Neha Hiremath: ನನ್ನ ಮಗನೊಂದಿಗೆ ನೇಹಾ ಪ್ರೀತಿ ಇತ್ತು, ಮದುವೆಯಾಗುವುದಾಗಿ ಹೇಳಿದ್ದಳು, ಕೊಲೆ ಮಾಡಿದ್ದು ತಪ್ಪು: ಫಯಾಜ್ ತಾಯಿ
Apr 20, 2024 02:48 PM IST
ಫಯಾಜ್ ತಾಯಿ ಮುಮ್ತಾಜ್ ಹಾಗೂ ನೇಹಾ ಹಿರೇಮಠ,
- Hubli crime Updates ಹುಬ್ಬಳ್ಳಿಯಲ್ಲಿ ನಡೆದ ನೇಹಾ ಪ್ರಕರಣ ರಾಜಕೀಯ ತಿರುವು ಪಡೆಯತ್ತಿರುವ ನಡುವೆ ಆಕೆ ನನ್ನನ್ನು ಮಗನನ್ನು ಪ್ರೀತಿಸುತ್ತಿದ್ದಳು. ಒಂದು ಕಡೆಯ ಪ್ರೀತಿ ಇದಲ್ಲ ಎಂದು ಕೊಲೆ ಆರೋಪ ಹೊತ್ತಿರುವ ಫಯಾಜ್ ತಾಯಿ ಹೇಳಿದ್ದಾರೆ. ಆತನಿಗೆ ಕಠಿಣ ಶಿಕ್ಷೆಯಾಗಲಿ ಎಂದು ಆಗ್ರಹಿಸಿದ್ದಾರೆ.
ಹುಬ್ಬಳ್ಳಿ: ನನ್ನ ಮಗ ಯಾರ ಹಿಂದೂ ಹೋದನವಲ್ಲ. ನನ್ನ ಮಗನನ್ನು ಆಕೆಯೇ ಪ್ರೀತಿಸುತ್ತಿದ್ದಳು. ವರ್ಷದ ಹಿಂದೆಯೇ ಇದನ್ನು ನನ್ನ ಬಳಿಯೂ ಹೇಳಿಕೊಂಡಿದ್ದ. ಆದರೂ ಇವೆಲ್ಲಾ ಬೇಡ. ಚೆನ್ನಾಗಿ ಓದಿಕೋ ಎಂದು ನಾನು ಅವನಿಗೆ ಹೇಳುತ್ತಲೇ ಇದ್ದೆ. ಆದರೆ ಅದೇನಾಯಿತೋ ಆಕೆಯನ್ನು ಕೊಲೆ ಮಾಡಿದ್ದಾನೆ. ಇದು ತಪ್ಪು. ಆಕೆಯೂ ನನ್ನ ಮಗಳ ಇದ್ದ ಹಾಗೆ ಎಂದು ಹುಬ್ಬಳ್ಳಿಯ ನೇಹಾ ಹಿರೇಮಠ ಕೊಲೆ ಆರೋಪ ಎದುರಿಸುತ್ತಿರುವ ಫಯಾಜ್‌ನ ತಾಯಿ ಹೇಳಿದ ಮಾತಿದು. ಸುದ್ದಿಗಾರರೊಂದಿಗೆ ಮಾತನಾಡಿದ ಅವರ ತಾಯಿ ಮುಮ್ತಾಜ್, ಇದು ಇಬ್ಬರ ನಡುವಿನ ಪ್ರೇಮ ಪ್ರಕರಣ ಎನ್ನುವ ಮೂಲಕ ಇದಕ್ಕೆ ತಿರುವು ನೀಡಿದ್ದಾರೆ.
ಎಬಿವಿಪಿ ಸೇರಿದಂತೆ ನಾನಾ ಸಂಘಟನೆಗಳು ಆರೋಪಿಗೆ ಶಿಕ್ಷೆಯಾಗಬೇಕು ಎಂದು ಪ್ರತಿಭಟನೆ ನಡೆಸುತ್ತಿದ್ದರೆ, ಬಿಜೆಪಿ ಇದರ ಹಿಂದೆ ಲವ್ ಜಿಹಾದ್ ಇದೆ ಎಂದು ಆರೋಪಿಸಿವೆ. ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಪರಮೇಶ್ವರ್ ಅವರು ವೈಯಕ್ತಿಕ ಕಾರಣಕ್ಕೆ ನಡೆದಿರುವ ಘಟನೆಯಿದು. ಆರೋಪಿಗೆ ಶಿಕ್ಷೆಯಾಗಲಿದೆ. ಆದರೆ ಈ ಪ್ರಕರಣಕ್ಕೆ ರಾಜಕೀಯ ಬಣ್ಣ ಬಳಿಯುವುದು ಬೇಡ ಎಂದು ನೀಡಿರುವ ಹೇಳಿಕೆಗಳು ಸಾಕಷ್ಟು ಚರ್ಚೆಗೆ ಕಾರಣವಾಗಿದ್ದವು. ನೇಹಾ ಪೋಷಕರೂ ಸಿಎಂ ಹಾಗೂ ಗೃಹ ಸಚಿವರ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದರು.
ಈ ನಡುವೆ ಬೆಳಗಾವಿ ಜಿಲ್ಲೆಯ ಮುನವಳ್ಳಿಯಲ್ಲಿ ಸುದ್ದಿಗಾರರ ಜತೆಗೆ ಶಿಕ್ಷಕಿಯಾಗಿರುವ ಫಯಾಜ್ ತಾಯಿ ಮಾತನಾಡಿದರು.
ನನ್ನ ಮಗನನ್ನು ನೇಹಾ ಪ್ರೀತಿಸುತ್ತಿದ್ದಳು. ಫಯಾಜ್ ದೇಹದಾರ್ಡ್ಯ ಸ್ಪರ್ಧೆಯಲ್ಲಿ ವಿಶ್ವವಿದ್ಯಾನಿಲಯಕ್ಕೆ ಪ್ರಥಮ ಸ್ಥಾನ ಪಡೆದಿದ್ದ. ಆನಂತರ ಹಲವಾರು ಹುಡುಗಿಯನ್ನು ನನ್ನನ್ನು ನೋಡುತ್ತಾರೆ. ಮಾತನಾಡಿಸುತ್ತಾರೆ. ಆದರೆ ನೇಹಾ ಕೂಡ ಮಾತನಾಡಿಸುತ್ತಾಳೆ. ನನ್ನನ್ನು ಪ್ರೀತಿಸುತ್ತಾಳೆ ಎಂದು ನನ್ನ ಬಳಿ ಹೇಳಿಕೊಂಡಿದ್ದೆ. ಆದರೂ ನೀನು ಚೆನ್ನಾಗಿ ಓದಬೇಕು. ಇದೆಲ್ಲವನ್ನೂ ಬಿಟ್ಟುಬಿಡು ಎಂದು ಕಿವಿಮಾತು ಹೇಳಿದ್ದೆ. ಆದರೂ ಪ್ರೀತಿ ಮುಂದುವರೆದಿತ್ತು. ಅವರ ಪೋಷಕರೂ ಮಾತನಾಡಿದ್ದರು. ಈಗ ಈ ರೀತಿ ಆಗಿದೆ ಎಂದು ಮುಮ್ತಾಜ್ ಕಣ್ಣೀರಾದರು.
ಆಕೆಯೂ ನನ್ನ ಮಗಳಿದ್ದ ಹಾಗೆ. ತುಂಬಾ ಒಳ್ಳೆಯ ಹುಡುಗಿ. ಆಕೆಯೂ ಮದುವೆಯಾಗುತ್ತೇನೆ ಎಂದು ಹೇಳಿಕೊಂಡಿದ್ದಳು. ಎರಡೂ ಕಡೆಯೂ ಪ್ರೀತಿ ಇತ್ತು. ಏನೇ ಆಗಿದ್ದರೂ ಪರ್ಯಾಯ ದಾರಿಗಳಿದ್ದವು. ಕೊಲೆ ಮಾಡುವುದನ್ನು ಯಾರೂ ಒಪ್ಪುವುದಿಲ್ಲ. ಆತ ಓದಿಕೊಂಡು ಐಎಎಸ್ ಅಧಿಕಾರಿಯಾಗಬೇಕು ಎಂದು ನಾನು ಬಯಿಸಿದ್ದೆ. ಸಣ್ಣ ವಯಸ್ಸಿನಿಂದಲೂ ಇದಕ್ಕಾಗಿ ತಯಾರಿ ಮಾಡಿಕೊಂಡಿದ್ದ. ಈಗ ಹೀಗೆ ಮಾಡಿದ್ದಾನೆ. ಆತನಿಗೆ ಶಿಕ್ಷೆಯಾಗಲಿ. ಯಾವುದೇ ಶಿಕ್ಷೆಯಾದರೂ ಸರಿ ಎಂದು ಹೇಳಿದರು.
ತಂದೆಗೂ ಬೇಸರ
ಮುನವಳ್ಳಿಯಲ್ಲಿ ಶಿಕ್ಷಕರಾಗಿರುವ ಫಯಾಜ್ ತಂದೆ ಕೂಡ ಬೇಸರ ಹೊರ ಹಾಕಿದರು. ಮಾಧ್ಯಮದವರೊಂದಿಗೆ ಮಾತನಾಡಿದ ಬಾಬಾಸಾಹೇಬ್ ಸುಬಾನ್ ಅವರು, ನನ್ನ ಮಗ ಈ ರೀತಿ ಮಾಡುತ್ತಾನೆ ಎಂದುಕೊಂಡಿರಲಿಲ್ಲ. ಇಡೀ ಊರಿನ ಜನ ನಮ್ಮನ್ನು ಬೆಳೆಸಿದ್ದಾರೆ. ಸಾವಿರಾರು ಮಕ್ಕಳಿಗೆ ಪಾಠ ಹೇಳಿಕೊಟ್ಟಿರುವುದರಿಂದ ಗೌರವಿಸುತ್ತಾರೆ. ಆದರೆ ಮಗನ ಈ ಕೃತ್ಯದಿಂದ ನಾವು ಮುಖ ತೋರಿಸದ ಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರದಿಂದಲೇ ಹೇಳಿದರು.
ನೇಹಾ ನನ್ನ ಮಗಳಿದ್ದ ಹಾಗೆ. ನನ್ನ ಮಗಳಿಗೆ ಹೀಗೆ ಆದರೆ ಬೇಸರ ಆಗುತ್ತದೆ. ಅದೇ ರೀತಿ ನೇಹಾ ತಂದೆ ತಾಯಿಗೂ ಆಘಾತವಾಗಿದೆ. ಇದು ಬೇಡವಾಗಿತ್ತು. ನನ್ನ ಮಗ ಪ್ರೀತಿಸುವ ವಿಚಾರವನ್ನು ಹೇಳಿಕೊಂಡಿದ್ದ. ನಾವೂ ತಿಳಿ ಹೇಳಿದ್ದೆವು. ಆನಂತರ ನಮ್ಮ ಸಂಪರ್ಕದಲ್ಲಿಯೇ ಆತ ಇಲ್ಲ. ಆಗನಿಗೆ ಉಗ್ರ ಶಿಕ್ಷೆಯನ್ನು ನ್ಯಾಯಾಲಯದ ನೀಡಲಿ. ನೇಹಾ ತಂದೆ ತಾಯಿಗೆ ನೋವು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ತಿಳಿಸಿದರು.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.
( To read more like this please logon to kannada.hindustantimes.com)
ವಿಭಾಗ