ದೆಹಲಿ ಚಲೋ ರೈತ ಪ್ರತಿಭಟನೆಯ ನೇತೃತ್ವ ವಹಿಸಿರುವ ರೈತ ನಾಯಕರು ಯಾರು, ರಾಕೇಶ್ ಟಿಕಾಯತ್ ಎಲ್ಲಿದ್ದಾರೆ
Feb 13, 2024 12:32 PM IST
ದೆಹಲಿ ಚಲೋ ರೈತ ಪ್ರತಿಭಟನೆಯ ನೇತೃತ್ವ ವಹಿಸಿರುವ ರೈತ ನಾಯಕರು ಯಾರು, ರಾಕೇಶ್ ಟಿಕಾಯತ್ ಎಲ್ಲಿದ್ದಾರೆ ಎಂಬ ವಿವರ ಇಲ್ಲಿದೆ. (ಸಾಂದರ್ಭಿಕ ಚಿತ್ರ)
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು (ಫೆ.13) ರೈತ ಪ್ರತಿಭಟನೆ. ದೆಹಲಿ ಚಲೋ ರೈತ ಪ್ರತಿಭಟನೆಯ ನೇತೃತ್ವ ವಹಿಸಿರುವ ರೈತ ನಾಯಕರು ಯಾರು, ರಾಕೇಶ್ ಟಿಕಾಯತ್ ಎಲ್ಲಿದ್ದಾರೆ ಎಂಬುದರ ವಿವರ ಇಲ್ಲಿದೆ.
ನವದೆಹಲಿ: ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು 200ಕ್ಕೂ ಹೆಚ್ಚು ರೈತ ಸಂಘಟನೆಗಳು ಇಂದು (ಫೆ.13) ದೆಹಲಿ ಚಲೋ ಪ್ರತಿಭಟನೆ ನಡೆಸುತ್ತಿವೆ. ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಈ ಪ್ರತಿಭಟನೆಗೆ ಕರೆ ನೀಡಿವೆ.
ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿ ನೀಡಬೇಕು. ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುವಾಗ ಎಂ.ಎಸ್.ಸ್ವಾಮಿನಾಥನ್ ಸೂತ್ರ ಅನುಷ್ಠಾನಗೊಳಿಸಬೇಕು ಆಗ್ರಹಿಸಿ ಇಂದಿನ ಪ್ರತಿಭಟನೆಯನ್ನು 2023ರ ಡಿಸೆಂಬರ್ ತಿಂಗಳಲ್ಲಿ ಘೋಷಿಸಲಾಗಿತ್ತು.
ಈ ಪ್ರತಿಭಟನೆಯು ಕೇಂದ್ರ ಸರ್ಕಾರ ಜಾರಿಗೊಳಿಸಿದ ಮೂರು ಕೃಷಿ ಕಾನೂನು ಹಿಂಪಡೆಯುವಂತೆ ಸರ್ಕಾರವನ್ನು ಒತ್ತಾಯಿಸಿ ದೆಹಲಿಯ ಗಡಿಭಾಗದಲ್ಲಿ ಒಂದು ವರ್ಷ ತನಕ ಮುಂದುವರಿದ ಪ್ರತಿಭಟನೆಯನ್ನು ಮತ್ತೆ ನೆನಪಿಸಿದೆ. ಅಂದು ಭಾಗಿಯಾಗಿದ್ದ ರೈತ ಸಂಘಟನೆಗಳಲ್ಲೂ ಬದಲಾವಣೆಗಳಾಗಿವೆ. 2020ರ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಭಾರತೀಯ ಕಿಸಾನ್ ಯೂನಿಯನ್ ಈಗ ಮುಂಚೂಣಿಯಲ್ಲ ಇಲ್ಲ.
ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ)
ದೆಹಲಿಯಲ್ಲಿ ಮೊದಲ ರೈತರ ಪ್ರತಿಭಟನೆಯ ನೇತೃತ್ವ ವಹಿಸಲು 2020 ರ ನವೆಂಬರ್ ತಿಂಗಳು ರಚಿಸಲಾದ ಸಂಯುಕ್ತ ಕಿಸಾನ್ ಮೋರ್ಚಾದ ಒಂದು ಬಣ ಇದು. ಮುಖ್ಯ ಎಸ್‌ಕೆಎಂನಿಂದ ದೂರ ಇದೆ. 2022ರಲ್ಲಿ ಈ ಗುಂಪು ವಿವಿಧ ಗುಂಪುಗಳಾಗಿ ವಿಭಜನೆಗೊಂಡಿದೆ. ಜಗಜಿತ್ ಸಿಂಗ್ ದಲ್ಲೇವಾಲ್ ಬಣ ತಾವು ರಾಜಕೀಯೇತರ ಗುಂಪು ಎಂದು ಘೋಷಿಸಿತು.
ಈ ಬಣ ಈ ಸಲದ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದು ಭಾಗಿಯಾಗುತ್ತಿದೆ. ಈಗಾಗಲೇ ಈ ಬಣದ ರೈತರು ದೆಹಲಿಗೆ ಮುತ್ತಿಗೆ ಹಾಕುವ ಪ್ರಯತ್ನದಲ್ಲಿದ್ದಾರೆ.
ಕಿಸಾನ್ ಮಜ್ದೂರ್ ಮೋರ್ಚಾ
ಕಿಸಾನ್ ಮಜ್ದೂರ್ ಮೋರ್ಚಾವನ್ನು ಸರ್ವನ್ ಸಿಂಗ್ ಪಂಧೇರ್ ಮುನ್ನಡೆಸುತ್ತಿದ್ದಾರೆ. ಈ ಸಂಘಟನೆಯು 2020 ರ ಪ್ರತಿಭಟನೆಯ ಭಾಗವಾಗಿರಲಿಲ್ಲ. ಈ ರೈತರ ಪ್ರತಿಭಟನೆ ರಾಜಕೀಯವಲ್ಲ ಎಂದು ಪಂಧೇರ್ ಮಂಗಳವಾರ ಹೇಳಿದರು.
"ನಾವು ಬಿಜೆಪಿಯಷ್ಟೇ ಕಾಂಗ್ರೆಸ್ ಅನ್ನು ದೂಷಿಸುತ್ತೇವೆ. ನಾವು ಎಡಪಂಥೀಯರನ್ನು ಬೆಂಬಲಿಸುವುದಿಲ್ಲ. ಇಷ್ಟು ವರ್ಷಗಳ ಕಾಲ ಎಡಪಂಥೀಯರು ಆಳಿದ ಪಶ್ಚಿಮ ಬಂಗಾಳದಲ್ಲಿ ಯಾವ ಕ್ರಾಂತಿಯಾಗಿದೆ? ನಾವು ಯಾವುದೇ ರಾಜಕೀಯ ಪಕ್ಷದ ಪರವಾಗಿಲ್ಲ" ಎಂದು ಪಂಧೇರ್ ಹೇಳಿದರು.
ರಾಕೇಶ್ ಟಿಕಾಯತ್ ಎಲ್ಲಿದ್ದಾರೆ? ಎಸ್‌ಕೆಎಂ, ಭಾರತೀಯ ಕಿಸಾನ್ ಯೂನಿಯನ್ ಎಲ್ಲಿವೆ?
ದೆಹಲಿ ಚಲೋ ಮೆರವಣಿಗೆಯಿಂದ ಎಸ್‌ಕೆಎಂ ಅಂತರವನ್ನು ಕಾಯ್ದುಕೊಂಡಿದೆ. ಆದರೆ ಜನರನ್ನು ಹೆದರಿಸಲು ಭಯದ ವಾತಾವರಣವನ್ನು ಹೇಗೆ ಸೃಷ್ಟಿಸಲಾಗಿದೆ ಎಂಬ ಅಂಶವನ್ನು ಅದು ಖಂಡಿಸಿದೆ. ಎಸ್‌ಕೆಎಂ ಮತ್ತು ಇತರ ಕೇಂದ್ರ ಕಾರ್ಮಿಕ ಸಂಘಗಳು ಫೆಬ್ರವರಿ 16 ರಂದು ರಾಷ್ಟ್ರವ್ಯಾಪಿ ಮುಷ್ಕರ ಮತ್ತು ಗ್ರಾಮೀಣ ಬಂದ್ ನಡೆಸುವಂತೆ ಕರೆ ನೀಡಿವೆ.
"ಜನರ ಜೀವನೋಪಾಯದ ಬೇಡಿಕೆಗಳ ಬಗ್ಗೆ ಫೆಬ್ರವರಿ 16 ರಂದು ರಾಷ್ಟ್ರವ್ಯಾಪಿ ಗ್ರಾಮೀಣ ಬಂದ್ ಮತ್ತು ಕೈಗಾರಿಕಾ / ವಲಯ ಮುಷ್ಕರಕ್ಕೆ ಕರೆ ನೀಡಿದ ಹಿನ್ನೆಲೆಯಲ್ಲಿ ರೈತರು ಮತ್ತು ಕಾರ್ಮಿಕರ ವೇದಿಕೆಗಳೊಂದಿಗೆ ಚರ್ಚೆಗೆ ತಮ್ಮ ಸರ್ಕಾರ ಏಕೆ ಸಿದ್ಧವಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸುವಂತೆ ಪ್ರಧಾನಿ ಮೋದಿಯವರನ್ನು ಒತ್ತಾಯಿಸುತ್ತಿರುವುದಾಗಿ ಎಸ್‌ಕೆಎಂ ಹೇಳಿದೆ.
ರೈತ ಮುಖಂಡ ರಾಕೇಶ್ ಟಿಕಾಯತ್ (ಭಾರತೀಯ ಕಿಸಾನ್ ಯೂನಿಯನ್) ಕೂಡ ಈ ದೆಹಲಿ ಚಲೋ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಆದರೆ ಅವರು ಫೆಬ್ರವರಿ 16 ರಂದು ಭಾರತ್ ಬಂದ್‌ಗೆ ಬೆಂಬಲ ನೀಡಲಿದ್ದಾರೆ.
"ನಾವು ಫೆಬ್ರವರಿ 16 ರಂದು 'ಭಾರತ್ ಬಂದ್' ಗೆ ಕರೆ ನೀಡಿದ್ದೇವೆ. ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಸೇರಿದಂತೆ ಹಲವಾರು ರೈತ ಗುಂಪುಗಳು ಇದರ ಭಾಗವಾಗಿವೆ. ರೈತರು ಆ ದಿನ ತಮ್ಮ ಹೊಲಗಳಿಗೆ ಹೋಗಿ ಮುಷ್ಕರ ಮಾಡಬಾರದು. ಈ ಹಿಂದೆಯೂ ರೈತರು ಅಮಾವಾಸ್ಯೆಯ ದಿನವನ್ನು ಹೊಲಗಳಲ್ಲಿ ಕೆಲಸ ಮಾಡುವುದನ್ನು ತಪ್ಪಿಸುತ್ತಿದ್ದರು. ಅಂತೆಯೇ, ಫೆಬ್ರವರಿ 16 ರೈತರಿಗೆ ಮಾತ್ರ 'ಅಮಾವಾಸ್ಯೆ' ಆಗಿದೆ. ಅವರು ಆ ದಿನ ಕೆಲಸ ಮಾಡಬಾರದು ಮತ್ತು 'ಕೃಷಿ ಮುಷ್ಕರ'ದ ಮೂಲಕ ದೇಶಕ್ಕೆ ದೊಡ್ಡ ಸಂದೇಶವನ್ನು ಕಳುಹಿಸಬೇಕು" ಎಂದು ಟಿಕಾಯತ್ ಈ ಹಿಂದೆ ಹೇಳಿದರು.
(This copy first appeared in Hindustan Times Kannada website. To read more like this please logon to kannada.hindustantime.com)