Tumkur News: ಗುಬ್ಬಿ ಗೊಲ್ಲರಹಟ್ಟಿ ಗುಡಿಸಲಲ್ಲಿದ್ದ ಬಾಣಂತಿ, ಮಗು ಕಾಪಾಡಿದ ನ್ಯಾಯಾಧೀಶೆ
Aug 24, 2023 06:11 PM IST
ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಗೊಲ್ಲರಹಟ್ಟಿ ಹೊರಗಿನ ಗುಡಿಸಿಲಿನಲ್ಲಿ ವಾಸವಿದ್ದ ಬಾಣಂತಿ ಹಾಗೂ ಮಗುವನ್ನು ನ್ಯಾಯಾಧೀಶರಾದ ಉಂಡಿ ಮಂಜುಳಾ ಅವರು ರಕ್ಷಿಸಿದ್ದಾರೆ.
- Gollarhatti News ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಗೊಲ್ಲರಹಟ್ಟಿಯ ಬಾಣಂತಿ ಹಾಗೂ ಮಹಿಳೆಯನ್ನು ತುಮಕೂರು ನ್ಯಾಯಾಧೀಶರಾದ ಉಂಡಿ ಮಂಜುಳಾ ಅವರು ರಕ್ಷಿಸಿ ಜಾಗೃತಿ ಮೂಡಿಸಿದ್ದಾರೆ. ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಯಲ್ಲಿ ಜಾರಿಯಲ್ಲಿರುವ ಮೂಢನಂಬಿಕೆ ಅಳಿಸಲು ನ್ಯಾಯಾಂಗ ಇಲಾಖೆ ಕ್ರಮ ಕೈಗೊಂಡಿದೆ.
ತುಮಕೂರು: ತುಮಕೂರು ತಾಲ್ಲೂಕು ಪಾಲೇನಹಳ್ಳಿ ಗೊಲ್ಲರಹಟ್ಟಿಯಲ್ಲಿ ಮೂಢನಂಬಿಕೆಯಿಂದ ಮಗು ಹಸುಗೂಸು ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ ಮತ್ತೊಂದು ಮೂಢ ನಂಬಿಕೆ ಸುದ್ದಿ ಹೊರಬಿದ್ದಿದೆ. ಗುಬ್ಬಿ ತಾಲ್ಲೂಕಿನಲ್ಲಿ ಊರಿನಾಚೆ ಗುಡಿಸಲ್ಲಿ ಇದ್ದ ತಾಯಿ ಮಗುವನ್ನು ನ್ಯಾಯಾಧೀಶರು ರಕ್ಷಿಸಿ ಮನೆಗೆ ಬಿಟ್ಟಿದ್ದಾರೆ.
ಕಳೆದ ಒಂದು ವಾರದಿಂದ ಜಿಲ್ಲೆಯ ಗುಬ್ಬಿ ನ್ಯಾಯಾಲಯದ ನ್ಯಾಯಾಧೀಶರಾದ ಮಂಜುಳಾ ಶಿವಪ್ಪ ಹುಂಡಿ ಅವರು ಗುಬ್ಬಿ ತಾಲೂಕಿನ ಹಲವು ಕಾಡುಗೊಲ್ಲ ಗ್ರಾಮಗಳಿಗೆ ತೆರಳಿ ಮನೆಯಿಂದ ಹೊರಗಿಟ್ಟಿರುವ ಬಾಣಂತಿ ಹಾಗೂ ಮಗುವನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಲು ದಿಢೀರ್ ದಾಳಿ ನಡೆಸುತ್ತಿದ್ದಾರೆ.
ಗುರುವಾರ ಸಹ ಗುಬ್ಬಿ ತಾಲೂಕಿನ ವರದೇನಹಳ್ಳಿ ಗೊಲ್ಲರಹಟ್ಟಿಗೆ ಭೇಟಿ ನೀಡಿ ಮಗು ಮತ್ತು ಬಾಣಂತಿಯನ್ನ ಕಾಪಾಡಿದ್ದಾರೆ, ಖುದ್ದು ಅವರೇ ಮಗುವನ್ನು ಎತ್ತಿಕೊಂಡು ಹೋಗಿ ಬಾಣಂತಿ ಹಾಗೂ ಮಗುವನ್ನು ಮನೆಗೆ ಬಿಟ್ಟು ಬಂದಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಪ್ರಾಣಿಗಳಿಗೂ ಯೋಗ್ಯವಲ್ಲದ ಚಿಕ್ಕ ಗುಡಿಸಲಿನಲ್ಲಿ ಮಗು ಬಾಣಂತಿಯನ್ನ ಇರಿಸಿದ್ದು ಅಕ್ಷಮ್ಯ, ಇದು ಖಂಡಿತವಾಗಿಯೂ ಮಾನವೀಯತೆ ಅಲ್ಲ ಎಂದು ಗ್ರಾಮಸ್ಥರಿಗೆ ಹಾಗೂ ಮುಖಂಡರಿಗೆ ಎಚ್ಚರಿಕೆ ನೀಡಿ, ಇದು ಹೀಗೆ ಮುಂದುವರೆದರೆ ಕಾನೂನು ಶಿಕ್ಷೆಗೆ ಒಳಪಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಗೊಲ್ಲರಹಟ್ಟಿಗಳಲ್ಲಿ ಜನರು ಇನ್ನೂ ಮೂಢನಂಬಿಕೆ ಇಟ್ಟುಕೊಂಡು ಊರಿನ ಹೊರಗೆ ಗುಡಿಸಲಲ್ಲಿ ಬಾಣಂತಿ ಮಗುವನ್ನು ಇಡುವುದು ನಿಜಕ್ಕೂ ವಿಪರ್ಯಾಸ. ಆಧುನಿಕ ಜಗತ್ತಿನಲ್ಲಿ ಕುಟುಂಬಗಳು ಅಭಿವೃದ್ಧಿ ಹೊಂದುವುದು, ಮಕ್ಕಳನ್ನು ಉತ್ತಮ ರೀತಿಯಲ್ಲಿ ಸಾಕುವುದನ್ನು ನೋಡಿದ್ದೇವೆ. ಆದರೆ ಈ ರೀತಿ ಗುಡಿಸಲಿಗೆ ಮೊರೆ ಹೋಗುವುದು ಸಹಿಸಲು ಆಗದ ವಿಚಾರ. ಇನ್ನಾದರೂ ಹಟ್ಟಿಗಳ ಮುಖಂಡರು ಎಚ್ಚೆತ್ತುಕೊಳ್ಳಬೇಕು. ಇಲ್ಲವಾದಲ್ಲಿ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಎರಡು ಜಿಲ್ಲೆಗಳಲ್ಲಿ ಅಧಿಕ
ತುಮಕೂರು ಜಿಲ್ಲೆಯ ಶಿರಾ, ಚಿಕ್ಕನಾಯಕನಹಳ್ಳಿ, ತುಮಕೂರು, ಚಿತ್ರದುರ್ಗ ಜಿಲ್ಲೆಯ ಹಿರಿಯೂರು, ಚಳ್ಳಕೆರೆ, ಹೊಳಲ್ಕೆರೆ ಸೇರಿದಂತೆ ಎರಡೂ ಜಿಲ್ಲೆಗಳ ಹಲವು ಕಡೆ ಗೊಲ್ಲರಹಟ್ಟಿಗಳಲ್ಲಿಈಗಲೂ ಮೌಢ್ಯದ ಸಂಪ್ರದಾಯಗಳು ಬಳಕೆಯಲ್ಲಿವೆ.
ಅದರಲ್ಲೂ ಹೆಣ್ಣು ಮಕ್ಕಳನ್ನು ಮೌಢ್ಯದ ನೆಪದಲ್ಲಿ ತೊಂದರೆ ನೀಡುವ ಪ್ರಕರಣಗಳು ವರದಿಯಾಗುತ್ತಲೇ ಇವೆ. ಎರಡೂ ಜಿಲ್ಲೆಗಳಲ್ಲಿ ಕಾಡು ಗೊಲ್ಲ ಸಮುದಾಯದ ಮೂರು ಲಕ್ಷ ಮಂದಿ ಇದ್ದಾರೆ. ಮುಟ್ಟಾದ ಹೆಣ್ಣು ಮಕ್ಕಳನ್ನು ಮನೆಯಿಂದ ಹೊರಗೆ ಕೂರಿಸುವುದು, ಹೆರಿಗೆಯಾದ ಹೆಣ್ಣು ಮಕ್ಕಳನ್ನು ಚಳಿ, ಮಳೆ, ಗಾಳಿಯನ್ನೂ ಲೆಕ್ಕಿಸದೇ ಗುಡಿಸಲು ಹಾಕಿ ಅದರಲ್ಲಿಯೇ ತಿಂಗಳಗಟ್ಟಲೇ ಇರಿಸುವುದು ಈಗಲೂ ಮುಂದುವರಿದಿದೆ.
ಈ ಕುರಿತು ಗೊಲ್ಲ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗುತ್ತಲೇ ಇದೆ. ಸಮುದಾಯದ ಹಿರಿಯರಿಗೆ ಜಾಗೃತಿ ಮೂಡಿಸಿದ್ದರೂ ಕೆಲವು ಪೂಜಾರಿಗಳು ತಪ್ಪು ದಂಡ ವಿಧಿಸುವ, ಪೂಜಾ ವಿಧಾನಗಳನ್ನು ಹೇಳಿ ಮತ್ತೆ ಮೂಢನಂಬಿಕೆಗೆ ತಳ್ಳುವುದೂ ನಿಂತಿಲ್ಲ, ನಿರಂತರ ಜಾಗೃತಿ ನಂತರವೂ ಇಂತಹ ಪ್ರಕರಣಗಳು ಆಗಾಗ ಬಯಲಾಗುತ್ತಿವೆ.
ಮೊಕದ್ದಮೆ ದಾಖಲು
ಈವರೆಗೂ ಇಂತಹ ಮೂಢನಂಬಿಕೆಗಳ ಪ್ರಕರಣ ನಡೆದಾಗ ಜಾಗೃತಿ ಮೂಡಿಸಿ ಅಧಿಕಾರಿಗಳು ಸುಮ್ಮನಾಗುತ್ತಿದ್ದರು. ಮೊದಲ ಬಾರಿಗೆ ಹೈಕೋರ್ಟ್ ಸೂಚನೆ ಮೇರೆಗೆ ತುಮಕೂರು ಜಿಲ್ಲೆಯಲ್ಲಿ ಪೋಷಕರ ವಿರುದ್ದ ಪ್ರಕರಣ ದಾಖಲಿಸಲಾಗಿದೆ.
ಇಂತಹ ಮೂಢನಂಬಿಕೆಗೆ ಒತ್ತು ನೀಡಿದರೆ ಕಾನೂನು ರೀತಿಯಲ್ಲಿ ಮುಂದೆ ಗಂಭೀರ ಕ್ರಮವೂ ಆಗಲಿದೆ. ಕ್ರಿಮಿನಲ್ ಮೊಕದ್ದಮೆಯನ್ನು ಆಚರಿಸಿದವರು ಹಾಗೂ ಪೋಷಿಸಿದವರ ವಿರುದ್ದ ದಾಖಲಿಸಲಾಗುವುದು ಎಂದು ಪೊಲೀಸ್ ಇಲಾಖೆಯವರೂ ಕೂಡ ಹೇಳುತ್ತಿದ್ದಾರೆ.
ಅಲ್ಲದೇ ನ್ಯಾಯಾಧೀಶೆ ಮಂಜುಳಾ ಅವರು ಈಗಾಗಲೇ ಇಂತಹ ಗುಡಿಸಲುಗಳನ್ನು ನಾಶ ಮಾಡಿಸಿದ್ದಾರೆ.
( ವರದಿ: ಈಶ್ವರ್ ತುಮಕೂರು)