Indira Canteen: ಅಗ್ಗದ ದರದಲ್ಲಿ ಊಟ- ತಿಂಡಿ ಒದಗಿಸುವ ಇಂದಿರಾ ಕ್ಯಾಂಟೀನ್ ಯೋಜನೆಗೆ 100 ಕೋಟಿ
Jul 07, 2023 04:33 PM IST
ಬೆಂಗಳೂರು ಭೇಟಿ ವೇಳೆ ಇಂದಿರಾ ಕ್ಯಾಂಟೀನ್‌ನಲ್ಲಿ ತಿಂಡಿ ತಿಂದಿದ್ದ ರಾಹುಲ್ ಗಾಂಧಿ (ಸಂಗ್ರಹ ಚಿತ್ರ)
- Indira Canteen: ಸಿದ್ದರಾಮಯ್ಯ ಅವರು ಮೊದಲ ಅವಧಿಯಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಜಾರಿಗೆ ತಂದಿದ್ದರು. ಇದರಿಂದ ಸಿದ್ದರಾಮಯ್ಯ ಅವರಿಗೆ ಜನಪ್ರಿಯತೆ ಹಾಗೂ ವರ್ಚಸ್ಸು ಕೂಡ ದೊರಕಿತ್ತು.
ಬೆಂಗಳೂರು: ನಗರ ಪ್ರದೇಶದ ಬಡವರು ಹಾಗೂ ಶ್ರಮಿಕರಿಗೆ ಕಡಿಮೆ ದರದಲ್ಲಿ ಊಟ, ಉಪಾಹಾರ ಒದಗಿಸುವ ಉದ್ದೇಶದಿಂದ ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಆರಂಭವಾಗಿದ್ದ ಇಂದಿರಾ ಕ್ಯಾಂಟೀನ್ (Indira Canteen) ಯೋಜನೆಗೆ ಈ ಬಾರಿಯ ಬಜೆಟ್‌ನಲ್ಲಿ 100 ಕೋಟಿ ರೂಪಾಯಿಯನ್ನು ಮೀಸಲಿಡಲಾಗಿದೆ. ಬಜೆಟ್‌ನಲ್ಲಿ ಪ್ರಸ್ತಾವ ಮಾಡಿರುವಂತೆ ಮೊದಲಿಗೆ ಇಂದಿರಾ ಕ್ಯಾಂಟೀನ್ ಹೊಸ ಮೆನುವನ್ನು ಪರಿಚಯಿಸಲಾಗುವುದು. ಇದನ್ನು ಬಿಬಿಎಂಪಿ ಹಾಗೂ ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿ ಪುನರಾರಂಭ ಮಾಡಲಾಗುವುದು ಎಂದು ಘೋಷಣೆ ಮಾಡಲಾಗಿದೆ.
ಎರಡನೇ ಹಂತದಲ್ಲಿ ಎಲ್ಲ ಹೊಸ ಪಟ್ಟಣಗಳಲ್ಲಿ ಹಾಗೂ ಬಿಬಿಎಂಪಿ ಹೊಸ ವಾರ್ಡ್ ಗಳಲ್ಲಿ ವಿಸ್ತರಣೆ ಮಾಡಲಾಗುವುದು. ಪ್ರಸಕ್ತ ಸಾಲಿನಲ್ಲಿ ಇಂದಿರಾ ಕ್ಯಾಂಟೀನ್ ಗಳ ದುರಸ್ತಿ, ನವೀಕರಣ ಹಾಗೂ ನಿರ್ವಹಣೆಗಾಗಿ ರಾಜ್ಯ ಸರ್ಕಾರವು ನೂರು ಕೋಟಿ ರೂಪಾಯಿ ಒದಗಿಸಲಿದೆ ಎಂದು ಪ್ರಸ್ತಾವದಲ್ಲಿ ತಿಳಿಸಲಾಗಿದೆ. ಈ ಹಿಂದೆ ಅಧಿಕಾರದಲ್ಲಿ ಇದ್ದ ಬಿಜೆಪಿ ಸರ್ಕಾರವು ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಸ್ಥಗಿತಗೊಳಿಸಿ, ಜನವಿರೋಧಿ ನೀತಿಯನ್ನು ಅನುಸರಿಸಿತು ಎಂದು ಸಹ ಬಜೆಟ್ ದಾಖಲೆಯಲ್ಲಿ ಉಲ್ಲೇಖ ಮಾಡಲಾಗಿದೆ.
ಸಿದ್ದರಾಮಯ್ಯ ಅವರು ಮೊದಲ ಅವಧಿಯಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಜಾರಿಗೆ ತಂದಿದ್ದರು. ಇದರಿಂದ ಸಿದ್ದರಾಮಯ್ಯ ಅವರಿಗೆ ಜನಪ್ರಿಯತೆ ಹಾಗೂ ವರ್ಚಸ್ಸು ಕೂಡ ದೊರಕಿತ್ತು. ಆದರೆ, ಬಿಜೆಪಿ ನೇತೃತ್ವದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದಾಗ ಈ ಯೋಜನೆಯನ್ನು ಸಂಪೂರ್ಣ ನಿರ್ಲಕ್ಷಿಸಿತು ಎಂಬುದು ಕಾಂಗ್ರೆಸ್ ಆರೋಪವಾಗಿತ್ತು. ಆದರೆ ಈ ಬಾರಿ ಚುನಾವಣೆಗೆ ಪೂರ್ವದಲ್ಲಿ ಬಿಜೆಪಿ ತಂದಿದ್ದ ಪ್ರಣಾಳಿಕೆಯಲ್ಲಿ ಇಂದಿರಾ ಕ್ಯಾಂಟೀನ್ ಆಲೋಚನೆಯಂಥದ್ದೇ ಇದ್ದ ಹಾಗೂ ಅಟಲ್ ಬಿಹಾರಿ ವಾಜಪೇಯಿ ಹೆಸರಿನಲ್ಲಿ ಯೋಜನೆ ಜಾರಿಗೆ ತರುವ ಪ್ರಸ್ತಾವ ಮಾಡಲಾಗಿತ್ತು.
ಅದರ ಪ್ರಕಾರ, ಪೌಷ್ಟಿಕಾಂಶಯುಕ್ತ ಆಹಾರವನ್ನು ಅತ್ಯಂತ ಕಡಿಮೆ ಬೆಲೆಗೆ ಜನರಿಗೆ ಒದಗಿಸುವುದು ಅಟಲ್ ಹೆಸರಿನ ಆಹಾರ ಕೇಂದ್ರದ ಉದ್ದೇಶವಾಗಿತ್ತು. ಇದೀಗ ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷಿ ಯೋಜನೆಯಾದ ಇಂದಿರಾ ಕ್ಯಾಂಟೀನ್ ಗೆ ಮತ್ತೆಜೀವ ಬಂದಿದೆ.