Chitradurga News: ಹಿರಿಯೂರು ಬಳಿ ಕೆಕೆಆರ್‌ಟಿಸಿ ಬಸ್ ಅಪಘಾತ: ಐವರು ಪ್ರಯಾಣಿಕರ ದುರ್ಮರಣ
Sep 11, 2023 02:00 PM IST
ಚಿತ್ರದುರ್ಗ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಗೆ ಕೆಕೆಆರ್‌ಟಿಸಿ ಬಸ್ ಡಿಕ್ಕಿಯಾಗಿ ಐವರು ಸಾವಿಗೀಡಾಗಿದ್ದಾರೆ,
- KKRTC Bus Accident ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ150(ಎ)ರಲ್ಲಿ ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ಲಾರಿಗೆ ಡಿಕ್ಕಿಯಾಗಿ ಐವರು ಮೃತಪಟ್ಟಿದ್ಧಾರೆ.
ಚಿತ್ರದುರ್ಗ: ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ಲಾರಿಗೆ ಡಿಕ್ಕಿ ಹೊಡೆದು ಐವರು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಗೊಲ್ಲರಹಳ್ಳಿ ಬಳಿ ಸೋಮವಾರ ಬೆಳಿಗ್ಗೆ ನಡೆದಿದೆ.
ಘಟನೆಯಲ್ಲಿ ಬೆಂಗಳೂರಿನ ಪಾರ್ವತಮ್ಮ(45), ರಾಯಚೂರು ಜಿಲ್ಲೆ ಮಸ್ಕಿಯ ರಮೇಶ್(40), ಅಲಪುರದ ರವಿ(23) ಹಾಗೂ ಮಾನ್ವಿಯ ಐದು ವರ್ಷದ ಬಾಲಕ ನರಸಣ್ಣ ಎಂಬುವವರು ಮೃತಪಟ್ಟಿದ್ದು. ಒಂಬತ್ತು ಪ್ರಯಾಣಿಕರು ಗಾಯಗೊಂಡಿದ್ದಾರೆ. ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಯಚೂರಿನ ಮಾಬಮ್ಮ(35) ಮೃತಪಟ್ಟಿದ್ದಾರೆ. ಆರು ಮಂದಿಗೆ ಚಿತ್ರದುರ್ಗ ಜಿಲ್ಲಾಸ್ಪತ್ರೆ, ಮೂವರಿಗೆ ಚಳ್ಳಕೆರೆ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಲಾರಿ ಚಾಲಕ ಪರಾರಿಯಾಗಿದ್ದಾನೆ
ರಾಯಚೂರಿನಿಂದ ಬೆಂಗಳೂರಿಗೆ ಹೊರಟಿದ್ದ ಕೆಕೆಆರ್‌ಟಿಸಿ ಬಸ್ ಹಿರಿಯೂರು ತಾಲ್ಲೂಕಿನ ಗೊಲ್ಲರಹಳ್ಳಿ ಬಳಿ ಲಾರಿಗೆ ಡಿಕ್ಕಿ ಹೊಡೆದಿದೆ. ಚಾಲಕ ಓವರ್‌ಟೇಕ್ ಮಾಡಲು ಹೋಗಿ ನಿಯಂತ್ರಣ ತಪ್ಪಿ ಸರಕು ಸಾಗಣೆ ಮಾಡುತ್ತಿದ್ದ ಲಾರಿಗೆ ಗುದ್ದಿದ್ದಾನೆ. ಅಪಘಾತದ ಭೀಕರತೆ ಹೇಗಿತ್ತು ಎಂದರೆ ಬಸ್‌ನ ಮುಂಭಾಗ ಹಾಗೂ ಮಧ್ಯ ಭಾಗ ಸಂಪೂರ್ಣ ನುಜ್ಜುಗುಜ್ಜಾಗಿ ಹೋಗಿದೆ. ಎಡಭಾಗದಲ್ಲಿ ಕುಳಿತಿದ್ದವರು ಮೃತಪಟ್ಟಿದ್ದು. ಚಾಲಕ ಸಹಿತ ಇತರೆ ಪ್ರಯಾಣಿಕರು ಪಾರಾಗಿದ್ಧಾರೆ. ನಾಲ್ವರು ಸ್ಥಳದಲ್ಲೇ ಮೃತಪಟ್ಟರೆ ಇನ್ನೊಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ಧಾರೆ ಎಂದು ದೂರು ದಾಖಲಿಸಿಕೊಂಡಿರುವ ಐಮಂಗಲ ಪೊಲೀಸರು ತಿಳಿಸಿದ್ದಾರೆ.
ಬಸ್‌ನಲ್ಲಿ ಒಟ್ಟು 51 ಪ್ರಯಾಣಿಕರು ಸಂಚರಿಸುತ್ತಿದ್ದರು. ಎಡ ಭಾಗದಲ್ಲಿ ಕುಳಿತದವರಿಗೆ ಅನಾಹುತವಾಗಿದೆ. ಬಸ್ ಚಾಲಕನ ನಿರ್ಲಕ್ಷ್ಯದಿಂದಲೇ ಘಟನೆ ನಡೆದಿದೆ ಎನ್ನುವ ಕಾರಣದಿಂದ ಸಾರಿಗೆ ಬಸ್ ಚಾಲಕನ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಐಪಿಸಿ 304ಎ ಅಡಿ ನಿರ್ಲಕ್ಷ್ಯ ವಾಹನ ಚಾಲನೆಯಿಂದ ಜೀವ ಹಾನಿ ಮಾಡಿದ ಆರೋಪದ ಪ್ರಕರಣ ದಾಖಲಿಸಿದ್ದು ತನಿಖೆ ಕೈಗೊಂಡಿದ್ದೇವೆ ಎಂದು ಸರ್ಕಲ್ ಇನ್ಸ್ ಪೆಕ್ಟರ್ ಬಿ.ಕಾಂತರಾಜು ತಿಳಿಸಿದ್ದಾರೆ.
ಅಲೋಕ್‌ಕುಮಾರ್ ಟ್ವೀಟ್
ಅಪಘಾತದ ಭೀಕರತೆಯ ಚಿತ್ರಗಳೊಂದಿಗೆ ಕರ್ನಾಟಕ ಪೊಲೀಸ್ ಇಲಾಖೆಯ ಸಂಚಾರ ಎಡಿಜಿಪಿ ಅಲೋಕ್‌ಕುಮಾರ್ ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ಧಾರೆ.
ವಾಹನ ಚಾಲಕನ ನಿರ್ಲಕ್ಷ್ಯತೆಯಿಂದಲೇ ಈ ಅಪಘಾತವಾಗಿದೆ. ಹೆದ್ದಾರಿಗಳಲ್ಲಿ ವಾಹನ ಹಿಂದಿಕ್ಕಲೆಂದೇ ವೇಗವಾಗಿ ಚಲಿಸಿ ಪ್ರಯಾಣಿಕರು ಜೀವ ಕಳೆದುಕೊಂಡಿದ್ದಾರೆ. ಬಸ್ ಚಾಲಕನ ವಿರುದ್ದ ಮೊಕದ್ದಮೆ ದಾಖಲಿಸಲಾಗಿದ್ದು. ಆತನ ಡಿಎಲ್ ರದ್ದುಪಡಿಸಲಾಗುವುದು ಎಂದು ಅಲೋಕ್ ಕುಮಾರ್ ಹೇಳಿದ್ದಾರೆ.
ಸತತ ಅಪಘಾತ
ವಾರದ ಹಿಂದೆಯಷ್ಟೇ ಚಿತ್ರದುರ್ಗ ಬಳಿ ಇದೇ ರೀತಿ ವಾಹನ ಡಿಕ್ಕಿಯಾಗಿ ನಾಲ್ವರು ಪ್ರಯಾಣಿಕರು ಮೃತಪಟ್ಟಿದ್ದರು. ಹೊಸಪೇಟೆಯಿಂದ ತುಮಕೂರಿಗೆ ಹೋಗುತ್ತಿದ್ದ ಕಾರು ನಿಂತಿದ್ದ ವಾಹನಕ್ಕೆ ಡಿಕ್ಕಿ ಹೊಡೆದಿತ್ತು. ಹೆದ್ದಾರಿಯಲ್ಲಿ ಅತಿವೇಗದಿಂದ ವಾಹನ ಚಲಾಯಿಸುವಾಗ ಅಪಘಾತಗಳು ಸಂಭವಿಸುತ್ತಿದ್ದು, ಪೊಲೀಸರು ಸಂಚಾರ ನಿಯಂತ್ರಣದ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದು ಸಾರ್ಜನಿಕರು ಒತ್ತಾಯಿಸಿದ್ಧಾರೆ.