Hubballi News: ಶ್ರೀಕಾಂತ್ ಪೂಜಾರ ಬಂಧನ ವಿರೋಧಿಸಿ ಹುಬ್ಬಳ್ಳಿ ನಗರ ಪೊಲೀಸ್ ಠಾಣೆ ಎದುರು ಬಿಜೆಪಿ ಬೃಹತ್ ಪ್ರತಿಭಟನೆ
Jan 03, 2024 02:04 PM IST
ಹುಬ್ಬಳ್ಳಿಯ ಟೌನ್ ಪೊಲೀಸ್ ಠಾಣೆ ಎದುರು ಬಿಜೆಪಿ ಕಾರ್ಯಕರ್ತರ ಬೃಹತ್ ಪ್ರತಿಭಟನೆಯ ನೋಟ.
ಹಿಂದೂ ಕಾರ್ಯಕರ್ತ ಶ್ರೀಕಾಂತ ಪೂಜಾರ್ ಅವರನ್ನು ಮೂರು ದಶಕ ಹಳೆಯ ಕೇಸ್‌ಗೆ ಸಂಬಂಧಿಸಿ ಬಂಧಿಸಿದ್ದನ್ನು ಖಂಡಿಸಿ ಇಂದು (ಜ.3) ಬಿಜೆಪಿ ಕಾರ್ಯಕರ್ತರು ಭಾರಿ ಪ್ರತಿಭಟನೆ ನಡೆಸಿದರು. ಹುಬ್ಬಳ್ಳಿಯ ನಗರ ಪೊಲೀಸ್ ಠಾಣೆ ಎದುರು ಸಂಜೆ 4 ಗಂಟೆ ತನಕ ಪ್ರತಿಭಟನೆ ನಡೆಸುವುದಾಗಿ ಬಿಜೆಪಿ ನಾಯಕರು ಘೋಷಿಸಿದ್ದಾರೆ.
ಹುಬ್ಬಳ್ಳಿ: ಮೂರು ದಶಕ ಹಿಂದೆ ರಾಮಜನ್ಮ ಭೂಮಿ ಹೋರಾಟದಲ್ಲಿ ಭಾಗಿಯಾದ ಶ್ರೀಕಾಂತ್ ಪೂಜಾರ ಬಂಧನ ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆಗೆ ಕಾರಣವಾಗಿದೆ. ಬಿಜೆಪಿ ಕಾರ್ಯಕರ್ತರು ಮತ್ತು ಹಿಂದೂ ಕಾರ್ಯಕರ್ತರು ಹುಬ್ಬಳ್ಳಿಯ ನಗರ ಪೊಲೀಸ್ ಠಾಣೆ ಎದುರು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ.
ಬಿಜೆಪಿ ಮತ್ತು ಹಿಂದೂ ಕಾರ್ಯಕರ್ತರು ಪೂರ್ವಾಹ್ನ 11ರ ಸುಮಾರಿಗೆ ಪ್ರತಿಭಟನೆ ಶುರುಮಾಡಿದ್ದಾರೆ. ಸಂಜೆ 4 ಗಂಟೆ ತನಕ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದ್ದಾರೆ. ವಿಧಾನಸಭೆಯ ವಿಪಕ್ಷ ನಾಯಕ ಆರ್. ಅಶೋಕ್ ಪ್ರತಿಭಟನಾ ಸ್ಥಳದಲ್ಲಿದ್ದು, ಅವರ ನೇತೃತ್ವದಲ್ಲೇ ಪ್ರತಿಭಟನೆ ನಡೆದಿದೆ. ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದು, ಪರಿಸ್ಥಿತಿ ಕೈಮೀರಿ ಹೋಗದಂತೆ ನಿಗಾವಹಿಸಿದ್ದಾರೆ.
ಅಯೋಧ್ಯೆಯಲ್ಲಿ ಜನವರಿ 22ರಂದು ರಾಮಮಂದಿರ ಉದ್ಘಾಟನೆಗೆ ಸಿದ್ಧವಾಗುತ್ತಿರುವಾಗಲೇ, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಹಿಂದೂ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿ ದಶಕಗಳ ಹಳೆಯ ಕೇಸ್‌ಗಳನ್ನು ಕೆದಕಿ ಬಂಧಿಸುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನಾ ಸ್ಥಳದಲ್ಲಿ ಬಿಜೆಪಿ ನಾಯಕರು, ಕಾರ್ಯಕರ್ತರು ಭಜನೆ ಮಾಡುತ್ತ, ಶ್ರೀರಾಮ ದೇವರಿಗೆ ಜೈಕಾರ ಹಾಕುತ್ತ ಪ್ರತಿಭಟನೆ ಮುಂದುವರಿಸಿದ್ದಾರೆ. ಅಷ್ಟೇ ಅಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧವೂ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ.
ಪ್ರತಿಭಟನಾ ಸ್ಥಳದಲ್ಲಿ ಆರ್. ಅಶೋಕ್ ಅವರ ಜತೆಗೆ ಶಾಸಕರಾದ ಅರವಿಂದ ಬೆಲ್ಲದ್, ಮಹೇಶ ಟೆಂಗಿನಕಾಯಿ, ಎಂ.ಆರ್. ಪಾಟೀಲ್, ಎಂಎಲ್‌ಸಿ ಪ್ರದೀಪ್ ಶೆಟ್ಟರ ಸೇರಿ ಅನೇಕ ನಾಯಕರು ಭಾಗಿಯಾಗಿದ್ದಾರೆ.
ಮುಂಜಾಗ್ರತಾ ದೃಷ್ಟಿಯಿಂದ ಅಂಗಡಿ ಮುಂಗಟ್ಟು ಬಂದ್ ಮಾಡಿಸಿದ ಪೊಲೀಸರು
ಭಾರಿ ಸಂಖ್ಯೆಯಲ್ಲಿ ಬಿಜೆಪಿ ಮತ್ತು ಹಿಂದೂ ಕಾರ್ಯಕರ್ತರು ಸೇರಿದ ಕಾರಣ ಹುಬ್ಬಳ್ಳಿ ನಗರ ಪೊಲೀಸ್ ಠಾಣೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಂಗಡಿ ಮುಂಗಟ್ಟುಗಳನ್ನು ಪೊಲೀಸರು ಬಂದ್ ಮಾಡಿಸಿದ್ದಾರೆ. ಮುಂಜಾಗ್ರತಾ ದೃಷ್ಟಿಯಿಂದ ಪೊಲೀಸರು ಈ ಕ್ರಮ ತೆಗೆದುಕೊಂಡ ಕಾರಣ, ಅಘೋಷಿತ ಬಂದ್‌ನ ವಾತಾವರಣ ಸ್ಥಳದಲ್ಲಿ ಕಂಡುಬಂದಿದೆ.
ಬಿಜೆಪಿಯವರ ಪ್ರತಿಭಟನೆ ಕಾರಣ ಇಂದು (ಜ.3) ಬ್ರಾಡ್‌ವೇ ರಸ್ತೆಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಪೊಲೀಸ್ ಠಾಣೆಗೆ ಯಾರೂ ನುಗ್ಗದಂತೆ ವಾಹನಗಳನ್ನು ಅಡ್ಡ ನಿಲ್ಲಿಸಿದ್ದಾರೆ. ಸ್ಥಳದಲ್ಲಿ 500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಭದ್ರತೆಗಾಗಿ ನಿಯೋಜಿಸಲ್ಪಟ್ಟಿದ್ದಾರೆ.
ಶ್ರೀಕಾಂತ್ ಪೂಜಾರಿಯನ್ನು ಕರಸೇವಕ ಎಂಬ ಕಾರಣಕ್ಕೆ ಬಂಧಿಸಿಲ್ಲ; ಗೃಹ ಸಚಿವ ಡಾ.ಜಿ.ಪರಮೇಶ್ವರ್
ಹಿಂದೂ ಕಾರ್ಯಕರ್ತ ಶ್ರೀಕಾಂತ್ ಪೂಜಾರ್ ಬಂಧನವಾಗಿರುವುದು, ಆತ ರಾಮ ಭಕ್ತ ಎಂದೋ ಕರಸೇವಕ ಎಂದೋ ಅಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ ಬೆಂಗಳೂರಿನಲ್ಲಿ ಸ್ಪಷ್ಟಪಡಿಸಿದರು.
ಶ್ರೀಕಾಂತ್ ಪೂಜಾರ ವಿರುದ್ಧ 16 ಪ್ರಕರಣಗಳಿವೆ. 31 ವರ್ಷ ಹಿಂದಿನ ಪ್ರಕರಣ ಎಂಬ ಮಾತೇ ಇಲ್ಲಿ ಬರುವುದಿಲ್ಲ. ಬಿಜೆಪಿ ಸರ್ಕಾರ ಯಾಕೆ ಶ್ರೀಕಾಂತ್ ಪೂಜಾರನನ್ನು ಖುಲಾಸೆಗೊಳಿಸಿಲ್ಲ ಎಂದು ಪ್ರಶ್ನಿಸಿದ ಡಾ.ಜಿ.ಪರಮೇಶ್ವರ, ಇದು ಸರ್ಕಾರದ ಕೆಲಸ. ಕಾನೂನು ಚೌಕಟ್ಟಿನಲ್ಲಿ ಏನು ಆಗಬೇಕೋ ಅದು ಆಗುತ್ತದೆ ಎಂದು ಹೇಳಿದರು.
ರಾಮ ಕರಸೇವಕರ ಪಟ್ಟಿಯನ್ನೇ ಕೊಡ್ತೇನೆ. ತಾಕತ್ತಿದ್ದರೆ ಎಲ್ಲರನ್ನೂ ಸರ್ಕಾರ ಬಂಧಿಸಲಿ ಎಂದು ಬಿಜೆಪಿ ಶಾಸಕ ಸುನಿಲ್ ಕುಮಾರ್ ಅವರು ನಿನ್ನೆ (ಜ.2) ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ, ನಮ್ಮದು ಚುನಾಯಿತ ಸರ್ಕಾರ. ಜನರೇ ನಮಗೆ ಆ ತಾಕತ್ತನ್ನು ಕೊಟ್ಟಿದ್ದಾರೆ. ಯಾವುದೇ ಚುನಾಯಿತ ಸರ್ಕಾರ ಕಾನೂನು ಚೌಕಟ್ಟಿನಲ್ಲೇ ಕೆಲಸ ಮಾಡುತ್ತದೆ ಎಂದು ಹೇಳಿದರು.