ಪ್ರಜ್ವಲ್ ರೇವಣ್ಣ ಕೇಸ್; ಜರ್ಮನಿಯಿಂದ ಲಂಡನ್‌ಗೆ ಹೊರಟ್ರಾ ಹಾಸನ ಸಂಸದ, 2 ದಿನಗಳ 10 ವಿದ್ಯಮಾನಗಳು
May 18, 2024 12:41 PM IST
ಪ್ರಜ್ವಲ್ ರೇವಣ್ಣ ಕೇಸ್; ಜರ್ಮನಿಯಿಂದ ಲಂಡನ್‌ಗೆ ಪ್ರಜ್ವಲ್ ರೈಲಿನಲ್ಲಿ ಪ್ರಯಾಣಿಸಿದ್ದಾರೆ ಎಂದು ವರಿಯಾಗಿದೆ.
ಪ್ರಜ್ವಲ್ ರೇವಣ್ಣ ಕೇಸ್ ದಿನೇದಿನೆ ಕುತೂಹಲ ಹೆಚ್ಚಿಸುತ್ತಿದ್ದು, ಹೊಸ ಹೊಸ ಟ್ವಿಸ್ಟ್‌ಗಳು ಗಮನಸೆಳೆಯುತ್ತಿವೆ. ಪ್ರಜ್ವಲ್ ಪೆನ್‌ಡ್ರೈವ್ ವಿಚಾರದಲ್ಲಿ ದೇವರಾಜೇಗೌಡ ಅವರು ಡಿಕೆ ಶಿವಕುಮಾರ್ ಮತ್ತು 4 ಸಚಿವರ ವಿರುದ್ಧ ನೇರ ಆರೋಪ ಮಾಡಿದ್ದಾರೆ. ಈ ನಡುವೆ, ಹಾಸನ ಸಂಸದ ಜರ್ಮನಿಯಿಂದ ಲಂಡನ್‌ಗೆ ಹೊರಟರೆಂಬ ಸುದ್ದಿ ಹರಡಿದೆ. 2 ದಿನಗಳ 10 ವಿದ್ಯಮಾನಗಳು ಹೀಗಿವೆ ನೋಡಿ.
ಬೆಂಗಳೂರು: ಹಾಸನ ಲೈಂಗಿಕ ಹಗರಣ ಕೇಸ್ ದಿನೇದಿನೆ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಇನ್ನಷ್ಟು ಸಂಕೀರ್ಣವಾಗುತ್ತ ಸಾಗುತ್ತಿದೆ. ಈ ನಡುವೆ, ಈ ಕೇಸ್‌ನ ಪ್ರಮುಖ ಆರೋಪಿ ಎಂದು ಗುರುತಿಸಿಕೊಂಡಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಜರ್ಮನಿಯಿಂದ ವಾಪಸ್ ಬರುವ ಸುದ್ದಿ ಐದಾರು ಸಲ ಬಂತಾದರೂ, ಪ್ರತಿ ಬಾರಿ ಟಿಕೆಟ್ ರದ್ದುಗೊಳಿಸಿರುವ ಸುದ್ದಿಯೊಂದಿಗೆ ತಣ್ಣಗಾಗಿದೆ. ಪ್ರಜ್ವಲ್ ರೇವಣ್ಣ ಜರ್ಮನಿಯಿಂದ ಲಂಡನ್‌ಗೆ ರೈಲಿನಲ್ಲಿ ಹೋಗುತ್ತಿದ್ದು, ಅವರೊಂದಿಗೆ ಇನ್ನೊಂದಿಬ್ಬರು ಕೂಡ ಇದ್ದಾರೆ ಎಂಬ ಸುದ್ದಿ ಈಗ ಹರಿದಾಡುತ್ತಿದೆ.
ಈ ನಡುವೆ, ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಪೆನ್ ಡ್ರೈವ್ ಕೇಸ್‌ನಲ್ಲಿ ಬಂಧಿತ ಬಿಜೆಪಿ ಮುಖಂಡ ದೇವರಾಜೇಗೌಡ ಗಂಭೀರ ಆರೋಪ ಮಾಡಿದ್ದು, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೇ ಇದರ ಕೇಂದ್ರ ಬಿಂದು, 100 ಕೋಟಿ ರೂಪಾಯಿ ಆಮಿಷ ಒಡ್ಡಿ ಈ ಕೆಲಸ ಮಾಡಿಸಿದ್ದಾರೆ ಎಂದು ಹೇಳಿದ್ದಾರೆ. ಇದು ಸಂಚಲನ ಮೂಡಿಸಿದ್ದು, ರಾಜಕೀಯ ವಾಕ್ಸಮರಕ್ಕೆ ಇನ್ನಷ್ಟು ಪುಷ್ಟಿ ನೀಡಿದಂತಾಗಿದೆ.
ಪ್ರಜ್ವಲ್ ರೇವಣ್ಣ ಕೇಸ್ - ಈ ವರೆಗೆ ಏನೇನಾಯಿತು, ಕಳೆದ ಎರಡು ದಿನಗಳ 10 ವಿದ್ಯಮಾನಗಳಿವು
1) ಅಶ್ಲೀಲ ವಿಡಿಯೋ, ಲೈಂಗಿಕ ದೌರ್ಜನ್ಯ, ಅತ್ಯಾಚಾರ ಕೇಸ್ ಆರೋಪ ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಈಗಾಗಲೇ ಲುಕೌಟ್, ಬ್ಲೂ ಕಾರ್ನರ್ ನೋಟಿಸ್ ಜಾರಿಯಾಗಿದೆ. ಕರ್ನಾಟಕ ಎಸ್‌ಐಟಿಯ ಅತ್ಯಂತ ಬೇಕಾದ ಆರೋಪಿಗಳ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಅವರು ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನ (ಏಪ್ರಿಲ್ 26) ನಡೆದ ಕೂಡಲೆ ತಲೆಮರೆಸಿಕೊಂಡು ಜರ್ಮನಿಗೆ ತೆರಳಿದ್ದರು. ಈಗ ಅಲ್ಲಿಂದ ಲಂಡನ್‌ಗೆ ಹೋಗಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದೆ.
2) ಪ್ರಜ್ವಲ್ ರೇವಣ್ಣ ಮೇ 16ರ ತನಕವೂ ಜರ್ಮನಿಯಲ್ಲೇ ಇದ್ದರು. ಆದರೆ, ಸದ್ಯ ಇಂಗ್ಲೆಂಡ್‌ನಲ್ಲಿರುವ ಭಾರತದ ಉದ್ಯಮಿಯೊಬ್ಬರ ನೆರವಿನೊಂದಿಗೆ ಪ್ರಜ್ವಲ್ ರೇವಣ್ಣ ಮ್ಯೂನಿಚ್‌ನಿಂದ ಲಂಡನ್‌ಗೆ ರೈಲಿನಲ್ಲಿ ಹೋಗಿದ್ದಾರೆ. ಅವರ ಜತೆಗೆ ಇಬ್ಬರು ಗೆಳೆಯರೂ ಇದ್ದಾರೆ ಎಂದು ಮೂಲಗಳು ತಿಳಿಸಿದ್ದಾಗಿ ಟಿವಿ 9 ಕನ್ನಡ ವರದಿ ಮಾಡಿದೆ.
3) ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ವಾಪಸ್ ಆಗಮಿಸುತ್ತಾರೆ ಎಂದು ಎರಡು ಬಾರಿ ಸುದ್ದಿಯಾಗಿತ್ತು. ಈ ಮರುಪ್ರಯಾಣದ ವಿಮಾನ ಟಿಕೆಟ್‌ಗಳ ಇಮೇಜ್‌ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಮೇ 3 ಮತ್ತು ಮೆ 15 ರ ತಡರಾತ್ರಿ ಬೆಂಗಳೂರಿಗೆ ಬರುತ್ತಾರೆ ಎಂದು ಹೇಳಲಾಗಿತ್ತು. ಪ್ರಜ್ವಲ್ ಆಗಮನಕ್ಕಾಗಿ ಎಸ್‌ಐಟಿ ತಂಡ ಕಾಯುತ್ತಿದೆ.
4) ಪ್ರಜ್ವಲ್ ರೇವಣ್ಣ ಕೇಸ್ ಬಗ್ಗೆ ಮಾತಾಡಿದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು, ಪ್ರಜ್ವಲ್ ಹೊರದೇಶದಲ್ಲಿದ್ದಾರೆ, ಅವರ ವಿರುದ್ಧ ದಾಖಲಾಗಿರುವ ಪ್ರಕರಣಗಳ ಬಗ್ಗೆ ತಮ್ಮ ಕುಟುಂಬದ ಪರವಾಗಿ ಹೆಚ್ ಡಿ ಕುಮಾರಸ್ವಾಮಿಯವರು ಸ್ಪಷ್ಟವಾದ ಹೇಳಿಕೆಗಳನ್ನು ನೀಡಿದ್ದಾರೆ ಮತ್ತು ಕಾನೂನಿನ ಪ್ರಕಾರ ಶಿಕ್ಷೆಯಾಗಲಿ. ಅದಕ್ಕೆ ಯಾವುದೇ ತಕರಾರು ಇಲ್ಲ. ಆದರೆ, ಇಡೀ ಪ್ರಕರಣದಲ್ಲಿ ಬೇರೆ ಜನ ಸಹ ಶಾಮೀಲಾಗಿದ್ದಾರೆ ಅವರಿಗೂ ಶಿಕ್ಷೆಯಾಗಬೇಕು. ಸಂತ್ರಸ್ತೆಯರಿಗೆ ಪರಿಹಾರ ಸಿಗಬೇಕು ಎಂದು ಹೇಳಿದರು.
5) ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಅವರ ಮಧ್ಯಂತರ ಜಾಮೀನು ಅರ್ಜಿ ಸೋಮವಾರ ಇತ್ಯರ್ಥವಾಗಲಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಈ ಅರ್ಜಿ ವಿಚಾರಣೆ ನಡೆಸುತ್ತಿದೆ. ರೇವಣ್ಣ ಕೇಸ್‌ಗೆ ಸಂಬಂಧಿಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸುವುದಾಗಿ ಎಸ್‌ಐಟಿ ಹೇಳಿದೆ.
6) ಪ್ರಜ್ವಲ್ ರೇವಣ್ಣ ಅವರ ಆಶ್ಲೀಲ ವಿಡಿಯೋ ಪೆನ್ ಡ್ರೈವ್ ವಿಚಾರ ಚರ್ಚೆಯಲ್ಲಿದ್ದು, ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಬಂಧಿತರಾಗಿರುವ ಬಿಜೆಪಿ ಮುಖಂಡ ಜಿ. ದೇವರಾಜೇ ಗೌಡ ಅವರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಈ ಕೇಸ್‌ನ ಕೇಂದ್ರ ಬಿಂದು ಎಂದು ಆರೋಪಿಸಿದ್ದಾರೆ. ಪೆನ್‌ಡ್ರೈವ್ ಕೇಸಲ್ಲಿ ನನ್ನ ಮಧ್ಯಸ್ಥಿಕೆ ಮಾಡಿಸಿದ್ದು ಮಾಜಿ ಸಂಸದ ಶಿವರಾಮೇಗೌಡ, ನನ್ನ ಬಂಧನಕ್ಕೆ ಡಿ.ಕೆ.ಶಿವಕುಮಾರ್ ಅವರೇ ನೇರ ಹೊಣೆ. ಅವರು 100 ಕೋಟಿ ಆಫರ್ ನೀಡಿದರು. ಚನ್ನರಾಯಪಟ್ಟಣದ ಗೋಪಾಲ ಸ್ವಾಮಿ ಕೈಲಿ ಐದು ಕೋಟಿ ರುಪಾಯಿ ಅಡ್ವಾನ್ಸ್ ಅನ್ನು ಬೌರಿಂಗ್ ಕ್ಲಬ್‌ನ 110ನೇ ಕೊಠಡಿಗೆ ಕಳುಹಿಸಿದ್ದರು ಎಂದು ಆರೋಪಿಸಿದ್ದಾರೆ.
7) ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರನ್ನು ರಾಜಕೀಯವಾಗಿ ಮುಗಿಸುವ ಪ್ರಯತ್ನ ಈ ಕೇಸ್‌ನಲ್ಲಿ ಅಡಗಿತ್ತು. ನರೇಂದ್ರ ಮೋದಿ ಅವರ ಪ್ರಭಾವವನ್ನು ಕುಗ್ಗಿಸುವ ರಾಜಕೀಯವೂ ಇದರಲ್ಲಿತ್ತು. ಇದನ್ನು ಡಿಕೆ ಶಿವಕುಮಾರ್ ಅವರೇ ಹೇಳಿದ್ದು, ನನ್ನ ಬಳಿ ಎಲ್ಲದಕ್ಕೂ ಸಾಕ್ಷ್ಯ ಇದೆ. ಅದು ಸುರಕ್ಷಿತವಾಗಿ ಇದೆ ಎಂದು ಜಿ. ದೇವರಾಜೇ ಗೌಡ ಹೇಳಿದ್ದಾರೆ.
8) ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಅನ್ನು ಕುಮಾರಸ್ವಾಮಿ ಬಹಿರಂಗಪಡಿಸಿದ್ದು ಎಂಬುದನ್ನು ಬಿಂಬಿಸಲು ನನ್ನ ಮೇಲೆ ಒತ್ತಡ ಹೇರಲಾಗಿತ್ತು. ಈ ಇಡೀ ಪ್ರಕರಣ ನಿರ್ವಹಿಸುವುದಕ್ಕೆ ನಾಲ್ಕು ಸಚಿವರ ತಂಡ ಕೆಲಸ ಮಾಡಿದೆ. ಪ್ರಜ್ವಲ್ ರೇವಣ್ಣ ಅವರ ಮಾಜಿ ಕಾರು ಚಾಲಕ ಕಾರ್ತಿಕ್ ಅವರನ್ನು ಕರೆಯಿಸಿಕೊಂಡ ಡಿಕೆ ಶಿವಕುಮಾರ್ ಈ ಕೃತ್ಯವೆಸಗಿದ್ದಾರೆ. ಚಲುವರಾಯಸ್ವಾಮಿ, ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ ಮತ್ತು ಇನ್ನೊಬ್ಬ ಸಚಿವರು ತಂಡದಲ್ಲಿದ್ದರು ಎಂದು ದೇವರಾಜೇಗೌಡ ಆರೋಪಿಸಿದ್ದಾರೆ.
9) ಕಾರ್ತಿಕ್ ಪತ್ನಿ ಅಪಹರಣದ ವಿಡಿಯೋ ನನ್ನ ಬಳಿ ಇದೆ. ಡಿಕೆ ಶಿವಕುಮಾರ್ ನನ್ನ ಬಳಿ ಮಾತನಾಡಿದ ಆಡಿಯೋ ಕೂಡ ಇದೆ. ನಾನು ಜೈಲಿನಿಂದ ಹೊರ ಬಂದ ಬಳಿಕ ಸರ್ಕಾರ ಪತನವಾಗಲಿದೆ. ಎಸ್‌ಐಟಿ ತಂಡಕ್ಕೆ ನನ್ನ ಮನೆಯಲ್ಲಿ ಏನೂ ಸಿಕ್ಕಿಲ್ಲ. ಎಲ್ಲ ಸಾಕ್ಷ್ಯಗಳನ್ನು ಕೂಡ ಸುರಕ್ಷಿತವಾಗಿ ಇಟ್ಟಿದ್ದೇನೆ ಎಂದು ಜಿ. ದೇವರಾಜೇ ಗೌಡ ನಿನ್ನೆ (ಮೇ 17) ಹೇಳಿದ್ದರು.
10) ಪ್ರಜ್ವಲ್ ರೇವಣ್ಣ ಅವರ ಬ್ಯಾಂಕ್ ಖಾತೆಗೆ ಲಕ್ಷಾಂತರ ರೂಪಾಯಿ ಇತ್ತೀಚೆಗೆ ವರ್ಗಾವಣೆ ಆಗಿದೆ ಎಂಬ ಮಾಹಿತಿ ಎಸ್‌ಐಟಿಗೆ ಲಭ್ಯವಾಗಿದೆ. ಹೀಗಾಗಿ ಅವರನ್ನು ವಾಪಸ್ ಕರೆಸುವ ಪ್ರಯತ್ನದ ಭಾಗವಾಗಿ ಬ್ಯಾಂಕ್ ಖಾತೆ ಸ್ತಂಭನಗೊಳಿಸುವ ಪ್ರಕ್ರಿಯೆ ಕಡೆಗೆ ಎಸ್‌ಐಟಿ ಗಮನಹರಿಸಿದೆ ಎಂದು ಮೂಲಗಳು ತಿಳಿಸಿದ್ದಾಗಿ ಕೆಲವು ಮಾಧ್ಯಮಗಳು ವರದಿ ಮಾಡಿವೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.