Haveri Result: ಹಾವೇರಿಯಲ್ಲಿ ಗೆಲುವಿನ ನಗೆ ಬೀರಿದ ಬಸವರಾಜ್ ಬೊಮ್ಮಾಯಿ; ಕಾಂಗ್ರೆಸ್‌ನ ಆನಂದಸ್ವಾಮಿಗೆ ಸೋಲು
Jun 04, 2024 04:32 PM IST
ಹಾವೇರಿಯಲ್ಲಿ ಗೆಲುವಿನ ನಗೆ ಬೀರಿದ ಬಸವರಾಜ್ ಬೊಮ್ಮಾಯಿ; ಕಾಂಗ್ರೆಸ್‌ನ ಆನಂದಸ್ವಾಮಿಗೆ ಸೋಲು
- ಹಾವೇರಿ ಲೋಕಸಭಾ ಕ್ಷೇತ್ರ ಚುನಾವಣಾ ಫಲಿತಾಂಶ 2024: ಬಿಜೆಪಿ ಪಾಲಿಗೆ ಪ್ರತಿಷ್ಠೆ ಕಣ ಹಾವೇರಿ ಕ್ಷೇತ್ರದ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಬಿಜೆಪಿ ಅಭ್ಯರ್ಥಿ ಬಸವರಾಜ್ ಬೊಮ್ಮಾಯಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್‌ನ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ 29,289 ಮತಗಳ ಅಂತರದಿಂದ ಸೋಲೊಪ್ಪಿಕೊಂಡಿದ್ದಾರೆ. Haveri Lok Sabha Elections Result.
ಬೆಂಗಳೂರು: ಲೋಕಸಭಾ ಚುನಾವಣೆ 2024ರ ಮತಎಣಿಕೆ ಮುಗಿದು ಫಲಿತಾಂಶ ಹೊರಬಿದಿದ್ದೆ. ಹಾವೇರಿ ಲೋಕಸಭಾ ಕ್ಷೇತ್ರ ಚುನಾವಣಾ ಫಲಿತಾಂಶ (Haveri Lok Sabha MP Election 2024 Result) ವಿವರ ಹೀಗಿದೆ. ಹಾವೇರಿ ಪ್ರತ್ಯೇಕ ಜಿಲ್ಲೆಯಾದಾಗಿನಿಂದಲೂ ಇಲ್ಲಿ ಬಿಜೆಪಿಯೇ ಗೆಲುವು ಸಾಧಿಸುತ್ತಿದೆ. ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿಯು ಬಸವರಾಜ್ ಬೊಮ್ಮಾಯಿ (basavaraj bommai) ಅವರು ಸ್ಪರ್ಧಿಸಿದ್ದರೆ, ಅವರಿಗೆ ಎದುರಾಳಿಯಾಗಿ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ (Anandswamy Gaddadevarmath) ಕಣಕ್ಕಿಳಿದ್ದಿದ್ದಾರೆ. ಬಿಜೆಪಿಯ ಭದ್ರಕೋಟೆಯಾಗಿರುವ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ 2009ರಿಂದ ಇಲ್ಲಿಯವರೆಗೆ ಬಿಜೆಪಿಯೇ ಗೆಲುವು ಸಾಧಿಸಿದೆ. ಶಿರಹಟ್ಟಿ, ಗದಗ, ರೋಣ, ಹಾನಗಲ್ ಮುಂತಾದ ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಜಿಲ್ಲೆಯಿದು. ಬೊಮ್ಮಾಯಿ ಹಾಗೂ ಆನಂದಸ್ವಾಮಿ ಅವರ ಜೊತೆ ಇತರ ಪಕ್ಷಗಳ ಗಂಗಾಧರ್ ಬಡಿಗೇರ್, ಡಾ. ಜಿ ಎಚ್ ಇಮ್ರಾಪುರ, ಎಚ್ ಕೆ ನರಸಿಂಹಪ್ಪ, ಜಗದೀಶ ಯಲ್ಲಪ್ಪ ಬಂಕಾಪುರ ಮುಂತಾದವರು ಸ್ಪರ್ಧೆಯಲ್ಲಿದ್ದರು.
ಹಾವೇರಿ ಲೋಕಸಭೆ ಎಲೆಕ್ಷನ್ ಕ್ವಿಕ್ ಲುಕ್
ಲೋಕಸಭಾ ಕ್ಷೇತ್ರದ ಹೆಸರು: ಹಾವೇರಿ
ಅಭ್ಯರ್ಥಿಯ ಹೆಸರು ಮತ್ತು ಪಡೆದ ಮತಗಳು
ಬಸವರಾಜ ಬೊಮ್ಮಾಯಿ (ಬಿಜೆಪಿ): 5,37,578 ಮತಗಳು
ಆನಂದಸ್ವಾಮಿ ಗಡ್ಡದೇವರಮಠ (ಕಾಂಗ್ರೆಸ್): 5,08,289 ಮತಗಳು
ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಪಡೆದ ಬಸವರಾಜ ಬೊಮ್ಮಾಯಿ ಪರಿಚಯ
2021 ರಿಂದ 2023ರವರೆಗೆ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಬಿಜೆಪಿ ಕಟ್ಟಾಳು. ಮೂಲತಃ ಕೃಷಿಕ ಹಾಗೂ ಕೈಗಾರಿಕೋದ್ಯಮಿಯಾಗಿರುವ ಇವರು 1998ರಿಂದ ರಾಜಕೀಯ ರಂಗದಲ್ಲಿದ್ದಾರೆ. ಹುಟ್ಟಿನಿಂದಲೇ ಇವರು ರಾಜಕೀಯ ವಾತಾವರಣದಲ್ಲಿ ಬೆಳೆದವರು. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿ ಅವರ ಪುತ್ರ ಬಸವರಾಜ ಬೊಮ್ಮಾಯಿ. ಜನತಾದಳದೊಂದಿಗೆ ರಾಜಕೀಯ ಜೀವನ ಆರಂಭಿಸಿದ ಇವರು 2008ರಲ್ಲಿ ಬಿಜೆಪಿಗೆ ಸೇರ್ಪಡೆಯಾಗುತ್ತಾರೆ. ಇವರು ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ.
ಚುನಾವಣಾ ಕಣ: ಹಾವೇರಿ ಲೋಕಸಭಾ ಕ್ಷೇತ್ರ
ಹಾವೇರಿ ಲೋಕಸಭಾ ಕ್ಷೇತ್ರವನ್ನು 2008ರಲ್ಲಿ ಸಂಸದೀಯ ಕ್ಷೇತ್ರಗಳ ವಿಂಗಡಣೆಯ ಭಾಗವಾಗಿ ರಚಿಸಲಾಯಿತು. ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿವೆ. 2009ರ ಲೋಕಸಭಾ ಚುನಾವಣೆಯಿಂದ ಇಲ್ಲಿಯವರೆಗೆ ಈ ಕ್ಷೇತ್ರದಲ್ಲಿ ಬಿಜೆಪಿಯೇ ಗೆಲುವು ಸಾಧಿಸುತ್ತಿದೆ. ಮೊದಲ ಬಾರಿ ಅಂದರೆ 2009ರ ಚುನಾವಣೆಯಲ್ಲಿ ಶಿವಕುಮಾರ್ ಚೆನ್ನಬಸಪ್ಪ ಉದಾಸಿ ಗೆಲುವು ಸಾಧಿಸಿದ್ದರು. 2019ರಲ್ಲಿ ಬಿಜೆಪಿ ಅಭ್ಯರ್ಥಿ ಸಿಎಂ ಉದಾಸಿ 1,40,882 ಮತಗಳ ಗೆಲುವಿನ ಅಂತರದಿಂದ ಕಾಂಗ್ರೆಸ್‌ನ ಡಿಆರ್ ಪಾಟೀಲ ಅವರ ವಿರುದ್ಧ ಜಯ ಗಳಿಸಿದ್ದಾರೆ.
Disclaimer: ಗಮನಿಸಿ; ಇದು ಮತ ಎಣಿಕೆ ಕೇಂದ್ರಗಳಲ್ಲಿ ಲಭ್ಯವಿರುವ ಮಾಹಿತಿ ಆಧರಿಸಿ ಪ್ರಕಟಿಸಿದ ಬರಹ. ಚುನಾವಣಾ ಆಯೋಗವು ಅಧಿಕೃತವಾಗಿ ಅಂಕಿಅಂಶಗಳನ್ನು ಪ್ರಕಟಿಸಿದ ನಂತರ ಮತಗಳ ಸಂಖ್ಯೆ ಏರುಪೇರಾಗಬಹುದು. ಅಂತಿಮ ಫಲಿತಾಂಶದ ವಿವರವನ್ನು ಇದೇ ಬರಹದಲ್ಲಿ ಅಪ್‌ಡೇಟ್ ಮಾಡಲಾಗುವುದು.