Gruhalakshmi Scheme: ಗೃಹಲಕ್ಷ್ಮಿ ನೋಂದಣಿ ಸಂದರ್ಭದಲ್ಲಿ ಎದುರಾಗುವ ಸಾಮಾನ್ಯ ಸಮಸ್ಯೆಗಳಿವು, ಹೀಗೆ ಪರಿಹರಿಸಿಕೊಳ್ಳಿ
Jul 20, 2023 10:51 AM IST
ಗೃಹಲಕ್ಷ್ಮಿ ನೋಂದಣಿ ಸಂದರ್ಭದಲ್ಲಿ ಎದುರಾಗುವ ಸಾಮಾನ್ಯ ಸಮಸ್ಯೆಗಳಿಗೆ ಪರಿಹಾರ
ಪ್ರತಿ ಮನೆಯ ಯಜಮಾನಿಗೆ 2000 ರೂಪಾಯಿ ನೀಡುವ ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿಕೊಳ್ಳುವಾಗ ಎದುರಾಗುವ ಸಮಸ್ಯೆಗಳನ್ನು ಹೇಗೆ ಬಗೆಹರಿಸಿಕೊಳ್ಳುವುದು, ಇದಕ್ಕೆ ಇರುವ ಪರಿಹಾರಗಳ ಮಾಹಿತಿ ಇಲ್ಲಿದೆ.
ಬೆಂಗಳೂರು: ಬಹು ನಿರೀಕ್ಷಿತ ಹಾಗೂ ಕಾತುರದಿಂದ ಕಾಯುತ್ತಿರುವ ಗೃಹಲಕ್ಷ್ಮಿ ಯೋಜನೆಗೆ (GruhaLakshmi Scheme) ನೋಂದಣಿ ಮಾಡಿಕೊಳ್ಳುವ ಮಹಿಳೆಯರಿಗೆ ಯಾವುದೇ ರೀತಿಯಲ್ಲಿ ಸಮಸ್ಯೆಗಳಾಗದಂತೆ ಕರ್ನಾಟಕ ಸರ್ಕಾರ (Karnataka Government) ಪ್ರಮುಖ ಮಾರ್ಗಸೂಚಿಗಳನ್ನು (Guidelines) ಬಿಡುಗಡೆ ಮಾಡಿದೆ.
ನೋಂದಣಿ ಪ್ರಕ್ರಿಯೆಯಲ್ಲಿ ಮಹಿಳೆಯರಿಗೆ ಸಮಸ್ಯೆ ಆಗದಂತೆ ಅಧಿಕಾರಿಗಳು ಕಾರ್ಯ ನಿರ್ವಹಿಸುವ ಬಗ್ಗೆ ಹೊಸದಾಗಿ ಬಿಡುಗಡೆ ಮಾಡಿರುವ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ನೋಂದಣಿ ಪ್ರಕ್ರಿಯೆಗೆ ನಿನ್ನೆ (ಜುಲೈ 19, ಬುಧವಾರ) ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಚಾಲನೆ ನೀಡಿದ್ದಾರೆ. ಆಗಸ್ಟ್ 15 ಅಥವಾ 16 ರಂದು ನೇರ ಲಾಭ ವರ್ಗಾವಣೆ (ಡಿಬಿಟಿ) ಮೂಲಕ ಪ್ರತಿ ಮನೆಯ ಯಜಮಾನಿಗೆ ಪ್ರತಿ ತಿಂಗಳು 2,000 ರೂಪಾಯಿ ಹಣವನ್ನು ಅವರ ಖಾತೆಗೆ ಜಮೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿಗಳು ಈ ಹಿಂದೆಯೇ ಹೇಳಿದ್ದಾರೆ. ಆದರೆ ಈ ಹಣವನ್ನು ಸರ್ಕಾರ ನೀಡುವ ಮುನ್ನ ‘ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಲಿಂಕ್ ಆಗಿರಬೇಕು’. ಒಂದು ವೇಳೆ ಲಿಂಕ್ ಆಗದಿದ್ದರೆ ಖಾತೆ ಹೊಂದಿರುವ ಬ್ಯಾಂಕ್‌ಗೆ ಭೇಟಿ ನೀಡಿ ಲಿಂಕ್ ಮಾಡಿಸಿಕೊಳ್ಳಿ.
ಅಂತ್ಯೋದಯ, ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ ಹೊಂದಿರುವವರು ಯೋಜನೆಯ ಫಲಾನುಭವಿಗಳಾಗಲಿದ್ದಾರೆ. ಕುಟುಂಬದ ಮಹಿಳೆಯರ ಪೈಕಿ ಹಿರಿಯ ಸದಸ್ಯೆಗೆ ಪ್ರತಿ ತಿಂಗಳು 2,000 ರೂಪಾಯಿ ನೀಡಲಾಗುತ್ತದೆ. ಆದರೆ ಸರ್ಕಾರದ ಮಾರ್ಗಸೂಚಿ ಪ್ರಕಾರ ಮಹಿಳೆಯ ಪತಿ ಅಥವಾ ಪುತ್ರ ಜಿಎಸ್‌ಟಿ ಪಾವತಿದಾರ ಆಗಿದ್ದರೆ ಯೋಜನೆಯ ಹಣ ಸಿಗುವುದಿಲ್ಲ.
ಗೃಹಲಕ್ಷ್ಮಿ ಯೋಜನೆಗೆ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಹಾಗೂ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು. ನಿಮ್ಮ ಹತ್ತಿರದಲ್ಲಿರುವ ಈ ಯಾವುದಾದರೂ ಒಂದು ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಗೃಹಲಕ್ಷ್ಮಿ ನೋಂದಣಿ ವೇಳೆ ಆಗಬಹುದಾದ ಸಮಸ್ಯೆಗಳು ಮತ್ತು ಪರಿಹಾರಗಳು
- ನೋಂದಣಿ ಮಾಡಿಕೊಳ್ಳುವಾಗ ಬ್ಯಾಂಕ್ ಖಾತೆಗೆ ನೀಡಿರುವ ನಿಮ್ಮ ಮೊಬೈಲ್ ಸಂಖ್ಯೆ ಸರಿಯಾಗಿ ಇದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಿ. ಇಲ್ಲದಿಲ್ಲ ಒಟಿಪಿ ಬರುತ್ತಿಲ್ಲ
- ನಿಮ್ಮ ಬಳಿ ಬೇಸಿಕ್ ಮೊಬೈಲ್ ಸೆಟ್ ಇದ್ದರೆ ಆ ಫೋನ್‌ನಲ್ಲಿರುವ ಮೆಸೇಜ್ ಬ್ಯಾಕ್ಸ್ ಫುಲ್ ಆಗಿದ್ದರೆ ನೋಂದಣಿ ಬಗ್ಗೆ ಮಾಹಿತಿ ಅಥವಾ ಒಟಿಪಿ ಬರುವುದಿಲ್ಲ. ಹೀಗಾಗಿ ಮೆಸೇಜ್ ಬಾಕ್ಸ್ ಫುಲ್ ಆಗಿದ್ದರೆ ಹಳೆಯ ಮೆಸೇಜ್‌ಗಳನ್ನು ಡಿಲೀಟ್ ಮಾಡಿ
- ನಿಮ್ಮ ಪತಿ ತೆರಿಗೆ ಅಥವಾ ಜಿಎಸ್‌ಟಿ ಪಾವತಿ ಮಾಡುತ್ತಿದ್ದಾರೆಯೇ ಎಂಬುದನ್ನು ಮೊದಲೇ ಖಚಿತಪಡಿಸಿಕೊಂಡು ನೋಂದಣಿಗೆ ಮುಂದಾಗಿ. ತೆರಿಗೆ ಪಾವತಿದಾದರ ಕುಟುಂಬ ಗೃಹಲಕ್ಷ್ಮಿ ಯೋಜನೆ ವ್ಯಾಪ್ತಿಗೆ ಬರುವುದಿಲ್ಲ.
- ನಿಮ್ಮ ಮೊಬೈಲ್‌ನಲ್ಲಿ ಇಂಟರ್‌ನೆಟ್ ಪ್ಯಾಕ್ ಇದೆಯೇ ಎಂಬುದನ್ನು ಮೊದಲ ಖಚಿತಪಡಿಸಿಕೊಳ್ಳಿ. ಒಂದು ವೇಳೆ ನೆಟ್ ಇಲ್ಲದಿದ್ದರೆ ರಿಚಾರ್ಜ್ ಮಾಡಿಸಿಕೊಳ್ಳಿ.
- ಪಡಿತರ ಚೀಟಿಯಲ್ಲಿ ಮನೆಯ ಮುಖ್ಯಸ್ಥರಾಗಿ ನಿಮ್ಮ ಹೆಸರು ಇಲ್ಲದಿದ್ದರೆ ನಿಮಗೆ 2 ಸಾವಿರ ರೂಪಾಯಿ ಸಿಗುವುದಿಲ್ಲ. ಹೀಗಾಗಿ ರೇಷನ್ ಕಾರ್ಡ್‌ನಲ್ಲಿ ಮನೆಯ ಮುಖ್ಯಸ್ಥರಾಗಿ ನಿಮ್ಮ ಹೆಸರು ಮತ್ತು ಭಾವಚಿತ್ರ ಇದೆಯೇ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ.
- ನಿಮ್ಮ ಆಧಾರ್ ಕಾರ್ಡ್, ರೇಷನ್ ಹಾಗೂ ಬ್ಯಾಂಕ್ ಅಕೌಂಟ್‌ನಲ್ಲಿ ಇರುವ ಹೆಸರು ಸರಿಯಾಗಿ ಇದೆೆಯೇ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ. ಒಂದು ವೇಳೆ ಹೆಸರುಗಳು ಬೇರೆ ಬೇರೆ ಇದ್ದರು ನಿಮಗೆ ಗೃಹಲಕ್ಷ್ಮಿ ಯೋಜನೆಯಡಿ 2 ಸಾವಿರ ರೂಪಾಯಿ ಬರುವುದಿಲ್ಲ.
ಯಾವಾಗ ನೋಂದಣಿ ಮಾಡಿಕೊಳ್ಳಬೇಕು?
‘ರೇಷನ್ ಕಾರ್ಡ್‌ನಲ್ಲಿ ಗುರುತಿಸಲಾಗಿರುವ ಕುಟುಂಬದ ಯಜಮಾನಿ ಗೃಹಲಕ್ಷ್ಮಿ ಯೋಜನೆಯ ನೋಂದಣಿಗೆ ದಿನಾಂಕ, ಸಮಯ ಹಾಗೂ ನೋಂದಣಿ ಮಾಡಿಸುವ ಸ್ಥಳದ ವಿವರಗಳನ್ನು ತಿಳಿಸಲಾಗುತ್ತದೆ. ಆ ನಂತರವೇ ಅರ್ಜಿ ಸಲ್ಲಿಸಬೇಕಾಗುತ್ತದೆ’. ಆಗಸ್ಟ್ 15 ಅಥವಾ 16 ರಂದು ನೋಂದಣಿ ಮಾಡಿಕೊಂಡಿರುವ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗುತ್ತದೆ.
ನೋಂದಣಿ ವೇಳೆ ಸಮಸ್ಯೆಯಾಗದಂತೆ ಸರ್ಕಾರದ ಮಾರ್ಗಸೂಚಿ
- ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವವರಿಗೆ ಯಾವುದೇ ಸಮಸ್ಯೆಯಾಗದಂತೆ ಪ್ರತಿ ನೋಂದಣಿ ಕೇಂದ್ರಕ್ಕೆ ಒಬ್ಬರಂತೆ ಮೇಲ್ವಿಚಾರಣೆ ಅಧಿಕಾರಿಯನ್ನು ನೇಮಿಸಲಾಗುತ್ತದೆ
- ಕೆಲವು ಸೂಕ್ಷ್ಮ ಪ್ರದೇಶ ಹಾಗೂ ಜನದಟ್ಟಣೆ ಹೆಚ್ಚಿರುವ ಕಡೆಗಳಲ್ಲಿ ಒಬ್ಬ ಪೊಲೀಸ್ ಸಿಬ್ಬಂದಿಯನ್ನೂ ನೇಮಿಸಲಾಗುತ್ತದೆ
- ನೋಂದಣಿ ಕೇಂದ್ರದಲ್ಲಿ ವಿದ್ಯುತ್ ಸಮಸ್ಯೆಯಾಗದಂತೆ ಬ್ಯಾಟರಿ ಹಾಗೂ ಸುಸ್ಥಿತಿಯಲ್ಲಿರುವ ಪ್ರಿಂಟರ್ ವ್ಯವಸ್ಥೆ ಮಾಡಲಾಗುತ್ತೆ. ಇದರ ಸಂಪೂರ್ಣ ನಿರ್ವಹಣೆಯನ್ನು ಮೇಲ್ವಿಚಾರಣೆಯ ಅಧಿಕಾರಿಯೇ ನೋಡಿಕೊಳ್ಳಲಿದ್ದಾರೆ.
- ಹೆಚ್ಚಿನ ಮಾಹಿತಿಗಾಗಿ ಪ್ರತಿ ತಾಲೂಕು ಕೇಂದ್ರಗಳಲ್ಲಿ ಹೆಲ್ಪ್ ಡೆಸ್ಕ್ ವ್ಯವಸ್ಥೆ ಮಾಡಲಾಗುತ್ತದೆ
- ನೋಂದಣಿ ಕಾರ್ಯಕ್ಕೆ ಅಗತ್ಯವಿರುವ ಪ್ರಜಾಪ್ರತಿನಿಧಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ತರಬೇತಿ ನೀಡಲಾಗುತ್ತೆ
- ಮಳೆ ಮತ್ತು ಬಿಸಿಲಿನ ಸಮಸ್ಯೆ ಇರದಂತೆ ಪ್ರತಿ ನೋಂದಣಿ ಕೇಂದ್ರದಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುತ್ತದೆ
- ನೋಂದಣಿ ಕೇಂದ್ರಕ್ಕೆ ನಿಯೋಜಿಸಲಾದ ನೋಡಲ್ ಅಧಿಕಾರಿಯ ಮಾಹಿತಿಗಳನ್ನು ಇ-ಆಡಳಿತ ಇಲಾಖೆ ಒದಗಿಸುವ ಲಿಂಕ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ.
ಗೃಹಲಕ್ಷ್ಮಿ ಯೋಜನೆಯ ನೋಂದಣಿ ಮಾಡಿಕೊಳ್ಳಲು ಮಹಿಳೆಯರಿಗೆ ಯಾವುದೇ ಸಮಸ್ಯೆಗಳು ಆಗದಂತೆ ಇವಿಷ್ಟು ಕ್ರಮಗಳನ್ನು ಅಧಿಕಾರಿಗಳು ಅನುಸರಿಸಬೇಕಾಗಿದೆ ಎಂದು ರಾಜ್ಯ ಸರ್ಕಾರ ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಏನಾದರೂ ಗೊಂದಲಗಳು ಇದ್ದರೆ ಹೆಲ್ಪ್ ಲೈನ್ ಸಂಖ್ಯೆ - 1902ಕ್ಕೆ ಕರೆ ಮಾಡಿ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು.
(Gruhalakshmi scheme complete details in Kannada)
ಸಂಬಂಧಿತ ಲೇಖನ