logo
ಕನ್ನಡ ಸುದ್ದಿ  /  ಕರ್ನಾಟಕ  /  ನೀವು ಐಟಿ ಉದ್ಯೋಗಿಯೇ? ಟ್ರಾಫಿಕ್ ನಿಯಮ ಉಲ್ಲಂಘಿಸಿದ್ರೆ ಸೀದಾ ನಿಮ್ಮ ಬಾಸ್​​ಗೆ ಹೋಗತ್ತೆ ಸಂದೇಶ

ನೀವು ಐಟಿ ಉದ್ಯೋಗಿಯೇ? ಟ್ರಾಫಿಕ್ ನಿಯಮ ಉಲ್ಲಂಘಿಸಿದ್ರೆ ಸೀದಾ ನಿಮ್ಮ ಬಾಸ್​​ಗೆ ಹೋಗತ್ತೆ ಸಂದೇಶ

HT Kannada Desk HT Kannada

Dec 16, 2023 08:32 PM IST

google News

ಟ್ರಾಫಿಕ್ ನಿಯಮ ಉಲ್ಲಂಘಿಸಿದ್ರೆ ಎಚ್ಚರ

    • Bengaluru Traffic: ಇನ್ನು ಮುಂದೆ ಸಿಗ್ನಲ್ ಜಂಪ್ ಮಾಡುವಾಗ, ಅತಿಯಾದ ವೇಗದಲ್ಲಿ ಚಾಲನೆ ಮಾಡುವಾಗ ಮತ್ತೊಮ್ಮೆ ಯೋಚಿಸಿ. ರಸ್ತೆ ಸುರಕ್ಷತೆ ಮತ್ತು ಸಂಚಾರಿ ನಿಯಮಗಳನ್ನು ಕುರಿತು ಅರಿವು ಮೂಡಿಸುವ ಪ್ರಯತ್ನವಾಗಿ 15 ದಿನಗಳ ಹಿಂದೆ ಬೆಂಗಳೂರು ಪೂರ್ವ ಸಂಚಾರ ವಿಭಾಗವು ಈ ವಿನೂತನ ವಿಧಾನವನ್ನು ಜಾರಿಗೆ ತಂದಿದೆ.
ಟ್ರಾಫಿಕ್ ನಿಯಮ ಉಲ್ಲಂಘಿಸಿದ್ರೆ ಎಚ್ಚರ
ಟ್ರಾಫಿಕ್ ನಿಯಮ ಉಲ್ಲಂಘಿಸಿದ್ರೆ ಎಚ್ಚರ

ಬೆಂಗಳೂರು: ನೀವು ಸಾಫ್ಟ್​ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದೀರಾ ? ಬೇಗ ಕಚೇರಿ ತಲುಪುವ ಧಾವಂತದಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ದೀರಾ? ಹಾಗಾದರೆ ನೀವು ತಪ್ಪು ಮಾಡಿರುವ ಸಂದೇಶವನ್ನು ನಿಮ್ಮ ಕಚೇರಿಯ ಬಾಸ್​​ಗೆ ತಲುಪಿಸಲಿದ್ದಾರೆ ಬೆಂಗಳೂರು ಸಂಚಾರಿ ಪೊಲೀಸರು.

ಇನ್ನು ಮುಂದೆ ಸಿಗ್ನಲ್ ಜಂಪ್ ಮಾಡುವಾಗ, ಅತಿಯಾದ ವೇಗದಲ್ಲಿ ಚಾಲನೆ ಮಾಡುವಾಗ ಮತ್ತೊಮ್ಮೆ ಯೋಚಿಸಿ. ರಸ್ತೆ ಸುರಕ್ಷತೆ ಮತ್ತು ಸಂಚಾರಿ ನಿಯಮಗಳನ್ನು ಕುರಿತು ಅರಿವು ಮೂಡಿಸುವ ಪ್ರಯತ್ನವಾಗಿ 15 ದಿನಗಳ ಹಿಂದೆ ಬೆಂಗಳೂರು ಪೂರ್ವ ಸಂಚಾರ ವಿಭಾಗವು ಈ ವಿನೂತನ ವಿಧಾನವನ್ನು ಜಾರಿಗೆ ತಂದಿದೆ. ಐಟಿ ಕಂಪನಿಗಳೇ ಹೆಚ್ಚಾಗಿರುವ ಹೊರ ವರ್ತುಲ ರಸ್ತೆ ಹಾಗೂ ವೈಟ್‌ಫೀಲ್ಡ್‌ ಪ್ರದೇಶದ ಮಹದೇವಪುರ ಸಂಚಾರಿ ಪೊಲೀಸ್ ವಿಭಾಗದಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದೆ.

ತಮ್ಮ ಕಚೇರಿಯನ್ನು ತ್ವರಿತವಾಗಿ ತಲುಪಲು ಸಂಚಾರಿ ನಿಯಮಗಳನ್ನು ಉಲ್ಲಘಿಸುವವರಲ್ಲಿ ಐಟಿ ನೌಕರರೇ ಹೆಚ್ಚು ಎನ್ನುವುದು ಈ ಭಾಗದಲ್ಲಿ ತಿಳಿದು ಬಂದಿದೆ. ಆದ್ದರಿಂದ ಸಂಚಾರಿ ನಿಯಮಗಳ ಕುರಿತು ಅರಿವು ಮೂಡಿಸಲು ಸಿಗ್ನಲ್ ಜಂಪ್ ಮಾಡುವ ಮತ್ತು ವೇಗವಾಗಿ ವಾಹನ ಚಾಲನೆ ಮಾಡುವ ಉದ್ಯೋಗಿಗಳ ಕಂಪನಿಗಳಿಗೆ ಇ ಮೇಲ್ ಅಥವಾ ವಾಟ್ಸಾಪ್ ಮೂಲಕ ಸಂದೇಶ ಕಳುಹಿಸಲಾಗುತ್ತದೆ ಎಂದು ಸಂಚಾರಿ ವಿಭಾಗದ ಉಪ ಪೊಲೀಸ್ ಆಯುಕ್ತ (ಪೂರ್ವ) ಕುಲ್​​ದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ.

ಸಂಚಾರ ನಿಯಮ ಉಲ್ಲಂಘಿಸಿ ಸಿಕ್ಕಿ ಬೀಳುವ ಟೆಕ್ಕಿಗಳ ಐಡಿ ಕಾರ್ಡ್ ಪರಿಶೀಲಿಸಿ ಕಂಪನಿ ವಿಳಾಸ ಪಡೆದು ಮಾಹಿತಿ ಕಳುಹಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯಕ್ಕೆ ಈ ಯೋಜನೆ ಬೆಂಗಳೂರು ಪೂರ್ವ ವಿಭಾಗಕ್ಕೆ ಮಾತ್ರ ಸೀಮಿತವಾಗಿದೆ. ಈ ಕ್ರಮದಿಂದ ಈ ಭಾಗದಲ್ಲಿ ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಕರಣಗಳು ಇಳಿಮುಖವಾದರೆ ಬೆಂಗಳೂರಿನ ಇತರ ಭಾಗಗಳಿಗೂ ವಿಸ್ತರಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ವಾಹನ ಚಾಲನೆ ಮಾಡುವಾಗ ಹೆಚ್ಚು ಜಾಗರೂಕರಾಗಿರಬೇಕು ಮತ್ತು ಜವಾಬ್ದಾರಿಯಿಂದ ವರ್ತಿಸಬೇಕು ಎಂಬ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿದೆ ಎಂದು ಕುಲದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ.

ಸಂಚಾರ ನಿಯಮಗಳ ಪಾಲನೆ ಹಾಗೂ ರಸ್ತೆ ಸುರಕ್ಷತೆ ಕುರಿತು ತರಬೇತಿ ಹಾಗೂ ಮಾರ್ಗದರ್ಶನ ನೀಡುವಂತೆ ಐಟಿ ಕಂಪನಿಗಳಿಗೆ ಸೂಚನೆ ನೀಡಲಾಗುವುದು. ಅರಿವು ಮೂಡಿಸುವ ಕಾರ್ಯಕ್ಕೆ ಸಂಚಾರ ವಿಭಾಗದ ಪೊಲೀಸರನ್ನು ಆಹ್ವಾನಿಸಬಹುದಾಗಿದೆ.

ವರದಿ: ಎಚ್​ ಮಾರುತಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ