logo
ಕನ್ನಡ ಸುದ್ದಿ  /  ಕರ್ನಾಟಕ  /  Bengaluru News: ಕರ್ನಾಟಕದ 219 ಸರ್ಕಾರಿ ಆಸ್ಪತ್ರೆಗಳಲ್ಲಿ 800 ಡಯಾಲಿಸಿಸ್ ಯಂತ್ರಗಳ ಅಳವಡಿಕೆ; ಏಕ ಬಳಕೆಯ ಡಯಾಲೈಸರ್ ಉದ್ಘಾಟನೆ

Bengaluru News: ಕರ್ನಾಟಕದ 219 ಸರ್ಕಾರಿ ಆಸ್ಪತ್ರೆಗಳಲ್ಲಿ 800 ಡಯಾಲಿಸಿಸ್ ಯಂತ್ರಗಳ ಅಳವಡಿಕೆ; ಏಕ ಬಳಕೆಯ ಡಯಾಲೈಸರ್ ಉದ್ಘಾಟನೆ

Umesh Kumar S HT Kannada

Jan 28, 2024 09:32 AM IST

google News

ಬೆಂಗಳೂರು ಮಲ್ಲೇಶ್ವರಂನ ಕೆ ಸಿ ಜನರಲ್ ಆಸ್ಪತ್ರೆಯಲ್ಲಿ ನೂತನ ಡಯಾಲಿಸಿಸ್ ಕೇಂದ್ರ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ.

  • Bengaluru News: ಕರ್ನಾಟಕದ ಆಯ್ದ ಸರ್ಕಾರಿ ಆಸ್ಪತ್ರೆಗಳಲ್ಲಿರುವ 219 ಡಯಾಲಿಸಿಸ್ ಕೇಂದ್ರಗಳಲ್ಲಿ ಏಕ ಬಳಕೆಯ ಡಯಾಲೈಸರ್‌ಗಳನ್ನು ಪರಿಚಯಿಸಿರುವ ಸರ್ಕಾರ, 800 ಡಯಾಲಿಸಿಸ್ ಯಂತ್ರಗಳ ಅಳವಡಿಸಿದೆ. ಬಡವರಿಗೆ ಉಚಿತವಾಗಿ ಸಿಗಲಿರುವ ಈ ಸೇವೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ (ಜ.27) ಚಾಲನೆ ನೀಡಿದರು.

ಬೆಂಗಳೂರು ಮಲ್ಲೇಶ್ವರಂನ ಕೆ ಸಿ ಜನರಲ್ ಆಸ್ಪತ್ರೆಯಲ್ಲಿ ನೂತನ ಡಯಾಲಿಸಿಸ್ ಕೇಂದ್ರ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ.
ಬೆಂಗಳೂರು ಮಲ್ಲೇಶ್ವರಂನ ಕೆ ಸಿ ಜನರಲ್ ಆಸ್ಪತ್ರೆಯಲ್ಲಿ ನೂತನ ಡಯಾಲಿಸಿಸ್ ಕೇಂದ್ರ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ. (CMO)

ಬೆಂಗಳೂರು: ಕರ್ನಾಟಕದ ಆಯ್ದ 219 ಸರ್ಕಾರಿ ಆಸ್ಪತ್ರೆಗಳ ಡಯಾಲಿಸಿಸ್ ಕೇಂದ್ರಗಳಲ್ಲಿ ಏಕ ಬಳಕೆಯ ಡಯಾಲೈಸರ್ ಪರಿಚಯಿಸಲಾಗಿದ್ದು, ಮತ್ತು 800 ಡಯಾಲಿಸಿಸ್ ಯಂತ್ರಗಳನ್ನು ಅಳವಡಿಸಲಾಗಿದೆ. ಕರ್ನಾಟಕದಲ್ಲಿ ಡಯಾಸಿಸ್ ಮಾಡಿಸಿಕೊಳ್ಳುವ ಬಡವರ ಸಂಖ್ಯೆ ಹೆಚ್ಚಿರುವ ಕಾರಣ ಈ ಉಪಕ್ರಮ ಅವರಿಗೆ ಸಹಕಾರಿಯಾಗಲಿದೆ ಎಂದು ಸರ್ಕಾರ ತಿಳಿಸಿದೆ.

ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಏಕ ಬಳಕೆಯ ಡಯಾಲೈಸರ್ ಬಿಡುಗಡೆ ಮತ್ತು ನೂತನ ಉಚಿತ ಡಯಾಲಿಸಿಸ್ ಸೇವೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ (ಜ.27) ಚಾಲನೆ ನೀಡಿದರು.

ಇದೇ ವೇಳೆ ಮಾತಾನಾಡಿದ ಅವರು, ಬಡವರಿಗೆ ಹೆಚ್ಚು ಮುತುವರ್ಜಿಯಿಂದ ಗುಣಮಟ್ಟದ ವೈದ್ಯಕೀಯ ಸೇವೆಯನ್ನು ನೀಡಬೇಕು. ನಮ್ಮ ಸಮಾಜದಲ್ಲಿ ಬಡವರೇ ಹೆಚ್ಚಿದ್ದಾರೆ ಹಾಗಾಗಿ ಸಮಾಜದ ದೃಷ್ಟಿಯಿಂದ ಇದು ಒಳ್ಳೆಯದು ಎಂದು ತಿಳಿಸಿದರು.

219 ಕೇಂದ್ರಗಳಲ್ಲಿ 800 ಡಯಾಲಿಸಿಸ್ ಯಂತ್ರ

ಡಯಾಲಿಸಿಸ್ ಪ್ರಕ್ರಿಯೆ ಬಡವರ ಪಾಲಿಗೆ ದೊಡ್ಡ ಹೊರೆ. ಅನೇಕರು ವಾರಕ್ಕೆ ಮೂರು ಬಾರಿ ಡಯಾಲಿಸಿಸ್‌ ಮಾಡಿಸಿಕೊಳ್ಳಬೇಕಾಗುತ್ತದೆ. ಒಮ್ಮೆ ಡಯಾಲಿಸಿಸ್‌ ಮಾಡಿಸಿದರೆ 2000 ರೂಪಾಯಿಗಿಂತ ಹೆಚ್ಚು ಖರ್ಚು ಬರುತ್ತದೆ. ಬಡವರಿಗೆ ಇಷ್ಟು ಮೊತ್ತ ನೀಡಿ ಡಯಾಲಿಸಿಸ್ ಮಾಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಕಿಡ್ನಿ ವಿಫಲವಾದಾಗ ಡಯಾಲಿಸಿಸ್ ಮಾಡುವುದು ಒಂದೇ ಮಾರ್ಗ. ಅದಕ್ಕಾಗಿ ಸರ್ಕಾರ ಬಡವರಿಗೆ ಸಹಾಯಮಾಡಬೇಕೆಂಬ ಉದ್ದೇಶದಿಂದ ಡಯಾಲಿಸಿಸ್ ಸೇವೆಗಳನ್ನು ಉಚಿತವಾಗಿ ನೀಡುತ್ತಿದೆ.

ಸಣ್ಣ ವಯಸ್ಸಿನವರಲ್ಲೂ ಕಿಡ್ನಿ ಸಮಸ್ಯೆ ಇರುವುದು ಗಮನಕ್ಕೆ ಬಂದಿದೆ. ಹೀಗಾಗಿ, ಜಿಲ್ಲಾ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಈ ಡಯಾಲಿಸಿಸ್‌ ಸೇವೆ ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಪ್ರಯತ್ನ ಮುಂದುವರಿಸಿದೆ. ಸದ್ಯ ರಾಜ್ಯದಲ್ಲಿ 219 ಡಯಾಲಿಸಿಸ್ ಕೇಂದ್ರಗಳಿವೆ . 800 ಯಂತ್ರಗಳನ್ನು ಈ ಕೇಂದ್ರಗಳಲ್ಲಿ ಅಳವಡಿಸುವ ಕೆಲಸವಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಏಕಬಳಕೆಯ ಡಯಾಲೈಸರ್‌ಗಳನ್ನು ಪರಿಚಯಿಸಲಾಗಿದೆ. ಇದರಿಂದ ಸೋಂಕು ಕಡಿಮೆಮಾಡಬಹುದಾಗಿದೆ. ಡಯಾಲಿಸಿಸ್ ಕೇಂದ್ರಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಡಯಾಲಿಸಿಸ್‌ ಪ್ರಕ್ರಿಯೆಗೆ ಅನುದಾನ ಒದಗಿಸುತ್ತಿದೆ. ರಾಜ್ಯ ಸರ್ಕಾರ ಶೇ 60 ರಷ್ಟು ಹಾಗೂ ಕೇಂದ್ರ ಸರ್ಕಾರ ಶೇ 40 ರಷ್ಟು ಅನುದಾನ ನೀಡುತ್ತಿದೆ. ಆದರೆ, ಹೆಚ್ಚು ಅನುದಾನ ಒದಗಿಸುವುದು ರಾಜ್ಯ ಸರ್ಕಾರವಾದರೂ, ಹೆಸರು ಮಾತ್ರ ಪ್ರಧಾನಮಂತ್ರಿ ಡಯಾಲಿಸಿಸ್ ಎಂದು ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ತೋರಿದರು.

ಅಸಮಾನತೆ ಹೋಗಲಾಡಿಸಲು ಪ್ರಾಮಾಣಿಕ ಪ್ರಯತ್ನ

ಸಮಾಜದಲ್ಲಿ ಅಸಮಾನತೆ ಇದ್ದು ಬಹಳ ಜನ ಕಷ್ಟದಲ್ಲಿ ಕೈತೊಳೆಯುವ ಪರಿಸ್ಥಿತಿ ಇದೆ. ಅಸಮಾನತೆ ಹೋಗಲಾಡಿಸಲು ನಮ್ಮ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಅಸಮಾನತೆ ಹೋಗಲಾಡಿಸಲು 5 ಗ್ಯಾರಂಟಿ ಕಾರ್ಯಕ್ರಮಗಳು ಪ್ರಮುಖವಾದವು. ಶಕ್ತಿ ಯೋಜನೆಯಡಿ 141 ಕೋಟಿ ಮಹಿಳೆಯರು ಉಚಿತವಾಗಿ ಸರ್ಕಾರಿ ಬಸ್ಸುಗಳಲ್ಲಿ ಪ್ರಯಾಣ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿವರಿಸಿದರು.

5 ಗ್ಯಾರಂಟಿ: ಕರ್ನಾಟಕದಲ್ಲಿ 1. 18 ಲಕ್ಷ ಮಹಿಳೆಯರಿಗೆ ಪ್ರತಿ ತಿಂಗಳು 2,000 ರೂಪಾಯಿ, 5 ಕೆಜಿ ಅಕ್ಕಿಗೆ 170 ರೂಪಾಯಿ, 200 ಯೂನಿಟ್‌ವರೆಗೆ ಉಚಿತ ವಿದ್ಯುತ್, ಯುವನಿಧಿ ಕಾರ್ಯಕ್ರಮ ನಿರುದ್ಯೋಗಿ ಯುವಜನರಿಗಾಗಿ ಜಾರಿ ಮಾಡಲಾಗಿದೆ. ಜನರ ಖರೀದಿ ಶಕ್ತಿಯನ್ನು ಹೆಚ್ಚಿಸಲು ಈ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

150 ಕೋಟಿ ರೂ ವೆಚ್ಚದಲ್ಲಿ ಮೂಲಭೂತ ಸೌಕರ್ಯ ವೃದ್ಧಿ: ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ತಾಯಿ ಮಕ್ಕಳ ಆಸ್ಪತ್ರೆ ಆಗಬೇಕು, ಶವಾಗಾರ, ಅಡುಗೆ ಮನೆ, ಜೈವಿಕ ತ್ಯಾಜ್ಯ ಕೊಠಡಿ, ಮೂಲಭೂತ ಸೌಕರ್ಯಗಳನ್ನು 150 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುವುದು. ಇದನ್ನು ಸಚಿವ ಸಂಪುದಲ್ಲಿಟ್ಟು ಒಪ್ಪಿಗೆ ಪಡೆಯಲಾಗುವುದು. ಡಯಾಲಿಸಿಸ್ ಸೇವೆಯನ್ನು ಹೆಚ್ಚು ಮಾಡುವ ಕೆಲಸ ಮಾಡುತ್ತೇವೆ. ಆರೋಗ್ಯ ಇಲಾಖೆಯನ್ನು ಸಚಿವ ದಿನೇಶ್ ಗುಂಡೂರಾವ್ ಸುಧಾರಣೆ ಮಾಡುತ್ತಾರೆ ಎಂಬ ನಂಬಿಕೆ ಇದೆ ಎಂದರು.

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಹಿರಿಯ ಅಧಿಕಾರಿಗಳು ಇದೇ ವೇಳೆ ಸ್ಥಳದಲ್ಲಿ ಉಪಸ್ಥಿತರಿದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ