logo
ಕನ್ನಡ ಸುದ್ದಿ  /  ಕರ್ನಾಟಕ  /  Hassan News: ಸಂಸದ ಪ್ರತಾಪಸಿಂಹ ಸಹೋದರನಿಂದ ಮರಗಳ್ಳತನ: ಕಾಂಗ್ರೆಸ್‌ ಗಂಭೀರ ಆರೋಪ, ಮೊಕದ್ದಮೆ ದಾಖಲಿಸಿದ ಅರಣ್ಯ ಇಲಾಖೆ

Hassan News: ಸಂಸದ ಪ್ರತಾಪಸಿಂಹ ಸಹೋದರನಿಂದ ಮರಗಳ್ಳತನ: ಕಾಂಗ್ರೆಸ್‌ ಗಂಭೀರ ಆರೋಪ, ಮೊಕದ್ದಮೆ ದಾಖಲಿಸಿದ ಅರಣ್ಯ ಇಲಾಖೆ

Umesha Bhatta P H HT Kannada

Dec 24, 2023 02:48 PM IST

google News

ಬೇಲೂರು ತಾಲ್ಲೂಕಿನ ನಂದಗೌಡನಹಳ್ಳಿಯಲ್ಲಿ ಮರಗಳನ್ನು ಕಡಿದಿರುವ ಪರಿಶೀಲಿಸಿದ ಅರಣ್ಯ ಇಲಾಖೆ ಅಧಿಕಾರಿಗಳು.

    • Hassan forest issue ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಭೂಮಿಯಲ್ಲಿದ್ದ ಮರಗಳನ್ನು ಕಡಿದ ಬಗ್ಗೆ ವಿಚಾರಣೆ ನಡೆಯುತ್ತಿದೆ. ಈ ಭೂಮಿಯ ಗುತ್ತಿಗೆ  ಪಡೆಯಲು ಸಂಸದ ಪ್ರತಾಪಸಿಂಹ ಸಹೋದರ ವಿಕ್ರಮ್‌ ಸಿಂಹ( Vikram Simha) ಮುಂದಾಗಿದ್ದು, ಮರ ಕಡಿತದಲ್ಲಿ ಅವರ ಪಾತ್ರ ಇರುವ ಕುರಿತು ಅರಣ್ಯ ಇಲಾಖೆ( Karnataka Forest Department) ಮಾಹಿತಿ ಪಡೆಯುತ್ತಿದೆ
ಬೇಲೂರು ತಾಲ್ಲೂಕಿನ ನಂದಗೌಡನಹಳ್ಳಿಯಲ್ಲಿ ಮರಗಳನ್ನು ಕಡಿದಿರುವ ಪರಿಶೀಲಿಸಿದ ಅರಣ್ಯ ಇಲಾಖೆ ಅಧಿಕಾರಿಗಳು.
ಬೇಲೂರು ತಾಲ್ಲೂಕಿನ ನಂದಗೌಡನಹಳ್ಳಿಯಲ್ಲಿ ಮರಗಳನ್ನು ಕಡಿದಿರುವ ಪರಿಶೀಲಿಸಿದ ಅರಣ್ಯ ಇಲಾಖೆ ಅಧಿಕಾರಿಗಳು.

ಹಾಸನ: ಮೈಸೂರು- ಕೊಡಗು ಲೋಕಸಭಾ ಸದಸ್ಯ ಪ್ರತಾಪಸಿಂಹ ಸಹೋದರ ವಿಕ್ರಮ್‌ ಸಿಂಹ ಅವರು ಸರ್ಕಾರಿ ಜಮೀನಿಲ್ಲಿ ಮರ ಕಡಿಸಿದ ಗಂಭೀರ ಆರೋಪ ಕೇಳಿ ಬಂದಿದೆ. ಈ ಕುರಿತು ಕರ್ನಾಟಕ ಕಾಂಗ್ರೆಸ್‌ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ ಮರಗಳ್ಳತನ ಮಾಡಿರುವ ಗಂಭೀರ ಆರೋಪ ಮಾಡಿದೆ.

ಈ ಘಟನೆ ಕುರಿತು ಹಾಸನದ ಅರಣ್ಯ ಇಲಾಖೆ ಅಧಿಕಾರಿಗಳು ಈಗಾಗಲೇ ಸ್ಥಳ ಮಹಜರು ಮಾಡಿ ಮರ ಕಡಿತಕ್ಕೆ ಸಂಬಂಧಿಸಿ ಮೊಕದ್ದಮೆಯನ್ನೂ ದಾಖಲಿಸಿದ್ದಾರೆ. ಪ್ರಕರಣದಲ್ಲಿ ಪ್ರತಾಪಸಿಂಹ ಸಹೋದರ ವಿಕ್ರಮ್‌ ಸಿಂಹ ಹೆಸರಿಲ್ಲ. ಆದರೆ ಮರ ಕಡಿದಿರುವ ಜಮೀನು ಪಡೆಯಲು ವಿಕ್ರಮ್‌ ಸಿಂಹ ಒಪ್ಪಂದ ಮಾಡಿಕೊಂಡಿದ್ದು, ಇದರ ಆಧಾರದ ಮೇಲೆ ಅವರ ವಿರುದ್ದವೂ ಮೊಕದ್ದಮೆ ದಾಖಲಿಸಲು ಅರಣ್ಯ ಇಲಾಖೆ ಸಿದ್ದತೆ ನಡೆಸುತ್ತಿದೆ.

ಅರಣ್ಯಇಲಾಖೆ ವಿಚಾರಣೆ

ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ನಂದಗೌಡನಹಳ್ಳಿ ಗ್ರಾಮದ ಸರ್ವೇ ನಂ 16 ರಲ್ಲಿ ಕೆಲ ದಿನಗಳ ಹಿಂದೆ ಭಾರೀ ಗಾತ್ರದ ಮರಗಳನ್ನು ಕಡಿಯಲಾಗಿತ್ತು. ಈ ಕುರಿತು ಮಾಹಿತಿ ತಿಳಿದ ಬೇಲೂರು ತಹಸಿಲ್ದಾರ್‌ ಮಮತಾ ಅವರು ಕ್ರಮಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದರು. ಆನಂತರ ವಿಚಾರಣೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಇಲ್ಲಿ 126 ಮರ ಕಡಿತ ಮಾಡಿದ್ದು ಕಂಡು ಬಂದಿತ್ತು. ಅವುಗಳನ್ನು ವಶಕ್ಕೆ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ಆ ಜಮೀನಿನ ಸ್ವಾಧೀನದಲ್ಲಿರುವ ಸುಧಾಕರ ಶೆಟ್ಟಿ ಹಾಗೂ ಜಯಮ್ಮ ಅವರ ವಿರುದ್ದ ಅರಣ್ಯ ಕಾಯಿದೆ ಅಡಿ ಮೊಕದ್ದಮೆ ದಾಖಲಿಸಿದ್ದರು. ಅಲ್ಲದೇ ಇತರೆ ಎನ್ನುವ ಕಾಲಂ ಸಹ ಬಿಟ್ಟಿದ್ದರು.

ವಿಚಾರಣೆ ನಡೆಸಿದಾಗ ಈ ಜಮೀನು ಗೋಮಾಳ ಎನ್ನುವ ಹೆಸರಿನಲ್ಲಿದೆ. ಗ್ರಾಮದ ಸುಧಾಕರ ಶೆಟ್ಟಿ ಹಾಗೂ ಜಯಮ್ಮ ಎಂಬುವವರು ಸ್ವಾಧೀನದಲ್ಲಿದ್ದು ಇನ್ನು ಫೋಡಿ ಆಗಿಲ್ಲ. ಆದರೆ ಈ ಜಮೀನನ್ನು ಜನವರಿ 2024 ರಿಂದ ಶುಂಠಿ ಬೆಳೆಯಲೆಂದು ಗುತ್ತಿಗೆ ಮೇಲೆ ಪಡೆಯಲು ಪ್ರತಾಪಸಿಂಹ ಸಹೋದರ ವಿಕ್ರಮ್‌ ಸಿಂಹ ಒಪ್ಪಂದ ಮಾಡಿಕೊಂಡಿದ್ದರು. ಬೇಗನೇ ಜಮೀನನ್ನು ನೀಡುವಂತೆಯೂ ಒತ್ತಡ ಹೇರಿದ್ದರು. ಈ ಹಿನ್ನೆಲೆಯಲ್ಲಿ ಮರ ಕಡಿತ ಮಾಡಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಜಮೀನು ಒಪ್ಪಂದ ಮಾಡಿಕೊಂಡಿರುವ ದಾಖಲೆಗಳನ್ನು ಸಂಗ್ರಹಿಸಿದ್ದೇವೆ. ಮರ ಕಡಿತ ಮಾಡಿರುವವರು ಯಾರು ಎನ್ನುವ ಕುರಿತು ವಿವರವನ್ನು ಸಂಗ್ರಹಿಸುತ್ತಿದ್ದೇವೆ. ಜಯಮ್ಮ ಅವರ ತಾಯಿ ತೀರಿಕೊಂಡಿದ್ದರಿಂದ ತನಿಖೆ ನಿಧಾನವಾಗಿದೆ. ಸದ್ಯವೇ ಮಾಹಿತಿ ಸಂಗ್ರಹಿಸಿ ವಿಕ್ರಮ್‌ ಸಿಂಹ ಪಾತ್ರ ಇದ್ದರೆ ಅವರ ವಿರುದ್ದವೂ ಮೊಕದ್ದಮೆ ದಾಖಲಿಸಲಾಗುತ್ತದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಾಂಗ್ರೆಸ್‌ ಟ್ವೀಟ್‌

ಈ ನಡುವೆ ಕಾಂಗ್ರೆಸ್‌ ಕೂಡ ಪ್ರತಾಪಸಿಂಹ ಸಹೋದರ ಮರ ಕಡಿದಿದ್ದಾರೆ ಎಂದು ಗಂಭೀರ ಆರೋಪ ಮಾಡಿದೆ. ಈ ಕುರಿತು ವಿಡಿಯೋ ಸಹಿತ ಎಕ್ಸ್‌ನಲ್ಲಿ ಕಾಂಗ್ರೆಸ್‌ ಪೋಸ್ಟ್‌ ಮಾಡಿದೆ.

ಅಣ್ಣ ಪ್ರತಾಪಸಿಂಹ ಸಂಸತ್ ದಾಳಿಕೋರರಿಗೆ ಪಾಸ್ ನೀಡುವ ಕೆಲಸದಲ್ಲಿದ್ದರೆ ತಮ್ಮ ವಿಕ್ರಮ್ ಸಿಂಹ ಸಿನಿಮೀಯ ಮಾದರಿಯಲ್ಲಿ ಮರಗಳ್ಳತನದಲ್ಲಿ ತೊಡಗಿದ್ದಾನೆ.ಸಂಸದ ಪ್ರತಾಪ್ ಸಿಂಹನ ಸಹೋದರ ವಿಕ್ರಮ್ ಸಿಂಹ ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಮರಗಳನ್ನು ಕಡಿದು ಸಾಗಾಟ ನಡೆಸಿರುವುದು ದಕ್ಷ ಅಧಿಕಾರಿಯಾದ ತಹಸೀಲ್ದಾರ್ ಮಮತಾ ಅವರ ಮೂಲಕ ಬೆಳಕಿಗೆ ಬಂದಿದೆ, ಇದರಲ್ಲಿ ಕೆಲವು ಅರಣ್ಯ ಇಲಾಖೆಯ ಅಧಿಕಾರಿಗಳೂ ಕೈಜೋಡಿಸಿದ್ದು ಈ ಬಗ್ಗೆ ಸಚಿವ

ಈಶ್ವರ ಖಂಡ್ರೆ ಅವರು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅದೇಶಿಸಲಿದ್ದಾರೆ. ನಿಮ್ಮ ಜನಪ್ರತಿನಿಧಿಗಳು ಹಾಗೂ ಅವರ ಕುಟುಂಬಸ್ಥರು ಕೊಳ್ಳೆ ಹೊಡೆಯುವುದರಲ್ಲೇ ಬ್ಯುಸಿಯಾಗಿರುವುದೇಕೆ ಎಂದು ಪ್ರದೇಶ ಕಾಂಗ್ರೆಸ್‌ ಸಮಿತಿ ಬಿಜೆಪಿಯನ್ನು ಕಾಲೆಳೆದಿದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ