logo
ಕನ್ನಡ ಸುದ್ದಿ  /  ಕರ್ನಾಟಕ  /  ಕನ್ನಡ ನಾಮಫಲಕ ವಿವಾದ; ಕರ್ನಾಟಕದಲ್ಲಿ ಮಾತ್ರ ಈ ನಿಯಮನಾ? ಬೇರೆ ರಾಜ್ಯಗಳಲ್ಲೂ ಇದ್ಯಾ ಇಂತಹ ಕಾನೂನು? ಇಲ್ಲಿದೆ ಮಾಹಿತಿ

ಕನ್ನಡ ನಾಮಫಲಕ ವಿವಾದ; ಕರ್ನಾಟಕದಲ್ಲಿ ಮಾತ್ರ ಈ ನಿಯಮನಾ? ಬೇರೆ ರಾಜ್ಯಗಳಲ್ಲೂ ಇದ್ಯಾ ಇಂತಹ ಕಾನೂನು? ಇಲ್ಲಿದೆ ಮಾಹಿತಿ

Reshma HT Kannada

Dec 31, 2023 07:00 AM IST

google News

ಸಾಂಕೇತಿಕ ಚಿತ್ರ

    • ವಾಣಿಜ್ಯ ವ್ಯಾಪಾರ ಸ್ಥಳಗಳಲ್ಲಿ ಕನ್ನಡ ನಾಮಫಲಕ ಅಳವಡಿಸಬೇಕು ಎಂಬ ವಿಚಾರವಾಗಿ ರಾಜ್ಯದಾದ್ಯಂತ ಕರವೇ ಆಕ್ರೋಶ ಜೋರಾಗಿದೆ. ಈ ನಡುವೆ ಸರ್ಕಾರವು ರಾಜ್ಯದಲ್ಲಿನ ಅಂಗಡಿ-ಮಳಿಗೆಗಳಲ್ಲಿನ ನಾಮಫಲಕದಲ್ಲಿ ಶೇ 60 ರಷ್ಟು ಕನ್ನಡ ಇರುವುದು ಕಡ್ಡಾಯ ಎಂದಿದೆ. ಹಾಗಾದ್ರೆ ನಾಮಫಲಕಗಳಲ್ಲಿ ಸ್ಥಳೀಯ ಭಾಷೆ ಬಳಸಬೇಕು ಎಂಬ ಕಾನೂನು ಕರ್ನಾಟಕ ಬಿಟ್ಟು ಯಾವೆಲ್ಲ ರಾಜ್ಯಗಳಲ್ಲಿದೆ ನೋಡೋಣ.   
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಕಳೆದ ಮೂರ್ನಾಲ್ಕು ದಿನಗಳಿಂದ ಕರ್ನಾಟಕದಲ್ಲಿ ಕನ್ನಡ ನಾಮಫಲಕದ್ದೇ ಸುದ್ದಿ. ಕರ್ನಾಟಕ ರಕ್ಷಣಾ ವೇದಿಕೆ ಬೆಂಗಳೂರಿನ ಹಲವು ಜಾಗಗಳಲ್ಲಿ ಕನ್ನಡ ನಾಮಫಲಕ ಅಳವಡಿಸದೇ ಇರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿತ್ತು. ಅಲ್ಲದೆ ಆಂಗ್ಲ ಸೇರಿದಂತೆ ಬೇರೆ ಭಾಷೆಯಲ್ಲಿ ಇರುವ ನಾಮಫಲಕಗಳನ್ನು ಧ್ವಂಸ ಮಾಡಿತ್ತು. ಇದು ದೊಡ್ಡ ಸುದ್ದಿಯಾಗಿತ್ತು. ಈ ವಿಷಯ ಕುರಿತಾಗಿ ಕರ್ನಾಟಕ ಸರ್ಕಾರವು ನಾಮಫಲಕಗಳಲ್ಲಿ ಶೇ 60 ರಷ್ಟು ಕನ್ನಡ ಇರುವುದು ಕಡ್ಡಾಯ ಎಂದಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ ರಾಜಾದಾದ್ಯಂತ ಅಂಗಡಿ-ಮುಂಗಟ್ಟುಗಳು, ವಾಣಿಜ್ಯ ಕೈಗಾರಿಕೆ, ವ್ಯಾಪಾರ ಸಂಸ್ಥೆ, ನ್ಯಾಸಗಳು, ಸಮಾಲೋಚನಾ ಕೇಂದ್ರಗಳು, ಆಸ್ಪತ್ರೆಗಳು, ಪ್ರಯೋಗಾಲಯಗಳು, ಮನೋರಂಜನಾ ಕೇಂದ್ರಗಳು ಮತ್ತು ಹೋಟೆಲ್‌ಗಳ ಮುಂದೆ ಕನ್ನಡ ಭಾಷೆ ಸೂಚನಾ ಫಲಕವಿರುವ ಬಗ್ಗೆ ಸುಗ್ರೀವಾಜ್ಞೆ ತರಲು ಉದ್ದೇಶಿಸಿದ್ದಾಗಿ ಹೇಳಿಕೆ ನೀಡಿದ್ದಾರೆ.

ಸದ್ಯ ಹೊರಡಿಸಿರುವ ಸುಗ್ರೀವಾಜ್ಞೆಯು ಆರು ತಿಂಗಳವರೆಗೆ ಮಾನ್ಯವಾಗಿರುತ್ತದೆ. ಶಾಸಕಾಂಗ ಸಭೆಯು ಅದಕ್ಕೂ ಮೊದಲು ಕಾನೂನನ್ನು ಮಾಡಬೇಕು. ಇಲ್ಲದಿದ್ದರೆ ಈ ಸುಗ್ರಿವಾಜ್ಞೆ ರದ್ದಾಗುತ್ತದೆ.

ಒಟ್ಟಾರೆ ಸದ್ಯ ಕರ್ನಾಟಕದಲ್ಲಿ ಕನ್ನಡ ನಾಮಫಲಕ ಬಳಸುವುದು ಕಡ್ಡಾಯವಾಗಿದೆ. ಆದರೆ ಸ್ಥಳೀಯ ಭಾಷೆಯಲ್ಲಿ ನಾಮಫಲಕ ಬಳಕೆ ಸಮಸ್ಯೆ ಇರುವುದು ಕರ್ನಾಟಕದಲ್ಲಿ ಮಾತ್ರವಲ್ಲ ಎಂಬುದನ್ನು ನಾವು ತಿಳಿಯಬೇಕಿದೆ. ಸ್ಥಳೀಯ ಭಾಷೆಯಲ್ಲಿ ನಾಮಫಲಕ ಬಳಕೆಯ ಬಗ್ಗೆ ಇತರ ರಾಜ್ಯಗಳು ಸಹ ನಿಯಮಗಳನ್ನು ಹೊಂದಿವೆ. ಮಹಾರಾಷ್ಟ್ರದಲ್ಲಿ ಈ ಸಮಸ್ಯೆಯು ಸುಪ್ರಿಂ ಕೋರ್ಟ್‌ ಬಾಗಿಲು ತಟ್ಟಿತ್ತು. ಇಂತಹ ನಿಯಮಗಳನ್ನು ಹೊಂದಿರುವ ಎಲ್ಲಾ ರಾಜ್ಯಗಳು ಸ್ಥಳೀಯ ಭಾಷೆಯಲ್ಲಿ ನಾಮಫಲಕ ಅಳವಡಿಸುವುದು ಕಡ್ಡಾಯ ಎಂಬ ಕಾನೂನು ಜಾರಿಗೆ ತಂದಿವೆ.

ಇದನ್ನೂ ಓದಿ: Kannada Boards: ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯ, ಫೆಬ್ರವರಿಯೇ ಅಂತಿಮ ಗಡುವು

ಸ್ಥಳೀಯ ಭಾಷೆಯ ನಾಮಫಲಕ ಕಡ್ಡಾಯ ಇರುವ ಇತರ ರಾಜ್ಯಗಳು

ಪಂಜಾಬ್‌

ಈ ನಿಯಮವನ್ನು ಜಾರಿಗೆ ತಂದ ರಾಜ್ಯಗಳಲ್ಲಿ ಪಂಜಾಬ್‌ ಕೂಡ ಒಂದು. ಪಂಜಾಬ್‌ ಇತ್ತೀಚೆಗೆ ಸ್ಥಳೀಯ ಭಾಷೆಯಲ್ಲಿ ನಾಮಫಲಕ ಅಳವಡಿಸುವುದನ್ನು ಕಡ್ಡಾಯ ಮಾಡಿದೆ. 2023ರ ಫೆಬ್ರುವರಿಯಲ್ಲಿ ಪಂಜಾಬ್ ಸರ್ಕಾರವು ಪಂಜಾಬ್ ಅಂಗಡಿಗಳು ಮತ್ತು ಸ್ಥಾಪನೆ ನಿಯಮಗಳಿಗೆ ತಿದ್ದುಪಡಿಯನ್ನು ಅನುಮೋದಿಸಿತು. 1958ರಲ್ಲಿ ರಾಜ್ಯದಲ್ಲಿ ವಾಣಿಜ್ಯ ಉದ್ಯಮಗಳಿಗೆ ಪಂಜಾಬಿ ನಾಮಫಲಕ ಅಳವಡಿಸುವುದು ಕಡ್ಡಾಯ ಎಂಬ ನಿಯಮದ ಬಗ್ಗೆ ಆಜ್ಞೆ ಹೊರಡಿಸಲಾಗಿತ್ತು.

ಮಾರ್ಚ್‌ 2023ರಲ್ಲಿ ಜಾರಿಗೆ ಬಂದ ನಿಯಮದ ಪ್ರಕಾರ ʼಯಾವುದೇ ಹೊಸ ಮಳಿಗೆ, ಅಂಗಡಿ, ಮಾಲ್‌ ಆರಂಭಕ್ಕೂ ಮುನ್ನ ಪಂಜಾಬಿಯಲ್ಲಿ ಗುರುಮುಖಿ ಲಿಪಿಯಲ್ಲಿ ಇರಬೇಕು. ಇತರ ಭಾಷೆಗಳನ್ನು ಬಳಸಿದರೆ, ಇವು ಪಂಜಾಬಿ ಆವೃತ್ತಿಗಿಂತ ಕೆಳಗಿರಬೇಕು. ಪಂಜಾಬಿ ಆವೃತ್ತಿಯಲ್ಲಿ ನೇಮ್‌ ಬೋರ್ಡ್‌ ಅನ್ನು ಹೆಚ್ಚು ಪ್ರಧಾನವಾಗಿ ಬರೆಯಬೇಕುʼ ಎಂದು ಹೇಳಲಾಗಿದೆ. ಈ ನಿಯಮವನ್ನು ಉಲ್ಲಂಘಿಸಿದರೆ 1000 ರೂ. ದಂಡವನ್ನು ವಿಧಿಸಬೇಕಾಗುತ್ತದೆ.

ಇದನ್ನೂ ಓದಿ: ಬೆಂಗಳೂರು ಕನ್ನಡ ನಾಮಫಲಕ, ಕರವೇ ಆಕ್ರೋಶ, ಕಾರ್ಯಪಡೆ ರಚನೆಗೆ ಮುಂದಾದ ಸರ್ಕಾರ: ಸಮಯ ಕೊಡಿ ಎಂದ ವಾಣಿಜ್ಯ ಮಹಾ ಸಂಸ್ಥೆ

ಮಹಾರಾಷ್ಟ್ರ

2022ರ ಆರಂಭದಲ್ಲಿ ಮಹಾರಾಷ್ಟ್ರ ಸರ್ಕಾರವು ಅಂಗಡಿಗಳು ಹಾಗೂ ಸ್ಥಾಪನೆ ಕಾಯ್ದೆಯನ್ನು ತಿದ್ದುಪಡಿ ಮಾಡಿತು. ಎಲ್ಲಾ ವಾಣಿಜ್ಯ ಉದ್ಯಮಗಳಿಗೆ ದೇವನಾಗರಿ ಲಿಪಿಯಲ್ಲಿ ಮರಾಠಿ ಭಾಷೆಯ ನಾಮಫಲಕವನ್ನು ಕಡ್ಡಾಯ ಮಾಡಿತು. ಮಳಿಗೆ ಅಥವಾ ಅಂಗಡಿಯ ಹೆಸರಿರುವ ನಾಮಫಲಕವನ್ನು ಮೇಲ್ಭಾಗದಲ್ಲಿ ಹಾಕುವುದು ಕಡ್ಡಾಯ ಮಾಡಲಾಗಿತ್ತು. ಮುಂಬೈ ಕಾಸ್ಮೋಪಾಲಿಟನ್‌ ಸಿಟಿ ಆಗಿರುವ ಕಾರಣ ಬೇರೆ ಭಾಷೆಗಳಲ್ಲಿ ನಾಮಫಲಕ ಹಾಕಿಸಿದರೆ ಅನಾನೂಕೂಲವಾಗುತ್ತದೆ ಎಂದು ವ್ಯಾಪಾರಿಗಳ ಮಂಡಳಿಯ ಮನವಿ ಮಾಡಿತ್ತು. ಆದರೂ ಕೂಡ ಸೆಪ್ಟೆಂಬರ್‌ 2023ರಲ್ಲಿ ಸುಪ್ರಿಂ ಕೋರ್ಟ್‌ ಎರಡು ತಿಂಗಳೊಳಗೆ ಮರಾಠಿ ಭಾಷೆಯ ನಾಮಫಲಕ ಹಾಕಿಸುವಂತೆ ಮುಂಬೈನ ಎಲ್ಲಾ ಅಂಗಡಿ, ಮಳಿಗೆಗಳಿಗೆ ಸೂಚಿಸಿತ್ತು.

ತಮಿಳುನಾಡು

ತಮಿಳುನಾಡಿನ ಅಂಗಡಿಗಳು ಮತ್ತು ಇತರ ಎಲ್ಲಾ ಮಳಿಗೆಗಳಲ್ಲಿ ತಮಿಳು ಭಾಷೆಯಲ್ಲಿ ನಾಮಫಲಕ ಅಳವಡಿಸುವುದು ಕಡ್ಡಾಯ ಎಂಬುದನ್ನು ಸೂಚಿಸಿದೆ. ಮೊದಲು ತಮಿಳು ಇದ್ದು ನಂತರ ಇಂಗ್ಲಿಷ್‌ ಸೇರಿದಂತೆ ಬೇರೆ ಭಾಷೆಯನ್ನು ಬಳಸಬಹುದಾಗಿದೆ. 2010ರಲ್ಲಿ ಚೆನ್ನೈ ಮುನ್ಸಿಪಲ್‌ ಕಾರ್ಪೋರೇಶನ್‌ ತಮಿಳು ನಾಮಫಲಕ ಹೊಂದಿರದ ಅಂಗಡಿಗಳನ್ನು ಮುಚ್ಚುವಂತೆ ಆದೇಶ ನೀಡಿತ್ತು. ಇದರ ಪರಿಣಾಮವಾಗಿ ಒಂದು ದೊಡ್ಡ ಹಾಗೂ ಸಣ್ಣ ಅಂಗಡಿ, ಮಳಿಗೆಗಳು ತಮಿಳು ನಾಮಫಲಕಗಳನ್ನು ಕಡ್ಡಾಯವಾಗಿ ಹೊಂದಿರುತ್ತವೆ.

ತೆಲಂಗಾಣ

ತೆಲಂಗಾಣವು ಅವಿಭಜಿತ ಆಂಧ್ರಪ್ರದೇಶದ ಅಂಗಡಿಗಳು ಮತ್ತು ಸ್ಥಾಪನೆಯ ನಿಯಮಗಳನ್ನು ಅಳವಡಿಸಿಕೊಂಡಿದೆ.ನಿಯಮ 29 (13) ರ ಪ್ರಕಾರ, "ಮಳಿಗೆಗ ಸ್ಥಾಪನೆಯ ಹೆಸರಿನ ಫಲಕವು ತೆಲುಗಿನಲ್ಲಿರಬೇಕು. ಇತರ ಭಾಷೆಯನ್ನು ಬಳಸಿದರೆ ಅವು ತೆಲುಗಿಗಿಂತ ಕೆಳಗೆ ಇರಬೇಕು.

2017 ರ ಕೊನೆಯಲ್ಲಿ ಮತ್ತು 2018 ರ ಆರಂಭದಲ್ಲಿ, ತೆಲಂಗಾಣ ಸರ್ಕಾರವು ನಿಯಮಗಳನ್ನು ಪಾಲಿಸದ ಉದ್ಯಮಗಳ ಮೇಲೆ ಕಠಿಣ ಕ್ರಮಗಳನ್ನು ಪ್ರಾರಂಭಿಸಿತು.

ಗುಜರಾತ್‌

ಅಂಗಡಿ-ಮಳಿಗೆಗಳಲ್ಲಿ ಸ್ಥಳೀಯ ಭಾಷೆಯ ನಾಮಫಲಕ ಅಳವಡಿಸುವ ನಿಯಮ ಗುಜರಾತ್‌ನಲ್ಲಿ ಕೊಂಚ ಭಿನ್ನವಾಗಿದೆ. ಅದರ ಪ್ರಕಾರ ಗುಜರಾತ್‌ನಲ್ಲಿ ನಾಮಫಲಕ ಕಡ್ಡಾಯವಾಗಿ ಗುಜರಾತಿಯಲ್ಲಿ ಇರಬೇಕು. ಆದರೆ ಗುಜರಾತಿ ಜೊತೆಗೆ ಇತರ ಭಾಷೆಯ ನಾಮಫಲಕಗಳನ್ನೂ ಇರಿಸಬಹುದಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ