Isha foundation chikkaballapur: ಚಿಕ್ಕಬಳ್ಳಾಪುರದಲ್ಲಿ 112 ಅಡಿಯ ಆದಿಯೋಗಿ ಶಿವನ ಪ್ರತಿಮೆ, ನವಗ್ರಹ ದೇಗುಲ ನಿರ್ಮಾಣ ಕಾರ್ಯ ಚುರುಕು
Oct 09, 2022 11:42 AM IST
ಚಿಕ್ಕಬಳ್ಳಾಪುರದಲ್ಲಿ 112 ಅಡಿಯ ಆದಿಯೋಗಿ ಶಿವನ ಪ್ರತಿಮೆ, ನವಗ್ರಹ ದೇಗುಲ ನಿರ್ಮಾಣ ಕಾರ್ಯ
- ತಮಿಳುನಾಡಿನ ಕೊಯಮತ್ತೂರಿನಲ್ಲಿರುವಂತೆ ಶಿವನ ಪ್ರತಿಮೆಯನ್ನು ಚಿಕ್ಕಬಳ್ಳಾಪುರದ ಕೌರನಹಳ್ಳಿ ಲಿಂಗಶೆಟ್ಟಿಪುರ ಗ್ರಾಮಗಳ ಜಾಲಾರಿ ನರಸಿಂಹ ಸ್ವಾಮಿ ದೇವಾಲಯದ ನರಸಿಂಗದೇವರಬೆಟ್ಟದ ತಪ್ಪಲಿನಲ್ಲಿ ನಿರ್ಮಾಣ ಮಾಡಲಾಗುತ್ತಿದೆ.
ಚಿಕ್ಕಬಳ್ಳಾಪುರ: ಕರ್ನಾಟಕದ ಚಿಕ್ಕಬಳ್ಳಾಪುರದಲ್ಲಿ ಇಶಾ ಫೌಂಡೇಶನ್ ವತಿಯಿಂದ 112 ಅಡಿ ಎತ್ತರರದ ಆದಿಯೋಗಿ ಶಿವನ ಪ್ರತಿಮೆ ನಿರ್ಮಾಣ ಕಾರ್ಯ ಮುಕ್ತಾಯ ಹಂತದಲ್ಲಿದ್ದು, ಶೀಘ್ರದಲ್ಲಿ ಲೋಕಾರ್ಪಣೆಗೊಳ್ಳಲುವ ನಿರೀಕ್ಷೆಯಿದೆ. ನಿನ್ನೆ ಚಿಕ್ಕಬಳ್ಳಾಪುರದಲ್ಲಿ ಇಶಾ ಫೌಂಡೇಷನ್‌ನ ಮೊದಲ ಕಾರ್ಯಕ್ರಮವಾಗಿ ನಾಗಮಂಟಪ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಭಾಗಿಯಾಗಿದ್ದಾರೆ.
ತಮಿಳುನಾಡಿನ ಕೊಯಮತ್ತೂರಿನಲ್ಲಿರುವಂತೆ ಶಿವನ ಪ್ರತಿಮೆಯನ್ನು ಚಿಕ್ಕಬಳ್ಳಾಪುರದ ಕೌರನಹಳ್ಳಿ ಲಿಂಗಶೆಟ್ಟಿಪುರ ಗ್ರಾಮಗಳ ಜಾಲಾರಿ ನರಸಿಂಹ ಸ್ವಾಮಿ ದೇವಾಲಯದ ನರಸಿಂಗದೇವರಬೆಟ್ಟದ ತಪ್ಪಲಿನಲ್ಲಿ ನಿರ್ಮಾಣ ಮಾಡಲಾಗುತ್ತಿದೆ.
ನಿನ್ನೆ ನಾಗಮಂಟಪ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಸಚಿವರಾದ ಕೆ. ಸುಧಾಕರ್ ಮತ್ತು ಇತರ ಪ್ರಮುಖರು ಆಗಮಿಸಿದ್ದರು. ಈ ಕಾರ್ಯಕ್ರಮದಲ್ಲಿ ನಿನ್ನೆ ರಾತ್ರಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಜನರಿಗೆ ಕೈಯಾರೆ ಊಟ ಬಡಿಸಿದ್ದಾರೆ. ಬಳಿಕ ಜನಸಾಮಾನ್ಯರ ಜತೆಯಲ್ಲಿಯೇ ಕೂತು ಊಟ ಮಾಡಿದ್ದು ವಿಶೇಷವಾಗಿತ್ತು. ಇಶಾ ಫೌಂಡೇಷನ್‌ನ ಸಂಸ್ಥಾಪಕರಾದ ಜಗ್ಗೀ ವಾಸುದೇವ, ಸಚಿವ ಸುಧಾಕರ್ ಕೂಡ ಜನಸಾಮಾನ್ಯರಿಗೆ ಊಟ ಬಡಿಸಿದರು.
ಇಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಅವರು ನಾಗಮಂಟಪ ಪೂಜಾ ಕೈಂಕರ್ಯಗಳನ್ನು ನಡೆಸಿ ಲೋಕಾರ್ಪಣೆಗೊಳಿಸಿದರು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಪೂಜಾ ಕೈಂಕರ್ಯಗಳು ನಡೆಯಿತು.
'ಮೊದಲು ಈಶಾ ಫೌಂಡೇಶನ್‌ನಿಂದ ತಮಿಳುನಾಡಿನ ಕೊಯಿಮತ್ತೂರಿನಲ್ಲಿ ರೈತರ ಉತ್ಪಾದಕರ ಕಂಪನಿ ಸ್ಥಾಪಿಸಲಾಗಿದೆ. ಅದೇ ರೀತಿ ಇಲ್ಲೂ ಫೌಂಡೇಷನ್ ಸ್ಥಾಪನೆ ಮಾಡಲಾಗವುದು. ಮೂರು ವರ್ಷದಲ್ಲಿ ರೈತರ ಆದಾಯ ದ್ವಿಗುಣಗೊಳಿಸಬಹುದು. ಇದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯ,' ಎಂಂದು ಜಗ್ಗೀ ವಾಸುದೇವ್ ಹೇಳಿದ್ದಾರೆ.
ಚಿಕ್ಕಬಳ್ಳಾಪುರ ಈಶಾ ಯೋಗ ಕೇಂದ್ರ ಜಾಗತಿಕ ಕೇಂದ್ರವಾಗಿ ಬೆಳೆಯಲಿದೆ. ಸರ್ಕಾರ ಅವರಿಗೆ ಎಲ್ಲ ರೀತಿಯ ಸಹಕಾರ ನೀಡಲಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ರೈತರ ಆದಾಯವನ್ನು ಅವರು ದುಪ್ಪಟ್ಟು ಮಾಡಲು ಮುಂದಾಗಿದ್ದಾರೆ. ಭವಿಷ್ಯದಲ್ಲಿ ಅದನ್ನು ರಾಜ್ಯದಾದ್ಯಂತ ಪಸರಿಸಲಾಗುವುದು ಎಂದರು. ಈಗಾಗಲೇ ಮಣ್ಣು ಅಭಿಯಾನ ಕುರಿತು ಸದ್ಗುರುಗಳು ನೀಡಿರುವ ವರದಿಯನ್ನು ಸರ್ಕಾರ ಜಾರಿಗೊಳಿಸಲು 100 ಕೋಟಿ ರು, ಅನುದಾನ ಒದಗಿಸಿದೆ. ಇನ್ನೂ ಬೇಕಾದರೂ ಹೆಚ್ಚಿನ ಅನುದಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇಂದು ನಾಗಪ್ರತಿಷ್ಠೆ ಕಾರ್ಯಕ್ರಮ
ಸದ್ಗುರು ಜಗ್ಗಿ ವಾಸುದೇವ್ ಅವರ ನೇತೃತ್ವದಲ್ಲಿ ಭಾನುವಾರ ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 1 ಗಂಟೆಯವರೆಗೂ ಶಕ್ತಿಯುತ ನಾಗಪ್ರತಿಷ್ಠೆ ಕಾರ್ಯಕ್ರಮ ನಡೆಯಲಿದೆ.
ಇಶಾ ಯೋಗ ಕೇಂದ್ರ
ಅದಿಯೋಗಿ ಶಿವನ ಪ್ರತಿಮೆ ದಿವ್ಯ ಮುಖ ರೂಪ ಅಂತಿಮ ಹಂತ ತಲುಪಿದ್ದು ಮುಂದಿನ ಜನವರಿ ಸಂಕ್ರಾಂತಿ ಸಮಯದಲ್ಲಿ ಲೋಕಾರ್ಪಣೆಯಾಗುವ ಸಾಧ್ಯತೆಯಿದೆ. ಸುಮಾರು 110 ಎಕರೆ ವಿಶಾಲವಾದ ಪ್ರದೇಶದಲ್ಲಿ ಇಶಾ ಯೋಗ ಕೇಂದ್ರ ತಲೆ ಎತ್ತುತ್ತಿದ್ದು ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಿಂದ 9 ಕಿಲೋಮೀಟರ್ ದೂರದಲ್ಲಿದೆ.