logo
ಕನ್ನಡ ಸುದ್ದಿ  /  ಕರ್ನಾಟಕ  /  ಸಂಪಾದಕೀಯ: ಬೆಂಗಳೂರಿನ ಮತ್ತೊಂದು ಸಹಕಾರ ಬ್ಯಾಂಕ್‌ಗೆ ಆರ್‌ಬಿಐ ನಿರ್ಬಂಧ; ಠೇವಣಿದಾರರ ಹಿತರಕ್ಷಣೆಗೆ ಬೇಕಿದೆ ಕಠಿಣ ಕ್ರಮ

ಸಂಪಾದಕೀಯ: ಬೆಂಗಳೂರಿನ ಮತ್ತೊಂದು ಸಹಕಾರ ಬ್ಯಾಂಕ್‌ಗೆ ಆರ್‌ಬಿಐ ನಿರ್ಬಂಧ; ಠೇವಣಿದಾರರ ಹಿತರಕ್ಷಣೆಗೆ ಬೇಕಿದೆ ಕಠಿಣ ಕ್ರಮ

HT Kannada Desk HT Kannada

Jul 26, 2023 05:00 AM IST

google News

ಬೆಂಗಳೂರು ಮೂಲದ ದಿ ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕ್ ಮೇಲೆ ಆರ್‌ಬಿಐ ನಿರ್ಬಂಧ ವಿಧಿಸಿದೆ.

    • ಎಲ್ಲ ಸಹಕಾರ ಬ್ಯಾಂಕ್‌ಗಳಲ್ಲಿಯೂ ಅಕ್ರಮ ನಡೆದಿದೆ ಎಂದು ಹೇಳುವುದು ನಮ್ಮ ಉದ್ದೇಶವಲ್ಲ. ಆದರೆ ಬ್ಯಾಂಕ್ ನಿರ್ವಹಣೆಯ ನಿಯಮಗಳು ಬಿಗಿ ಆಗಲೇಬೇಕಿದೆ. ಗ್ರಾಹಕರನ್ನು ಕಾಪಾಡಲು ಆರ್‌ಬಿಐ ಮುಂದಾಗಲೇಬೇಕಿದೆ. ಇದು ಈ ಕ್ಷಣದ ತುರ್ತು. 
ಬೆಂಗಳೂರು ಮೂಲದ ದಿ ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕ್ ಮೇಲೆ ಆರ್‌ಬಿಐ ನಿರ್ಬಂಧ ವಿಧಿಸಿದೆ.
ಬೆಂಗಳೂರು ಮೂಲದ ದಿ ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕ್ ಮೇಲೆ ಆರ್‌ಬಿಐ ನಿರ್ಬಂಧ ವಿಧಿಸಿದೆ.

ಬೆಂಗಳೂರು ಮೂಲದ 'ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕ್" ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ ಜುಲೈ 24ರಿಂದ ಅನ್ವಯ ಆಗುವಂತೆ ಬ್ಯಾಂಕಿಂಗ್ ನಿಯಮಾವಳಿಗಳ ಅಡಿಯಲ್ಲಿ ವಿವಿಧ ನಿರ್ಬಂಧಗಳನ್ನು ಹೇರಿದೆ. ಬೆಂಗಳೂರಿನದ್ದೇ ಆದ ಗುರು ರಾಘವೇಂದ್ರ ಬ್ಯಾಂಕ್ ಪ್ರಕರಣದ ಅವ್ಯವಹಾರಗಳ ಹಿನ್ನೆಲೆಯಲ್ಲಿ ಠೇವಣಿದಾರರಲ್ಲಿ ಈಗ ಭೀತಿ ಮೂಡಿದೆ. ಇಂಥ ಬೆಳವಣಿಗೆಗಳು ಸಾವಿರಾರು ಕುಟುಂಬಗಳ ಮೇಲೆ ಬಹಳ ಕೆಟ್ಟ ಪರಿಣಾಮ ಬೀರುತ್ತದೆ. ರಿಸರ್ವ್ ಬ್ಯಾಂಕ್ ಅಡಿಯಲ್ಲೇ ಹಣಕಾಸು ವಹಿವಾಟು ನಿರ್ವಹಿಸುವ ಸಹಕಾರ ಬ್ಯಾಂಕ್‌ಗಳು ಈ ರೀತಿ ಆಘಾತ ನೀಡುತ್ತಿರುವುದು ಇದು ಮೊದಲಲ್ಲ, ನೀತಿ ನಿರೂಪಿಸಬೇಕಾದವರು ಈ ಪ್ರಕರಣವನ್ನು ‘ಹತ್ತರಲ್ಲಿ ಹನ್ನೊಂದು’ ಅಂದುಕೊಂಡಲ್ಲಿ ಇದು ಕೊನೆಯೂ ಆಗಲಾರದು.

ಸಹಕಾರ ಬ್ಯಾಂಕ್‌ಗಳಲ್ಲಿ ಜನರು ಹಣ ಇಡಲು ಹಲವು ಕಾರಣಗಳಿವೆ. ರಾಷ್ಟ್ರೀಕೃತ ಬ್ಯಾಂಕ್‌ಗಳಿಗಿಂತಲೂ ಇಲ್ಲಿ ಬಡ್ಡಿ ಹೆಚ್ಚು ಸಿಗುತ್ತದೆ ಎನ್ನುವುದು ಮುಖ್ಯ ಕಾರಣ. ಇದರೊಂದಿಗೆ ಇಲ್ಲಿ ಕೆಲಸ ಮಾಡುವ ಸಿಬ್ಬಂದಿ ಪ್ರೀತಿಯಿಂದ ಮಾತನಾಡಿಸುತ್ತಾರೆ. ಇಂಥ ಬ್ಯಾಂಕ್‌ಗಳ ವ್ಯವಸ್ಥಾಪಕರು ಅಥವಾ ಸಿಬ್ಬಂದಿ ಪರಿಚಿತರು, ಅವರದೇ ಜಾತಿಯವರು ಎನ್ನುವುದು ಗ್ರಾಹಕರನ್ನು ಸೆಳೆಯುವ ಮತ್ತೊಂದು ಕಾರಣ.

ಸಹಕಾರ ಬ್ಯಾಂಕ್‌ಗಳು ಬಹಳ ಬೇಗ ನಂಬಿಕೆಯನ್ನು ಹುಟ್ಟಿಸುತ್ತವೆ. ಲೆಕ್ಕ ಪರಿಶೋಧನೆಗೆ ಒಳಪಟ್ಟ ಬ್ಯಾಲೆನ್ಸ್ ಶೀಟ್‌ಗಳು ರಿಸರ್ವ್ ಬ್ಯಾಂಕ್ ದಿಢೀರನೇ ನಿರ್ಬಂಧ ಹೇರುವ ಮುಂಚಿನ ತನಕ ಆರೋಗ್ಯಕರವಾಗಿಯೇ ಕಾಣಿಸುತ್ತವೆ. ವಸೂಲಾಗದ ಸಾಲದ ಮೊತ್ತ (ಎನ್‌ಪಿಎ) ಹುಡುಕಾಡಿದರೆ ಸಿಗಬೇಕೇ ವಿನಾ ಸಹಕಾರ ಬ್ಯಾಂಕ್‌ನವರು ನಡೆಸುವ ಸದಸ್ಯರು, ಷೇರುದಾರರ ಸಭೆಯಲ್ಲಿ ಪ್ರಸ್ತಾಪವಾಗುವುದು ಅಪರೂಪ. ಇನ್ನೂ ಕೆಲ ಸಂದರ್ಭಗಳಲ್ಲಿ ಸಹಕಾರ ಬ್ಯಾಂಕ್‌ಗಳನ್ನು ಸ್ವತಃ ರಿಸರ್ವ್ ಬ್ಯಾಂಕ್‌ ಹೊಗಳಿರುವ ಪತ್ರಿಕಾ ತುಣುಕುಗಳು, ಪ್ರಶಂಸಾಪತ್ರಗಳು ನೋಟಿಸ್ ಬೋರ್ಡ್ ಮೇಲೆ ರಾರಾಜಿಸುತ್ತಾ ಇರುತ್ತವೆ.

ಸಹಕಾರ ಬ್ಯಾಂಕ್‌ಗಳು, ಕೋ ಆಪರೇಟಿವ್ ಸೊಸೈಟಿಗಳು ಆರಂಭದ ಕೆಲ ವರ್ಷಗಳಂತೂ ಮನೆ ಮಕ್ಕಳಿಗಿಂತ ಹೆಚ್ಚು ನಂಬಿಕೆ ಮೂಡುವಂತೆ, ಠೇವಣಿ ಮೇಲೆ ಬಡ್ಡಿಯನ್ನು ನೀಡಿರುತ್ತವೆ. ಹೆಚ್ಚಿನ ಬಡ್ಡಿ ಹಾಗೂ ಸಮಯಕ್ಕೆ ಸರಿಯಾಗಿ ಪಾವತಿ ಗ್ರಾಹಕರ ವಿಶ್ವಾಸ ವೃದ್ಧಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ದಿಢೀರನೆ ಒಂದು ದಿನ ಠೇವಣಿ ಹಣ ಅಗತ್ಯವಿದೆ ಎಂದು ಬ್ಯಾಂಕ್‌ಗಳ ಬಳಿ ಹೋದರೆ ವಿಪರೀತ ಗೋಗರೆದು, ವಾಪಸ್ ತೆಗೆದುಕೊಳ್ಳಬೇಡಿ, ಇನ್ನೊಂದು ಹೊಸ ಸ್ಕೀಮ್ ಇದೆ. ಅದರಲ್ಲಿ ಈಗಿನಗಿಂತ ಹೆಚ್ಚಿನ ಬಡ್ಡಿ ಸಿಗುತ್ತದೆ ಎಂದು ಯಾವುದೋ ಹೊಸ ಸ್ಕೀಮ್ ಹೇಳುತ್ತಾರೆ. ಒಟ್ಟಿನಲ್ಲಿ ಠೇವಣಿ ತೆಗೆದುಕೊಳ್ಳಬಾರದು ಹಾಗೆ ಮನವೊಲಿಸಲಾಗುತ್ತದೆ.

ತೀರಾ ಅದೃಷ್ಟ ಕೆಟ್ಟಿದ್ದರೆ ರಿಸರ್ವ್ ಬ್ಯಾಂಕ್ ನಿರ್ಬಂಧದ ಕುಣಿಕೆ ಬಂದು ಬೀಳುತ್ತದೆ. ಮಕ್ಕಳ ಮದುವೆಗೋ ಶಿಕ್ಷಣಕ್ಕೋ ಅಥವಾ ಮನೆ ಕಟ್ಟುವುದಕ್ಕೋ ಸ್ವಂತ ವೈದ್ಯಕೀಯ ಚಿಕಿತ್ಸೆಗೋ ಅಥವಾ ಸಂಬಂಧಿಕರ ಚಿಕಿತ್ಸೆಗೋ ಸೈಟು ಖರೀದಿಸುವುದಕ್ಕೋ ಸಾಲ ತೀರಿಸುವುದಕ್ಕೋ ಅಡ ಇಟ್ಟ ಒಡವೆ ಬಿಡಿಸಿಕೊಳ್ಳುವುದಕ್ಕೋ ಹೀಗೆ ತಂತಮ್ಮ ತುರ್ತಿಗೆ, ದೊಡ್ಡ ಮೊತ್ತದ ಖರ್ಚಿಗೆ ಸ್ವಲ್ಪ ಬಡ್ಡಿ ಹೆಚ್ಚು ಸಿಗುತ್ತದೆ ಎಂದು ಸಹಕಾರ ಬ್ಯಾಂಕ್‌ಗಳಲ್ಲಿ ಹಣ ಇಟ್ಟವರು ಅಕ್ಷರಶಃ ಕುಸಿಯುತ್ತಾರೆ. 'ಇನ್ನೇನು ಆ ಹಣ ಇದೆ ಅಧಿಕ ಮಾಸ ಕಳೆದ ಮೇಲೆ ಪಾಯದ ಪೂಜೆ ಮಾಡಿಸೋಣ' ಎಂದುಕೊಂಡು ವಾಸ ಇದ್ದ ಮನೆಯನ್ನು ಕೆಡವಿ ಕಾಯುತ್ತಿದ್ದವರು ಕಂಗಾಲಾಗುತ್ತಾರೆ.

ದೂರದ ಊರಲ್ಲೋ ದೇಶದಲ್ಲೋ ಉನ್ನತ ವ್ಯಾಸಂಗಕ್ಕೆ ಸೀಟು ಸಿಕ್ಕ ವಿದ್ಯಾರ್ಥಿ, ಸೈಟು ಖರೀದಿಗೆ ಲಕ್ಷಗಟ್ಟಲೆ ಅಡ್ವಾನ್ಸ್ ಕೊಟ್ಟ ವ್ಯಕ್ತಿ, ಇನ್ನು ಒಂದೆರಡು ತಿಂಗಳಲ್ಲಿ ಮಗಳ ಮದುವೆಗೆ ಸಿದ್ಧವಾಗುತ್ತಿರುವ ಪೋಷಕರು, ಯಾವುದೋ ದುಬಾರಿ ವೆಚ್ಚದ ಅನಾರೋಗ್ಯಕ್ಕೆ ಒಂದೆರಡು ದಿನದಲ್ಲಿ ಹಣ ತಂದು ಕಟ್ಟುವುದಾಗಿ ಹೇಳಿಬಂದಂಥವರು ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕ್‌ನಲ್ಲಿ ಇಟ್ಟಂಥ ಹಣವನ್ನೇ ನಂಬಿದ್ದರೆ ಅವರ ಗತಿ ಏನು? ಐವತ್ತು ಸಾವಿರ ರೂಪಾಯಿಗಿಂತ ಹೆಚ್ಚು ಹಣ ವಿಥ್ ಡ್ರಾ ಮಾಡುವುದಕ್ಕೆ ಆಗಲ್ಲ. ಒಂದು ವೇಳೆ ಇದೇ ಬ್ಯಾಂಕ್‌ನಲ್ಲಿ ಸಾಲಕ್ಕೆ ಅರ್ಜಿ ಹಾಕಿದ ವ್ಯಕ್ತಿಗೋ ಸಂಸ್ಥೆಗೋ ಸಾಲ ಮಂಜೂರು ಆದ ಮೇಲೆ ಇನ್ನೇನು ಹಣ ಕೈಗೆ ಬರುತ್ತದೆ ಅಂದುಕೊಳ್ಳುವ ವೇಳೆ ಇಂಥ ಆಘಾತದ ಸುದ್ದಿ ರಿಸರ್ವ್ ಬ್ಯಾಂಕ್‌ನಿಂದ ಬಂದರೆ ಏನಾಗಬಹುದು? ಯಾವುದೋ ವ್ಯಾಪಾರದ ಬಂಡವಾಳಕ್ಕಾಗಿ ತಮ್ಮ ಕೈಯಿಂದ ಹಣ ಹಾಕಿ, ಬ್ಯಾಂಕ್‌ನಿಂದ ಬರುವ ಸಾಲದ ಮೇಲೇ ಅದರ ಭವಿಷ್ಯ ಅವಲಂಬಿಸಿದ್ದರೆ ಹೇಗೆ?

ಇಷ್ಟೆಲ್ಲ ಉದಾಹರಣೆ ಏಕೆ ಕೊಡಬೇಕಾಯಿತು ಅಂದರೆ, ಠೇವಣಿ ಮೇಲೆ ಈಗ ವಿಮೆಯನ್ನು ಐದು ಲಕ್ಷಕ್ಕೆ ಏರಿಸಲಾಗಿದೆ. ಆದರೆ ಇದು ಬ್ಯಾಂಕಿಂಗ್ ವಂಚನೆ ವಿಚಾರದಲ್ಲಿ ಗ್ರಾಹಕರಿಗೆ ಖಂಡಿತಾ ಪರಿಹಾರವಲ್ಲ. ಸಹಕಾರ ಬ್ಯಾಂಕ್ ನಡೆಸುವವರು, ಅಲ್ಲಿನ ಲೆಕ್ಕಪತ್ರಗಳ ಪರಿಶೋಧನೆ ಮಾಡುವಂಥವರು, ದೊಡ್ಡ ಮಟ್ಟದಲ್ಲಿ ಬ್ಯಾಂಕ್ ವ್ಯವಸ್ಥೆ ಕುಸಿಯುವ ತನಕ ಆ ಬಗ್ಗೆ ಜನರಿಗೆ ಎಚ್ಚರಿಕೆ ನೀಡದವರಿಗೆಲ್ಲ ಏನು ಶಿಕ್ಷೆ? ಅದು ನಿಗದಿ ಆಗಬೇಕು. ಒಂದು ವೇಳೆ ಸಹಕಾರ ಬ್ಯಾಂಕ್‌ಗಳ ವಂಚನೆಯನ್ನು ತಡೆಯುವುದಕ್ಕೆ ಆಗುವುದೇ ಇಲ್ಲ ಎಂದಾದರೆ ಬ್ಯಾಂಕಿಂಗ್ ಲೈಸೆನ್ಸ್ ನೀಡಬೇಕಾ ಎಂಬುದರ ಬಗ್ಗೆಯೇ ಸರ್ಕಾರ ಒಂದು ತೀರ್ಮಾನವನ್ನು ಕೈಗೊಳ್ಳಬೇಕು.

ಸಹಕಾರ ಬ್ಯಾಂಕ್‌ಗಳು ಜಾತಿ ಮತ್ತು ಧಾರ್ಮಿಕ ಶ್ರದ್ಧೆಯನ್ನು ಗಾಳವಾಗಿಸಿಕೊಂಡು ಹೂಡಿಕೆದಾರರನ್ನು ಆಕರ್ಷಿಸುತ್ತವೆ. ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ನ ಠೇವಣಿ ಪತ್ರಗಳು ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಬೃಂದಾವನದ ಚಿತ್ರದೊಂದಿಗೆ ಮುದ್ರಿತವಾಗುತ್ತಿದ್ದವು. ಆದರೆ ಬ್ಯಾಂಕ್ ಮುಳುಗಿದ ಮೇಲೆ ಹಲವು ಠೇವಣಿದಾರರು ಪ್ರಾಣ ಕಳೆದುಕೊಂಡರು. ಇದರ ಬಗ್ಗೆ ಸಮರ್ಪಕ ತನಿಖೆ ಈವರೆಗೆ ನಡೆಯಲಿಲ್ಲ. ಠೇವಣಿದಾರರಿಗೆ ನ್ಯಾಯವೂ ಸಿಗಲಿಲ್ಲ. ಅಮಾನತ್ ಸಹಕಾರ ಬ್ಯಾಂಕ್ ಸಹ ಮುಸ್ಲಿಮ್ ಗ್ರಾಹಕರನ್ನು ಇದೇ ರೀತಿ ವಂಚಿಸಿತ್ತು. ಇನ್ನಾದರೂ ಗ್ರಾಹಕರು ಬೆವರು ಸುರಿಸಿ ಸಂಪಾದಿಸಿದ ಹಣವನ್ನು ಹೀಗೆ ಜಾತಿ, ಧರ್ಮ ನೋಡಿ ಮೋಸಗಾರರ ವಶಕ್ಕೆ ಕೊಡುವುದು ನಿಲ್ಲಿಸಬೇಕು.

ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಆಗುತ್ತಿರುವ ಅನಾಹುತಗಳಿಗೆ ಗಮನಿಸಿದರೆ ಪ್ಲಾಸ್ಟಿಕ್ ನಿಷೇಧ ಪ್ರಹಸನದ ಉದಾಹರಣೆ ಸೂಕ್ತ ಎನಿಸುತ್ತದೆ. ನಮ್ಮ ಸರ್ಕಾರಗಳಿಗೆ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸುವುದರಲ್ಲಿ ಮಾತ್ರ ಉತ್ಸಾಹವಿದೆ. ಆದರೆ ಪ್ಲಾಸ್ಟಿಕ್ ಉತ್ಪಾದನೆಯನ್ನೇ ನಿಲ್ಲಿಸಬಹುದು ಎಂಬ ಆಲೋಚನೆ ಬರುವುದಿಲ್ಲ. ಬ್ಯಾಂಕ್‌ಗಳು ಮುಳುಗುವ ಸ್ಥಿತಿಗೆ ಬಂದಾಗ ನಿರ್ಬಂಧ ವಿಧಿಸಲು ಮುಂದಾಗುವ ಆರ್‌ಬಿಐ, ಅವ್ಯವಹಾರ ತಡೆಯಲು ಕಾಲಕಾಲಕ್ಕೆ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಗ್ರಾಹಕರ ಹಿತ ಕಾಪಾಡುವ ಅದರ ಬಾಧ್ಯತೆಯನ್ನು ಅದು ನಿರ್ವಹಿಸಿದಂತೆ ಆಗುವುದಿಲ್ಲ.

ಕರ್ನಾಟಕದಲ್ಲಿ ಹಲವು ಸಹಕಾರ ಬ್ಯಾಂಕ್‌ಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಅಲ್ಲಿನ ಸಿಬ್ಬಂದಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಎಲ್ಲ ಸಹಕಾರ ಬ್ಯಾಂಕ್‌ಗಳಲ್ಲಿಯೂ ಅಕ್ರಮ ನಡೆದಿಲ್ಲ. ಆದರೆ ಬ್ಯಾಂಕ್ ನಿರ್ವಹಣೆಯ ನಿಯಮಗಳು ಬಿಗಿ ಆಗಲೇಬೇಕಿದೆ. ಇದು ಈ ಕ್ಷಣದ ತುರ್ತು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ