ಸಂಪಾದಕೀಯ: ನಂದಿನಿಯಲ್ಲಿ ಹಾಸುಹೊಕ್ಕಾಗಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಏನು ಮಾಡ್ತೀರಿ ಮುಖ್ಯಮಂತ್ರಿಗಳೇ
Jul 22, 2023 06:29 AM IST
ನಂದಿನಿ ಹಾಲಿನ ಬೆಲೆಏರಿಕೆ
- KMF Nandini: ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸಾಧ್ಯವಾದರೆ ಮಾತ್ರ ಏಕಕಾಲಕ್ಕೆ ರೈತರು ಮತ್ತು ಗ್ರಾಹಕರಿಗೆ, ಪ್ರಾಮಾಣಿಕ ಸಿಬ್ಬಂದಿಗೆ ಮತ್ತು ಹಲವು ವರ್ಷಗಳಿಂದ ಬೆವರು ಸುರಿಸಿದ ಪಾರ್ಲರ್ ಮಾಲೀಕರಲ್ಲಿ ನೆಮ್ಮದಿ ಮೂಡುತ್ತದೆ. ಬೆಲೆಏರಿಕೆಯ ತುಟ್ಟಿ ಕಾಲದಲ್ಲಿ ಮತ್ತೆ ಮನೆ ಬಜೆಟ್ ಹೆಚ್ಚಿಸಿಕೊಂಡ ಮಧ್ಯಮ ವರ್ಗದ ಜನರ ಪರಿತಾಪ ತುಸು ಕಡಿಮೆಯಾಗುತ್ತದೆ.
ಕರ್ನಾಟಕ ಸರ್ಕಾರವು ನಂದಿನಿ ಹಾಲಿನ ಬೆಲೆ ಏರಿಕೆಗೆ ನಿನ್ನೆ ರಾತ್ರಿ (ಜುಲೈ 21ರ ಶುಕ್ರವಾರ) ಒಪ್ಪಿಗೆ ಸೂಚಿಸಿದೆ. ಹೊಸ ದರಗಳು ಆಗಸ್ಟ್ 1ರಿಂದ ಜಾರಿಗೆ ಬರಲಿದ್ದು, ಒಂದು ಲೀಟರ್ ಹಾಲು ಖರೀದಿಸಲು ಗ್ರಾಹಕರು ಹೆಚ್ಚುವರಿಯಾಗಿ 3 ರೂಪಾಯಿ ಪಾವತಿಸಬೇಕಾಗುತ್ತದೆ. ಆಹಾರ ಪದಾರ್ಥಗಳ ಬೆಲೆಏರಿಕೆಯಿಂದ ಕಂಗಾಲಾಗಿರುವ ಗ್ರಾಹಕರಿಗೆ, ಅಂದರೆ ಹಾಲು ಖರೀದಿದಾರರಿಗೆ ಇದು ಕಣ್ಣುಕೆಂಪಾಗಿಸುವ, ಕಿಸೆ ಸುಡುವ ವಿದ್ಯಮಾನ. ಆದರೆ ಹೈನುಗಾರಿಕೆಯಲ್ಲಿ ತೊಡಗಿರುವವರಿಗೆ ಈ ಬೆಳವಣಿಗೆ ತುಸು ನೆಮ್ಮದಿ ತಂದಿದೆ. ಕರ್ನಾಟಕದಲ್ಲಿ ಇದೀಗ ಮಳೆ ಆರಂಭವಾಗಿದೆ. ಹಸಿರು ಮೇವು ಬೆಳೆಯುವ ಈ ಕಾಲದಲ್ಲಿ ಸಹಜವಾಗಿಯೇ ಹಾಲು ಉತ್ಪಾದನೆಯೂ ಹೆಚ್ಚಾಗಲಿದ್ದು, ಸರ್ಕಾರದ ನಿರ್ಧಾರವು ರೈತರಲ್ಲಿ ತುಸು ನೆಮ್ಮದಿ ಮೂಡಿಸಿದೆ.
ನಂದಿನಿ ಎನ್ನುವುದು ಒಂದು ದೊಡ್ಡ ವ್ಯವಸ್ಥೆ. ಹಳ್ಳಿಗಳಲ್ಲಿ ಹಾಲು ಉತ್ಪಾದಿಸುವ ಹೈನುಗಾರರಿಂದ ಮನೆಮನೆಗೆ ಹಾಲು ಪೂರೈಸುವ ಚಿಲ್ಲರೆ ಮಾರಾಟಗಾರರವರೆಗೆ ಕರ್ನಾಟಕದ ಲಕ್ಷಾಂತರ ಜನರು 'ನಂದಿನಿ' ಎನ್ನುವ ಕಾಮಧೇನುವನ್ನೇ ಜೀವನಕ್ಕಾಗಿ ಅವಲಂಬಿಸಿದ್ದಾರೆ. ಇಂಥ ಕಲ್ಪವೃಕ್ಷದಂಥ ಸಂಸ್ಥೆಯ ಕಾಯಕಲ್ಪಕ್ಕೆ, ಆಡಳಿತ ಸುಧಾರಣೆಗೆ ಇತ್ತೀಚೆಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವೂ ಗಮನ ಹರಿಸುತ್ತಿಲ್ಲ, ಈ ಕುರಿತು ಆಡಳಿತ ಮೊಗಸಾಲೆಯಲ್ಲಿರುವ ಯಾರೂ ಗಟ್ಟಿಯಾಗಿ ಮಾತನಾಡುತ್ತಿಲ್ಲ ಎನ್ನುವುದು ವಿಪರ್ಯಾಸ.
ಹಾಲಿನ ಬೆಲೆಏರಿಕೆಗೆ ಒಪ್ಪಿಗೆ ಸೂಚಿಸುವ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಲು ಒಕ್ಕೂಟದ ಪ್ರತಿನಿಧಿಗಳಿಗೆ ನೀಡಿರುವ ಎಚ್ಚರಿಕೆಯನ್ನೂ ಈ ಸಂದರ್ಭದಲ್ಲಿ ಹಿನ್ನೆಲೆಯಾಗಿ ಗಮನಿಸಬೇಕು. 'ಹಾಲಿನ ದರವನ್ನು ಹೆಚ್ಚಿಸಲು ಒಪ್ಪಿದ್ದೇನೆ. ಆದರೆ ಹೆಚ್ಚಿಸಿದ ಹಾಲಿನ ದರದ ಲಾಭ ನೇರವಾಗಿ ರೈತರಿಗೆ ಹೋಗಬೇಕು. ಒಕ್ಕೂಟಗಳ ನಷ್ಟವನ್ನು ತುಂಬಿಕೊಳ್ಳಲು ಬಳಸಿಕೊಳ್ಳಬೇಡಿ. ಒಕ್ಕೂಟಗಳು ನಷ್ಟ ಹೆಚ್ಚಾದರೆ ಆಡಳಿತಾಧಿಕಾರಿ ನೇಮಿಸಬೇಕಾಗುತ್ತದೆ' ಎಂದು ಸಿದ್ದರಾಮಯ್ಯ ಹೇಳಿದ್ದರು. ಮುಖ್ಯಮಂತ್ರಿ ಮಾತಿನಲ್ಲಿರುವ ಆಡಳಿತಾಧಿಕಾರಿ ನೇಮಕದ ಎಚ್ಚರಿಕೆಯನ್ನು ಸಾಲುಗಳ ನಡುವೆ ಓದಿಕೊಳ್ಳುವ ತಂತ್ರದಲ್ಲಿ ಗ್ರಹಿಸಿದರೆ ಹಲವು ಅರ್ಥಗಳು ಹೊಳೆಯುತ್ತವೆ.
ರಾಜಕಾರಣದ ಸುದೀರ್ಘ ಅನುಭವವಿರುವ ಸಿದ್ದರಾಮಯ್ಯ ಅವರಿಗೆ ನಂದಿನಿ ಒಕ್ಕೂಟದ ವ್ಯವಸ್ಥೆ, ಗ್ರಾಮಮಟ್ಟದಿಂದ ಮಹಾಮಂಡಲದವರೆಗೆ ವ್ಯಾಪಿಸಿರುವ ಭ್ರಷ್ಟಾಚಾರದ ಬಗ್ಗೆ ಅರಿವು ಇಲ್ಲ ಎಂದು ಹೇಳಲು ಆಗದು. ಆದರೆ ನಂದಿನಿಯಲ್ಲಿ ಸುಧಾರಣೆ ಎಂದರೆ ಜೇನುಗೂಡಿಗೆ ಕೈಹಾಕಿದಂತೆ. ಗ್ರಾಮ ಪಂಚಾಯಿತಿ ರಾಜಕಾರಣದಿಂದ ಲೋಕಸಭೆಯವರೆಗೆ ವಿವಿಧ ಹಂತಗಳ ಅಧಿಕಾರ ಸ್ಥಾನದ ಮೇಲೆ ಅದು ಪರಿಣಾಮ ಬೀರಬಲ್ಲದು. ಹೀಗಾಗಿಯೇ ಹಿಂದಿನ ಬಿಜೆಪಿ ಸರ್ಕಾರವೂ ನಂದಿನಿಯ ಸುಧಾರಣೆಗೆ ಗಟ್ಟಿ ಪ್ರಯತ್ನ ಮಾಡಲಿಲ್ಲ. ಈಗಿನ ಕಾಂಗ್ರೆಸ್ ಸರ್ಕಾರಕ್ಕೂ ಅಂಥ ಇಚ್ಛಾಶಕ್ತಿ ಇದ್ದಂತೆ ಕಂಡುಬರುತ್ತಿಲ್ಲ.
ಗ್ರಾಮದಲ್ಲಿ ಹಾಲಿನ ಸೊಸೈಟಿಗಳ ಕಾರ್ಯನಿರ್ವಹಣೆ, ಗುಣಮಟ್ಟ ಪರಿಶೀಲನೆ, ಹಾಲು ಸಂಗ್ರಹ, ಗ್ರಾಮ ಮಾರ್ಗಗಳ ಮೂಲಕ ಶೀತಲೀಕರಣ ಘಟಕಗಳಿಗೆ ಹಾಲು ಸಾಗಣೆ, ಅಲ್ಲಿ ಮೊದಲ ಹಂತದಲ್ಲಿ ಸಂಸ್ಕರಣೆಯಾದ ಹಾಲನ್ನು ಪ್ಯಾಕಿಂಗ್ ಯುನಿಟ್‌ಗಳಿಗೆ ರವಾನಿಸುವುದು, ಅಲ್ಲಿ ಮತ್ತೊಂದು ಹಂತದ ಸಂಸ್ಕರಣೆ, ಹಾಲಿನಿಂದ ಹಲವು ಉತ್ಪನ್ನಗಳ ತಯಾರಿಕೆ, ಪಾರ್ಲರ್‌ಗಳಿಗೆ ಸಾಗಣೆ ಎನ್ನುವುದು ನಂದಿನಿ ಕಾರ್ಯನಿರ್ವಹಣೆಯ ಕೇವಲ ಒಂದು ಮುಖ ಮಾತ್ರ. ರಾಸುಗಳ ಆರೋಗ್ಯ ತಪಾಸಣೆ, ಹೈನುಗಾರಿಕೆಯಲ್ಲಿ ತೊಡಗಿರುವವರಿಗೆ ತರಬೇತಿ, ಹಸುಗಳಿಗೆ ಪೌಷ್ಟಿಕ ಆಹಾರ (ಫೀಡ್) ಒದಗಿಸುವುದು ಸೇರಿದಂತೆ ಹಲವು ರೀತಿಯಲ್ಲಿ ಇದು ರೈತರಿಗೆ ಆಸರೆಯಾಗಿರುವ ಸಂಸ್ಥೆ.
ನಂದಿನಿ ಎನ್ನುವುದು ಅತ್ಯಂತ ಸಂಕೀರ್ಣ ವ್ಯವಸ್ಥೆ. ಆಡಳಿತ ಕೌಶಲ್ಯ, ತಾಂತ್ರಿಕ ಕೌಶಲ್ಯದ ಜೊತೆಗೆ ರೈತ ಪರ ಕಾಳಜಿ ಇರುವ ಅಧಿಕಾರಿಗಳು, ರಾಜಕಾರಿಣಿಗಳು ಒಗ್ಗೂಡಿ ರೂಪಿಸಿರುವ ಈ ದಕ್ಷ ವ್ಯವಸ್ಥೆ ಇತ್ತೀಚೆಗೆ ಶಿಥಿಲವಾಗಿದೆ. ಸಿಬ್ಬಂದಿ ನೇಮಕಾತಿ, ಮಿಲ್ಕ್ ಪಾರ್ಲರ್‌ಗಳಿಗೆ ಮಂಜೂರಾತಿ ಕೊಡುವುದೂ ಸೇರಿದಂತೆ ಪ್ರತಿ ಹಂತದಲ್ಲಿಯೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಹುದ್ದೆಗಳ ನೇಮಕಾತಿಯ ವೇಳೆ ಬಹಿರಂಗ ಹರಾಜಿನಂಥ ವಾತಾವರಣ ಸೃಷ್ಟಿಯಾಗಿರುತ್ತದೆ. ಇತ್ತೀಚೆಗೆ ಕರ್ನಾಟಕದಲ್ಲಿ ಹಾಲಿನ ಬರ ಎದುರಾಗಿದ್ದ ಸಂದರ್ಭದಲ್ಲಿ ಬೇಡಿಕೆ ಮತ್ತು ಪೂರೈಕೆಯ ಸಮತೋಲನ ಕಾಪಾಡುವ ವಿಚಾರದಲ್ಲಿಯೂ ಅಧಿಕಾರಿಗಳು ಸಂಪೂರ್ಣ ವಿಫಲರಾದರು.
ಗ್ರಾಹಕರಿಗೆ ಹಾಲು ಕೊಡಲು ಸಾಧ್ಯವಾಗದೆ ಮಿಲ್ಕ್ ಪಾರ್ಲರ್‌ಗಳನ್ನು ನಡೆಸುವವರು ತಲೆಮರೆಸಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇತ್ತೀಚೆಗೆ ಬೆಣ್ಣೆ ಮತ್ತು ತುಪ್ಪದ ಪೂರೈಕೆಯಲ್ಲಿ ಕೊರತೆ ಕಾಣಿಸಿಕೊಂಡಿದ್ದ ಸಂದರ್ಭದಲ್ಲಿ ಅಧಿಕಾರಿಗಳು ರಾಜಕೀಯ ಒತ್ತಡಗಳಿಗೆ ಒಳಗಾಗಿ ಕೆಲವೇ ಮಾರಾಟಗಾರರಿಗೆ ಹೆಚ್ಚು ಉತ್ಪನ್ನಗಳನ್ನು ಸರಬರಾಜು ಮಾಡುವುದು, ಹೀಗೆ ಉತ್ಪನ್ನಗಳನ್ನು ಪಡೆದುಕೊಂಡವರು ಪಾರ್ಲರ್ ಸಿಬ್ಬಂದಿಗೆ ಹೆಚ್ಚುವರಿ ಹಣಕ್ಕೆ ಪೂರೈಕೆ ಮಾಡುತ್ತಿದ್ದ ವಿದ್ಯಮಾನಗಳು ಬೆಳಕಿಗೆ ಬಂದಿತ್ತು. ಇಂಥ ಸಮಸ್ಯೆಗಳಿಗೆ ಬೇಸತ್ತು ಎಷ್ಟೋ ಪಾರ್ಲರ್ ಮಾಲೀಕರು ಹಾಲು ಮಾರಾಟ ವ್ಯವಹಾರವನ್ನೇ ಸ್ಥಗಿತಗೊಳಿಸಿದ, ಖಾಸಗಿ ಡೇರಿಗಳ ಏಜೆನ್ಸಿ ಪಡೆದ ಉದಾಹರಣೆಗಳೂ ಇವೆ.
ನಂದಿನಿ ಎನ್ನುವುದು ಏಕಕಾಲಕ್ಕೆ ಗ್ರಾಮವಾಸಿಗಳು ಮತ್ತು ನಗರವಾಸಿಗಳು ನಂಬಿಕೆ ಇರಿಸಿರುವ ಕರ್ನಾಟಕದ ನೆಚ್ಚಿನ ಬ್ರಾಂಡ್. ಕರ್ನಾಟಕದ ಜನರು ನಂದಿನಿಯನ್ನು ಎಷ್ಟು ಪ್ರೀತಿಸುತ್ತಾರೆ ಎನ್ನುವುದು ಅಮೂಲ್ vs ನಂದಿನಿ ವಿವಾದದ ವೇಳೆ ಸಾಬೀತಾಗಿದೆ. ಹಳ್ಳಿಗಳಲ್ಲಿ ಬದುಕುತ್ತಿರುವ ಸಾವಿರಾರು ವಿಧವೆ, ವೃದ್ಧ ಮಹಿಳೆಯರಿಗೆ ನಂದಿನಿ ಮನೆಮಗಳಂತೆ ಕೈಹಿಡಿದಿದೆ. 'ಒಂದು ಹಸುಕಟ್ಟಿಕೊಂಡರೆ ಜೀವನ ಮಾಡಬಹುದು' ಎಂಬ ಆತ್ಮವಿಶ್ವಾಸವನ್ನು ಕರ್ನಾಟಕದ ಗ್ರಾಮೀಣ ಜನರಿಗೆ ಕೊಟ್ಟಿದ್ದು ನಂದಿನಿ. ಇದೇ ವೇಳೆ 'ನಂದಿನಿ ಹಾಲಲ್ವಾ? ಕಲಬೆರಕೆ ಸಮಸ್ಯೆ ಇರಲು ಸಾಧ್ಯವೇ ಇಲ್ಲ' ಎಂಬ ಗ್ರಾಹಕರ ನಂಬಿಕೆಯನ್ನೂ ಇದು ಗಳಿಸಿದೆ. ಇದು ಕಡಿಮೆ ಸಾಧನೆ ಅಲ್ಲ.
ಇನ್ನಾದರೂ ಅಧಿಕಾರದ ಸ್ಥಾನದಲ್ಲಿರುವವರು 'ನಂದಿನಿ'ಗೆ ಇರುವ ಜನರ ಮಾನ್ಯತೆ, ಪ್ರೀತಿ ಮತ್ತು ಭರವಸೆಯನ್ನು ಅರಿತುಕೊಳ್ಳಬೇಕು. ನಂದಿನಿಯನ್ನು ಅಧಿಕಾರಕ್ಕೊಂದು ಏಣಿ ಎಂದಷ್ಟೇ ಪರಿಗಣಿಸದೆ ಅದರ ಕಾಯಕಲ್ಪಕ್ಕೆ ಮುಂದಾಗಬೇಕು. ಪ್ರತಿ ಹಂತದಲ್ಲಿಯೂ ತಾಂಡವವಾಡುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು. ಸಿಬ್ಬಂದಿಯ ತಾಂತ್ರಿಕ ಕೌಶಲ್ಯ ಸುಧಾರಣೆಗೆ ಮಹತ್ವ ಕೊಡಬೇಕು, ಮಾರುಕಟ್ಟೆ ವಿಭಾಗದಲ್ಲಿ ಪ್ರಾಮಾಣಿಕರು ಇರುವಂತೆ ಮಾಡಬೇಕು. ಇವೆಲ್ಲವೂ ಸಾಧ್ಯವಾದರೆ ಮಾತ್ರ ಏಕಕಾಲಕ್ಕೆ ಗ್ರಾಮ ಮತ್ತು ನಗರವಾಸಿಗಳಿಗೆ, ರೈತರು ಮತ್ತು ಗ್ರಾಹಕರಿಗೆ, ಪ್ರಾಮಾಣಿಕ ಸಿಬ್ಬಂದಿ ಮತ್ತು ಹಲವು ವರ್ಷಗಳಿಂದ ಬೆವರು ಸುರಿಸಿದ ಪಾರ್ಲರ್ ಮಾಲೀಕರಲ್ಲಿ ನೆಮ್ಮದಿ ಮೂಡುತ್ತದೆ. ಬೆಲೆಏರಿಕೆಯ ತುಟ್ಟಿ ಕಾಲದಲ್ಲಿ ಮತ್ತೆ ಮನೆ ಬಜೆಟ್ ಹೆಚ್ಚಿಸಿಕೊಂಡ ಮಧ್ಯಮ ವರ್ಗದ ಜನರ ಪರಿತಾಪ ತುಸು ಕಡಿಮೆಯಾಗುತ್ತದೆ.