ಪ್ರಜ್ವಲ್ ರೇವಣ್ಣ ವಿದೇಶದಲ್ಲಿದ್ದಾರಾ; ಮತ್ತೆ ಹಣೆಯ ಮೇಲಿರುವ ಆ ಕುಂಕುಮದ ಕಥೆಯೇನು, ಜನರ ಮಧ್ಯೆ ಕುತೂಹಲಕಾರಿ ಮಾತುಕತೆ
May 28, 2024 09:07 AM IST
ಪ್ರಜ್ವಲ್ ರೇವಣ್ಣ ವಿದೇಶದಲ್ಲಿದ್ದಾರಾ; ಮತ್ತೆ ಹಣೆಯ ಮೇಲಿರುವ ಆ ಕುಂಕುಮದ ಕಥೆಯೇನು ಎಂಬ ವಿಚಾರ ಜನರ ಮಧ್ಯೆ ಕುತೂಹಲಕಾರಿ ಮಾತುಕತೆಗೆ ಕಾರಣವಾಗಿದೆ. (ವಿಡಿಯೋದಿಂದ ತೆಗೆದ ಚಿತ್ರ)
ಹಾಸನ ಲೈಂಗಿಕ ಹಗರಣ ಕೇಸ್ ದಿನೇದಿನೆ ಕುತೂಹಲಕಾರಿಯಾಗುತ್ತ ಸಾಗುತ್ತಿದೆ. ಸಂಸದ ಪ್ರಜ್ವಲ್ ರೇವಣ್ಣ ಒಂದು ತಿಂಗಳ ಬಳಿಕ ವಿಡಿಯೋ ಹೇಳಿಕೆ ನೀಡಿದ್ದು, ಹಲವು ಸಂದೇಹಗಳನ್ನು ಹುಟ್ಟುಹಾಕಿದೆ. ಈ ಪೈಕಿ, ಪ್ರಜ್ವಲ್ ರೇವಣ್ಣ ವಿದೇಶದಲ್ಲಿದ್ದಾರಾ, ಮತ್ತೆ ಹಣೆಯ ಮೇಲಿರುವ ಆ ಕುಂಕುಮದ ಕಥೆಯೇನು ಎಂಬ ವಿಚಾರ ಜನರ ಮಧ್ಯೆ ಕುತೂಹಲಕಾರಿ ಮಾತುಕತೆಗೆ ವಿಷಯ ಒದಗಿಸಿದೆ.
ಬೆಂಗಳೂರು/ಹಾಸನ: ಲೈಂಗಿಕ ದೌರ್ಜನ್ಯ, ಅತ್ಯಾಚಾರ ಕೇಸ್ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ ಅವರ ವಿಡಿಯೋ ಹೇಳಿಕೆ ನಿನ್ನೆ (ಮೇ 27)ಕ್ಕೆ ಬಿಡುಗಡೆಯಾಗಿದೆ. ಹಾಸನ ಲೈಂಗಿಕ ಹಗರಣ (Hassan Sex Scanda) ಬೆಳಕಿಗೆ ಬರುತ್ತಿದ್ದಂತೆ ಕಳೆದ ತಿಂಗಳು ಏಪ್ರಿಲ್ 27 ರಿಂದ ತಲೆಮರೆಸಿಕೊಂಡಿರುವ ಪ್ರಜ್ವಲ್ ರೇವಣ್ಣ ಸರಿಯಾಗಿ ಒಂದು ತಿಂಗಳ ಬಳಿಕ ಈ ವಿಡಿಯೋ ಹೇಳಿಕೆ ನೀಡಿದ್ದಾರೆ. ವಿದೇಶಕ್ಕೆ ಹೋಗಿದ್ದಾರೆ ಎಂದು ಹೇಳಲಾಗಿತ್ತಾದರೂ, ಜರ್ಮನಿ, ಲಂಡನ್ ಎಂಬಿತ್ಯಾದಿ ಸುದ್ದಿಗಳು ಹರಿದಾಡಿವೆ. ಆದಾಗ್ಯೂ ಅವರು ಇರುವ ನಿಖರ ಸ್ಥಳ ಇನ್ನೂ ಬಹಿರಂಗವಾಗಿಲ್ಲ.
ಈ ನಡುವೆ ಅವರ ತಂದೆ ಎಚ್ ಡಿ ರೇವಣ್ಣ ಕೂಡ ಎಸ್‌ಐಟಿ ಬಂಧನಕ್ಕೆ ಒಳಗಾಗಿ ಜಾಮೀನು ಪಡೆದು ಹೊರಬಂದಿದ್ದಾರೆ. ಇದಾದ ಬಳಿಕ ರಾಜ್ಯದ ಪ್ರಮುಖ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಧರ್ಮಸ್ಥಳಕ್ಕೂ ಭೇಟಿ ನೀಡಿದ್ದರು. ನಿನ್ನೆ ಅಪರಾಹ್ನ ಪ್ರಜ್ವಲ್ ರೇವಣ್ಣ ಅವರ ವಿಡಿಯೋ ಹೇಳಿಕೆ ಬಿಡುಗಡೆಯಾಗಿದೆ. ಅದು ಎಲ್ಲಿಂದ ಬಂತು ಎಂಬುದು ಇನ್ನೂ ಬಹಿರಂಗವಾಗಿಲ್ಲ.
ಪ್ರಜ್ವಲ್ ರೇವಣ್ಣ ಅವರ ವಿಡಿಯೋ ಹೇಳಿಕೆಯಲ್ಲಿರುವ 5 ಮುಖ್ಯ ಅಂಶಗಳು
1) ಮೇ 31ರಂದು ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಎಸ್‌ಐಟಿ ಎದುರು ಹಾಜರಾಗುವೆ. ತನಿಖೆಗೆ ಸಹಕಾರ ನೀಡುವೆ. ಎಲ್ಲ ಆರೋಪಗಳಿಗೂ ಉತ್ತರ ಕೊಡುತ್ತೇನೆ.
2) ನನ್ನ ಫಾರಿನ್ ಪ್ರವಾಸ ಪೂರ್ವನಿಗದಿತ ಕಾರ್ಯಕ್ರಮವಾಗಿತ್ತು. ನಾನು ಹೊರಡುವ ಸಂದರ್ಭದಲ್ಲಿ ನನ್ನ ವಿರುದ್ಧ ಯಾವುದೇ ಕೇಸ್ ದಾಖಲಾಗಿರಿಲ್ಲ.
3) ವಿದೇಶಕ್ಕೆ ಹೋದ ಬಳಿಕ ಪೊಲೀಸ್ ದೂರು ದಾಖಲಾಗಿದೆ. ಎಸ್ಐಟಿ ರಚನೆಯಾಗಿದೆ. ಈ ಎಲ್ಲ ವಿಚಾರಗಳು ತಿಳಿದುಬಂದವು.
4) ನನ್ನ ವಿರುದ್ಧ ನಡೆದಿರುವ ರಾಜಕೀಯ ಷಡ್ಯಂತ್ರದ ಭಾಗ ಇದೆಲ್ಲ. ಹಾಸನದಲ್ಲಿ ನನ್ನ ರಾಜಕೀಯ ಬೆಳವಣಿಗೆ ಸಹಿಸದವರ ಕೃತ್ಯ ಇದು. ಹೀಗಾಗಿ ಖಿನ್ನತೆಗೆ ಒಳಗಾಗಿದ್ದೆ. ಏಕಾಂತಕ್ಕೆ ಹೋಗಬೇಕಾಯಿತು. ಇದಕ್ಕಾಗಿ ಆರಂಭದಲ್ಲೇ ಕ್ಷಮೆ ಕೇಳಿದ್ದೇನೆ. ಈಗಲೂ ಕ್ಷಮೆ ಕೇಳುತ್ತೇನೆ.
5) ನ್ಯಾಯಾಲಯದ ಮೇಲೆ ನನಗೆ ನಂಬಿಕೆ ಇದೆ. ಖಚಿತವಾಗಿ ಈ ಎಲ್ಲ ಸುಳ್ಳು ಪ್ರಕರಣಗಳಲ್ಲಿ ಆರೋಪ ಮುಕ್ತನಾಗಿ ಹೊರಗೆ ಬರುವೆ. ಜನರ ಆಶೀರ್ವಾದ, ದೇವರ ಆಶೀರ್ವಾದ ಮತ್ತು ಕುಟುಂಬದ ಆಶೀರ್ವಾದ ಇರಲಿ.
ಪ್ರಜ್ವಲ್ ರೇವಣ್ಣ ವಿದೇಶದಲ್ಲಿದ್ದಾರಾ; ಮತ್ತೆ ಹಣೆಯ ಮೇಲಿನ ಆ ಕುಂಕುಮದ ಕಥೆಯೇನು…
ಪ್ರಜ್ವಲ್ ರೇವಣ್ಣ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆಯೇ ಹೊರತು, ಅಪ್ಪಿ ತಪ್ಪಿಯೂ ತಾವು ಇರುವುದೆಲ್ಲಿ ಎಂಬ ವಿವರವನ್ನು ಬಹಿರಂಗಗೊಳಿಸಿಲ್ಲ. ಆ ರಹಸ್ಯ ಇನ್ನೂ ಹಾಗೆಯೇ ಉಳಿದುಕೊಂಡಿದೆ. ತಮ್ಮ ವಿರುದ್ಧ ಕೇಳಿ ಬಂದಿರುವ ಲೈಂಗಿಕ ದೌರ್ಜನ್ಯ ಆರೋಪಗಳ ಕುರಿತಾದ ಅವರ ವಿಡಿಯೋ ಹೇಳಿಕೆ 2.57 ನಿಮಿಷ ಇದೆ.
ಲೋಕಸಭೆ ಚುನಾವಣೆಯ ಮತದಾನ ದಿನವಾದ ಏ.26 ರಂದು ಮತದಾನದ ಬಳಿಕ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ. ಆ ದಿನದಿಂದ ಅವರು ಅಜ್ಞಾತವಾಗಿದ್ದಾರೆ. ಈಗ ವಿಡಿಯೋ ಹೇಳಿಕೆಯಲ್ಲಿರುವ ಪ್ರಕಾರ, ಮೇ 31 ರಂದು ಎಸ್‌ಐಟಿ ಮುಂದೆ ಹಾಜರಾಗಲು ಪ್ರಜ್ವಲ್ ರೇವಣ್ಣ ಬರುವಿಕೆಯ ಕಡೆ ಎಲ್ಲರ ಚಿತ್ತ ಹರಿದಿದೆ. ಇದರ ನಡುವೆ, ಅವರ ಹಣೆಯ ಮೇಲಿನ ಕುಂಕುಮ ಜನರ ನಡುವಿನ ಮಾತುಕತೆಗೆ ಒಂದೊಳ್ಳೆ ವಿಷಯ ಒದಗಿಸಿದೆ.
ವಿದೇಶದಲ್ಲಿರುವ ಪ್ರಜ್ವಲ್ ರೇವಣ್ಣ ಅವರಿಗೆ ಕುಂಕುಮ ದೊರೆತದ್ದು ಹೇಗೆ ಎಂಬ ಕುತೂಹಲಕಾರಿ ಚರ್ಚೆ ಶುರುವಾಗಿದೆ. ನಾನೆಲ್ಲೋ ಏಕಾಂತವಾಗಿದ್ದೇನೆ. ಮೇ 31ಕ್ಕೆ ಎಸ್‌ಐಟಿ ಎದುರು ಹಾಜರಾಗುತ್ತೇನೆ ಎಂಬಿತ್ಯಾದಿ ಮಾತುಗಳನ್ನು ಪ್ರಜ್ವಲ್ ರೇವಣ್ಣ ಹೇಳಿದ್ದರೂ, ರಾಜಕೀಯ ಚತುರರ ಕುಟುಂಬದ ಕುಡಿಯಾದ ಕಾರಣ, ಇದರಲ್ಲೇನೋ ರಾಜಕೀಯದಾಟ ಇದೆ ಎಂಬುದೇ ಚರ್ಚೆಯ ವಿಷಯ. ಹೀಗಾಗಿಯೇ ಅವರ ಹಣೆಯ ಮೇಲಿನ ಕುಂಕುಮ ಈ ಚರ್ಚೆಯಲ್ಲಿ ಭಾಗವಹಿಸುತ್ತಿರುವವರ ಗಮನಸೆಳೆದಿದೆ.
ಈ ನಡುವೆ, ಜೈಲಿನಿಂದ ಬಿಡುಗಡೆಯಾದ ಮೇಲೆ ಶಾಸಕ ಎಚ್.ಡಿ.ರೇವಣ್ಣ ಅವರು ದೇವಸ್ಥಾನದಿಂದ ದೇವಸ್ಥಾನಕ್ಕೆ ಎಂಬಂತೆ ಪ್ರದಕ್ಷಿಣೆ ಹಾಕುತ್ತಿದ್ದಾರೆ. ಕಾಕತಾಳೀಯ ಎಂಬಂತೆ ರೇವಣ್ಣ ಅವರು ಭಾನುವಾರ ಧರ್ಮಸ್ಥಳಕ್ಕೆ ಹೋಗಿ ಮಂಜುನಾಥನ ದರ್ಶನ ಪಡೆದಿರುವುದು ಚರ್ಚೆಗೆ ಗ್ರಾಸವಾಗಿದೆ. ಇದರ ನಡುವೆ, ರಾಜ್ಯದ ಪ್ರತಿಷ್ಠಿತ ದೇವಸ್ಥಾನವೊಂದರ ಕುಂಕುಮಾರ್ಚನೆ ಮಾಡಿದ ಪ್ರಸಾದ ರೂಪದ ಕುಂಕುಮ ತಿಲಕ ಪ್ರಜ್ವಲ್ ಹಣೆಯಲ್ಲಿ ಕಂಡುಬಂದಿದೆ ಎಂಬ ಮಾತುಗಳೂ ಹರಿದಾಡಿವೆ.
ಪ್ರಜ್ವಲ್ ರೇವಣ್ಣ ಕೂಡ ವಿದೇಶದಲ್ಲಿದ್ದೇನೆ ಎಂದು ಹೇಳಿಲ್ಲ. ಇವೆಲ್ಲವನ್ನೂ ಗಮನಿಸಿದರೆ, ಪ್ರಜ್ವಲ್ ವಿದೇಶದಲ್ಲಿರುವುದು ಡೌಟ್. ಆ ರೀತಿ ಸುದ್ದಿ ಹಬ್ಬಿಸಲಾಗಿದೆ. ತನಿಖೆಯ ದಾರಿ ತಪ್ಪಿಸುವ ಸಲುವಾಗಿ ಆ ಕಥೆ ಕಟ್ಟಲಾಗಿದೆ ಎನ್ನುವ ಮಾತು ರಾಜಕೀಯ ಚಾವಡಿಗಳಲ್ಲಿ ಕೇಳಿಬಂದಿದೆ.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.