logo
ಕನ್ನಡ ಸುದ್ದಿ  /  ಕರ್ನಾಟಕ  /  Gruha Lakshmi: ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? ಯಾವ ದಾಖಲೆಗಳು ಬೇಕು? ಯಾರೆಲ್ಲಾ ಅರ್ಹರು? ಇಲ್ಲಿದೆ ಸಂಪೂರ್ಣ ಮಾಹಿತಿ

Gruha Lakshmi: ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? ಯಾವ ದಾಖಲೆಗಳು ಬೇಕು? ಯಾರೆಲ್ಲಾ ಅರ್ಹರು? ಇಲ್ಲಿದೆ ಸಂಪೂರ್ಣ ಮಾಹಿತಿ

Meghana B HT Kannada

Jul 15, 2023 07:33 PM IST

google News

ಗೃಹಲಕ್ಷ್ಮಿ ಯೋಜನೆ

    • How to apply for Gruha lakshmi scheme: ಗೃಹಜ್ಯೋತಿ ಯೋಜನೆಯಂತೆ ಗೃಹಲಕ್ಷ್ಮಿ ಯೋಜನೆಗೆ ನೀವೇ ಸ್ವತಃ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಅರ್ಜಿ ಸಲ್ಲಿಸುವುದು ಹೇಗೆ? ಯಾವ ದಾಖಲೆಗಳು ಬೇಕು? ಯಾರೆಲ್ಲಾ ಅರ್ಹರು? ಎಂಬ ಗೊಂದಲಗಳಿಗೆ ಇಲ್ಲಿದೆ ಉತ್ತರ.
ಗೃಹಲಕ್ಷ್ಮಿ ಯೋಜನೆ
ಗೃಹಲಕ್ಷ್ಮಿ ಯೋಜನೆ

ಬೆಂಗಳೂರು: ಮನೆಯ ಯಜಮಾನಿ ಖಾತೆಗೆ ಮಾಸಿಕ 2 ಸಾವಿರ ರೂಪಾಯಿ ಜಮಾ ಮಾಡುವ ಕರ್ನಾಟಕ ಕಾಂಗ್ರೆಸ್​ ಸರ್ಕಾರದ ಮಹತ್ವಾಕಾಂಕ್ಷೆಯ 'ಗೃಹಲಕ್ಷ್ಮಿ' ಯೋಜನೆಗೆ ಅರ್ಜಿ ಸಲ್ಲಿಕೆ ಜುಲೈ 19ರಿಂದ ಆರಂಭವಾಗಲಿದೆ. ಅರ್ಜಿ ಸಲ್ಲಿಸುವುದು ಹೇಗೆ? ಯಾವ ದಾಖಲೆಗಳು ಬೇಕು? ಯಾರೆಲ್ಲಾ ಅರ್ಹರು? ಎಂಬ ಗೊಂದಲಗಳಿಗೆ ಇಲ್ಲಿದೆ ಉತ್ತರ.

ಅರ್ಜಿ ಸಲ್ಲಿಕೆ ಎಲ್ಲಿ? ಹೇಗೆ?

- ಗೃಹಜ್ಯೋತಿ ಯೋಜನೆಯಂತೆ ಗೃಹಲಕ್ಷ್ಮಿ ಯೋಜನೆಗೆ ನೀವೇ ಸ್ವತಃ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಸರ್ಕಾರ ನಿಗದಿ ಪಡಿಸಿದ ಗ್ರಾಮ ಒನ್, ಕರ್ನಾಟಕ ಒನ್ ಬೆಂಗಳೂರು ಒನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು. ನಿಮ್ಮ ಹತ್ತಿರದಲ್ಲಿರುವ ಈ ಯಾವುದಾದರೂ ಒಂದು ಕೇಂದ್ರಕ್ಕೆ ತೆರಳಿ ನೀವು ಅರ್ಜಿ ಸಲ್ಲಿಸಬಹುದು.

- ಹಾಗಂತ ನೀವು ಯಾವಾಗ ಬೇಕಂದ್ರೆ ಅವಾಗ ಹೋಗಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ರೇಷನ್‌ ಕಾರ್ಡ್‌ನಲ್ಲಿ ಗುರುತಿಸಲಾಗಿರುವ ಪ್ರತಿಯೊಬ್ಬ ಯಜಮಾನಿ ಮಹಿಳೆಗೂ ದಿನಾಂಕ, ಸಮಯ, ಹಾಗೂ ನೋಂದಣಿ ಮಾಡಿಸುವ ಸ್ಥಳದ ವಿವರವನ್ನು ತಿಳಿಸಲಾಗುವುದು. ಆನಂತರವೇ ನೀವು ಅರ್ಜಿ ಸಲ್ಲಿಸಬೇಕಾಗುತ್ತದೆ.

- ಒಂದು ವೇಳೆ ನಿಗದಿಪಡಿಸಿದ ದಿನಾಂಕ ಮತ್ತು ಸಮಯದಂದು ಹೋಗಲು ಸಾಧ್ಯವಾಗದೇ ಇದ್ದಲ್ಲಿ ಅದೇ ಸೇವಾ ಕೇಂದ್ರಗಳಿಗೆ ಮುಂದಿನ ದಿನಗಳಲ್ಲಿ ಸಂಜೆ 5ರಿಂದ 7ರವರೆಗೆ ಮಾತ್ರ ನೋಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ.

- ಇದಲ್ಲದೇ ಪರ್ಯಾಯವಾಗಿ, ಸರ್ಕಾರದಿಂದ ಗುರುತಿಸಲ್ಪಟ್ಟ ಪ್ರಜಾಪ್ರತಿನಿಧಿ ನಿಮ್ಮ ಮನೆಗೆ ಭೇಟಿ ನೀಡಬಹುದು. ಅವರಿಂದಲೂ ನೋಂದಣಿ ಮಾಡಿಸಿಕೊಳ್ಳಬಹುದು. ಅವರು ಮೊಬೈಲ್​ ಆ್ಯಪ್​ ಮೂಲಕ ಅರ್ಜಿ ಭರ್ತಿ ಮಾಡಿ ಕಳುಹಿಸುತ್ತಾರೆ.

- ನಿಗದಿತ ಕೇಂದ್ರಗಳಲ್ಲಿ ನೋಂದಣಿ ಮಾಡಿಸಿಕೊಂಡಾಗ ಮಂಜೂರಾತಿ ಪತ್ರವನ್ನು ನೀಡಲಾಗುವುದು. ಪ್ರಜಾಪ್ರತಿನಿಧೀ ಮೂಲಕ ನೋಂದಾಯಿಸಿಕೊಂಡಲ್ಲಿ ಮಂಜೂರಾತಿ ಪತ್ರ ತದನಂತರ ಮನೆಗೆ ತಲುಪಲಿದೆ. ಇದರ ಜೊತೆಗೆ ನಿಮ್ಮ ಮೊಬೈಲ್​ ಸಂಖ್ಯೆಗೂ ಸಂದೇಶ ಬರಲಿದೆ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು

ಯೋಜನೆಯಡಿ ನೋಂದಾಯಿಸಲು ಪಡಿತರ ಚೀಟಿ ಸಂಖ್ಯೆ, ಆಧಾರ್‌ ಕಾರ್ಡ್‌ ಸಂಖ್ಯೆ ಮತ್ತು ಬ್ಯಾಂಕ್‌ ಖಾತೆಯ ಪಾಸ್‌ ಬುಕ್‌ ಮಾಹಿತಿ ನೀಡಬೇಕು. ಆಧಾರ್‌ ನಂಬರ್‌ ಜೋಡಣೆಯಾಗಿರುವ ಬ್ಯಾಂಕ್‌ ಖಾತೆ ಹೊರತುಪಡಿಸಿ ಪರ್ಯಾಯ ಬ್ಯಾಂಕ್‌ ಖಾತೆಗೆ ಹಣ ವರ್ಗಾವಣೆ ಆಗಬೇಕಾಗಿದ್ದಲ್ಲೆ ಆ ಬ್ಯಾಂಕ್‌ ಖಾತೆಯ ಪಾಸ್‌ ಬುಕ್‌ ನೀಡಬೇಕು.

ಯಾರು ಅರ್ಹರು?

ಗೃಹಲಕ್ಷ್ಮಿ ಯೋಜನೆಯಡಿ ನೋಂದಣಿಯಾಗುವವರು ಯಜಮಾನಿಯ ಹೆಸರು ಪಡಿತರ ಚೀಟಿಯಲ್ಲಿ ಇರಬೇಕು. ಮಹಿಳೆ ಅಥವಾ ಆಕೆಯ ಪತಿ ಆದಾಯ ತೆರಿಗೆ ಅಥವಾ ಜಿ.ಎಸ್.ಟಿ. ಪಾವತಿದಾರರಾಗಿದ್ದರೆ ಅವರು ಈ ಯೋಜನೆಗೆ ಅರ್ಹರಾಗಿರುವುದಿಲ್ಲ.

ಸಹಾಯವಾಣಿ

ನೊಂದಣಿಗೆ ನಿಗದಿಪಡಿಸಿರುವ ದಿನಾಂಕ, ಸಮಯ ಮತ್ತು ಸ್ಥಳಕ್ಕೆ ಸಂಬಂಧಪಟ್ಟಂತೆ ನೀವು ಸಹಾಯವಾಣಿ ಸಂಖ್ಯೆ 1902 ಕರೆ ಮಾಡಿ ತಿಳಿದುಕೊಳ್ಳಬಹುದು. ಇಲ್ಲದೇ ಇದ್ದರೆ 8147500500 ಗೆ ಎಸ್‌ಎಂಎಸ್‌ ಅಥವಾ ವಾಟ್ಸ್‌ ಆಪ್‌ ಮೂಲಕ ಸಂದೇಶ ಕಳುಹಿಸಿ ವಿವರ ಪಡೆದುಕೊಳ್ಳಬಹುದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ