logo
ಕನ್ನಡ ಸುದ್ದಿ  /  ಕರ್ನಾಟಕ  /  Anjali Murder Case; ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆ ನೆನಪು ಮಾಸುವ ಮೊದಲೇ 20 ವರ್ಷದ ಅಂಜಲಿಯ ಭೀಕರ ಹತ್ಯೆ, 10 ಅಂಶಗಳ ವಿವರ ವರದಿ

Anjali Murder Case; ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆ ನೆನಪು ಮಾಸುವ ಮೊದಲೇ 20 ವರ್ಷದ ಅಂಜಲಿಯ ಭೀಕರ ಹತ್ಯೆ, 10 ಅಂಶಗಳ ವಿವರ ವರದಿ

Umesh Kumar S HT Kannada

May 16, 2024 08:38 AM IST

google News

ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆ ನೆನಪು ಮಾಸುವ ಮೊದಲೇ 20 ವರ್ಷದ ಅಂಜಲಿಯ (ಬಲಚಿತ್ರ) ಭೀಕರ ಹತ್ಯೆ ನಡೆದಿದೆ. ಅಂಜಲಿಯ ಶವ ಮುಂದಿಟ್ಟು ಸಾರ್ವಜನಿಕರು ಪ್ರತಿಭಟನೆ (ಎಡ ಚಿತ್ರ) ನಡೆಸಿದರು. ಆರೋಪಿ ವಿಶ್ವನಾಥ (ಗಿರೀಶ್ ಸಾವಂತ).

  • Anjali Murder Case; ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆ ನೆನಪು ಮಾಸುವ ಮೊದಲೇ 20 ವರ್ಷದ ಅಂಜಲಿಯ ಭೀಕರ ಹತ್ಯೆ ನಡೆದಿದೆ. ಈ ಕೃತ್ಯ ನಡೆಸಿದ ಆರೋಪಿ ಗಿರೀಶ್ ಸಾವಂತನ ಪತ್ತೆಗೆ ಪೊಲೀಸರು ಬಲೆಬೀಸಿದ್ದಾರೆ. ಈ ವಿದ್ಯಮಾನದ 10 ಅಂಶಗಳ ವಿವರ ವರದಿ ಇಲ್ಲಿದೆ.

ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆ ನೆನಪು ಮಾಸುವ ಮೊದಲೇ 20 ವರ್ಷದ ಅಂಜಲಿಯ (ಬಲಚಿತ್ರ) ಭೀಕರ ಹತ್ಯೆ ನಡೆದಿದೆ. ಅಂಜಲಿಯ ಶವ ಮುಂದಿಟ್ಟು ಸಾರ್ವಜನಿಕರು ಪ್ರತಿಭಟನೆ (ಎಡ ಚಿತ್ರ) ನಡೆಸಿದರು. ಆರೋಪಿ ವಿಶ್ವನಾಥ (ಗಿರೀಶ್ ಸಾವಂತ).
ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆ ನೆನಪು ಮಾಸುವ ಮೊದಲೇ 20 ವರ್ಷದ ಅಂಜಲಿಯ (ಬಲಚಿತ್ರ) ಭೀಕರ ಹತ್ಯೆ ನಡೆದಿದೆ. ಅಂಜಲಿಯ ಶವ ಮುಂದಿಟ್ಟು ಸಾರ್ವಜನಿಕರು ಪ್ರತಿಭಟನೆ (ಎಡ ಚಿತ್ರ) ನಡೆಸಿದರು. ಆರೋಪಿ ವಿಶ್ವನಾಥ (ಗಿರೀಶ್ ಸಾವಂತ).

ಹುಬ್ಬಳ್ಳಿ: ನೇಹಾ ಹಿರೇಮಠ ಎಂಬ ಯುವತಿಯ ದಾರುಣ ಹತ್ಯೆಯ ನೆನಪು ಮಾಸುವ ಮೊದಲೇ ಹುಬ್ಬಳ್ಳಿಯಲ್ಲಿ 20 ವರ್ಷ ವಯಸ್ಸಿನ ಅಂಜಲಿ ಅಂಬಿಗೇರ ಎಂಬ ಯುವತಿಯ ಹತ್ಯೆ ನಡೆದಿದೆ. ಕೊಲೆ ಮಾಡಿದ ಆರೋಪಿಯನ್ನು 21 ವರ್ಷದ ವಿಶ್ವನಾಥ (ಗಿರೀಶ್ ಸಾವಂತ್‌) ಎಂದು ಗುರುತಿಸಲಾಗಿದೆ. ಅಂಜಲಿ ಹತ್ಯೆ ಪ್ರಕರಣ (Anjali Murder Case) ಗಂಭೀರವಾಗಿದ್ದು, ಸಾಮಾಜಿಕ ಸಂಚಲನ ಮೂಡಿಸಿದೆ.

ಹುಬ್ಬಳ್ಳಿಯ ವೀರಾಪುರ ಓಣಿಗೆ ಬಂದ ಗಿರೀಶ್ ಸಾವಂತ್‌ ನಿನ್ನೆ (ಮೇ 15) ಅಂಜಲಿ ಅಂಬಿಗೇರ ಅವರ ಮನೆಗೆ ಹೋಗಿ ಆಕೆಯ ಮೇಲೆ ಹಲ್ಲೆ ನಡೆಸಿ, ಚಾಕುವಿನಿಂದ ಇರಿದು ಹತ್ಯೆ ಮಾಡಿ ಓಡಿ ಹೋಗಿದ್ದ. ಈತ ಓಡಿ ಹೋಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಈ ಘಟನೆಯ ಬೆನ್ನಿಗೆ ಹುಬ್ಬಳ್ಳಿಯಲ್ಲಿ ಭಾರಿ ಪ್ರತಿಭಟನೆ ನಡೆದಿದ್ದು, ನೇಹಾ ಹಿರೇಮಠ ಅವರ ತಂದೆ ನಿರಂಜನ ಹಿರೇಮಠ ಅವರೇ ನೇತೃತ್ವವಹಿಸಿದ್ದರು.

ನೇಹಾ ಹಿರೇಮಠ ಹತ್ಯೆ ಏಪ್ರಿಲ್ 18 ರಂದು ಹುಬ್ಬಳ್ಳಿಯ ಬಿವಿಬಿ ಎಂಜಿನಿಯರಿಂಗ್ ಕಾಲೇಜು ಕ್ಯಾಂಪಸ್‌ನಲ್ಲಿ ಹಾಡುಹಗಲೇ ನಡೆದಿತ್ತು. ಫಯಾಜ್ ಎಂಬಾತ ಹತ್ಯೆ ಆರೋಪಿಯಾಗಿದ್ದ. ಪ್ರೀತಿ ನಿರಾಕರಿಸಿದ್ದಕ್ಕೆ ಚಾಕುವಿನಿಂದ ಇರಿದು, ಗಂಟಲು ಕೊಯ್ದು ಹತ್ಯೆ ಮಾಡಿದ್ದ. ನೇಹಾ ಹಿರೇಮಠ ಸ್ಥಳೀಯ ಕಾಂಗ್ರೆಸ್ ಕಾರ್ಪೊರೇಟರ್ ನಿರಂಜನ ಹಿರೇಮಠ.

ಅಂಜಲಿ ಹತ್ಯೆ ಪ್ರಕರಣ; 10 ಮುಖ್ಯ ಅಂಶಗಳು

1) ಹುಬ್ಬಳ್ಳಿಯ ವೀರಾಪುರ ಓಣಿಯ ಕರಿಯಮ್ಮನ ಗುಡಿ ಸಮೀಪದ ನಿವಾಸಿ ಅಂಜಲಿ ಮೋಹನ ಅಂಬಿಗೇರ (20) ಎಂಬ ಯುವತಿಯನ್ನು ಪಕ್ಕದ ರಾಮಾಪುರ ಓಣಿಯ ನಿವಾಸಿ ಗಿರೀಶ್ ಎಂ ಸಾವಂತ ಎಂಬಾತ ನಿನ್ನೆ (ಮೇ 15) ಬೆಳಗಿನ ಜಾವ ಚಾಕುವಿನಿಂದ ಇರಿದು ಹತ್ಯೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

2) ಬೆಳಗಿನ ಜಾವ ಅಂಜಲಿಯ ಮನೆ ಸಮೀಪ ಹೋದ ಗಿರೀಶ್ ಮನೆಯ ಬಾಗಿಲು ಬಡಿದಿದ್ದಾನೆ. ಅಂಜಲಿ ಬಾಗಿಲು ತೆರೆದ ಕೂಡಲೇ ತನ್ನ ಬಳಿ ಇದ್ದ ಚಾಕುವಿನಿಂದ ಆಕೆಯ ಹೊಟ್ಟೆ, ಎದೆಯ ಭಾಗಕ್ಕೆ ಇರಿದಿದ್ದಾನೆ. ಈ ಅನಿರೀಕ್ಷಿತ ದಾಳಿಯಿಂದ ಕುಸಿದ ಅಂಜಲಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ನಾಲ್ಕು ಇರಿತದ ಗಾಯಗಳು ಶರೀರದ ಮೇಲಿವೆ ಎಂದು ಪೊಲೀಸರು ತಿಳಿಸಿದ್ದಾರೆ.

3) ಕೊಲೆ ಆರೋಪಿ ಗಿರೀಶ್ ಸಾವಂತ ಮತ್ತು ಅಂಜಲಿ ಸಹಪಾಠಿಗಳು. ಅಂಜಲಿ ಅಂಬಿಗೇರ ಕ್ಯಾಟರಿಂಗ್ ಕೆಲಸ ಮಾಡುತ್ತಿದ್ದಳು. ಗಿರೀಶನ ವಿರುದ್ಧ ಹಲವು ಕಳ್ಳತನ ಕೇಸ್‌ಗಳಿವೆ. ಸಹಪಾಠಿಯಾದ ಕಾರಣ ವಿಶ್ವನ ಜೊತೆ ಅಂಜಲಿ ಅಂಬಿಗೇರ ಸ್ನೇಹದಿಂದ ಇದ್ದಳು. ಅದನ್ನು ಆತ ತಪ್ಪಾಗಿ ಅರ್ಥಮಾಡಿಕೊಂಡಿದ್ದ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ.

4) ಆರೋಪಿ ಗಿರೀಶ್ ಸಾವಂತ ಕಳೆದ ವಾರ ಅಂಜಲಿಯನ್ನು ಭೇಟಿ ಮಾಡಿದ್ದು, ಮೈಸೂರಿಗೆ ಜೊತೆಗೆ ಹೋಗೋಣ ಎಂದು ಆಹ್ವಾನಿಸಿದ್ದ. ಆದರೆ ಅದಕ್ಕೆ ಆಕೆ ಒಪ್ಪದ ಕಾರಣ ನೇಹಾ ಹಿರೇಮಠ ಮಾದರಿಯಲ್ಲೇ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಈ ಬೆದರಿಕೆ ವಿಚಾರವನ್ನು ಅಂಜಲಿಯ ಸಹೋದರಿ ಮತ್ತು ಅಜ್ಜಿ ಬೆಂಡಿಗೇರಿ ಪೊಲೀಸರಿಗೆ ಮೌಖಿಕವಾಗಿ ತಿಳಿಸಿದ್ದರು ಎಂಬ ವಿಷಯ ಬಹಿರಂಗವಾಗಿದೆ.

5) ದೂರು ನೀಡಲು ಬಂದವರ ಮಾತುಗಳನ್ನು ಕೇಳಿಸಿಕೊಂಡು, ಅಂಥವೆಲ್ಲ ಏನೂ ಆಗಲ್ಲ. ಅವನೇನೂ ಮಾಡಲ್ಲ. ನಿಮ್ಮದು ಮೂಢನಂಬಿಕೆ ಎಂದು ಪೊಲೀಸ್ ಅಧಿಕಾರಿಗಳು ತಮ್ಮನ್ನು ಸಾಗಹಾಕಿದ್ದರು ಎಂದು ಅಂಜಲಿಯ ಕುಟುಂಬ ಸದಸ್ಯರು ದೂರಿದ್ದಾರೆ.

6) ಆರೋಪಿ ಗಿರೀಶ್ ವಿರುದ್ಧ ಕಳವು ಸೇರಿ ವಿವಿಧ ಪ್ರಕರಣಗಳಿದ್ದು, ಇತ್ತೀಚೆಗೆ ಸೆರೆಯಲ್ಲಿದ್ದು ಬಂದಿದ್ದ. ಗಿರೀಶ್ ಅಪರಾಧ ಹಿನ್ನೆಲೆ ಇರುವಂಥವನು. ಹೀಗಾಗಿಯೇ ತನ್ನ ಪ್ರೇಮವನ್ನು ನಿರಾಕರಿಸುತ್ತಿರುವ ಅಂಜಲಿಯ ಹತ್ಯೆಗೆ ತಯಾರಿ ಮಾಡಿಕೊಂಡಿದ್ದ ಎಂಬುದು ಗಮನಸೆಳೆದಿದೆ.

7) ಹುಬ್ಬಳ್ಳಿಯ ಕಿಮ್ಸ್‌ ಶವಾಗಾರದಿಂದ ಅಂಜಲಿಯ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಿದ ಕೂಡಲೇ, ಮೆರವಣಿಗೆ ಮೂಲಕ ವೀರಾಪುರ ಓಣಿಯಿಂದ ಹುಬ್ಬಳ್ಳಿಯ ಚೆನ್ನಮ್ಮ ವೃತ್ತಕ್ಕೆ ತಂದ ಸಾರ್ವಜನಿಕರು ಅಲ್ಲಿ ಪ್ರತಿಭಟನೆ ನಡೆಸಿದರು. ಅಂಜಲಿಯ ಮನೆಯ ಸಮೀಪವೂ ಕೆಲ ಹೊತ್ತು ಪ್ರತಿಭಟನೆ ನಡೆಸಿದ್ದರು.

8) ಕಳೆದ ತಿಂಗಳಷ್ಟೇ ಇಂಥದ್ದೇ ಪ್ರಕರಣದಲ್ಲಿ ಮಗಳು ನೇಹಾ ಹಿರೇಮಠ ಅವರನ್ನು ಕಳೆದುಕೊಂಡಿದ್ದ ನಿರಂಜನ ಹಿರೇಮಠ ಪ್ರತಿಭಟನೆಯ ನೇತೃತ್ವವಹಿಸಿ ಗಮನಸೆಳೆದರು. ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಇಲ್ಲದೇ ಹೋದರೆ ನಾವೇ ಶಿಕ್ಷೆ ನೀಡುತ್ತೇವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

9) ಜಿಲ್ಲಾಧಿಕಾರಿಗಳು ಸ್ಥಳಕ್ಕಾಗಮಿಸಿ ನ್ಯಾಯ ಒದಗಿಸುವ ಭರವಸೆ ನೀಡಿದ ಬಳಿಕವೇ ಮುಂದಿನ ಕೆಲಸ ಎಂದು ಅಂಜಲಿಯ ಕುಟುಂಬ ಸದಸ್ಯರು, ಹಿತೈಷಿಗಳು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದರು. ಈ ವೇಳೆ ಜಿಲ್ಲಾಧಿಕಾರಿಯವರ ಪ್ರತಿನಿಧಿಯಾಗಿ ತಹಸೀಲ್ದಾರ್‌ ಕಲ್ಲಗೌಡ ಪಾಟೀಲ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಸಾಂತ್ವನ ಹೇಳಿ ಮನವೊಲಿಸಲು ಪ್ರಯತ್ನಿಸಿದ್ದರು.

10) ಅಂಜಲಿಯ ಮನೆಯವರು ದೂರು ನೀಡಲು ಬಂದಾಗ ನಿರ್ಲಕ್ಷಿಸಿ ಅವರನ್ನು ವಾಪಸ್ ಕಳುಹಿಸಿದ ವಿಚಾರವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಈ ಸಂಬಂಧ ಬೆಂಡಿಗೇರಿ ಪೊಲೀಸ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಚಂದ್ರಶೇಖರ ಚಿಕ್ಕೋಡಿ, ಮಹಿಳಾ ಹೆಡ್‌ ಕಾನ್‌ಸ್ಟೆಬಲ್‌ ರೇಖಾ ಹಾವರೆಡ್ಡಿ ಅವನ್ನು ಅಮಾನತುಗೊಳಿಸಲಾಗಿದೆ. ಆರೋಪಿ ಗಿರೀಶ್ ಸಾವಂತ ಇನ್ನೂ ತಲೆಮರೆಸಿಕೊಂಡಿದ್ದು ಶೋಧ ಮುಂದುವರಿದಿದೆ.

ಏಕಮುಖ ಪ್ರೇಮಪ್ರಕರಣ; ಹುಬ್ಬಳ್ಳಿಯಲ್ಲಿ ಹೆಚ್ಚಿದ ಕಳವಳ

ಹುಬ್ಬಳ್ಳಿಯಲ್ಲಿ ಕಳೆದ ತಿಂಗಳು ನೇಹಾ ಹಿರೇಮಠ ಕೊಲೆ ಪ್ರಕರಣ ನಡೆದಿದ್ದು, ನಿನ್ನೆ ಅಂಜಲಿ ಹತ್ಯೆ ನಡೆದಿದೆ. ಈ ಎರಡೂ ಪ್ರಕರಣಗಳಲ್ಲಿ ಏಕಮುಖ ಪ್ರೇಮ ಮುಖ್ಯ ವಿಷಯವಾಗಿ ಗೋಚರಿಸಿದೆ. ಹಿಂದಿನ ಕೊಲೆ ನಿನ್ನೆಯ ಕೊಲೆಗೆ ಪ್ರೇರಣೆಯಂತೆ ಕಂಡುಬಂದಿದೆ. ನೇಹಾ ಕೊಲೆ ನಡೆದಂತೆಯೇ ನಿನ್ನ ಕೊಲೆಯನ್ನೂ ಮಾಡುವುದಾಗಿ ಅಂಜಲಿಗೆ ಆರೋಪಿ ಗಿರೀಶ್ ಸಾವಂತ ಬೆದರಿಕೆ ಹಾಕಿದ್ದು ಇದಕ್ಕೆ ಪೂರಕವಾಗಿ ಕಂಡುಬಂದಿದೆ.

ಸಾರ್ವಜನಿಕ ವಲಯದಲ್ಲಿ ಏಕಮುಖ ಪ್ರೇಮ ಪ್ರಕರಣವನ್ನು ಇನ್ನು ನಿರ್ಲಕ್ಷಿಸುವಂತೆ ಇಲ್ಲ ಎಂಬ ಭಾವನೆ ವ್ಯಕ್ತವಾಗಿದ್ದು, ಆರೋಪಿಗಳನ್ನು ಗಲ್ಲಿಗೇರಿಸಿ ಇಂತಹ ಕುಕೃತ್ಯ ನಡೆಸುವವರಿಗೆ ಎಚ್ಚರಿಕೆ ಸಂದೇಶ ರವಾನಿಸಬೇಕು ಎಂಬ ಆಗ್ರಹ ವ್ಯಾಪಕವಾಗಿ ವ್ಯಕ್ತವಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ