ಮ ಮುಖ್ಯಮಂತ್ರಿಯವರು ಯೋಜನೆಗೆ ಚಾಲನೆ ನೀಡಲಿದ್ದಾರೆʼ ಎಂದೂ ಅವರು ತಿಳಿಸಿದ್ದಾರೆ.
ಅರ್ಜಿ ಸಲ್ಲಿಕೆ ಎಲ್ಲಿ? ಹೇಗೆ?
- ಗೃಹಲಕ್ಷ್ಮಿ ಯೋಜನೆಗೆ ನೀವೇ ಸ್ವತಃ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಸರ್ಕಾರ ನಿಗದಿ ಪಡಿಸಿದ ಗ್ರಾಮ ಒನ್, ಕರ್ನಾಟಕ ಒನ್ ಬೆಂಗಳೂರು ಒನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು. ನಿಮ್ಮ ಹತ್ತಿರದಲ್ಲಿರುವ ಈ ಯಾವುದಾದರೂ ಒಂದು ಕೇಂದ್ರಕ್ಕೆ ತೆರಳಿ ನೀವು ಅರ್ಜಿ ಸಲ್ಲಿಸಬಹುದು.
- ಹಾಗಂತ ನೀವು ಯಾವಾಗ ಬೇಕಂದ್ರೆ ಅವಾಗ ಹೋಗಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ರೇಷನ್ ಕಾರ್ಡ್‌ನಲ್ಲಿ ಗುರುತಿಸಲಾಗಿರುವ ಪ್ರತಿಯೊಬ್ಬ ಯಜಮಾನಿ ಮಹಿಳೆಗೂ ದಿನಾಂಕ, ಸಮಯ, ಹಾಗೂ ನೋಂದಣಿ ಮಾಡಿಸುವ ಸ್ಥಳದ ವಿವರವನ್ನು ತಿಳಿಸಲಾಗುವುದು. ಆನಂತರವೇ ನೀವು ಅರ್ಜಿ ಸಲ್ಲಿಸಬೇಕಾಗುತ್ತದೆ.
- ಒಂದು ವೇಳೆ ನಿಗದಿಪಡಿಸಿದ ದಿನಾಂಕ ಮತ್ತು ಸಮಯದಂದು ಹೋಗಲು ಸಾಧ್ಯವಾಗದೇ ಇದ್ದಲ್ಲಿ ಅದೇ ಸೇವಾ ಕೇಂದ್ರಗಳಿಗೆ ಮುಂದಿನ ದಿನಗಳಲ್ಲಿ ಸಂಜೆ 5ರಿಂದ 7ರವರೆಗೆ ಮಾತ್ರ ನೋಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ.
- ಇದಲ್ಲದೇ ಪರ್ಯಾಯವಾಗಿ, ಸರ್ಕಾರದಿಂದ ಗುರುತಿಸಲ್ಪಟ್ಟ ಪ್ರಜಾಪ್ರತಿನಿಧಿ ನಿಮ್ಮ ಮನೆಗೆ ಭೇಟಿ ನೀಡಬಹುದು. ಅವರಿಂದಲೂ ನೋಂದಣಿ ಮಾಡಿಸಿಕೊಳ್ಳಬಹುದು. ಅವರು ಮೊಬೈಲ್ ಆ್ಯಪ್ ಮೂಲಕ ಅರ್ಜಿ ಭರ್ತಿ ಮಾಡಿ ಕಳುಹಿಸುತ್ತಾರೆ.
- ನಿಗದಿತ ಕೇಂದ್ರಗಳಲ್ಲಿ ನೋಂದಣಿ ಮಾಡಿಸಿಕೊಂಡಾಗ ಮಂಜೂರಾತಿ ಪತ್ರವನ್ನು ನೀಡಲಾಗುವುದು. ಪ್ರಜಾಪ್ರತಿನಿಧೀ ಮೂಲಕ ನೋಂದಾಯಿಸಿಕೊಂಡಲ್ಲಿ ಮಂಜೂರಾತಿ ಪತ್ರ ತದನಂತರ ಮನೆಗೆ ತಲುಪಲಿದೆ. ಇದರ ಜೊತೆಗೆ ನಿಮ್ಮ ಮೊಬೈಲ್ ಸಂಖ್ಯೆಗೂ ಸಂದೇಶ ಬರಲಿದೆ.
ಗೃಹಲಕ್ಷ್ಮೀ ಯೋಜನೆಗೆ ಬೇಕಾಗುವ ಅಗತ್ಯ ದಾಖಲೆಗಳು
* ಆಧಾರ್ ಕಾರ್ಡ್
* ರೇಷನ್ ಕಾರ್ಡ್
* ಬ್ಯಾಂಕ್ ಪಾಸ್ ಪುಸ್ತಕ
ಯೋಜನೆಯ ಫಲಾನುಭವಿಗಳು ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಕಾರ್ಡ್ ಜೋಡಣೆ ಮಾಡುವುದು ಕಡ್ಡಾಯವಾಗಿದೆ.
ಸಹಾಯವಾಣಿ
ನೊಂದಣಿಗೆ ನಿಗದಿಪಡಿಸಿರುವ ದಿನಾಂಕ, ಸಮಯ ಮತ್ತು ಸ್ಥಳಕ್ಕೆ ಸಂಬಂಧಪಟ್ಟಂತೆ ನೀವು ಸಹಾಯವಾಣಿ ಸಂಖ್ಯೆ 1902 ಕರೆ ಮಾಡಿ ತಿಳಿದುಕೊಳ್ಳಬಹುದು. ಇಲ್ಲದೇ ಇದ್ದರೆ 8147500500 ಗೆ ಎಸ್‌ಎಂಎಸ್ ಅಥವಾ ವಾಟ್ಸ್ ಆಪ್ ಮೂಲಕ ಸಂದೇಶ ಕಳುಹಿಸಿ ವಿವರ ಪಡೆದುಕೊಳ್ಳಬಹುದು.