Sakleshpur Constituency: ಮುಂದುವರೆಯುವುದೇ ಜೆಡಿಎಸ್‍ನ ಎಚ್ಕೆ ಕುಮಾರಸ್ವಾಮಿ ಅದೃಷ್ಟ? ಸಕಲೇಶಪುರ ಕ್ಷೇತ್ರದ ಒಳನೋಟ
May 09, 2023 02:11 PM IST
ಎಚ್ಕೆ ಕುಮಾರಸ್ವಾಮಿ (ಎಡಚಿತ್ರ), ಸಿಮೆಂಟ್ ಮಂಜು (ಕೇಸರಿ ಶಾಲು), ಮುರಳಿ ಮೋಹನ್
- Sakleshpur Constituency: ಹಾಸನದಸಕಲೇಶಪುರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‍ನಿಂದ ಎಚ್ಕೆ ಕುಮಾರಸ್ವಾಮಿ, ಬಿಜೆಪಿಯಿಂದ ಸಿಮೆಂಟ್ ಮಂಜು ಹಾಗೂ ಕಾಂಗ್ರೆಸ್ನಿಂದ ಮುರಳಿ ಮೋಹನ್ ಕಣದಲ್ಲಿದ್ದಾರೆ.
ಹಾಸನ: ಕಾಡಾನೆ ಸಮಸ್ಯೆಯಿಂದಾಗಿ ನಿತ್ಯ ಸುದ್ದಿಯಲ್ಲಿ ಇರುತ್ತಿದ್ದ ಹಾಸನ (Hassan) ಜಿಲ್ಲೆಯ ಮಲೆನಾಡು ಪ್ರದೇಶಗಳಾದ ಸಕಲೇಶಪುರ (Sakleshpur) ಮತ್ತು ಆಲೂರು ತಾಲೂಕುಗಳಲ್ಲಿ ಈಗ ಚುನಾವಣಾ ಗದ್ದಲ ಎದ್ದು, ಕಾಡಾನೆ ಸಮಸ್ಯೆಯ ಚರ್ಚೆ ನೇಪಥ್ಯಕ್ಕೆ ಸರಿದಿದೆ. ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಸಕಲೇಶಪುರ-ಆಲೂರು-ಕಟ್ಟಾಯ ವಿಧಾನಸಭಾ ಕ್ಷೇತ್ರವು ಭೌಗೋಳಿಕವಾಗಿ ಬಹಳ ವಿಶಾಲವಾದ ಹಾಗೂ ಜನಜೀವನದಲ್ಲೂ ಬಹಳ ವೈವಿಧ್ಯ ಇರುವ ಕ್ಷೇತ್ರ. ಹಾಸನ ತಾಲೂಕಿನ ಬಯಲು ಪ್ರದೇಶ ಕಟ್ಟಾಯ ಹೋಬಳಿಯಿಂದ ಹಿಡಿದು ದಟ್ಟ ಕಾಡಿನ ಗುಂಡ್ಯದವರೆಗೆ ಸುಮಾರು 80 ಕಿ.ಮೀ. ಉದ್ದಕ್ಕೆ ಹಬ್ಬಿಕೊಂಡಿರುವ ಈ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸುವುದು ಎಷ್ಟು ಕಷ್ಟವೋ ಜನರ ಒಲವು ಯಾರ ಕಡೆ ಇದೆ ಎಂಬುದನ್ನು ತಿಳಿಯುವುದು ಸಹ ಅಷ್ಟೇ ತ್ರಾಸದಾಯಕ.
ಹಿಂದೆ ಜಿಲ್ಲೆಯ ಬೇಲೂರು ಮೀಸಲು ಕ್ಷೇತ್ರವಾಗಿದ್ದ ಅವಧಿಯಲ್ಲಿ ಒಮ್ಮೆ ಬಿಜೆಪಿ ಮತ್ತು ಎರಡು ಬಾರಿ ಜೆಡಿಎಸ್ ಸ್ಪರ್ಧಿಸಿ ಮೂರು ಬಾರಿ ಶಾಸಕರಾಗಿದ್ದ ಜಿಲ್ಲೆಯ ಅದೃಷ್ಟವಂತ ರಾಜಕಾರಣಿ ಎಚ್.ಕೆ. ಕುಮಾರಸ್ವಾಮಿ ( HK Kumaraswamy) ಅವರು, 2008 ರಿಂದ ಸಕಲೇಶಪುರ ಮೀಸಲು ಕ್ಷೇತ್ರವಾದ ನಂತರ ಜೆಡಿಎಸ್‍ನಿಂದ ಸತತ ಮೂರು ಬಾರಿ ಶಾಸಕರಾಗಿ ಆಯ್ಕೆ ಆಗಿ ದಾಖಲೆ ಬರೆದಿದ್ದಾರೆ. ಪ್ರತಿ ಚುನಾವಣೆಯಲ್ಲಿಯೂ ಆಡಳಿತ ವಿರೋಧಿ ಅಲೆ ಎದುರಿಸುವ ಕುಮಾರಸ್ವಾಮಿ ಅವರನ್ನು ಕೊನೆಕ್ಷಣದಲ್ಲಿ ಯಾವುದಾದರೊಂದು ರೂಪದಲ್ಲಿ ಅದೃಷ್ಟ ಕೈ ಹಿಡಿದು ಗೆಲುವಿನ ದಡ ಸೇರಿಸುತ್ತಿದೆ. ಈ ಬಾರಿಯೂ ಅದೇ ರೀತಿಯ ಚಮತ್ಕಾರ ನಡೆಯುವ ನಿರೀಕ್ಷೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ.
ಕಳೆದ ಬಾರಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಆಗಿ ಸ್ಪರ್ಧಿಸಿ ಜೆಡಿಎಸ್‍ನ ಎಚ್.ಕೆ. ಕುಮಾರಸ್ವಾಮಿ ಅವರಿಗೆ ತೀವ್ರ ಸ್ಪರ್ಧೆಯೊಡ್ಡಿ ಕೇವಲ 4942 ಮತಗಳ ಅಂತರದಿಂದ ಪರಾಭವಗೊಂಡಿದ್ದ ನಾರ್ವೆ ಸೋಮಶೇಖರ್ ಹಾಗೂ ಬಿಜೆಪಿ ಟಿಕೆಟ್ ಆಕಾಂಕ್ಷಿ ಆಗಿದ್ದ ನಿವೃತ್ತ ಎಕ್ಸಿಕ್ಯುಟಿವ್ ಇಂಜಿನಿಯರ್ ಗೊರೂರು ವೆಂಕಟೇಶ್ ಮೊನ್ನೆಯಷ್ಟೇ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಸಮ್ಮುಖದಲ್ಲಿ ಜೆಡಿಎಸ್ ಸೇರುವುದು ಜೆಡಿಎಸ್ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಹುಟ್ಟಲು ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಈ ಬಾರಿಯೂ ಬಿಜೆಪಿ ಟಕೆಟ್‍ಗಾಗಿ ಪ್ರಯತ್ನ ನಡೆಸಿದ್ದ ನಾರ್ವೆ ಸೋಮಶೇಖರ್, ಈಗ ಬಿಜೆಪಿ ಅಭ್ಯರ್ಥಿ ಆಗಿರುವ ಸಿಮೆಂಟ್ ಮಂಜು ವಿರುದ್ಧ ಸೇಡು ತೀರಿಸಿಕೊಳ್ಳಲು ಮತ್ತು ಭವಿಷ್ಯದಲ್ಲಿ ಉತ್ತಮ ರಾಜಕೀಯ ನೆಲೆ ಕಂಡುಕೊಳ್ಳುವ ಉದ್ದೇಶದಿಂದ ಜೆಡಿಎಸ್ ಸೇರಿದ್ದಾರೆ ಎನ್ನಲಾಗಿದೆ. ಅದೇನೇ ಇದ್ದರೂ ಜೆಡಿಎಸ್‍ಗೆ ಇದೊಂದು ಸಕಾರಾತ್ಮಕ ಬೆಳವಣಿಗೆ ಎಂಬುದರಲ್ಲಿ ಎರಡು ಮಾತಿಲ್ಲ.
ಇನ್ನು ಬಿಜೆಪಿಯಿಂದ ಕಣಕ್ಕಿಳಿದಿರುವ ಸಿಮೆಂಟ್ ಮಂಜು ಉತ್ಸಾಹದಿಂದ ಕ್ಷೇತ್ರದಾದ್ಯಂತ ಅಬ್ಬರದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಎಲ್ಲಾ ಕಡೆಗಳಂತೆ ಇಲ್ಲಿಯೂ ಬಿಜೆಪಿ ಪ್ರಚಾರದಲ್ಲಿ ಯುವಜನರ ಸಂಖ್ಯೆಯೇ ಎದ್ದು ಕಾಣುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ಹೊಂದಿಕೊಂಡಂತೆ ಇರುವ ಸಕಲೇಶಪುರ ತಾಲೂಕಿನಲ್ಲಿ ಹಿಂದುತ್ವದ ರಾಜಕಾರಣ ಹೆಚ್ಚು ಕ್ರಿಯಾಶೀಲವಾಗಿರುವುದು ಸಹ ಬಿಜೆಪಿ ಅಭ್ಯರ್ಥಿಗೆ ಪೂರಕವಾಗಿ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷವನ್ನು ತಳಮಟ್ಟದಿಂದ ಕಟ್ಟಿ ಬೆಳೆಸಿದವರಲ್ಲಿ ಒಬ್ಬರಾಗಿದ್ದ ದಿವಂಗತ ಬಿ.ಬಿ. ಶಿವಪ್ಪ ಸಕಲೇಶಪುರ ತಾಲೂಕಿನವರೇ ಆದ ಕಾರಣ ಹಲವಾರು ದಶಕಗಳಿಂದಲೂ ಮಲೆನಾಡು ಪ್ರದೇಶದಲ್ಲಿ ಬಿಜೆಪಿ ನೆಲೆ ಹೊಂದಿದೆ. ಆದರೆ ಬಿ.ಬಿ. ಶಿವಪ್ಪನವರು ಹಿಂದೆ ಇದು ಸಾಮಾನ್ಯ ಕ್ಷೇತ್ರವಾಗಿದ್ದ ಅವಧಿಯಲ್ಲಿ ಎರಡು ಬಾರಿ ಶಾಸಕರಾಗಿದ್ದು ಬಿಟ್ಟರೆ, ಇದುವರೆಗೂ ಬಿಜೆಪಿ ಇಲ್ಲಿ ಗೆಲುವಿನ ರುಚಿ ಕಾಣಲು ಸಾಧ್ಯವಾಗಿಲ್ಲ.
ಕಳೆದ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‍ಗೆ ಪ್ರಯತ್ನಿಸಿ ವಿಫಲರಾದ ನಂತರ ಕಾಂಗ್ರೆಸ್ ಸೇರಿ ಕಳೆದ ಐದು ವರ್ಷಗಳಿಂದಲೂ ಕ್ಷೇತ್ರದಲ್ಲಿ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಹಾಗೂ ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಜನರಿಗೆ ವಿವಿಧ ರೀತಿಯಲ್ಲಿ ನೆರವಾಗಿದ್ದ ಮುರಳಿ ಮೋಹನ್ ನಿರೀಕ್ಷೆಯಂತೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆಗಿದ್ದಾರೆ. ಸಕಲೇಶಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೈರಮುಡಿ ಚಂದ್ರು ಮತ್ತಿತರ ಒಕ್ಕಲಿಗ ಮತ್ತು ವೀರಶೈವ ಲಿಂಗಾಯತ ಮುಖಂಡರನ್ನು ಜೊತೆಯಲ್ಲಿ ಕಟ್ಟಿಕೊಂಡು ಮತದಾರರನ್ನು ಸೆಳೆಯುವ ಪ್ರಯತ್ನ ನಡೆಸಿದ್ದಾರೆ. ಆದರೆ ಚುನಾವಣೆಗೆ ಬೇಕಾಗುವ ಆರ್ಥಿಕ ಸಂಪನ್ಮೂಲ ಹೊಂದಿಸಿಕೊಳ್ಳಲು ಪರದಾಡುತ್ತಿದ್ದಾರೆ ಎನ್ನಲಾಗಿದೆ.
ಸದ್ಯಕ್ಕೆ ಕ್ಷೇತ್ರದಲ್ಲಿ ಜೆಡಿಎಸ್, ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ಒಬ್ಬರ ಹಿಂದೆ ಒಬ್ಬರು ಗೆಲುವಿನ ದಡದತ್ತ ಓಡುತ್ತಿರುವಂತೆ ಕಾಣುತ್ತಿದೆ. ಕೊನೆ ಕ್ಷಣದಲ್ಲಿ ಯಾರು ವೇಗ ಹೆಚ್ಚಿಸಿಕೊಳ್ಳುತ್ತಾರೆ ಎಂಬುದರ ಮೇಲೆ ಫಲಿತಾಂಶ ನಿರ್ಧಾರವಾಗಲಿದೆ. ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ ಮತ್ತ ಪಂಗಡಗಳ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಒಕ್ಕಲಿಗರು ಮತ್ತು ಲಿಂಗಾಯತರು ಹೆಚ್ಚಿನ ಪ್ರಮಾಣದಲ್ಲಿ ಬೆಂಬಲ ನೀಡುವ ಅಭ್ಯರ್ಥಿಯೇ ಇದುವರೆಗೆ ಕ್ಷೇತ್ರದಲ್ಲಿ ಆಯ್ಕೆ ಆಗುತ್ತಾ ಬಂದಿದ್ದಾರೆ. ಕಳೆದ ಚುನಾವಣೆಯಲ್ಲಿ ಸಕಲೇಶಪುರ ಮತ್ತು ಆಲೂರು ತಾಲೂಕುಗಳಲ್ಲಿ ಹಿನ್ನಡೆ ಅನುಭವಿಸಿದ್ದ ಜೆಡಿಎಸ್‍ನ ಎಚ್.ಕೆ. ಕುಮಾರಸ್ವಾಮಿ ಅವರನ್ನು ಕಟ್ಟಾಯ ಹೋಬಳಿಯಲ್ಲಿ ಬಹುಸಂಖ್ಯಾತರಾಗಿರುವ ಒಕ್ಕಲಿಗ ಮತದಾರರು ಸಂಪೂರ್ಣವಾಗಿ ಕೈ ಹಿಡಿದು ಗೆಲುವಿನ ದಡ ಸೇರಿಸಿದ್ದರು.
ಜೆಡಿಎಸ್‍ನ ಎಚ್.ಕೆ. ಕುಮಾರಸ್ವಾಮಿ ಪರವಾದ ಅಂಶಗಳು:
1. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಆಶೀರ್ವಾದ
2. ಮೇಲ್ವರ್ಗದ ಜನರೊಂದಿಗೆ ಉತ್ತಮ ಒಡನಾಟ ಮತ್ತು ಯಾರಿಗೂ ತೊಂದರೆ ಕೊಡದ ಸಜ್ಜನ ರಾಜಕಾರಣಿ.
3. ಕಳೆದ ಬಾರಿ ಪ್ರತಿಸ್ಪರ್ಧಿ ಆಗಿದ್ದ ನಾರ್ವೆ ಸೋಮಶೇಖರ್ ಮತ್ತು ನಿವೃತ್ತ ಇಂಜಿನಿಯರ್ ಗೊರೂರು ವೆಂಕಟೇಶ್ ಜೆಡಿಎಸ್ ಸೇರ್ಪಡೆ.
ವಿರುದ್ಧ ಇರುವ ಅಂಶಗಳು:
1. ಆಡಳಿತ ವಿರೋಧಿ ಅಲೆ
2. ಸತತ ಮೂರು ಬಾರಿ ಶಾಸಕರಾದರೂ ಕ್ಷೇತ್ರದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ನಿರೀಕ್ಷ ಪ್ರಮಾಣದಲ್ಲಿ ಕೆಲಸ ಮಾಡದೇ ಇರುವುದು.
3. ಕಾಡಾನೆ ಸಮಸ್ಯೆಯನ್ನು ಸಮರ್ಥವಾಗಿ ನಿರ್ವಹಣೆ ಮಾಡಿಲ್ಲ ಎಂಬ ಆರೋಪ.
ಬಿಜೆಪಿಯ ಸಿಮೆಂಟ್ ಮಂಜು ಪರವಾದ ಅಂಶಗಳು:
1. ಹಿಂದುತ್ವ ಮತ್ತು ಮೋದಿ ಪರವಾದ ಯುವಜನರ ಒಲವು.
2. ಹಾಸನದ ಪ್ರಭಾವಿ ಬಿಜೆಪಿ ಶಾಸಕ ಪ್ರೀತಮ್ ಗೌಡ ಬೆಂಬಲ.
3. ಕ್ಷೇತ್ರಕ್ಕೆ ಸ್ಥಳೀಯ ಮತ್ತು ಹೊಸ ಮುಖ.
ವಿರುದ್ಧ ಇರುವ ಅಂಶಗಳು:
1. ಪ್ರೀತಮ್ ಗೌಡ ವಿರುದ್ಧ ಇರುವ ಸಿಟ್ಟಿನ ಕಾರಣದಿಂದಾಗಿ ಮಾಜಿ ಶಾಸಕರಾದ ಎಚ್.ಎಂ. ವಿಶ್ವನಾಥ್ ಮತ್ತು ಬಿ.ಆರ್. ಗುರುದೇವ್ ಪೂರ್ಣ ಪ್ರಮಾಣದಲ್ಲಿ ಸಿಮೆಂಟ್ ಮಂಜು ಪರ ಕೆಲಸ ಮಾಡದೇ ಇರುವ ಸಾಧ್ಯತೆ.
2. ಬಿಜೆಪಿ ಟಿಕೆಟ್‍ನ ಪ್ರಬಲ ಆಕಾಂಕ್ಷಿ ಆಗಿದ್ದ ನಾರ್ವೆ ಸೋಮಶೇಖರ್ ಜೆಡಿಎಸ್ ಸೇರಿರುವುದು.
ಕಾಂಗ್ರೆಸ್‍ನ ಮುರಳಿ ಮೋಹನ್ ಪರವಾದ ಅಂಶಗಳು:-
1. ಎಲ್ಲರೊಂದಿಗೆ ಹೊಂದಿಕೊಂಡು ಹೋಗುವ ಸೌಮ್ಯ ಸ್ವಭಾವದ ವ್ಯಕ್ತಿ ಎಂಬ ಅಭಿಪ್ರಾಯ.
2. ಹೊಸ ಮುಖ ಮತ್ತು ಕ್ಷೇತ್ರದಲ್ಲಿ ನೆಲೆನಿಂತು ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಜನಸಾಮನ್ಯರಿಗೆ ನೆರವಾಗಿರುವುದು.
3. ಪಕ್ಷದ ಮೇಲ್ವರ್ಗದ ಮುಖಂಡರ ಸಹಕಾರ.
ವಿರುದ್ಧ ಇರುವ ಅಂಶಗಳು:
1. ಟಿಕೆಟ್ ಆಕಾಂಕ್ಷಿಗಳಾಗಿದ್ದ ಕಾಂಗ್ರೆಸ್‍ನ ದಲಿತ ಮುಖಂಡರ ಅಸಹಕಾರ.
2. ಆರ್ಥಿಕ ಸಂಪನ್ಮೂಲದ ಕೊರತೆ
ಒಟ್ಟು ಮತದಾರರ ಸಂಖ್ಯೆ; 2,05,569
ಅಂದಾಜು ಜಾತಿವಾರು ಲೆಕ್ಕಾಚಾರ-
ಪರಿಶಿಷ್ಟ ಜಾತಿ ಮತ್ತು ಪಂಗಡ: 60 ಸಾವಿರ
ಒಕ್ಕಲಿಗರು: 55 ಸಾವಿರ
ವೀರಶೈವ ಲಿಂಗಾಯತರು: 45 ಸಾವಿರ
ಮುಸ್ಲಿಮರು: 18 ಸಾವಿರ
ಕ್ರಿಶ್ಚಿಯನ್: 9 ಸಾವಿರ
ಇತರೆ: 9 ಸಾವಿರ