logo
ಕನ್ನಡ ಸುದ್ದಿ  /  ಕರ್ನಾಟಕ  /  ಸಂಪಾದಕೀಯ: ಮೌಢ್ಯದ ಮೈಲಿಗೆಗೆ ಮತ್ತೊಂದು ಮಗು ಬಲಿ, ಹೆಣ್ಮಕ್ಕಳ ಕಣ್ಣೀರು ಒರೆಸಲು ಇನ್ನೆಷ್ಟು ಯುಗ ಬೇಕು

ಸಂಪಾದಕೀಯ: ಮೌಢ್ಯದ ಮೈಲಿಗೆಗೆ ಮತ್ತೊಂದು ಮಗು ಬಲಿ, ಹೆಣ್ಮಕ್ಕಳ ಕಣ್ಣೀರು ಒರೆಸಲು ಇನ್ನೆಷ್ಟು ಯುಗ ಬೇಕು

HT Kannada Desk HT Kannada

Jul 27, 2023 06:00 AM IST

google News

ತುಮಕೂರು ತಾಲ್ಲೂಕು ಮಲ್ಲೇನಹಳ್ಳಿ ಗೊಲ್ಲರಹಟ್ಟಿಯಲ್ಲಿ ಮಗುವನ್ನು ಕಳೆದುಕೊಂಡ ತಾಯಿ.

    • ತುಮಕೂರು ಜಿಲ್ಲಾ ಕೇಂದ್ರದಿಂದ 10 ಕಿಮೀ ಫಾಸಲೆಯೊಳಗೆ, ಬೆಂಗಳೂರು ಎನ್ನುವ ರಾಜ್ಯ ರಾಜಧಾನಿಯಿಂದ 100 ಕಿಮೀ ಅಂತರದಲ್ಲಿ ಸಂಭವಿಸಿರುವ ಮಗುವಿನ ಸಾವು ಇನ್ನಾದರೂ ಕರ್ನಾಟಕದ ಅಂತಃಕರಣವನ್ನು ಕಲಕಬೇಕು. ಈ ಸಮುದಾಯದ ಹೆಣ್ಮಕ್ಕಳ ಕಣ್ಣೀರು ಒರೆಸಲು, ಅವರ ಕಷ್ಟಕ್ಕೆ ಸ್ಪಂದಿಸಲು ಸಮರ್ಪಕ ಯೋಜನೆಗಳು ರೂಪುಗೊಳ್ಳಬೇಕು
ತುಮಕೂರು ತಾಲ್ಲೂಕು ಮಲ್ಲೇನಹಳ್ಳಿ ಗೊಲ್ಲರಹಟ್ಟಿಯಲ್ಲಿ ಮಗುವನ್ನು ಕಳೆದುಕೊಂಡ ತಾಯಿ.
ತುಮಕೂರು ತಾಲ್ಲೂಕು ಮಲ್ಲೇನಹಳ್ಳಿ ಗೊಲ್ಲರಹಟ್ಟಿಯಲ್ಲಿ ಮಗುವನ್ನು ಕಳೆದುಕೊಂಡ ತಾಯಿ.

ಮಳೆಗಾಲದ ಥಂಡಿ ವಾತಾವರಣ ಇರುವಾಗ ಬಯಲಿನಲ್ಲಿ ಬಹುಕಾಲ ನಿಲ್ಲಲು ಆರೋಗ್ಯ ಸರಿಯಿರುವ ದೃಢಕಾಯರೇ ನಡುಗುತ್ತಾರೆ. ಅಂಥದ್ದರಲ್ಲಿ ಅವಧಿಪೂರ್ವ ಪ್ರಸವದಿಂದ ಜನಿಸಿದ್ದ ಮಗು, ಹಸಿ ಬಾಣಂತಿಯನ್ನು ತುಮಕೂರು ತಾಲ್ಲೂಕು ಮಲ್ಲೇನಹಳ್ಳಿ ಗೊಲ್ಲರಹಟ್ಟಿಯಲ್ಲಿ ಊರಾಚೆಯ ಗುಡಿಸಲಿನಲ್ಲಿ ಇರಿಸಿದ್ದರು. ಈ ಅಮಾನವೀಯ ಆಚರಣೆ ಬಗ್ಗೆ ಮಾಧ್ಯಮಗಳು ವರದಿ ಪ್ರಕಟಿಸಿದ್ದವು. ಆದರೆ ಅದರಿಂದ ಯಾರೊಬ್ಬರ ಕಣ್ಣೂ ತೆರೆಯಲಿಲ್ಲ, ಹೃದಯಗಳೂ ಕರಗಲಿಲ್ಲ. ಈ ಸಮುದಾಯದ ಧಾರ್ಮಿಕ ಆಚರಣೆ, ನಂಬಿಕೆಗಳಿಗೆ ಹೀಗೆ ಹಸಿ ಬಾಣಂತಿ-ಮಗುವನ್ನು ಗುಡಿಸಲುಗಳಲ್ಲಿ ಇರಿಸುವುದು ಸರಿ ಎನಿಸಬಹುದು. ಆದರೆ ಆ ಅಸಹಾಯಕ ತಾಯಿ ಮತ್ತು ಮಗು ತೆರೆದ ಬಯಲಿನ ಗುಡಿಸಲಿನಲ್ಲಿ ಅನುಭವಿಸಿದ ಹಿಂಸೆಯನ್ನು ನಾಗರಿಕ ಎನಿಸಿಕೊಳ್ಳುವ ಸಮಾಜ ಒಪ್ಪುವುದು ಹೇಗೆ? ಒಪ್ಪಿಕೊಂಡರೆ ಅದು ನಾಗರಿಕ ಎನಿಸಿಕೊಳ್ಳಲು ಅರ್ಹತೆ ಪಡೆಯುತ್ತದೆಯೇ?

ಬೆಂಗಳೂರಿನಿಂದ ಕೇವಲ 87 ಕಿಮೀ ದೂರವಿರುವ ಗ್ರಾಮದಲ್ಲಿ ಇಂಥ ಅಮಾನವೀಯ ಘಟನೆ ನಡೆದಿದೆ. ಸಂಪ್ರದಾಯದ ಆಚರಣೆ ವಿಚಾರದಲ್ಲಿ ಕಟ್ಟುನಿಟ್ಟಾಗಿರುವ ಗೊಲ್ಲ ಜನಾಂಗದಲ್ಲಿ ಜಾಗೃತಿ ಮೂಡಿಸುವ ಕೆಲಸಗಳು ನಿಧಾನವಾಗಿಯಾದರೂ ಕೆಲ ವರ್ಷಗಳ ಹಿಂದಷ್ಟೇ ಆರಂಭವಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಎಲ್ಲವೂ ಸರಿಯಾಯಿತು ಎನ್ನುವ ಭ್ರಮೆಯಲ್ಲಿ ಇಂಥ ಪ್ರಯತ್ನಗಳು ಹಿನ್ನೆಲೆಗೆ ಸರಿದಿದ್ದವು. ಈಗ ಅದರ ಫಲ ಎನ್ನುವಂತೆ ಮುಗ್ಧ ಕಂದಮ್ಮನ ಸಾವು ಸಂಭವಿಸಿದೆ. ಮೂಢನಂಬಿಕೆಯ ಕಂದಾಚಾರಗಳಲ್ಲಿ ಮುಳುಗಿದವರಿಗೆ ಜಾಗೃತಿಯ ಮಾರ್ಗ ತೋರಲು ವಿಫಲವಾದ ಸಮಾಜವೊಂದು ಆ ಮಗುವನ್ನು ಕೊಂದ ಅಪರಾಧಿಯ ಸ್ಥಾನದಲ್ಲಿ ನಿಲ್ಲಬೇಕಾಗಿದೆ. ಅದರ ಭಾಗವಾಗಿ ನಾವು-ನೀವೂ ಸಹ ಇದ್ದೇವೆ.

ಬಹುತೇಕ ಎಲ್ಲ ಜಾತಿ ಮತ್ತು ಧರ್ಮಗಳಲ್ಲಿ ಸಂಸ್ಕೃತಿಯ ಹೊರೆಯನ್ನು ಹೆಣ್ಣುಮಕ್ಕಳ ಮೇಲೆಯೇ ಹೊರಿಸಲಾಗುತ್ತದೆ. ಗೊಲ್ಲ ಜನಾಂಗವೂ ಇದಕ್ಕೆ ಹೊರತಾದುದಲ್ಲ. ಹಿಂದೆ ಅಲೆಮಾರಿಗಳಾಗಿದ್ದ ಈ ಜನಾಂಗದವರು ಹಸು, ಕುರಿಗಳನ್ನು ಮೇಯಿಸುತ್ತಾ ಮಧ್ಯ ಕರ್ನಾಟಕದಿಂದ ದಕ್ಷಿಣದ ಕೊಳ್ಳೇಗಾಲದವರೆಗೂ ಅಲೆದಾಡುತ್ತಿದ್ದರು. ಬಯಲಿನಲ್ಲಿಯೇ ಹೆಚ್ಚಾಗಿ ವಾಸಿಸಬೇಕಾದ ದೇಹಗಳಿಗೆ ವಾತಾವರಣದ ಏರಿಳಿತ ತಡೆದುಕೊಳ್ಳುವ ಶಕ್ತಿ ಬರಲಿ ಎನ್ನುವ ಕಾರಣಕ್ಕೆ ಹಿರಿಯರು ಮಗು-ಬಾಣಂತಿಯನ್ನು ಬಯಲು ಗುಡಿಸಲಿನಲ್ಲಿ ಇರಿಸುವ ಪದ್ಧತಿ ರೂಢಿಗೆ ತಂದಿರಬಹುದು.

ಈಗ ಕಾಲ ಬದಲಾಗಿದೆ, ಆದರೆ ಕೆಲವರ ಮನಃಸ್ಥಿತಿಗಳು ಹಾಗೆಯೇ ಉಳಿದುಕೊಂಡಿವೆ. ಇಂದಿಗೂ ಹೆಣ್ಮಕ್ಕಳು ಮುಟ್ಟಾದಾಗ ಹಲವು ಕುಟುಂಬಗಳಲ್ಲಿ ಅವರನ್ನು ಮನೆಗಳಿಂದ ಹೊರಗೆ ಇರಿಸಲಾಗುತ್ತಿದೆ. ಈ ಜಂಜಾಟವೇ ಬೇಡ ಎಂದು ಎಷ್ಟೋ ಮಹಿಳೆಯರು ಗರ್ಭಕೋಶವನ್ನೇ ತೆಗೆಸಿಕೊಂಡಿದ್ದಾರೆ. ಸಣ್ಣವಯಸ್ಸಿನ ಬಾಲಕಿಯರು ಮುಟ್ಟಾದರೆ ಶಾಲೆಗಳಿಗೆ ರಜೆ ಹಾಕಿಸುವ, ಮೈಲಿಗೆಯಾಗುತ್ತದೆ ಎಂದು ಅವರಿಂದ ಪುಸ್ತಕ ದೂರ ಇಡುವ, ಮನೆಗಳಿಂದ ಆಚೆಯೇ ರಾತ್ರಿ ಕಳೆಯುವಂತೆ ಮಾಡುವ ಪ್ರಕರಣಗಳೂ ನಿಂತಿಲ್ಲ.

ಗೊಲ್ಲ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಪ್ರಯತ್ನಗಳೂ ಸಾಕಷ್ಟು ನಡೆದಿದ್ದವು. ಈ ಹಿಂದೆ ಗೊಲ್ಲ ಜನಾಂಗದ ಕೃಷ್ಣ ಯಾದವಾನಂದ ಸ್ವಾಮೀಜಿ, ಹೊಸದುರ್ಗ ಭಗೀರಥ ಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ ಸೇರಿದಂತೆ ಹಲವು ಯತಿಗಳು ಗೊಲ್ಲರಹಟ್ಟಿಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದರು. ಇಂಥದ್ದೇ ಒಂದು ಸಂದರ್ಭದಲ್ಲಿ ಸನ್ಯಾಸಿಯೊಬ್ಬರು ಊರಿನ ಗಂಡಸರನ್ನು ತರಾಟೆಗೆ ತೆಗೆದುಕೊಂಡು, 'ನೀವು ಎಷ್ಟೋ ಜನ ಕುಡಿತದ ಚಟ ಅಂಟಿಸಿಕೊಂಡಿದ್ದೀರಿ. ಅದು ನಮ್ಮ ಮೂಲಪುರುಷ ಜುಂಜಪ್ಪನ ಮಾತಿಗೆ ವಿರುದ್ಧ. ಮೊದಲು ಅದನ್ನು ಬಿಡಿ. ನೀವು ಮಾತ್ರ ಕಾಲ ಬದಲಾಗೈತೆ ಅಂತ ಬೇಕಾದಂಗೆ ಬದುಕ್ತೀರಿ, ಹೆಂಗಸರನ್ನು ಮಾತ್ರ ಮಡಿ-ಮೈಲಿಗೆ ಅಂತ ಗೋಳು ತೆಗೀತೀರಿ' ಎಂದು ಗದರಿದ್ದನ್ನು ಹಲವು ಮಹಿಳೆಯರು ಇಂದಿಗೂ ನೆನಪಿಸಿಕೊಳ್ಳುತ್ತಾರೆ. 'ನಾವು ಶ್ರೀಕೃಷ್ಣನ ವಂಶಸ್ಥರು. ದ್ರೌಪದಿಗಾಗಿ ಮಹಾಭಾರತ ಯುದ್ಧವನ್ನೇ ಮಾಡಿಸಿದವನು ಕೃಷ್ಣ. ಅವನು ವಂಶಸ್ಥರಾಗಿ ಹೆಣ್ಮಕ್ಕಳ ಕಣ್ಣೀರು ಹಾಕಿಸಬಾರದು' ಎಂದು ಸ್ವಾಮೀಜಿ ಬುದ್ಧಿ ಹೇಳಿದ್ದನ್ನೂ ಈ ಜನಾಂಗದ ಹೆಣ್ಮಕ್ಕಳು ಮರೆತಿಲ್ಲ.

ಇವೆಲ್ಲಾ ಆಗಿ ಹತ್ತಾರು ವರ್ಷಗಳೇ ಆಗಿವೆ. ಆದರೆ ಇಂದಿಗೂ ಪರಿಸ್ಥಿತಿ ಸುಧಾರಿಸಿಲ್ಲ. ತುಮಕೂರು ಜಿಲ್ಲಾ ಕೇಂದ್ರದಿಂದ 10 ಕಿಮೀ ಫಾಸಲೆಯೊಳಗೆ, ಬೆಂಗಳೂರು ಎನ್ನುವ ರಾಜ್ಯ ರಾಜಧಾನಿಯಿಂದ 100 ಕಿಮೀ ಅಂತರದಲ್ಲಿ ಸಂಭವಿಸಿರುವ ಮಗುವಿನ ಸಾವು ಇನ್ನಾದರೂ ಕರ್ನಾಟಕದ ಅಂತಃಕರಣವನ್ನು ಕಲಕಬೇಕು. ಈ ಸಮುದಾಯದ ಹೆಣ್ಮಕ್ಕಳ ಕಣ್ಣೀರು ಒರೆಸಲು, ಅವರ ಕಷ್ಟಕ್ಕೆ ಸ್ಪಂದಿಸಲು ಸಮರ್ಪಕ ಯೋಜನೆಗಳು ರೂಪುಗೊಳ್ಳಬೇಕು. ಜಾಗೃತಿ ಕಾರ್ಯಕ್ಕೆ ಹೊಸ ವೇಗ ಸಿಗಬೇಕು. ಓದಿದ ಹೆಣ್ಣುಮಕ್ಕಳು ಹೇಳಿದ ಮಾತು ಕೇಳುವುದಿಲ್ಲ ಎನ್ನುವ ಕಾರಣಕ್ಕೆ ಅರ್ಧಕ್ಕೆ ಶಾಲೆ ಬಿಡಿಸುವ ಪ್ರವೃತ್ತಿಯೂ ಕಂಡುಬರುತ್ತಿದೆ. ಸರ್ಕಾರ ಕ್ರಮಕೈಗೊಳ್ಳದೇ ಈ ಪ್ರವೃತ್ತಿ ಸರಿಯಾಗುವುದಿಲ್ಲ. ಮಹಿಳೆಯರಿಗಾಗಿ ಗೃಹಲಕ್ಷ್ಮಿ, ಶಕ್ತಿ ಯೋಜನೆಗಳನ್ನು ಜಾರಿಗೊಳಿಸಿರುವ ಸರ್ಕಾರ ಇನ್ನಾದರೂ ಇತ್ತ ಗಮನ ಹರಿಸಿ, ಗೊಲ್ಲ ಸಮುದಾಯದ ಬಾಲಕಿಯರ ವಿದ್ಯಾಭ್ಯಾಸಕ್ಕೆ ಪ್ರತ್ಯೇಕ ಯೋಜನೆ ರೂಪಿಸಬೇಕಿದೆ. ವಿದ್ಯೆ ಮತ್ತು ಜಾಗೃತಿಯಿಂದ ಮಾತ್ರ ಮಹಿಳೆಯರನ್ನು ಕಾಡುತ್ತಿರುವ ಮೂಢನಂಬಿಕೆಯ ಪಿಡುಗು ದೂರಾಗಲು ಸಾಧ್ಯ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ