logo
ಕನ್ನಡ ಸುದ್ದಿ  /  ಕರ್ನಾಟಕ  /  ಮಂಗಳೂರು ಆಯುಷ್ ಆಸ್ಪತ್ರೆಗೆ ಸಿಎಸ್‌ಆರ್ ಅಡಿ ಉಪಕರಣ ಖರೀದಿ ಪ್ರಕರಣ; ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತನಿಖೆಗೆ ಆದೇಶ

ಮಂಗಳೂರು ಆಯುಷ್ ಆಸ್ಪತ್ರೆಗೆ ಸಿಎಸ್‌ಆರ್ ಅಡಿ ಉಪಕರಣ ಖರೀದಿ ಪ್ರಕರಣ; ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತನಿಖೆಗೆ ಆದೇಶ

Jayaraj HT Kannada

Sep 03, 2024 10:00 PM IST

google News

ಆಯುಷ್ ಆಸ್ಪತ್ರೆಗೆ ಉಪಕರಣ ಖರೀದಿ ಪ್ರಕರಣ; ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತನಿಖೆಗೆ ಆದೇಶ

    • Dinesh Gundu Rao: ಮಂಗಳೂರು ನಗರದ ಆಯುಷ್ ಆಸ್ಪತ್ರೆಗೆ ಸಿಎಸ್‌ಆರ್ ಅಡಿ ಉಪಕರಣ ಖರೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತನಿಖೆಗೆ ಆದೇಶ ನೀಡಿದ್ದಾರೆ.
ಆಯುಷ್ ಆಸ್ಪತ್ರೆಗೆ ಉಪಕರಣ ಖರೀದಿ ಪ್ರಕರಣ; ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತನಿಖೆಗೆ ಆದೇಶ
ಆಯುಷ್ ಆಸ್ಪತ್ರೆಗೆ ಉಪಕರಣ ಖರೀದಿ ಪ್ರಕರಣ; ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತನಿಖೆಗೆ ಆದೇಶ

ಮಂಗಳೂರು: ನಗರದ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ 50 ಬೆಡ್ ಆಯುಷ್ ಆಸ್ಪತ್ರೆಯ ಉಪಕರಣ ಖರೀದಿಗೆ 28 ಲಕ್ಷ ವೆಚ್ಚದ ಸಿಎಸ್‌ಆರ್ ಯೋಜನೆಯ ಪ್ರಕರಣ ಇದೀಗ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ಅಂಗಳದಲ್ಲಿದೆ. ಪ್ರಕರಣದಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಕೂಲಂಕುಷ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ ಅವರಿಗೆ ಆದೇಶಿಸಿದ್ದಾರೆ.

ಪ್ರಕರಣ ಕುರಿತಂತೆ ಮಂಗಳೂರು ಜಿಲ್ಲಾ ಆಯುಷ್ ಅಧಿಕಾರಿ ಖುದ್ದು ಸಚಿವರನ್ನು ಭೇಟಿ ಮಾಡಿ ಉದ್ದೇಶಪೂರ್ವಕವಾಗಿ ಆರೋಪಗಳನ್ನು ಹೊರಿಸಲಾಗುತ್ತಿದ್ದು, ತಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಲಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಕೆಲವರು ಆಸ್ಪತ್ರೆಯ ಅಭಿವೃದ್ಧಿ ಕಾರ್ಯಕ್ಕೆ ಅಡ್ಡಿಯಾಗಿದ್ದಾರೆ. ಅನಗತ್ಯ ದೂರುಗಳನ್ನು ಸಲ್ಲಿಸಿ ಅಡ್ಡಿಪಡಿಸುತ್ತಿದ್ದಾರೆ. ಸಿಎಸ್‌ಆರ್ ಯೋಜನೆಯ ಮೂಲಕ ಹಣವನ್ನು ತಂದು ಆಯುಷ್ ಆಸ್ಪತ್ರೆಗೆ ಮೂಲಸೌಕರ್ಯ ಒದಗಿಸಲು ಶ್ರಮ ವಹಿಸಲಾಗಿತ್ತು. ಆದರೆ ಈ ಮೂವರು ತಮ್ಮ ವೈಯಕ್ತಿಕ ಹಿತಾಸಕ್ತಿಯ ರಕ್ಷಣೆಗಾಗಿ ಸರ್ಕಾರಿ ಕಾರ್ಯಕ್ಕೆ ಅಡ್ಡಿ ಉಂಟುಮಾಡಿದ್ದಾರೆ ಎಂದು ದೂರಿದ್ದರು.

ಯೋಜನೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪವು ಕೇಳಿಬಂದಿತ್ತು. ಆರೋಪ ಪ್ರತ್ಯಾರೋಪಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರಕರಣದ ಕೂಲಂಕುಷ ತನಿಖೆಗೆ ಆರೋಗ್ಯ ಸಚಿವರು ಆದೇಶಿಸಿದ್ದಾರೆ.‌

ಸೂಕ್ತ ಕಾನೂನು ಕ್ರಮಕ್ಕೆ ಸೂಚನೆ

ಆರೋಪದಲ್ಲಿ ಸತ್ಯಾಸತ್ಯತೆ ಇದೆಯೇ ಅಥವಾ ಉದ್ದೇಶಪೂರ್ವಕವಾಗಿ ದೂರು ಸಲ್ಲಿಸಲಾಗಿದೆಯೇ ಎಂಬುದರ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿ ವರದಿ ಸಲ್ಲಿಸಲು ಆದೇಶದಲ್ಲಿ ಹೇಳಲಾಗಿದೆ. ಅಲ್ಲದೇ ಪ್ರಕರಣದಲ್ಲಿ ಆಯುಷ್ ಅಧಿಕಾರಿಗಳು ತಪ್ಪು ಎಸಗಿದ್ದರೆ ಸೂಕ್ತ ಶಿಸ್ತುಕ್ರಮಕ್ಕೆ ಪ್ರಸ್ತಾವನೆ ಸಲ್ಲಿಸಿ. ಒಂದು ವೇಳೆ ಆಯುಷ್ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸುವ ದುರುದ್ದೇಶದಿಂದ ದೂರುದಾರರು ಆರೋಪಗಳನ್ನು ಮಾಡಿದ್ದಾರೆ ಎಂದು ಕಂಡುಬಂದರೆ, ಸೂಕ್ತ ಕಾನೂನು ಕ್ರಮಕ್ಕೆ ಮುಂದಾಗುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಮ್ಮ ಆದೇಶದಲ್ಲಿ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ ಅವರಿಗೆ ಸೂಚಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ