Forest Tales column: ಕಟ್ಟೆಚ್ಚರದ ನಡುವೆ ಕಾಡುವ ಬೇಟೆಯ ರೋಚಕ ಕ್ಷಣಗಳು: ಬೇಟೆಗೆಂದು ಹೋದೀರಿ ಹುಷಾರು !
Jun 21, 2023 09:03 AM IST
ಬೇಟೆಯ ಕ್ಷಣಗಳು ರೋಚಕ. ಹಾಗೆಂದು ನೀವೂ ಬೇಟೆಗೆ ಹೋಗುವ ಪ್ರಯತ್ನ ಮಾಡಬೇಡಿ.
- ಮಳೆಗಾಲ ಬಂತೆಂದರೆ ಕಾಡುಗಳಲ್ಲಿ ಬೇಟೆ ಕಟ್ಟೆಚ್ಚರ ಶುರುವಾಗುತ್ತದೆ. ಏಕೆಂದರೆ ಬೇಟೆಗಾರರು ಸಕ್ರಿಯರಾಗುತ್ತಾರೆ. ಹಿಂದೆಲ್ಲಾ ಬೇಟೆ ಮನುಷ್ಯ ಬದುಕಿನ ಮೋಜಿನ ಭಾಗವೇ ಆಗಿತ್ತು. ಕಾನೂನಿನ ಕಟ್ಟಳೆಯ ನಡುವೆ ಕಾಡು ಪ್ರಾಣಿಗಳು ನಿರಾಳವಾಗಿವೆ. ಬೇಟೆಗೆ ಹೋದರೆ ಕಠಿಣ ಶಿಕ್ಷೆಯೂ ಆಗಬಹುದು. ಬೇಟೆಗೆ ಸಂಬಂಧಿಸಿದ ಆ ಕ್ಷಣಗಳು, ಹವ್ಯಾಸ ಹಾಗೂ ಅಪರಾಧದ ನೋಟಗಳ ಸುತ್ತ ಕಾಡಿನ ಕಥೆ.
ಶಿಕಾರಿಗೆ ಹೊರಟರೆ ಆ ಖುಷಿಯೇ ಬೇರೆ. ಭರ್ಜಿ ಹಿಡಿದು ಕಾಡಿನೊಳಗೆ ನುಗ್ಗಿದರೆ ಯಾವ ಪ್ರಾಣಿ ಸಿಗುತ್ತದೋ ಗೊತ್ತಿಲ್ಲ. ಶಬ್ದದ ಜಾಡು ಆಧರಿಸಿ ನಾವೆಲ್ಲಾ ಒಳ ಹೋಗುತ್ತಿದ್ದೆವು. ಶಿಕಾರಿ ಸಿಗುತ್ತಿತ್ತೋ ಇಲ್ಲವೋ. ಆ ಅನುಭವವಿದೆಯಲ್ಲಾ.ಅದನ್ನು ಎಂದೂ ಮರೆಯಲಾಗದು. ಆ ಕ್ಷಣಗಳನ್ನು ನೀವು ಪೂರ್ಣಚಂದ್ರ ತೇಜಸ್ವಿ ಅವರ ಪುಸ್ತಕಗಳನ್ನೇ ಓದಬೇಕು. ಅವರ ಕಥೆ, ಕಾದಂಬರಿಗಳಲ್ಲಿ ಶಿಕಾರಿಯ ಸದ್ದೇ ಕೇಳುತ್ತದೆ.
ಕೆಲ ದಿನಗಳ ಹಿಂದೆಯಷ್ಟೇ ನಮ್ಮನ್ನು ಅಗಲಿದ ಹಿರಿಯ ಸಾಹಿತಿ ಜಿ.ಎಚ್.ನಾಯಕ್ ಅವರು ಮೂಡಿಗೆರೆಗೆ ಹೋದರೆ ತೇಜಸ್ವಿ ಅವರೊಂದಿಗೆ ಕಳೆಯುತ್ತಿದ್ದ ಆ ದಿನಗಳು ಹಾಗೂ ಶಿಕಾರಿಯ ರೋಚಕ ಕ್ಷಣಗಳನ್ನು ಹೀಗೆ ಹೇಳುತ್ತಲೇ ಹೋಗುತ್ತಾರೆ. ಪೂಚಂತೇ ಅವರ ಪುಸ್ತಕ ಓದಿದವರಿಗೆ ಶಿಕಾರಿಯ ಅನುಭವ ತಮ್ಮದೇ ಆದಂತೆ ಅನ್ನಿಸುವುದು ಸಹಜ. ಅಷ್ಟೊಂದು ಬೇಟೆಯ ರಸಸ್ವಾದ ಅವರ ಅಕ್ಷರಗಳಲ್ಲಿ ಒಡಮೂಡಿದೆ. ಕೆನೆತ್ ಆಂಡರ್‌ಸನ್, ಜಿಮ್ ಕಾರ್ಬೆಟ್ ಕಥೆಗಳನ್ನು ಓದಿದವರಿಗೆ ಬೇಟೆಯ ರೋಚಕತೆ ಅರಿವಾಗುತ್ತದೆ.
ಶಿಕಾರಿ ಏಕೆ ಹೇಗೆ?
ಶಿಕಾರಿ ಯಾನೆ ಬೇಟೆ ಎನ್ನುವುದು ಕಾಡು ಹಾಗೂ ಪ್ರಾಣಿಗಳು ಬದುಕಿನ ಉದ್ದಕ್ಕೂ ಎದುರುಸುವ ಸವಾಲು. ಇದು ಹಿಂದೆಲ್ಲಾ ಹವ್ಯಾಸವೇ ಆಗಿತ್ತು. ಮಹಾರಾಜರು, ಗಣ್ಯಾತಿಗಣ್ಯರು ಕಾಡಿಗೆ ಹೊರಡುವುದು ಎಂದರೆ ಶಿಕಾರಿಗೆ ಎನ್ನುವ ರೀತಿ. ಮೈಸೂರು ಸಂಸ್ಥಾನದ ಮಹಾರಾಜರ ಆ ಬೇಟೆಯ ಸಾಹಸಗಳನ್ನು ಅರಮನೆಯಲ್ಲಿ ಈಗಲೂ ಕಾಪಿಟ್ಟುಕೊಂಡಿರುವ ವನ್ಯಜೀವಿಗಳ ಪ್ರತಿಕೃತಿಗಳನ್ನು( ಸ್ಟಫ್ಡ್ ಅನಿಮಲ್ಸ್) ನೀವು ನೋಡಿದರೆ ಬೇಟೆಯ ಆಗಾಧತೆ ಅರಿವಿಗೆ ಬರಬಹುದು. ಕಾಡಿನೊಂದಿಗೆ ನಂಟು ಹೊಂದಿದ್ದ ಮಲೆನಾಡು ಭಾಗದವರಿಗೆ ಶಿಕಾರಿ ಬದುಕಿನ ಭಾಗವೇ ಆಗಿತ್ತು. ಒಂದು ಶಿಕಾರಿ ಆದರೆ ವಾರವಿಡೀ ಊಟದ ಮಜಾ, ಸಂತೃಪ್ತಿ.
ಆದರೆ ಕಾಲ ಹಾಗೆಯೇ ಇರಬೇಕಲ್ಲ. ಮೋಜಿಗೋಸ್ಕರ ಬೇಟೆ ಪ್ರಮಾಣ ಎಲ್ಲೆಡೆ ಹೆಚ್ಚಿ ವನ್ಯಜೀವಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ಮುಂದೊಂದು ದಿನ ಕಾಡು ಪ್ರಾಣಿಗಳೇ ಇಲ್ಲದಾದರೆ ಕಾಡೇ ಇರುವುದಿಲ್ಲ ಎನ್ನುವ ಕಾರಣಕ್ಕೆ ಕಾಯಿದೆ ಬಿಗಿಗೊಳಿಸಲಾಯಿತು. ಬೇಟೆ ಸಂಪೂರ್ಣ ನಿಷೇಧವೇ ಆಗಿ ಹೋಯಿತು. ಬೇಟೆಯಾಡಿ ಸಿಕ್ಕಿ ಬಿದ್ದರೆ ಜೈಲೇ ಗತಿ ಎನ್ನುವಂತೆಯೂ ಆಯಿತು. ಹಾಗಾದರೇ ಬೇಟೆ ನಿಂತಿದೆಯೇ? ಈ ಪ್ರಶ್ನೆಗೆ ಉತ್ತರ ಏನು?
ವೀರಪ್ಪನ್ ಶೈಲಿ
ಕರುನಾಡನ್ನು ಎರಡು ದಶಕಕ್ಕೂ ಹೆಚ್ಚು ಕಾಲ ಕಾಡಿದ ವೀರಪ್ಪನ್ ಹೆಸರು ನಿಮಗೆ ನೆನಪಿರಲೇಬೇಕು. ಡಾ.ರಾಜ್ ಸಹಿತ ಹಲವರ ಅಪಹರಣವನ್ನೂ ಮಾಡಿದ್ದ ವೀರಪ್ಪನ್ ನದ್ದೂ ಬೇಟೆಯೂ ಆತನ ವೃತ್ತಿಯೇ ಆಗಿ ಹೋಗಿತ್ತು. ಆನೆಗಳನ್ನು ಹತ್ಯೆ ಮಾಡಿ ದಂತಗಳನ್ನು ಮಾರಾಟ ಮಾಡುವುದು ಆತನಿಗೆ ಕರಗತವಾಗಿತ್ತು. ವೀರಪ್ಪನ್ ಅಂತಹ ದಂತಗಳೊಂದಿಗೆ ತೆಗೆಸಿಕೊಂಡಿದ್ದ ಫೋಟೋಗಳೇ ಆತನ ಬೇಟೆಗೆ ಸಾಕ್ಷಿ. ಆತ ಸತ್ತ ನಂತರ ವೀರಪ್ಪನ್ ಜಾಲವಿದ್ದ ಸ್ಥಳಗಳಲ್ಲಿ ಹೂತಿಟ್ಟ ದಂತಗಳೂ ಸಿಕ್ಕಿದ್ದವು. ಸಿಕ್ಕಿದ್ದು ಸ್ವಲ್ಪವಾದರೂ ಇನ್ನೆಷ್ಟೋ ಭೂಗರ್ಭದಲ್ಲೇ ಅಡಗಿ ಹೋದವು. ವೀರಪ್ಪನ್ ಬೇಟೆಯ ಕಥಾನಕಗಳಿಗೇನೂ ಕಡಿಮೆ ಇಲ್ಲ.
ಜಾ ಟ್ರಾಪ್‌ಗಳ ಕಾಲ
ಎರಡು ದಶಕದ ಹಿಂದಿನ ಘಟನೆ. ಮಧ್ಯಪ್ರದೇಶದ ಗುಂಪೊಂದು ಕರ್ನಾಟಕ ಮಾತ್ರವಲ್ಲದೇ ಮಧ್ಯಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಬೇಟೆಗೆ ಇಳಿದಿತ್ತು. ಅವುಗಳ ಗುರಿ ಹುಲಿ, ಚಿರತೆಯಂತಹ ದೊಡ್ಡ ಪ್ರಾಣಿಗಳು. ಅವರು ಪ್ರಾಣಿಗಳನ್ನು ಬೇಟೆಯಾಡಲು ಬಳಸುತ್ತಿದ್ದುದು ಜಾ ಎನ್ನುವ ಉಪಕರಣ. ಅಂದರೆ ಅವುಗಳ ಕಾಲಿಗೆ ಸಿಲುಕಿಸಿ ನಡೆಯಲಾಗದಂತೆ ಮಾಡುವ ತಾವೇ ತಯಾರಿಸಿಕೊಂಡಿದ್ದ ಬೇಟೆ ಉಪಕರಣವದು. ಹತ್ತರಿಂದ ಹದಿನೈದು ಜನರ ಗುಂಪು ಅರಣ್ಯದಂಚಿನ ಗ್ರಾಮಗಳಲ್ಲಿ ವ್ಯಾಪಾರಕ್ಕೆ ಬಂದವರಂತೆ ಸುತ್ತಾಡಿ ಸದ್ದಿಲ್ಲದೇ ಬೇಟೆಯಲ್ಲೂ ತೊಡಗುತ್ತಿತ್ತು. ಒಂದು ತಂಡ ಊರು ಸುತ್ತಿದರೆ, ಮತ್ತೊಂದು ತಂಡಕ್ಕೆ ಬೇಟೆಯ ಕಾಯಕ. ಇದರ ಜಾಡು ಹಿಡಿದ ಅರಣ್ಯ ಇಲಾಖೆಯವರು ಕೊನೆಗೂ ಬೇಟೆಗಾರರನ್ನು ಸೆರೆ ಹಿಡಿದಿತ್ತು. ಅವರ ಬಳಿ ಇದ್ದ ವನ್ಯಜೀವಿಗಳ ದೇಹದ ಭಾಗಗಳನ್ನು ನೋಡಿದಾಗ ಬೇಟೆಯಾಡಿದ್ದ ತೀವ್ರತೆಯೂ ತಿಳಿದಿತ್ತು. ವನ್ಯಜೀವಿ ಕಾಯಿದೆಯಡಿ ಸಿಕ್ಕಿ ಬಿದ್ದ ಬಹುತೇಕರಿಗೆ ಜೀವಾವಧಿ ಶಿಕ್ಷೆಯೂ ಆಯಿತು. ಆದರೆ ಬೇಟೆಗೆ ಸಿಕ್ಕ ಪ್ರಾಣಿಗಳ ಕಥೆ !
ಸಿಕ್ಕಿ ಬಿದ್ದ ಡರ್ಟ್ ಟ್ರಾಕರ್
ಆತ ಕರ್ನಾಟಕದ ಪ್ರಖ್ಯಾತ ಡರ್ಟ್ ಟ್ರಾಕ್ ರೇಸರ್. ಚಾಕಚಕ್ಯತೆಯಲ್ಲಿ ಬೈಕ್, ಕಾರು ಓಡಿಸುವ ಚಾಣಾಕ್ಷ. ಆತನಿಗೆ ಕಾಡು ಸುತ್ತುವುದೂ ಮುಖ್ಯ ಹವ್ಯಾಸ. ಅರಣ್ಯ ಇಲಾಖೆಯಲ್ಲಿ ಸ್ನೇಹಿತರನ್ನು ಮಾಡಿಕೊಂಡಿದ್ದ ಆತ ಆಗಾಗ ಕಾಡಿಗೆ ಹೋಗುತ್ತಿದ್ದುದು ಫೋಟೋಗ್ರಫಿಗಲ್ಲ. ಬದಲಿಗೆ ಬೇಟೆಗೋಸ್ಕರವೇ. ಸ್ವಂತ ಜೀಪನ್ನೇ ಕಾಡಿನೊಳಕ್ಕೆ ಓಡಿಸಿಕೊಂಡು ಹೋಗುವಷ್ಟು ಸ್ವತಂತ್ರವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಆತನಿಗೆ ನೀಡಿದ್ದರು. ಹಲವು ಬಾರಿ ಕದ್ದುಮುಚ್ಚಿ ಬೇಟೆಯಾಡಿದರೂ ಬಯಲಾಗಿರಲಿಲ್ಲ. ಒಮ್ಮೆ ವಾಪಾಸ್ ಬರುವಾಗ ಜೀಪಿನಲ್ಲಿ ಜಿಂಕೆ ಮೃತದೇಹ ಇಟ್ಟುಕೊಂಡು ಸಿಕ್ಕಿಬಿದ್ದೇ ಬಿಟ್ಟ. ಅರಣ್ಯ ಇಲಾಖೆಯವರ ಜತೆಗೆ ಪೊಲೀಸರೂ ಚುರುಕಾದರು. ವಿದೇಶಕ್ಕೆ ಹಾರಿ ಸಿಕ್ಕಿಬಿದ್ದ. ಆತನೊಂದಿಗೆ ಆರು ಮಂದಿಯೂ ಬೇಟೆ ಪ್ರಕರಣದಲ್ಲಿ ಸಿಲುಕಿ ಜೈಲು ಪಾಲಾದರು. ನಟ ಸಲ್ಮಾನ್ ಖಾನ್ ಅವರ ಪ್ರಕರಣವನ್ನು ಇದು ಹೋಲುವಂತೆಯೇ ಇತ್ತು!.
ಬೇಟೆ ಎಲ್ಲೆಲ್ಲೂ
ದಕ್ಷಿಣ ಭಾರತ, ಕರ್ನಾಟಕ ಮಾತ್ರವಲ್ಲ. ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಇಂತಹ ಬೇಟೆಗಾರರ ದೊಡ್ಡ ಪಡೆಯೇ ಇತ್ತು. ಈಗ ಆ ಪ್ರಮಾಣ ಕಡಿಮೆಯೇನೋ ಆಗಿದೆ. ಹಾಗೆಂದು ಸಂಪೂರ್ಣ ನಿಂತು ಹೋಗಿದೆ ಎಂದು ಹೇಳಲಾಗದು. ಮಳೆಗಾಲ ಬಂದರೆ ಬೇಟೆ ಸದ್ದಿಲ್ಲದೇ ಶುರುವಾಗುತ್ತದೆ. ಮಳೆಯ ಅಬ್ಬರದ ನಡುವೆ ಬೇಟೆಗಾರರು ಸಕ್ರಿಯರಾಗಿರಾಗಿಬಿಡುತ್ತಾರೆ. ಅದರಲ್ಲೂ ಅರಣ್ಯದಂಚುಗಳೇ ಬೇಟೆಯ ಮಾರ್ಗಗಳು. ಜಿಂಕೆ, ಕಡವೆ, ಕಾಡು ಹಂದಿ, ಕಾಡುಕುರಿ, ಮೊಲ, ಕಾಡುಕೋಳಿ ಅವರ ಗುರಿ. ಹುಲಿ, ಚಿರತೆಯ ಮೇಲೂ. ಇದಕ್ಕಾಗಿ ಭರ್ಜಿಗಳನ್ನು ಬಳಸುವುದುಂಟು. ಕೆಲವೊಮ್ಮೆ ಅರಣ್ಯದಂಚಿಗೆ ಬರುವ ಪ್ರಾಣಿಗಳ ಜಾಡು ಗಮನಿಸಿ ಅಲ್ಲಿಯೇ ಉರುಳು ಇಡುವುದೂ ಇದೆ. ಅಂದರೆ ಕಬ್ಬಿಣದ ದಪ್ಪವಾದ ತಂತಿಯನ್ನು ಇರಿಸಿ ಅವುಗಳು ಸಿಲುಕಿಕೊಂಡು ಹೊರಬರಲಾಗದೇ ಸಾವನ್ನಪ್ಪುವಂತೆ ಮಾಡುತ್ತವೆ ಈ ಉರುಳುಗಳು. ತಮಿಳುನಾಡು, ಕೇರಳ, ಮಹಾರಾಷ್ಟ್ರ ಸೇರಿದಂತೆ ಕೆಲವು ರಾಜ್ಯಗಳ ವೃತ್ತಿಪರ ಬೇಟೆಗಾರರ ತಂಡಗಳು ಈಗಲೂ ಸಕ್ರಿಯವಾಗಿವೆ. ಹಿಂದಿನಂತೆ ಅವರೆಲ್ಲಾ ವರ್ಷವಿಡೀ ಇದನ್ನೆ ಮಾಡುವುದಿಲ್ಲ. ಒಂದು ಅಥವಾ ಎರಡು ಬಾರಿ ಬೇಟೆಯಾಡಿ ಸುಮ್ಮನಾಗಿ ಬಿಡುತ್ತಾರೆ. ಬೇರೆ ಸಮಯದಲ್ಲಿ ಅವರ ವೃತ್ತಿ ಬೇರೆ ಇರುತ್ತದೆ. ಮಳೆಗಾಲ ಬಂದಾಗ ಅರಣ್ಯ ಕಾವಲು ಕಡಿಮೆ ಇರುತ್ತದೆ. ಪ್ರಾಣಿಗಳು ಹೆಚ್ಚು ಸಂಚರಿಸುವುದಿಲ್ಲ ಎನ್ನುವ ಕಾರಣಕ್ಕೆ ಈ ಕಾಲದಲ್ಲಿ ಹೆಚ್ಚು ಬೇಟೆ ಇರುತ್ತದೆ.
ಹಿಂದೆಲ್ಲಾ ಬೇಟೆಯ ಜಾಲ ಪ್ರಬಲವಾಗಿಯೇ ಇತ್ತು. ಸ್ಥಳೀಯರನ್ನು ಇದಕ್ಕೆ ಬಳಸಿಕೊಳ್ಳಲಾಗುತ್ತಿತ್ತು. ಹೊರಗಿನವರೊಂದಿಗೆ ಸಂಪರ್ಕ ಇಟ್ಟುಕೊಂಡು ಬೇಟೆಯಾಡಿ ಪ್ರಾಣಿಗಳನ್ನು ಮಾರುವುದು ಒಂದಾದರೆ, ಬರೀ ಬೇಟೆಯಾಡಿಕೊಟ್ಟು ಇಂತಿಷ್ಟು ಹಣ ಪಡೆಯುವುದೂ ನಡೆಯುತ್ತಿತ್ತು. ಅರಣ್ಯದಂಚಿನ ಹಳ್ಳಿಗಳಲ್ಲಿ ಹೀಗೆ ಬೇಟೆಗಾರರೂ ಸಿಗುತ್ತಿದ್ದರು. ಕಾನೂನಿಕ ಕುಣಿಕೆ ಬಿಗಿಯಾದ ಜತೆಗೆ ಅರಣ್ಯ ಇಲಾಖೆ ಬಿಗಿ ಕ್ರಮಗಳ ನಂತರ ಇದೆಲ್ಲವೂ ಕಡಿಮೆಯಾಗಿದೆ. ಆದರೂ ಕಲಿತ ಚಾಳಿ ಬಿಡಬೇಕಲ್ಲ. ಕೆಲವರು ರಂಗೋಲಿ ಕೆಳಗೆ ನುಸುಳಿ ಬೇಟೆಯಾಡುವುದನ್ನು ಮುಂದುವರೆಸಿದ್ದಾರೆ.
ಬೇಟೆಗೆ ಹೋಗಬೇಡಿ
ಸಮಾಜ ಬದಲಾದರೂ ಮನುಷ್ಯನ ಆಸಕ್ತಿ, ಹವ್ಯಾಸಗಳು ಬದಲಾಗೋಲ್ಲ. ಕಾಡಿಗೆ ಹೋದರೆ ಮೋಜಿಗೆ ಬೇಟೆಯಾಡೋಣ ಎನ್ನುವವರೂ ಇದ್ದಾರೆ. ಎಷ್ಟೇ ವಿಚಕ್ಷಣೆಯಿದ್ದರೂ ಬೇಟೆಗೆ ಇಳಿಯವುದೂ ಇದೆ. ಇದರ ಜತೆಗೆ ಸ್ಥಳೀಯವಾಗಿಯೂ ಆಹಾರಕ್ಕೆ ಬೇಟೆಯಾಡುವುದು ಈಗಲೂ ಇದೆ. ಆಹಾರ ಸರಪಳಿಯ ಭಾಗವಾಗಿ ಇದನ್ನುಎಂದಿಗೂ ತಡೆಯಲಾಗದು. ಎಲ್ಲಾ ಪ್ರಾಣಿಗಳಿಗೆ ಇದೂ ಒಂದು ಅಪಾಯವೇ. ಜತೆಗೆ ಬೇಟೆಯಾಡುವವರಿಗೂ ಕೂಡ. ಬೇಟೆ ಎನ್ನುವುದು ಎಷ್ಟು ಪ್ರಮಾಣದಲ್ಲಿ ಎನ್ನುವುದನ್ನು ನೋಡುವುದಿಲ್ಲ. ಬದಲಿಗೆ ಬೇಟೆಯಾಡಿದ್ದು ಖಚಿತವಾದರೆ ಶಿಕ್ಷೆ ಖಚಿತವೇ. ವನ್ಯಜೀವಿ ಕಾಯಿದೆ ಪ್ರಕಾರ ಶಿಕ್ಷೆಯೂ ಕಠಿಣ. ಜಾಮೀನು ಕೂಡ ಸಿಗೋಲ್ಲ ಹುಷಾರು !
ವಿಭಾಗ