logo
ಕನ್ನಡ ಸುದ್ದಿ  /  ಕರ್ನಾಟಕ  /  Haveri Sahitya Sammelana: ಜನವರಿ 6ರಿಂದ ಹಾವೇರಿಯಲ್ಲಿ 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ, ಲಾಂಛನ ಅನಾವರಣ

Haveri sahitya sammelana: ಜನವರಿ 6ರಿಂದ ಹಾವೇರಿಯಲ್ಲಿ 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ, ಲಾಂಛನ ಅನಾವರಣ

HT Kannada Desk HT Kannada

Oct 30, 2022 12:29 PM IST

google News

ಜನವರಿ 6ರಿಂದ ಹಾವೇರಿಯಲ್ಲಿ 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ, ಲಾಂಛನ ಅನಾವರಣ

    • ತಾಯಿ ಭುವನೇಶ್ವರಿಯ ಚಿತ್ರವನ್ನು ಪ್ರಧಾನವಾಗಿ ತೋರಿಸಲಾಗಿದ್ದು, ಜಿಲ್ಲೆಯ ಕೃಷ್ಣಮೃಗ ಅಭಯಾರಣ್ಯ, ನವಿಲು ಧಾಮ ಬಿಂಬಿಸುವ ಚಿತ್ರವನ್ನು ಲಾಂಛನ ಹೊಂದಿದ್ದು, ಆಕರ್ಷಕವಾಗಿದೆ. ಹಾವೇರಿ ಜಿಲ್ಲೆಯ ಅಸ್ಮಿತೆಯನ್ನು ತೋರಿಸುವಂತೆ ಲಾಂಛನ ವಿನ್ಯಾಸ ಮಾಡಲಾಗಿದೆ.
ಜನವರಿ 6ರಿಂದ ಹಾವೇರಿಯಲ್ಲಿ 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ, ಲಾಂಛನ ಅನಾವರಣ
ಜನವರಿ 6ರಿಂದ ಹಾವೇರಿಯಲ್ಲಿ 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ, ಲಾಂಛನ ಅನಾವರಣ

ಹಾವೇರಿ: ಹಾವೇರಿಯಲ್ಲಿ ಜನವರಿ 6 ರಿಂದ ಮೂರು ದಿನಗಳ ಕಾಲ 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಈ ಸಮ್ಮೇಳನದ ಲಾಂಛನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್‌ ಕುಮಾರ್ ಬಿಡುಗಡೆ ಮಾಡಿದ್ದಾರೆ. ಹಾವೇರಿ ಜಿಲ್ಲೆಯ ಜಿಲ್ಲಾ ಪಂಚಾಯತ್‌ ಸಭಾಭವನದಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ ನಿನ್ನೆ ನಡೆಯಿತು. ಈ ಸಭೆಯಲ್ಲಿ ಲಾಂಛನ ಬಿಡುಗಡೆ ಮಾಡಲಾಯಿತು.

ಹೇಗಿದೆ ಲಾಂಛನ?

ತಾಯಿ ಭುವನೇಶ್ವರಿಯ ಚಿತ್ರವನ್ನು ಪ್ರಧಾನವಾಗಿ ತೋರಿಸಲಾಗಿದ್ದು, ಜಿಲ್ಲೆಯ ಕೃಷ್ಣಮೃಗ ಅಭಯಾರಣ್ಯ, ನವಿಲು ಧಾಮ ಬಿಂಬಿಸುವ ಚಿತ್ರವನ್ನು ಲಾಂಛನ ಹೊಂದಿದ್ದು, ಆಕರ್ಷಕವಾಗಿದೆ. ಹಾವೇರಿ ಜಿಲ್ಲೆಯ ಅಸ್ಮಿತೆಯನ್ನು ತೋರಿಸುವಂತೆ ಲಾಂಛನ ವಿನ್ಯಾಸ ಮಾಡಲಾಗಿದೆ.

ಹಾವೇರಿಯ ಏಲಕ್ಕಿ ಹಾರ, ಬ್ಯಾಡಗಿ ಮೆಣಸು, ಜಾನಪದ ವಿವಿಯ ‘ಹೊನ್ನ ಬಿತ್ತೇವು ಹೊಲಕೆಲ್ಲ’ ಎಂಬ ಘೋಷವಾಕ್ಯ, ಕೆಳಭಾಗದಲ್ಲಿ ಹಾನಗಲ್‌ ಕುಮಾರ ಸ್ವಾಮೀಜಿ, ವಿ.ಕೃ. ಗೋಕಾಕ, ಅಂಬಿಗರ ಚೌಡಯ್ಯ, ಸರ್ವಜ್ಞ, ಕನಕದಾಸರು, ಶಿಶುನಾಳ ಶರೀಫರು, ಪುಟ್ಟರಾಜ ಗವಾಯಿಗಳು, ಹೆಳವನಕಟ್ಟೆಗಿರಿಯಮ್ಮ, ಗಳಗನಾಥರು, ಮೈಲಾರ ಮಹದೇವಪ್ಪ, ಮದಗ ಮಾಸೂರು ಕೆರೆ ಚಿತ್ರವನ್ನು ವಿನ್ಯಾಸಗೊಳಿಸಲಾಗಿದೆ.

ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಹ ಕುಲಸಚಿವ ಶಹಜಹಾನ್‌ ಮುದಕವಿ ಅವರು ಸಮ್ಮೇಳನದ ಲಾಂಛನ ವಿನ್ಯಾಸ ಮಾಡಿದ್ದಾರೆ. ಲಾಂಛನ ಬಿಡುಗಡೆ ಸಮಾರಂಭದಲ್ಲಿ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ, ಕಸಾಪ ಅಧ್ಯಕ್ಷ ಡಾ.ಮಹೇಶ ಜೋಶಿ ಹಾಗೂ ಇತರರು ಈ ವೇಳೆ ಹಾಜರಿದ್ದರು.

ಸಮ್ಮೇಳನಕ್ಕೆ ಸಿದ್ಧತೆ

"ಸಮ್ಮೇಳನಕ್ಕೆ ವಿವಿಧ ಸಮಿತಿಗಳು ಇಂದಿನಿಂದಲೇ ಸಿದ್ಧತಾ ಕಾರ್ಯ ಆರಂಭಿಸಬೇಕು. 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ’ವನ್ನು ಅದ್ಧೂರಿಯಾಗಿ, ಅರ್ಥಪೂರ್ಣವಾಗಿ ನಡೆಸಬೇಕು. ಅತ್ಯಂತ ಯಶಸ್ವಿಯಾಗಿ ಸಮ್ಮೇಳನ ನಡೆಸಲು ಎಲ್ಲ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕುʼʼ ಎಂದು ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ವಿ. ಸುನೀಲ್‌ಕುಮಾರ್‌ ಸೂಚಿಸಿದ್ದಾರೆ.

"ಕೋವಿಡ್‌ ನಂತರದ ದಿನಗಳಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನ ಇದಾಗಿದೆ. ಕೆಲ ದಿನಗಳ ಹಿಂದಷ್ಟೇ ಅದ್ಧೂರಿಯಾಗಿ ಮೈಸೂರು ದಸರಾ ನಡೆಸಲಾಗಿದೆ. ಅದಕ್ಕಿಂತ ಮಿಗಿಲಾಗಿ ಸಾಹಿತ್ಯ ಸಮ್ಮೇಳನ ನಡೆಸಬೇಕುʼʼ ಎಂದು ಅವರು ಹೇಳಿದ್ದಾರೆ. ಸಮ್ಮೇಳನಕ್ಕೆ ಸಂಘ ಸಂಸ್ಥೆಗಳು ಮತ್ತು, ಸಾರ್ವಜನಿಕರ ಸಹಭಾಗಿತ್ವವನ್ನು ಬಳಸುವಂತೆಯೂ ಅವರು ಸಲಹೆ ನೀಡಿದ್ದಾರೆ.

"ಸಾಹಿತ್ಯ ಸಮ್ಮೇಳನದಲ್ಲಿ ಚರ್ಚೆಗಳು, ಗೋಷ್ಠಿಗಳು ಕರ್ನಾಟಕಕ್ಕೆ, ಕನ್ನಡಕ್ಕೆ ಹೊಸ ಬೆಳಕು ನೀಡುವ ನಿಟ್ಟಿನಲ್ಲಿ ಆಯೋಜಿಸಬೇಕು. ಸ್ವಚ್ಛತೆ ಕಾರ್ಯ, ಸಾರಿಗೆ ವ್ಯವಸ್ಥೆ ಸೇರಿದಂತೆ ಎಲ್ಲಾ ವ್ಯವಸ್ಥೆಗಳು ಅಚ್ಚುಕಟ್ಟಾಗಿರಬೇಕು. 25 ಸಾವಿರ ಜನರಿಗೆ ವಸತಿ ಸೌಕರ್ಯವನ್ನು ಹಾವೇರಿಯಲ್ಲಿ ಕಲ್ಪಿಸಬಹುದು. ಉಳಿದಂತೆ ದಾವಣಗೆರೆ, ಧಾರವಾಡ ಹಾಗೂ ಗದಗ ಜಿಲ್ಲೆಗಳ ಜಿಲ್ಲಾಡಳಿತಗಳ ನೆರವು ಪಡೆದು ವಸತಿ ಸೌಕರ್ಯ ಕಲ್ಪಿಸಬೇಕುʼʼ ಎಂದದು ಅವರು ಸಲಹೆ ನೀಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ