Hassan Scandal: ತಿರುವು ಪಡೆದುಕೊಳ್ಳುತ್ತಿರುವ ಪ್ರಜ್ವಲ್ ರೇವಣ್ಣ ಪ್ರಕರಣ, ಜೆಡಿಎಸ್ ಶಾಸಕನ ವಿರುದ್ದವೇ ಆರೋಪ, ಮತ್ತಿಬ್ಬರ ಬಂಧನ
May 13, 2024 12:26 AM IST
ಸಂಸದ ಪ್ರಜ್ವಲ್ ರೇವಣ್ಣ
- ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ವಿಡಿಯೋ ಹಂಚಿದ ಆರೋಪ ಈಗ ಜೆಡಿಎಸ್ ಮೇಲೆಯೇ ಬಂದಿದೆ. ಪಕ್ಷದ ಶಾಸಕರೊಬ್ಬರು ಇರುವ ಮಾಹಿತಿಯನ್ನು ನವೀನ್‌ಗೌಡ ಎಂಬಾತ ಹೊರ ಹಾಕಿದ್ದಾನೆ. ಇದೇ ಪ್ರಕರಣದಲ್ಲಿ ಇನ್ನಿಬ್ಬರ ಬಂಧನವಾಗಿದೆ.
ಹಾಸನ: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯದ ಪ್ರಕರಣವು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಪ್ರಜ್ವಲ್ ರೇವಣ್ಣ ಅವರ ಪೆನ್‌ಡ್ರೈವ್‌ನಲ್ಲಿನ ವಿಡಿಯೋ ಸೋರಿಕೆ ಹಿಂದೆ ಹಾಸನ ಜಿಲ್ಲೆ ಜೆಡಿಎಸ್ ಶಾಸಕನ ಕೈವಾಡವೂ ಇದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ವಿಡಿಯೋ ಹಂಚಿಕೆ ಮಾಡಿದ ಆರೋಪ ಎದುರಿಸುತ್ತಿರುವ ನವೀನ್ ಗೌಡ ಎಂಬಾತ ಜೆಡಿಎಸ್ ಶಾಸಕರ ಕೈವಾಡದಿಂದಲೇ ವಿಡಿಯೋ ಬಿಡುಗಡೆಯಾಗಿದೆ ಎನ್ನುವ ಹೇಳಿಕೆ ನೀಡಿದ್ದಾನೆ. ಇದರ ನಡುವೆಯೇ ಪ್ರಕರಣದ ತನಿಖೆ ಚುರುಕುಗೊಳಿಸಿರುವ ವಿಶೇಷ ತನಿಖಾ ತಂಡದವರು ಹಾಸನ ಪೊಲೀಸರ ಸಹಕಾರದಿಂದ ವಿಡಿಯೋ ಹಂಚಿದ ಆರೋಪದ ಮೇಲೆ ಬಿಜೆಪಿ ಮುಖಂಡನ ಆಪ್ತ ಸೇರಿದಂತೆ ಇಬ್ಬರನ್ನು ಬಂಧಿಸಿದ್ದು ಇಬ್ಬರನ್ನೂ ಭಾನುವಾರವೇ ನ್ಯಾಯಾಧೀಶರ ಮುಂದೆ ಹಾಜರಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ನವೀನ್‌ಗೌಡ ಹೇಳಿಕೆ
ಭಾನುವಾರ ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಪೆನ್‌ಡ್ರೈವ್ ಹಂಚಿಕೆ ಆರೋಪ ಎದುರಿಸುತ್ತಿರುವ ನವೀನ್ ಗೌಡ. ಪ್ರಜ್ವಲ್ ಪೆನ್ ಡ್ರೈವ್ ಹಿಂದೆ ಜೆಡಿಎಸ್ ಶಾಸಕರೊಬ್ಬರೇ ಮಹಾ ನಾಯಕರಾಗಿರಬಹುದು. ಏಪ್ರಿಲ್ 20ರಂದು ನನಗೆ ರಸ್ತೆಯಲ್ಲಿ ಸಿಕ್ಕ ಪೆನ್ ಡ್ರೈವ್ ನ್ನು ನಾನು ಅರಕಲಗೂಡು ಜೆಡಿಎಸ್ ಶಾಸಕ ಎ.ಮಂಜು ಅವರಿಗೆ ಅರಕಲಗೂಡಿನ ಮಾರುತಿ ಕಲ್ಯಾಣ ಮಂಟಪದಲ್ಲಿ ನೀಡಿದ್ದೆ. ಕುಮಾರಸ್ವಾಮಿ ಅವರು ಹೇಳಿದ ಹಾಗೆ ವಿಡಿಯೋ ವೈರಲ್ ಹಿಂದೆ ಇರುವ ಮಹಾ ನಾಯಕ ಅರಕಲಗೂಡು ಶಾಸಕರೇ ಇರಬಹುದು ಎಂಬುದು ನವೀನ್ ಗೌಡ ಹೇಳಿಕೆ.ಅಶ್ಲೀಲ ವಿಡಿಯೋ ವೈರಲ್ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ನವೀನ್ ಗೌಡ ಎಂಬಾತ ತನ್ನ ಫೇಸ್ ಬುಕ್ ಖಾತೆಯಲ್ಲಿ ನೀಡಿರುವ ಹೇಳಿಕೆಯೂ ಚರ್ಚೆಗೆ ಗ್ರಾಸವಾಗಿದೆ.
ಇದೇ ಪ್ರಕರಣದಲ್ಲಿ ಈಗಾಗಲೇ ಎಸ್ಐಟಿ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆ. ಪ್ರಮುಖ ಆರೋಪಿಗಳಾದ ಕಾರ್ತಿಕ್ ಗೌಡ, ನವೀನ್ ಗೌಡ, ಪುಟ್ಟರಾಜು ಅವರನ್ನು ಬಂಧಿಸಲು ಎಸ್ಐಟಿ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ. ಮೂವರ ನಿರೀಕ್ಷಣಾ ಜಾಮೀನು ಅರ್ಜಿಯೂ ವಜಾ ಆಗಿದ್ದು ತಲೆಮರೆಸಿಕೊಂಡಿದ್ದಾರೆ. ನವೀನ್ ಗೌಡ ಅಜ್ಞಾತ ಸ್ಥಳದಿಂದ ಈ ವಿಡಿಯೋ ಹಂಚಿಕೊಂಡಿರುವ ಸಾಧ್ಯತೆಗಳಿದ್ದು, ಎಸ್‌ಐಟಿ ಅಧಿಕಾರಿಗಳು ಇದನ್ನು ಗಮನಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಂಜು ಸ್ಪಷ್ಟನೆ
ಇದಕ್ಕೆ ಹಾಸನದಲ್ಲಿ ಪ್ರತಿಕ್ರಿಯೆ ನೀಡಿರುವ ಶಾಸಕ ಎ.ಮಂಜು, ನವೀನ್‌ಗೌಡ ಯಾರೂ ಎಂಬುದೇ ನನಗೆ ತಿಳಿದಿಲ್ಲ. ಈ ಪ್ರಕರಣದ ದಿಕ್ಕು ತಪ್ಪಿಸುವ ಉದ್ದೇಶದಿಂದ ಹೇಳಿಕೆ ನೀಡಿದ್ದು, ಆತನನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಮತ್ತಿಬ್ಬರ ಬಂಧನ
ಇದೇ ಪ್ರಕರಣದಲ್ಲಿ ವಿಡಿಯೋ ಹಂಚಿಕೆ ಮಾಡಿದ ಆರೋಪದ ಮೇಲೆ ಲಿಖಿತ್ ಗೌಡ ಹಾಗೂ ಚೇತನ್ ಎಂಬಿಬ್ಬರನ್ನು ಬಂಧಿಸಲಾಗಿದೆ.
ಲಿಖಿತ್‌ನನ್ನು ಶ್ರವಣಬೆಳಗೊಳ ಹಾಗೂ ಚೇತನನನ್ನು ಹಾಸನ ತಾಲ್ಲೂಕಿನ ಯಲಗುಂದ ಗ್ರಾಮಕ್ಕೆ ಕರೆದೊಯ್ದು ವಿಚಾರಣೆ ನಡೆಸಲಾಗಿದೆ ಎಂದು ಹಾಸನ ಸೈಬರ್ ಅಪರಾಧ ತಡೆ ಠಾಣೆ ಪೊಲೀಸರು ತಿಳಿಸಿದ್ದಾರೆ. ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಸಿಬಿಐಗೆ ಕೊಡಿ: ಬೊಮ್ಮಾಯಿ
ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಯಾರೂ ಸಮರ್ಥನೆ ಮಾಡುವ ಪ್ರಶ್ನೆಯೇ ಇಲ್ಲ. ಆದರೆ, ಪ್ರಕರಣದ ತನಿಖೆ ನಡೆಯುತ್ತಿರುವ ರೀತಿ ಸರಿ ಇಲ್ಲ. ಮಾಹಿತಿ ಕೊಟ್ಟವರನ್ನೇ ಬಂಧನ ಮಾಡುತ್ತಿದ್ದಾರೆ. ಎಸ್ಐಟಿಯ ತನಿಖೆಯ ದಿಕ್ಕು ತಪ್ಪುತ್ತಿದೆ. ಸರಿಯಾದ ತನಿಖೆಗೆ ಸಿಬಿಐಗೆ ವಹಿಸಲಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಸ್ ಐಟಿಯವರು ಅಪರಾಧಿಗಳನ್ನು ಬಂಧಿಸುತ್ತಿಲ್ಲ. ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಯಬೇಕು ಅಂದರೆ, ಸಿಬಿಐಗೆ ವಹಿಸಲಿ ಎಂದು ಆಗ್ರಹಿಸಿದರು.
ಈ ಪ್ರಕರಣದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ವಿಚಾರಣೆಯೂ ಮಾಡಬೇಕು ಎಂಬ ಕೆಲವರ ಆಗ್ರಹದ ಕುರಿತು ಕೇಳಿದ ಪ್ರಶ್ನೆಗೆ ಪ್ರಜ್ವಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರ್ಯಾರ ಹೆಸರು ಕೇಳಿಬರುತ್ತಿದೆಯೋ ಅವರ ವಿಚಾರಣೆಯೂ ಮಾಡಲಿ. ಅದಕ್ಕೇ ನಾವು ಪ್ರಕರಣ ಸಿಬಿಐಗೆ ಕೊಡಲಿ ಅಂತ ಕೇಳುತ್ತಿದ್ದೇವೆ ಎಂದರು.