ಹುಣಸೂರು: ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಸಾವು, ಪೋಷಕರಿಗೂ ತಿಳಿಸದೆ ಅಂತ್ಯಕ್ರಿಯೆಗೆ ಅಣಿಯಾಗಿದ್ದ ಪತಿ!
Oct 31, 2024 04:10 PM IST
ಮೃತ ನಿತ್ಯ ನಿರ್ಮಲ
- Dowry Harassment Case: ವರದಕ್ಷಿಣೆ ಕಿರುಕುಳ ನೀಡಿದ ಕಾರಣಕ್ಕೆ ಗೃಹಿಣಿಯೊಬ್ಬರು ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕೂಡ್ಲೂರಿನಲ್ಲಿ ನಡೆದಿದೆ. ಆದರೆ, ಆಕೆಯ ಗಂಡ ಪೋಷಕರಿಗೂ ತಿಳಿಸದೆ ಅಂತ್ಯಕ್ರಿಯೆಗೆ ಅಣಿಯಾಗಿದ್ದ. ಇದೀಗ ಆತ ಮತ್ತು ಆತನ ಕುಟುಂಬ ವಿರುದ್ಧ ದೂರು ದಾಖಲಾಗಿದೆ.
ಮೈಸೂರು: ಎರಡೂವರೆ ವರ್ಷಗಳ ಹಿಂದೆ ಮದುವೆಯಾಗಿದ್ದ ಗೃಹಿಣಿಯೊಬ್ಬರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ವರದಕ್ಷಿಣೆಗಾಗಿ (Dowry Harassment Case) ಕೊಲೆ ಮಾಡಿ ಮಾಡಿದ್ದಾರೆ ಎಂದು ಆರೋಪಿಸಿ ಅಳಿಯನ ಕುಟುಂಬದ ವಿರುದ್ದ ದೂರು ನೀಡಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು (Hunsuru) ತಾಲೂಕಿನ ಕೂಡ್ಲೂರಿನಲ್ಲಿ ನಡೆದಿದೆ. ಅಂತೋಣಿ ಕಿರಣ್ ಪತ್ನಿ ನಿತ್ಯ ನಿರ್ಮಲ (25) ಸಾವನ್ನಪ್ಪಿದವರು. ಇವರಿಗೆ ಒಂದು ವರ್ಷದ ಮಗು ಇದೆ. ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಸಣ್ಣೇನಹಳ್ಳಿಯ ತೆರೇಸಮ್ಮರ 2ನೇ ಪುತ್ರಿಯನ್ನು ಎರಡೂವರೆ ವರ್ಷಗಳ ಹಿಂದೆ ಕೂಡ್ಲೂರಿನ ಕಿರಣ್‌ಗೆ ಮದುವೆ ಮಾಡಿ ಕೊಟ್ಟಿದ್ದರು.
ಕೆಲವು ದಿನಗಳಿಂದ ಪತಿ ಕಿರಣ್, ನನ್ನ ಮದುವೆ ವೇಳೆ ವರದಕ್ಷಿಣೆ ಕೊಟ್ಟಿಲ್ಲ. ಬೇರೆಯವರನ್ನು ಮದುವೆಯಾಗಿದ್ದರೆ ಲಕ್ಷಾಂತರ ವರದಕ್ಷಿಣೆ ಸಿಗುತ್ತಿತ್ತು. ಮನೆಕಟ್ಟುತ್ತಿದ್ದೇನೆ, ಈಗಲಾದರೂ ತವರು ಮನೆಯಿಂದ ಹಣ ತರುವಂತೆ ಪತ್ನಿಗೆ ಕಿರುಕುಳ ನೀಡುತ್ತಿದ್ದ ಎಂದು ಕುಟುಂಬದವರು ತಿಳಿಸಿದ್ದಾರೆ. ಈ ಬಗ್ಗೆ ಎರಡು ಮೂರು ಬಾರಿ ನ್ಯಾಯ ಪಂಚಾಯ್ತಿಯೂ ನಡೆದಿತ್ತು. ಮಗಳನ್ನು ಸಮಾಧಾನ ಮಾಡಿ ಕಳುಹಿಸಿಕೊಟ್ಟಿದ್ದರು. ಇತ್ತೀಚೆಗೆ ಪತಿಯ ಕಿರುಕುಳ ಹೆಚ್ಚಾಗಿತ್ತು. ಈ ಬಗ್ಗೆ ತಾಯಿ ಜೊತೆಗೆ ತನ್ನ ಸಂಕಷ್ಟವನ್ನು ನಿರ್ಮಲ ಹೇಳಿಕೊಂಡಿದ್ದಳು. ಆದರೆ ಸರ್ಕಾರಿ ಶಾಲೆಯಲ್ಲಿ ಅಡುಗೆ ಕೆಲಸ ಮಾಡುವ ಬಡವಿ ತಾಯಿ ತೆರೇಸಮ್ಮ ಏನೂ ಮಾಡಲಾಗದೆ ಊರಿನವರಿಗೆ ಗೊತ್ತಾದರೆ ಮರ್ಯಾದೆ ಹೋಗುತ್ತದೆ ಎಂದು ಅಂಜಿ ಮಗಳನ್ನು ಸಮಾಧಾನಿಸುತ್ತಲೇ ಬಂದಿದ್ದರು.
ರಕ್ಷಿಸುವಂತೆ ಕೋರಿ ತಾಯಿಗೆ ಪೋನ್ ಕರೆ
ಮಂಗಳವಾರ ಬೆಳಿಗ್ಗೆ 10ಗಂಟೆ ನಿರ್ಮಲ ತನ್ನ ತಾಯಿಗೆ ಪೋನ್ ಮಾಡಿ ನನಗೆ ಹಣ ತರುವಂತೆ ಚಿತ್ರ ಹಿಂಸೆ ನೀಡುತ್ತಿದ್ದಾರೆ. ಸಾಯಿಸುತ್ತೇನೆಂದು ಗಂಡ ಹೊಡೆದಿದ್ದಾರೆ. ಬಂದು ನನ್ನನ್ನು ಕರೆದುಕೊಂಡು ಹೋಗುವಂತೆ ಹೇಳಿದ್ದಳು. ಶಾಲೆಯಲ್ಲಿ ಬಿಸಿಯೂಟ ತಯಾರಿ ಮಾಡುತ್ತಿದ್ದ ತೆರೇಸಮ್ಮನವರು ಮಗಳಿಗೆ ಸಮಾಧಾನ ಹೇಳಿ. ಆಮೇಲೆ ಬರುತ್ತೇನೆ ಎಂದು ಹೇಳಿ ಪೋನ್ ಕಟ್ ಮಾಡಿದ್ದರು. ಶಾಲೆಯ ಮಧ್ಯಾಹ್ನದ ಅಡುಗೆ ಕೆಲಸ ಮುಗಿದ ನಂತರ ಮಗಳಿಗೆ ಪೋನ್ ಮಾಡಿದರೆ ಸ್ವಿಚ್‌ಆಫ್ ಆಗಿತ್ತು. ಗಾಬರಿಯಾಗಿ ಕೂಡ್ಲೂರಿನ ಮಗಳ ಮನೆಯ ಅಕ್ಕಪಕ್ಕದವರಿಗೆ ಫೋನ್ ಮಾಡಿದಾಗ ಮಗಳ ಸಾವಿನ ಸುದ್ದಿ ತಿಳಿದು ಕಂಗಾಲಾಗಿದ್ದಾರೆ. ಗ್ರಾಮಸ್ಥರೊಂದಿಗೆ ಕೂಡ್ಲೂರಿಗೆ ಹೋದ ವೇಳೆ ಪತ್ನಿ ನಿರ್ಮಲ ಲೋ ಬಿಪಿಯಿಂದ ಸಾವನ್ನಪ್ಪಿದ್ದಾಳೆಂದು ಹೇಳಿದ್ದು, ತರಾತುರಿಯಲ್ಲಿ ಅಂತ್ಯ ಕ್ರಿಯೆಗೆ ಸಿದ್ದತೆ ಮಾಡಿಕೊಂಡಿದ್ದರು.
ತಾಯಿಗೂ ತಿಳಿಸದೇ ಅಂತ್ಯಸಂಸ್ಕಾರಕ್ಕೆ ತಯಾರಿ ನಡೆದಿತ್ತು. ಹಾಗಾಗಿ ಎರಡೂ ಕಡೆಯವರ ನಡುವೆ ಗಲಾಟೆ ನಡೆದು ಶವವನ್ನು ಸೂಕ್ಷ್ಮವಾಗಿ ಗಮನಿಸಿದ ವೇಳೆ ಕುತ್ತಿಗೆ ಬಿಗಿದು ಗಾಯವಾಗಿರುವುದು ಪತ್ತೆಯಾಗಿತ್ತು. ಅನುಮಾನಗೊಂಡ ತೆರೇಸಮ್ಮ ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರಿಗೆ ಮಗಳನ್ನು ಗಂಡನ ಮನೆಯವರು ಕೊಲೆ ಮಾಡಿ ನೇಣು ಹಾಕಿದ್ದಲ್ಲದೇ, ಮಾಹಿತಿ ನೀಡದೆ ಅಂತ್ಯ ಸಂಸ್ಕಾರಕ್ಕೆ ಮುಂದಾಗಿದ್ದಾರೆ. ಮಗಳ ಸಾವಿಗೆ ಗಂಡನ ಮನೆಯವರೇ ಕಾರಣವೆಂದು ದೂರು ನೀಡಿದ ಮೇರೆಗೆ ಎಸ್ಐ ರಾಧ, ತಹಸೀಲ್ದಾರ್ ಮಂಜುನಾಥ್ ಬುಧವಾರ ಭೇಟಿ ನೀಡಿ ಪರಿಶೀಲಿಸಿ ಶವವನ್ನು ಮೈಸೂರಿನ ಕೆಆರ್ ಆಸ್ಪತ್ರೆ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಕುಟುಂಬದವರಿಗೆ ಹಸ್ತಾಂತರಿಸಿದ್ದು, ತಿಪಟೂರಿನ ಸಣ್ಣೇನಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದೆಂದು ಕುಟುಂಬದವರು ತಿಳಿಸಿದ್ದಾರೆ.
ತಾಯಿ-ಮಗ ನ್ಯಾಯಾಂಗ ಬಂಧನಕ್ಕೆ
ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ಅಂಥೋಣಿ ಕಿರಣ್ ಮತ್ತು ಆತನ ಕುಟುಂಬದವರನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಕಿರಣ್ ಮತ್ತವರ ತಾಯಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.