logo
ಕನ್ನಡ ಸುದ್ದಿ  /  ಕರ್ನಾಟಕ  /  Gruhalakshmi Scheme: ಗೃಹಲಕ್ಷ್ಮಿ ಹೊಸ ನೋಂದಣಿ ಸ್ಥಗಿತ: ಬ್ಯಾಂಕ್‌ ನಿಷ್ಕ್ರಿಯ ಫಲಾನುಭವಿಗಳ ವಿವರ ಸಂಗ್ರಹ

gruhalakshmi scheme: ಗೃಹಲಕ್ಷ್ಮಿ ಹೊಸ ನೋಂದಣಿ ಸ್ಥಗಿತ: ಬ್ಯಾಂಕ್‌ ನಿಷ್ಕ್ರಿಯ ಫಲಾನುಭವಿಗಳ ವಿವರ ಸಂಗ್ರಹ

Umesha Bhatta P H HT Kannada

Sep 06, 2023 10:35 AM IST

google News

ಗೃಹಲಕ್ಷ್ಮಿ ಯೋಜನೆ ಹೊಸ ನೋಂದಣಿ ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ.

    • Gruhalakshmi updates ಗೃಹಲಕ್ಷ್ಮಿ ಯೋಜನೆಯಡಿ ಈಗಾಗಲೇ ಖಾತೆಗೆ ಹಣ ಜಮೆಯಾಗುತ್ತಿದೆ. ಕೆಲ ತಾಂತ್ರಿಕ ಕಾರಣದಿಂದ ಇನ್ನೂ ಕೆಲವರ ಖಾತೆಗೆ ಹಣ ಜಮೆಯಾಗಿಲ್ಲ. ಅಲ್ಲಿವರೆಗೂ ಹೊಸ ನೋಂದಣಿಯನ್ನು ಸ್ಥಗಿತಗೊಳಿಸಲಾಗಿದೆ.
ಗೃಹಲಕ್ಷ್ಮಿ ಯೋಜನೆ ಹೊಸ ನೋಂದಣಿ ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ.
ಗೃಹಲಕ್ಷ್ಮಿ ಯೋಜನೆ ಹೊಸ ನೋಂದಣಿ ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ.

ಬೆಂಗಳೂರು: ಗೃಹಲಕ್ಷ್ಮಿ ಯೋಜನೆಗೇನೋ ಚಾಲನೆ ಸಿಕ್ಕಿತು. ಖಾತೆಗೆ ಹಣ ವರ್ಗಾವಣೆ ಮಾಡುವ ಕಾರ್ಯಕ್ರಮವನ್ನೂ ಭರ್ಜರಿಯಾಗಿ ಉದ್ಘಾಟಿಸಲಾಯಿತು. ಆದರೆ ಹಣವೇ ಬಹುತೇಕರಿಗೆ ವರ್ಗಾವಣೆಯಾಗಿಲ್ಲ.

ಇದರಿಂದ ಈಗಾಗಲೇ ನೋಂದಣಿ ಮಾಡಿಸಿಕೊಂಡವರಿಗೆ ಹಣ ಜಮೆಯಾಗುವವರೆಗೂ ಹೊಸದಾಗಿ ನೋಂದಣಿ ಮಾಡಿಸುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಮುಂದಾಗಿದೆ.

ಈ ಕುರಿತು ಬೆಳಗಾವಿಯಲ್ಲಿ ಮಾತನಾಡಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹಣ ಜಮೆ, ಹೊಸ ನೋಂದಣಿ ಕುರಿತು ಸ್ಪಷ್ಟನೆ ನೀಡಿದ್ದಾರೆ. ಆದರೆ ಈ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ಇನ್ನಷ್ಟೇ ಆದೇಶ ಜಾರಿಯಾಗಬೇಕಿದೆ.

ಸಚಿವರು ಹೇಳಿದ್ದೇನು

ನೊಂದಾಯಿತ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ಎರಡು ಸಾವಿರ ರೂ. ಜಮೆ ಆಗುತ್ತಿರುವುದನ್ನು ಖಚಿತಪಡಿಸಿಕೊಳ್ಳು ಗೃಹ ಲಕ್ಷ್ಮಿ ಯೋಜನೆಯ ಹೊಸ ನೊಂದಣಿ ಪ್ರಕ್ರಿಯೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಎಲ್ಲಾ ಫಲಾನುಭವಿಗಳಿಗೆ ಹಣ ತಲುಪಿದ್ದು ಖಚಿತವಾದ ಬಳಿಕ ಮತ್ತೆ ಪ್ರಕ್ರಿಯೆ ಆರಂಭಿಸುತ್ತೇವೆ ಎನ್ನುವುದು ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌ ವಿವರಣೆ.

ಫಲಾನುಭವಿಗಳ ಬ್ಯಾಂಕ್‌ ಖಾತೆ ನಿಷ್ಕ್ರಿಯಗೊಂಡಿದ್ದರಿಂದ ಏಳರಿಂದ ಎಂಟು ಲಕ್ಷ ಫಲಾನುಭವಿಗಳಿಗೆ ಹಣ ಜಮೆಗೊಳಿಸಲು ತೊಡಕಾಗಿದೆ. ಶೀಘ್ರ ಅದನ್ನು ಸರಿಪಡಿಸುತ್ತೇವೆ ಎಂದು ಸಚಿವರು ಹೇಳುತ್ತಾರೆ.

ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಖಾತೆಗೆ ಹಾಕಲು ಸರ್ಕಾರದ ಖಜಾನೆಗೆ ಈಗಾಗಲೇ ಹಣ ಬಿಡುಗಡೆಯಾಗಿದೆ. ಒಂದು ಕೋಟಿ ಫಲಾನುಭವಿಗಳಿಗೆ ಎರಡರಿಂದ ಮೂರು ದಿನದಿಂದ ಹಣ ಜಮೆಯಾಗಲಿದೆ ಎಂದು ತಿಳಿಸಿದ್ದಾರೆ.

ನೋಂದಣಿ ಸ್ಥಗಿತ ಏಕೆ

ಕರ್ನಾಟಕದಲ್ಲಿ 1.28 ಕೋಟಿ ಮಹಿಳಾ ಅರ್ಹ ಫಲಾನುಭವಿಗಳು ಗೃಹಲಕ್ಷ್ಮಿ ಯೋಜನೆಯಡಿ ಸೌಲಭ್ಯ ಪಡೆಯಲು ಅರ್ಹರಿದ್ದಾರೆ. ಈಗಾಗಲೇ ನಡೆಸಿರುವ ಸಮೀಕ್ಷೆ ಹಾಗೂ ಕಲೆ ಹಾಕಿರುವ ಮಾಹಿತಿ ಪ್ರಕಾರ ಇದನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ತಿಳಿಸಿದೆ. ಆದರೆ ಎರಡು ತಿಂಗಳ ಹಿಂದೆ ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಪ್ರಕ್ರಿಯೆ ಆರಂಭಿಸಲಾಗಿದ್ದು. ಈವರೆಗೂ 1.12 ಕೋಟಿ ಗೃಹಿಣಿಯರು ನೋಂದಣಿ ಮಾಡಿಸಿಕೊಂಡಿದ್ದಾರೆ. ಇನ್ನೂ 16 ಲಕ್ಷಕ್ಕೂ ಅಧಿಕ ಮಹಿಳೆಯರು ನೋಂದಣಿ ಮಾಡಿಸಿಕೊಳ್ಳುವುದು ಬಾಕಿಯಿದೆ. ಈ ನೋಂದಣಿ ಸದ್ಯಕ್ಕೆ ಸ್ಥಗಿತವಾಗಲಿದೆ.

ನೋಂದಣಿ ಬಾಕಿ ಇರುವವರಲ್ಲಿ ಕೆಲವರ ಬಳಿ ಪಡಿತರ ಚೀಟಿ ಇಲ್ಲ. ಹೊಸದಾಗಿ ಪಡಿತರ ಚೀಟಿ ಮಾಡಿಸಿಕೊಳ್ಳಲು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಅವಕಾಶ ನೀಡಿಲ್ಲ. ಇದರಿಂದ ಬಹುತೇಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಜಿಲ್ಲಾ, ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ಎಡತಾಕುತ್ತಿದ್ದಾರೆ. ಇದು ಆಹಾರ ಇಲಾಖೆ ಸಮಸ್ಯೆ. ಅಲ್ಲಿ ಭೇಟಿ ಮಾಡಿ ಎಂದು ಕಳುಹಿಸಲಾಗುತ್ತಿದೆ. ಸರ್ಕಾರದಿಂದ ಅನುಮತಿ ಬಾರದೇ ಹೊಸ ಪಡಿತರ ಕಾರ್ಡ್‌ ಮಾಡುವ ಪ್ರಶ್ನೆಯೇ ಇಲ್ಲ ಎನ್ನುವುದು ಆಹಾರ ಇಲಾಖೆಯವರ ಸ್ಪಷ್ಟನೆಯಾಗಿದೆ. ಪಡಿತರ ಕಾರ್ಡ್‌ ಇಲ್ಲದೇ ಗೃಹಲಕ್ಷ್ಮಿ ಯೋಜನೆ ನೋಂದಣಿಗೆ ಆವಕಾಶವೇ ಇಲ್ಲದಿರುವುದರಿಂದ ಹಲವರ ನೋಂದಣಿ ಪ್ರಕ್ರಿಯೆ ಬಾಕಿ ಉಳಿದಿದೆ.

ಇನ್ನು ಕೆಲವರ ಪಡಿತರ ಕಾರ್ಡ್‌ನಲ್ಲಿ ಯಜಮಾನಿ ಎನ್ನುವ ಮಾಹಿತಿ ಇಲ್ಲದೇ ಇರುವುದರಿಂದ ಅವರಿಗೂ ನೋಂದಣಿ ಪ್ರಕ್ರಿಯೆ ಆಗುತ್ತಿಲ್ಲ. ಅಂತವರೂ ಕಚೇರಿಗಳಿಗೆ ಸುತ್ತುವ ಸ್ಥಿತಿ ನಿರ್ಮಾಣವಾಗಿದೆ.

ಹೊಸದಾಗಿ ನೋಂದಣಿ ಮಾಡಿಸುವವರಲ್ಲಿ ಪಡಿತರ ಕಾರ್ಡ್‌ ಇಲ್ಲದೇ ಇರುವವರ ಸಮಸ್ಯೆ ಇರುವುದು ನೊಂದಣಿಗೆ ತೊಡಕಾಗಿದೆ. ಪಡಿತರ ಕಾರ್ಡ್‌ ವಿಚಾರ ನಮ್ಮ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ. ಇಲ್ಲಿಗೆ ಬರುವವರನ್ನು ಆಹಾರ ಇಲಾಖೆಗೆ ಕಳುಹಿಸುತ್ತಿದ್ದೇವೆ ಎನ್ನುವುದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಅಧಿಕಾರಿಯೊಬ್ಬರ ವಿವರಣೆ.

ತಾಂತ್ರಿಕ ತೊಡಕು

ಇನ್ನು 1.12 ಕೋಟಿ ಗೃಹಿಣಿಯರಲ್ಲಿ ಈವರೆಗೂ 59 ಲಕ್ಷ ಮಂದಿ ಖಾತೆಗೆ ಈವರೆಗೂ ತಲಾ ಎರಡು ಸಾವಿರ ರೂ. ಜಮೆಯಾಗಿದೆ. ಇನ್ನುಳಿದವರ ಖಾತೆಗೆ ಜಮೆ ಮಾಡಲು ಬ್ಯಾಂಕ್‌ ಖಾತೆಯೂ ಸೇರಿದಂತೆ ಹಲವು ತಾಂತ್ರಿಕ ತೊಡಕುಗಳು ಎದುರಾಗಿವೆ. ಅವುಗಳನ್ನು ಬಗೆಹರಿಸಿ ಬೇಗನೇ ಹಣವನ್ನು ವರ್ಗ ಮಾಡುವಂತೆ ಸೂಚನೆಯನ್ನೂ ನೀಡಲಾಗಿದೆ. ಆದರೂ ಈ ಗೊಂದಲ ಇನ್ನೂ ಬಗೆಹರಿದಿಲ್ಲ.

ಕೆಲವರ ಬ್ಯಾಂಕ್‌ಗಳು ನಿಷ್ಕ್ರಿಯವಾಗಿರುವುದರಿಂದ ಹಣವೇ ಜಮೆಯಾಗುತ್ತಿಲ್ಲ. ಈ ಕಾರಣದಿಂದ ಈ ರೀತಿ ಆರೇಳು ಲಕ್ಷ ಗೃಹಿಣಿಯರ ಬ್ಯಾಂಕ್‌ ಖಾತೆಯ ಗೊಂದಲವಿದ್ದು, ಅದನ್ನು ಸರಿಪಡಿಸಿಕೊಳ್ಳುವಂತೆ ತಿಳಿಸಲಾಗುತ್ತಿದೆ. ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಫಲಾನುಭವಿಗಳನ್ನು ಭೇಟಿ ಮಾಡಿ ಚಾಲ್ತಿಯಲ್ಲಿರುವ ಬ್ಯಾಂಕ್‌ ಖಾತೆಗಳ ವಿವರ ಪಡೆಯಲು ಸೂಚಿಸಲಾಗುತ್ತಿದೆ. ಈ ಪ್ರಕ್ರಿಯೆಯೂ ಒಂದೆರಡು ದಿನದಲ್ಲಿ ಆರಂಭವಾಗಲಿದೆ.

ಹಾಸನ ಜಿಲ್ಲೆಯಲ್ಲಿಯೇ ಈ ರೀತಿ ಬ್ಯಾಂಕ್‌ ಖಾತೆಯ ಗೊಂದಲ ಆಗಿ ಇನ್ನೂ 25 ಸಾವಿರದಷ್ಟು ಫಲಾನುಭವಿಗಳಿಗೆ ಹಣ ವರ್ಗವಾಗಿಲ್ಲ. ಅವರು ಮಾಹಿತಿ ನೀಡಬೇಕಿದೆ. ಅಂತವರ ಮಾಹಿತಿ ಸಂಗ್ರಹದ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯವರು ಕ್ರಮ ವಹಿಸಲಿದ್ದಾರೆ. ಸಣ್ಣಪುಟ್ಟ ಗೊಂದಲಗಳೆಲ್ಲಾ ವಾರದೊಳಗೆ ಬಗೆಹರಿದು ಮುಂದಿನ ತಿಂಗಳಿನಿಂದ ಇದೆಲ್ಲವೂ ಸುಸೂತ್ರವಾಗಲಿದೆ ಎಂದು ಹಾಸನ ಜಿಲ್ಲಾಪಂಚಾಯಿತಿ ಸಿಇಒ ಬಿ.ಆರ್‌.ಪೂರ್ಣಿಮಾ ಹೇಳುತ್ತಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ