Indian Railways: ಶಿವಮೊಗ್ಗ ಯಶವಂತಪುರ ಇಂಟರ್‌ಸಿಟಿ ರೈಲು ಚಿಕ್ಕಬಾಣಾವರದಲ್ಲಿ ನಿಲುಗಡೆಗೆ ಅವಕಾಶ, ಡಿಸೆಂಬರ್ 16ರಿಂದ ಸೇವೆ ಶುರು
Dec 14, 2024 10:17 AM IST
ಯಶವಂತಪುರ ಹಾಗೂ ಶಿವಮೊಗ್ಗ ನಡುವೆ ಸಂಚರಿಸುವ ಇಂಟರ್‌ಸಿಟಿ ರೈಲು ಚಿಕ್ಕಬಾಣಾವರದಲ್ಲೂ ನಿಲುಗಡೆಯಾಗಲಿದೆ.
- ಬೆಂಗಳೂರಿನ ಯಶವಂತಪುರ ಹಾಗೂ ಶಿವಮೊಗ್ಗ ನಡುವೆ ನಿತ್ಯ ಸಂಚರಿಸುವ ಇಂಟರ್‌ಸಿಟಿ ಎಕ್ಸ್ ಪ್ರೆಸ್ ರೈಲು ಚಿಕ್ಕ ಬಾಣಾವರದಲ್ಲಿ ಒಂದು ನಿಮಿಷ ನಿಲುಗಡೆಯಾಗಲಿದೆ.
ಬೆಂಗಳೂರು: ಮಲೆನಾಡಿಗರಿಗೆ ಬೆಂಗಳೂರಿನಿಂದ ನಿತ್ಯ ಸಂಪರ್ಕ ಕಲ್ಪಿಸುವ ಶಿವಮೊಗ್ಗ ಯಶವಂತಪುರ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲು ಬೆಂಗಳೂರಿನ ಚಿಕ್ಕ ಬಾಣಾವರದಲ್ಲಿ ನಿಲುಗಡೆಗೆ ಅವಕಾಶ ಮಾಡಿಕೊಡಲಾಗಿದೆ. ಬೆಂಗಳೂರು ಹೊರ ವಲಯ ಭಾಗದವರು ಸುಲಭವಾಗಿ ಮನೆ, ಕಚೇರಿ ತಲುಪಲು ಅನುವಾಗುವಂತೆ ಶಿವಮೊಗ್ಗ, ಕಡೂರು, ಅರಸೀಕೆರೆ, ತಿಪಟೂರು, ತುಮಕೂರು ಭಾಗದಿಂದ ಆಗಮಿಸುವವರು ಹಾಗೂ ಇಲ್ಲಿಂದ ಹೋಗುವವರಿಗೂ ಸುಲಭವಾಗುವಂತೆ ಈ ಅವಕಾಶ ಮಾಡಿಕೊಡಲಾಗಿದೆ. ಚಿಕ್ಕಬಾಣಾವಾರ ಬೆಂಗಳೂರು ದಕ್ಷಿಣ ಭಾಗದ ಹಲವು ಪ್ರದೇಶಗಳಿಗೆ ಪ್ರಮುಖ ಸಂಪರ್ಕ ಕೊಂಡಿಯೂ ಹೌದು. ಚಿಕ್ಕಬಾಣಾವರದಲ್ಲಿ ಶಿವಮೊಗ್ಗ ಯಶವಂತಪುರ ಇಂಟರ್‌ಸಿಟಿ ರೈಲು ನಿಲುಗಡೆಗೆ ಬೇಡಿಕೆ ಇತ್ತು. ನಿಲುಗಡೆಯು 2024ರ ಡಿಸೆಂಬರ್ 16 ರಿಂದ ಶುರುವಾಗಲಿದೆ.
ಶಿವಮೊಗ್ಗ ಯಶವಂತಪುರ ಎಕ್ಸ್‌ಪ್ರೆಸ್ ರೈಲಯ ಚಿಕ್ಕಬಾಣಾವರದ ನಿಲುಗಡೆ ಬಗ್ಗೆ ರೈಲ್ವೆ ಇಲಾಖೆ ಮಾಹಿತಿ ನೀಡಿದೆ. ರೈಲು ಸಂಖ್ಯೆ 16579/16580 ಯಶವಂತಪುರ-ಶಿವಮೊಗ್ಗ ಟೌನ್-ಯಶವಂತಪುರ ಡೈಲಿ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ಡಿಸೆಂಬರ್ 16 ರಿಂದ ಮಾರ್ಚ್ 15 ರವರೆಗೆ ಚಿಕ್ಕಬಾಣಾವರದಲ್ಲಿ ನಿಲುಗಡೆಯಾಗಲಿದೆ.
ರೈಲು ನಂಬರ್ 16579 ಯಶವಂತಪುರ-ಶಿವಮೊಗ್ಗ ಟೌನ್ ಡೈಲಿ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ಚಿಕ್ಕಬಾಣಾವರಕ್ಕೆ ಬೆಳಗ್ಗೆ 9.25 ಕ್ಕೆ ಆಗಮಿಸಲಿದೆ ಹಾಗೂ 9.26 ಕ್ಕೆ ಹೊರಡಲಿದೆ. ಚಿಕ್ಕಬಾಣಾವರದಲ್ಲಿ ಒಂದು ನಿಮಿಷದ ನಿಲುಗಡೆ ಅವಕಾಶವನ್ನು ಭಾರತೀಯ ರೈಲ್ವೆಯಿಂದ ಒದಗಿಸಲಾಗಿದೆ.
ಇನ್ನೂ ರೈಲು ಸಂಖ್ಯೆ 16580 ಶಿವಮೊಗ್ಗ ಟೌನ್-ಯಶವಂತಪುರ ಡೈಲಿ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರಾತ್ರಿ 7.34 ಕ್ಕೆ ಆಗಮಿಸಿ 7.35 ಕ್ಕೆ ಹೊರಡಲಿದೆ ಎಂದು ಹುಬ್ಬಳ್ಳಿ ನೈರುತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಂಜುನಾಥ ಕನಮಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದೇ ರೀತಿಯಲ್ಲಿ ರೈಲು ಸಂಖ್ಯೆ 16519/16520 ಜೋಲಾರ್‌ಪೇಟ್ಟೈ-ಕೆಎಸ್‌ಆರ್ ಬೆಂಗಳೂರು-ಜೋಲಾರ್‌ಪೇಟ್ಟೈ ಮೆಮು ಟ್ರೈನ್ ಹೂಡಿಯಲ್ಲಿ ಒಂದು ನಿಮಿಷದ ನಿಲುಗಡೆಯಾಗಲಿದ್ದು, ಇದು ಮೇ 31, 2025 ರವರೆಗೆ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.
ರೈಲುಗಳಿಗೆ ತಾತ್ಕಾಲಿಕವಾಗಿ ಎಸಿ ಬೋಗಿ ಜೋಡಣೆ
ಮೈಸೂರು ಹಾಗೂ ಬೆಳಗಾವಿ, ಮೈಸೂರು ಬಾಗಲಕೋಟೆ ಎಕ್ಸ್‌ಪ್ರೆಸ್ ರೈಲುಗಳಿಗೆ ತಲಾ ಒಂದು ಫಸ್ಟ್ ಕಮ್ ಸೆಕೆಂಡ್ ಎಸಿ ಹೆಚ್ಚುವರಿ ಬೋಗಿಗಳನ್ನು ತಾತ್ಕಾಲಿಕವಾಗಿ ಜೋಡಿಸಲಾಗುತ್ತಿದೆ. 2025ರ ಜನವರಿ ಮೊದಲ ವಾರದಿಂದಲೇ ಜಾರಿಗೆ ಬರಲಿದೆ.
2025ರ ಜನವರಿ 4 ರಿಂದ ಮೇ 3 ರವರೆಗೆ ರೈಲು ಸಂಖ್ಯೆ 17301 ಮೈಸೂರು-ಬೆಳಗಾವಿ ಡೈಲಿ ಎಕ್ಸ್ ಪ್ರೆಸ್, ಜನವರಿ 1 ರಿಂದ ಏಪ್ರಿಲ್ 30, 2025 ರವರೆಗೆ ರೈಲು ಸಂಖ್ಯೆ 17302 ಬೆಳಗಾವಿ-ಮೈಸೂರು ಡೈಲಿ ಎಕ್ಸ್ ಪ್ರೆಸ್.
ಜನವರಿ 2 ರಿಂದ ಮೇ 1, 2025 ರವರೆಗೆ ರೈಲು ಸಂಖ್ಯೆ 17307 ಮೈಸೂರು-ಬಾಗಲಕೋಟೆ ಬಸವ ಡೈಲಿ ಎಕ್ಸ್ ಪ್ರೆಸ್, ಜನವರಿ 3 ರಿಂದ ಮೇ 2, 2025 ರವರೆಗೆ ರೈಲು ಸಂಖ್ಯೆ 17308 ಬಾಗಲಕೋಟೆ-ಮೈಸೂರು ಬಸವ ಡೈಲಿ ಎಕ್ಸ್ ಪ್ರೆಸ್ ರೈಲಿಗೆ ಹೆಚ್ಚುವರಿ ಬೋಗಿ ಅಳವಡಿಸಲಾಗುತ್ತದೆ ಎಂದು ತಿಳಿಸಲಾಗಿದೆ.