logo
ಕನ್ನಡ ಸುದ್ದಿ  /  ಕರ್ನಾಟಕ  /  Hoskote News: ಹನುಮ ಜಯಂತಿ ಪ್ರಸಾದ ಲಡ್ಡು ಸೇವಿಸಿದ್ದ ಮಹಿಳೆ ಸಾವು; ಪ್ರಸಾದ ತಿಂದಿದ್ದ 100ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ

Hoskote News: ಹನುಮ ಜಯಂತಿ ಪ್ರಸಾದ ಲಡ್ಡು ಸೇವಿಸಿದ್ದ ಮಹಿಳೆ ಸಾವು; ಪ್ರಸಾದ ತಿಂದಿದ್ದ 100ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ

HT Kannada Desk HT Kannada

Dec 25, 2023 04:10 PM IST

google News

Hoskote News: ಹನುಮ ಜಯಂತಿ ಪ್ರಸಾದ ಲಡ್ಡು ಸೇವಿಸಿದ್ದ ಮಹಿಳೆ ಸಾವು

    • ದೇವಸ್ಥಾನದ ಪ್ರಸಾದ ಸೇವಿಸಿ ಅಸ್ವಸ್ಥರಾಗಿ ಹೊಸಕೋಟೆಯ ಸಿಲಿಕಾನ್ ಸಿಟಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೊಬ್ಬರು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇನ್ನೂ 15 ಮಂದಿ ಆರೋಗ್ಯ ಗಂಭೀರವಾಗಿದೆ ಎಂದು ಹೇಳಲಾಗಿದೆ. (ವರದಿ: ಎಚ್‌. ಮಾರುತಿ)
Hoskote News: ಹನುಮ ಜಯಂತಿ ಪ್ರಸಾದ ಲಡ್ಡು ಸೇವಿಸಿದ್ದ ಮಹಿಳೆ ಸಾವು
Hoskote News: ಹನುಮ ಜಯಂತಿ ಪ್ರಸಾದ ಲಡ್ಡು ಸೇವಿಸಿದ್ದ ಮಹಿಳೆ ಸಾವು (Photo: just kannada)

ಹೊಸಕೋಟೆ: ದೇವಸ್ಥಾನದ ಪ್ರಸಾದ ಸೇವಿಸಿ ಅಸ್ವಸ್ಥರಾಗಿ ಹೊಸಕೋಟೆಯ ಸಿಲಿಕಾನ್ ಸಿಟಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೊಬ್ಬರು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇನ್ನೂ 15 ಮಂದಿ ಆರೋಗ್ಯ ಗಂಭೀರವಾಗಿದೆ ಎಂದು ಹೇಳಲಾಗಿದೆ. ಹೊಸಕೋಟೆಯ ಕಾವೇರಿನಗರದ ನಿವಾಸಿ 60 ವರ್ಷದ ಸಿದ್ದಗಂಗಮ್ಮ ಮೃತದುರ್ದೈವಿ.

ಶನಿವಾರ ಹನುಮ ಜಯಂತಿ ಹಿನ್ನೆಲೆಯಲ್ಲಿ ಹೊಸಕೋಟೆಯ ವೆಂಕಟರಮಣಸ್ವಾಮಿ, ಊರುಬಾಗಿಲು ಆಂಜನೇಯ, ಕೋಟೆ ಆಂಜನೇಯಸ್ವಾಮಿ ದೇವಾಲಯದಲ್ಲಿ ಭಕ್ತರು ಪುಳಿಯೋಗರೆ, ಪಾಯಸ, ಲಡ್ಡು ಸೇವಿಸಿದ್ದರು. ದೇವಾಲಯಗಳಲ್ಲಿ ಪ್ರಸಾದ ತಿಂದಿದ್ದ ಭಕ್ತರು ರಾತ್ರಿಯಿಂದಲೇ ವಾಂತಿ ಭೇದಿಯಿಂದ ಅಸ್ವಸ್ಥಗೊಂಡಿದ್ದರು. ಇವರನ್ನು ಹೊಸಕೋಟೆ, ಕೋಲಾರ ಮತ್ತಿತರ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದ ಅಸ್ವಸ್ಥರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಆದರೂ ಪ್ರಸಾದ ಸೇವಿಸಿದವರಲ್ಲಿ 15 ಮಂದಿಯ ಆರೋಗ್ಯ ಗಂಭೀರವಾಗಿದೆ. ಇವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಿದ್ದಗಂಗಮ್ಮ ಅವರು ಯಾವುದೇ ದೇವಸ್ಥಾನಕ್ಕೆ ಹೋಗಿರಲಿಲ್ಲ. ಅವರ ಪತಿ ಶಿವಣ್ಣ ತಂದು ಕೊಟ್ಟ ಲಾಡು ತಿಂದಿದ್ದರು. ಬೆಳಿಗ್ಗೆಯಿಂದಲೇ ಅವರು ವಾಂತಿ ಭೇದಿಯಿಂದ ಬಳಲುತ್ತಿದ್ದರು.

ಕೂಡಲೇ ಅವರನ್ನು ಸಿಲಿಕಾನ್ ಸಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಿದ್ದಗಂಗಮ್ಮ ಮೃತಪಟ್ಟಿದ್ದಾರೆ. ಹೊಸಕೋಟೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ. ದೇವಾಲಯಗಳಲ್ಲಿ ಪ್ರಸಾದ ತಿಂದಿದ್ದ 100ಕ್ಕೂ ಹೆಚ್ಚು ಭಕ್ತರು ರಾತ್ರಿಯಿಂದಲೇ ವಾಂತಿ ಭೇದಿಯಿಂದ ಅಸ್ವಸ್ಥಗೊಂಡಿದ್ದರು ಎಂದು ಗೊತ್ತಾಗಿದೆ. ಸಿಲಿಕಾನ್ ಸಿಟಿ ಆಸ್ಪತ್ರೆಯಲ್ಲಿ 30 ಅಸ್ವಸ್ಥರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಶ್ರೀನಿವಾಸ ನರ್ಸಿಂಗ್ ಹೋಮ್ ನಲ್ಲಿ 21 ಮತ್ತು ಹೊಸಕೋಟೆ ಸರ್ಕಾರಿ ಆಸ್ಪತ್ರೆಯಲ್ಲಿ 7 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೂ 70ಕ್ಕೂ ಹೆಚ್ಚು ಜನ ಚಿಕಿತ್ಸೆ ಪಡೆದು

ಯಾವುದೇ ಅಪಾಯ ಇಲ್ಲದೆ ಮನೆಗೆ ಮರಳಿದ್ದಾರೆ. ಸಿಲಿಕಾನ್ ಸಿಟಿ ಆಸ್ಪತ್ರೆಗೆ ಹೆಚ್ಚುವರಿ ಎಸ್ ಪಿ ಪುರುಷೋತ್ತಮ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೊಸಕೋಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಕೈಗೊಂಡಿದ್ದಾರೆ.

ಲಾಡು ತಯಾರಿಸುವಾಗ ಸುರಕ್ಷತಾ ಕ್ರಮಗಳನ್ನು ಕೈಗೊಂಡಿರಲಿಲ್ಲ ಎಂದು ಊಹಿಸಲಾಗಿದೆ. ಸಾಮಾನ್ಯವಾಗಿ ದೀರ್ಘ ಕಾಲದವರೆಗೆ ಪಾತ್ರೆಗಳನ್ನು ಬಳಸದಿದ್ದರೆ ತುಕ್ಕು ಹಿಡಿಯುತ್ತವೆ. ಕಲಾಯಿ ಮಾಡಿಯೇ ಬಳಸಬೇಕು. ಹಾಗೆ ಮಾಡಿಲ್ಲದಿದ್ದರೆ ಆಹಾರ ಕಲುಷಿತವಾಗಿರುವ ಸಾಧ್ಯತೆಗಳು ಹೆಚ್ಚು. ಇಲ್ಲಿಯೂ ಹಾಗೆಯೇ ಆಗಿರಬಹುದು ಎಂದು ಶಂಕಿಸಲಾಗಿದೆ. ಆದರೆ ನಿಖರ ಕಾರಣ ತಿಳಿದು ಬಂದಿಲ್ಲ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ