logo
ಕನ್ನಡ ಸುದ್ದಿ  /  ಕರ್ನಾಟಕ  /   Mysuru Crime: ವರದಕ್ಷಿಣೆಗಾಗಿ ಬೆಂಕಿ ಹಚ್ಚಿದ ಗಂಡನನ್ನ ತಬ್ಬಿಕೊಂಡ ಹೆಂಡತಿ.. ಮುಂದೇನಾಯ್ತು?

Mysuru Crime: ವರದಕ್ಷಿಣೆಗಾಗಿ ಬೆಂಕಿ ಹಚ್ಚಿದ ಗಂಡನನ್ನ ತಬ್ಬಿಕೊಂಡ ಹೆಂಡತಿ.. ಮುಂದೇನಾಯ್ತು?

HT Kannada Desk HT Kannada

Sep 14, 2022 07:54 PM IST

google News

ಸಾಂದರ್ಭಿಕ ಚಿತ್ರ

    • ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದ ಭೂಪ ಪತ್ನಿ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿರುವ ಘಟನೆ ಮೈಸೂರಿನ ಕೆ.ಆರ್.ನಗರ ತಾಲೂಕಿನ ಹರದನಹಳ್ಳಿ ಗ್ರಾಮದಲ್ಲಿ ನಡೆದಿದೆ. ಬೆಂಕಿ ಹಚ್ಚುತ್ತಿದ್ದಂತೆಯೇ ಗಂಡನನ್ನು ಹೆಂಡತಿ ಅಪ್ಪಿಕೊಂಡಿದ್ದಾಳೆ. ಘಟನೆಯಲ್ಲಿ ಪತ್ನಿ ಸಾವನ್ನಪ್ಪಿದ್ದು, ಪತಿ ಗಂಭೀರವಾಗಿ ಗಾಯಗೊಂಡಿದ್ದಾನೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮೈಸೂರು: ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದ ಭೂಪ ಪತ್ನಿ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿರುವ ಘಟನೆ ಮೈಸೂರಿನ ಕೆ.ಆರ್.ನಗರ ತಾಲೂಕಿನ ಹರದನಹಳ್ಳಿ ಗ್ರಾಮದಲ್ಲಿ ನಡೆದಿದೆ. ಬೆಂಕಿ ಹಚ್ಚುತ್ತಿದ್ದಂತೆಯೇ ಗಂಡನನ್ನು ಹೆಂಡತಿ ಅಪ್ಪಿಕೊಂಡಿದ್ದಾಳೆ. ಘಟನೆಯಲ್ಲಿ ಪತ್ನಿ ಸಾವನ್ನಪ್ಪಿದ್ದು, ಪತಿ ಗಂಭೀರವಾಗಿ ಗಾಯಗೊಂಡಿದ್ದಾನೆ.

ಮೃತಳನ್ನು ರಾಜೇಶ್ವರಿ (28) ಎಂದು ಗುರುತಿಸಲಾಗಿದೆ. ರಾಜೇಶ್ವರಿಯನ್ನು ಮದುವೆಯಾಗಿದ್ದ ಹರೀಶ್​ ವರದಕ್ಷಿಣೆಗಾಗಿ ಪದೇ ಪದೇ ಹೆಂಡತಿಗೆ ಕಿರುಕುಳ ನೀಡುತ್ತಿದ್ದನು ಎಂದು ಆರೋಪಿಸಲಾಗಿದೆ. ಇದೇ ವಿಚಾರವಾಗಿಯೇ ಗಂಡ-ಹೆಂಡತಿ ನಡುವೆ ಜಗಳ ನಡೆದಿದ್ದು, ಜಗಳ ತಾರಕ್ಕೇರಿ ಕೋಪಗೊಂಡ ಹರೀಶ್​ ಹೆಂಡತಿಗೆ ಬೆಂಕಿ ಹಚ್ಚಿದ್ದಾನೆ ಎಂದು ಹೇಳಲಾಗಿದೆ. ಬೆಂಕಿ ಹಚ್ಚಿದ ಬಳಿಕ ಆಕೆ ಪತಿಯನ್ನು ತಬ್ಬಿಕೊಂಡಿದ್ದಾಳೆ. ಆಕೆಯ ದೇಹ ಸಂಪೂರ್ಣವಾಗಿ ಸುಟ್ಟಿದ್ದರಿಂದ ಮೃತಪಟ್ಟಿದ್ದಾಳೆ. ಆದರೆ ಪತಿಯ ದೇಹ ಭಾಗಶಃ ಸುಟ್ಟುಹೋಗಿದ್ದು, ಕೆ ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈತನ ಸ್ಥಿತಿ ಚಿಂತಾಜನಕವಾಗಿದೆ.

ನನ್ನ ಮಗಳ ಮೇಲೆ ಅಳಿಯ ಹಾಗೂ ಅವನ ತಂದೆ-ತಾಯಿ ಕಿರುಕುಳ ನೀಡುತ್ತಿದ್ದರು. ಈ ಸಂಬಂಧ ಹಲವು ಬಾರಿ ನ್ಯಾಯ ಪಂಚಾಯತಿ ಕೂಡ ಮಾಡಲಾಗಿತ್ತು ಎಂದು ರಾಜೇಶ್ವರಿ ತಂದೆ ಸೋಮಶೇಖರ್ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ತನ್ನದೇ ಕುಟುಂಬದ ಐವರನ್ನು ಕೊಂದ ಪಾಪಿ

ವ್ಯಕ್ತಿಯೊಬ್ಬ ತನ್ನ ತಾಯಿ, ಪತ್ನಿ ಹಾಗೂ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರನ್ನು ಕೊಲೆಗೈದಿರುವ ಘಟನೆ ಉತ್ತರಾಖಂಡದ ಡೆಹ್ರಾಡೂನ್‌ನ ದೋಯಿವಾಲಾ ಪ್ರದೇಶದಲ್ಲಿ ಇತ್ತೀಚೆಗೆ ನಡೆದಿತ್ತು. ಕೊಲೆ ಆರೋಪಿಯನ್ನು ಮಹೇಶ್ ತಿವಾರಿ (47)​ ಎಂದೂ, ಮೃತರನ್ನು ಆತನ ತಾಯಿ ಬೀತನ್ ದೇವಿ ( 75 ವರ್ಷ), ಆತನ ಪತ್ನಿ ನೀತು ದೇವಿ (36), ಆತನ ಹೆಣ್ಣು ಮಕ್ಕಳಾದ ಅಪರ್ಣಾ (13), ಸ್ವರ್ಣ (11) ಹಾಗೂ ಅನ್ನಪೂರ್ಣ (9) ಎಂದು ಗುರುತಿಸಲಾಗಿದೆ. ಆರೋಪಿಗೆ ಮತ್ತೋರ್ವ ಮಗಳಿದ್ದು ಆಕೆ ಘಟನೆ ನಡೆಯುವ ಸಂದರ್ಭ ಚಿಕ್ಕಮ್ಮನ ಮನೆಯಲ್ಲಿ ಇದ್ದುದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಆರೋಪಿ ಮಹೇಶ್​ ತಿವಾರಿ ಮಾನಸಿಕ ಅಸ್ವಸ್ಥ ಹಾಗೂ ನಿರುದ್ಯೋಗಿ ಆಗಿದ್ದು, ಆತನ ಸಹೋದರ ಉಮೇಶ್​ ಪ್ರತಿ ತಿಂಗಳು ನೀಡುತ್ತಿದ್ದ ಹಣದಲ್ಲಿ ಈ ಕುಟುಂಬದ ಜೀವನ ಸಾಗುತ್ತಿತ್ತು. ನಾಲ್ವರು ಪುತ್ರಿಯರಲ್ಲಿ ಓರ್ವ ಮಗಳು ವಿಕಲಚೇತನ ಬಾಲಕಿ. ಇಂದು ಬೆಳಗ್ಗೆ ಉಪಹಾರದ ವಿಚಾರವಾಗಿ ಆರಂಭವಾದ ಜಗಳ ಐವರ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಹೇಳಲಾಗಿದೆ. ಮಕ್ಕಳು ಶಾಲೆಗೆ ಹೋಗಲು ರೆಡಿಯಾಗುತ್ತಿದ್ದರು. ಮಹೇಶ್​ ಪೂಜೆ ಮಾಡುತ್ತಾ ಕುಳಿತಿದ್ದನು. ಗಂಡನ ಬಳಿ ಅಡುಗೆಗೆ ಸಹಾಯ ಮಾಡುವಂತೆ ನೀತು ದೇವಿ ಕೇಳಿದ್ದಾಳೆ. ಇದರಿಂದ ಮೊದಲು ಜಗಳ ಆರಂಭವಾಗಿದೆ ಎಂದು ಆರೋಪಿ ಹೇಳಿದ್ದಾನೆ.

ಪತ್ನಿ, ಮಗಳು, ಅತ್ತೆಗೆ ಚಾಕುವಿನಿಂದ ಇರಿದ ವ್ಯಕ್ತಿ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇತ್ತೀಚೆಗೆ ನಡೆದ ಘಟನೆಯಲ್ಲಿ ವ್ಯಕ್ತಿಯೊಬ್ಬ ವೈವಾಹಿಕ ಕಲಹ ಹಿನ್ನೆಲೆ ತನ್ನ ಪತ್ನಿ, ಮಗಳು ಮತ್ತು ಅತ್ತೆಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾನೆ. ಆರೋಪಿಯನ್ನು ಗುರುಗಾಂವ್‌ನಲ್ಲಿ ಅಸಿಸ್ಟೆಂಟ್‌ ಇಂಜಿನಿಯರ್‌ ಆಗಿ ಕೆಲಸ ಮಾಡುತ್ತಿರುವ ಇಂಜಿನಿಯರ್ ಸಿದ್ಧಾರ್ಥ್ ಎಂದು ಗುರುತಿಸಲಾಗಿದೆ. ಈ ಹಲ್ಲೆಯ ಬಳಿಕ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದೂರು ದಾಖಲಿಸಿಕೊಂಡ ಪೊಲೀಸರು, ಆರೋಪಿ ಸಿದ್ಧಾರ್ಥನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ