logo
ಕನ್ನಡ ಸುದ್ದಿ  /  ಕರ್ನಾಟಕ  /  Jagadish Shettar: ಬಿಜೆಪಿಯದ್ದು ಯೂಸ್‌ ಆ್ಯಂಡ್‌ ಥ್ರೋ ನೀತಿ: ರಾಜೀನಾಮೆಯ ಬಾಂಬ್‌ ಸ್ಫೋಟಿಸಿದ ಜಗದೀಶ್‌ ಶೆಟ್ಟರ್!

Jagadish Shettar: ಬಿಜೆಪಿಯದ್ದು ಯೂಸ್‌ ಆ್ಯಂಡ್‌ ಥ್ರೋ ನೀತಿ: ರಾಜೀನಾಮೆಯ ಬಾಂಬ್‌ ಸ್ಫೋಟಿಸಿದ ಜಗದೀಶ್‌ ಶೆಟ್ಟರ್!

Nikhil Kulkarni HT Kannada

Apr 16, 2023 07:17 AM IST

google News

ಸಂಗ್ರಹ ಚಿತ್ರ

    • ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಹುಬ್ಬಳ್ಳಿ ಸೆಂಟ್ರಲ್‌ ಕ್ಷೇತ್ರದ ಬಿಜೆಪಿ ಟಿಕೆಟ್‌ ಪಡೆಯುವಲ್ಲಿ ವಿಫಲವಾಗಿರುವ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌, ಬಂಡಾಯದ ಕಹಳೆ ಮೊಳಗಿಸಿದ್ದಾರೆ. ಬಿಜೆಪಿ ವರಿಷ್ಠರ ನಡೆಯಿಂದ ಬೇಸರವಾಗಿದ್ದು, ಶಾಸಕ ಸ್ಥಾನ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಜಗದೀಶ್‌ ಶೆಟ್ಟರ್‌ ಘೋಷಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ (Verified Twitter)

ಹುಬ್ಬಳ್ಳಿ: ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಹುಬ್ಬಳ್ಳಿ ಸೆಂಟ್ರಲ್‌ ಕ್ಷೇತ್ರದ ಬಿಜೆಪಿ ಟಿಕೆಟ್‌ ಪಡೆಯುವಲ್ಲಿ ವಿಫಲವಾಗಿರುವ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌, ಇದೀಗ ಅಕ್ಷರಶಃ ಬಂಡಾಯದ ಕಹಳೆ ಮೊಳಗಿಸಿದ್ದಾರೆ. ಬಿಜೆಪಿ ವರಿಷ್ಠರ ನಡೆಯಿಂದ ಬೇಸರವಾಗಿದ್ದು, ಶಾಸಕ ಸ್ಥಾನ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಜಗದೀಶ್‌ ಶೆಟ್ಟರ್‌ ಘೋಷಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕೇಂದ್ರ ಸಚಿವರ ಸಂಧಾನ ಸಭೆ ಬಳಿಕ ಮಾಹಿತಿ ನೀಡಿದ ಅವರು, ಭಾನುವಾರ ಶಿರಸಿಗೆ ತೆರಳಿ ವಿಧಾನಸಭೆ ಸ್ಪೀಕರ್‌ ಕಾಗೇರಿ ಭೇಟಿ ಮಾಡಿ ರಾಜೀನಾಮೆ ಪತ್ರ ಸಲ್ಲಿಸುತ್ತೇನೆ ಎಂದು ತಿಳಿಸಿದರು. ಬಿಜೆಪಿ ಲಿಂಗಾಯತ ನಾಯಕರನ್ನು ಟಾರ್ಗೆಟ್‌ ಮಾಡುತ್ತಿದ್ದು, ಯೂಸ್‌ ಆ್ಯಂಡ್‌ ಥ್ರೋ ನೀತಿ(ಬಳಸಿ ಬಿಸಾಡುವುದು)ಯನ್ನು ಅನುಸರಿಸುತ್ತಿದೆ ಎಂದು ಇದೇ ವೇಳೆ ಜಗದೀಶ್‌ ಶೆಟ್ಟರ್‌ ಗಂಭೀರ ಆರೋಪ ಮಾಡಿದರು.

ನನಗೆ ಟಿಕೆಟ್‌ ನಿರಾಕರಿಸುವ ಮೂಲಕ ಬಿಜೆಪಿ ಹೈಕಮಾಂಡ್‌ ನನ್ನನ್ನು ಅವಮಾನಿಸಿದೆ. ಪಕ್ಷದ ರಾಜ್ಯಾಧ್ಯಕ್ಷನಾಗಿ, ವಿರೋಧ ಪಕ್ಷದ ನಾಯಕನಾಗಿ, ಮುಖ್ಯಮಂತ್ರಿಯಾಗಿ ನಾನು ಈ ನಾಡಿಗೆ ಸೇವೆ ಸಲ್ಲಿಸಿದ್ದೇನೆ. ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆಯಾದರೂ, ನಾನೂ ಕೂಡ ಈ ರಾಜ್ಯದಲ್ಲಿ ಪಕ್ಷದ ಬೆಳವಣಿಗೆಯಲ್ಲಿ ಮಹತ್ತರವಾದ ಪಾತ್ರ ನಿರ್ವಹಿಸಿದ್ದೇನೆ ಎಂದು ಜಗದೀಶ್‌ ಶೆಟ್ಟರ್‌ ಭಾವುಕರಾಗಿ ನುಡಿದರು.

ಪಕ್ಷದಲ್ಲಿ ಲಿಂಗಾಯತ ಮುಖಂಡರನ್ನು ಟಾರ್ಗೆಟ್‌ ಮಾಡಲಾಗುತ್ತಿದೆ. ಹಲವಾರು ಲಿಂಗಾಯತ ನಾಯಕರಿಗೆ ಅನ್ಯಾಯ ಮಾಡಲಾಗಿದೆ. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ‌ ಕೂಡ ಚುನಾವಣಾ ರಾಜಕೀಯದಿಂದ ನಿವೃತ್ತಿ ಹೊಂದಿದ್ದಾರೆ. ಈಗ ಉಳಿದ ಬಿಜೆಪಿ ರಾಜ್ಯ ನಾಯಕರಲ್ಲಿ ನಾನೇ ಹಿರಿಯನಾಗಿದ್ದು, ನನಗೂ ಟಿಕೆಟ್‌ ನೀಡದೇ ಅವಮಾನ ಮಾಡಲಾಗಿದೆ. ಈ ಬಗ್ಗೆ ಲಿಂಗಾಯತ ಸಮುದಾಯದಲ್ಲಿ ಬೇಸರವಿದೆ ಎಂದು ಜಗದೀಶ್‌ ಶೆಟ್ಟರ್‌ ಹೇಳಿದರು.

ನಾನು ಸಿಎಂ ಹುದ್ದೆ ಆಕಾಂಕ್ಷಿ ಎಂಬ ಕಾರಣಕ್ಕೆ ಕೆಲವರು ನನ್ನ ವಿರುದ್ಧ ಷಡ್ಯಂತ್ರ ನಡೆಸಿ, ಟಿಕೆಟ್‌ ಕೈತಪ್ಪುವಂತೆ ಮಾಡಿದ್ದಾರೆ. ಈ ಭಾಗದಲ್ಲಿ ನನ್ನ ಜನಪ್ರಿಯತೆಯನ್ನು ಕಂಡು ಕೆಲವರಿಗೆ ಹೊಟ್ಟೆಯುರಿ ಎಂದು ಜಗದೀಶ್‌ ಶೆಟ್ಟರ್‌ ತೀವ್ರ ವಾಗ್ದಾಳಿ ನಡೆಸಿದರು. ನಮ್ಮ ಕುಟುಂಬ ಜನಸಂಘದ ಕಾಲದಿಂದಲೂ ರಾಜಕೀಯ ಮಾಡಿಕೊಂಡು ಬಂದಿದೆ. ನಾನು ದಕ್ಷಿಣ ಭಾರತದ ಮೊಟ್ಟ ಮೊದಲ ಬಿಜೆಪಿ ಮೇಯರ್.‌ ದಶಕಗಳ ಕಾಲ ಪಕ್ಷ ಸಂಘಟನೆಗಾಗಿ ದುಡಿದ ನನ್ನನ್ನು ಈ ರೀತಿ ಅವಮಾನ ಮಾಡಿರುವುದು ಸರಿಯಲ್ಲ ಎಂದು ಜಗದೀಶ್‌ ಶೆಟ್ಟರ್‌ ಗುಡುಗಿದರು.

ತಾವು ಬೇರೆ ಪಕ್ಷ ಸೇರುವ ಬಗ್ಗೆ ಅಥವಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಬಗ್ಗೆ ಕೆಲವೇ ದಿನಗಳಲ್ಲಿ ಉತ್ತರ ದೊರೆಯಲಿದೆ ಎಂದೂ ಇದೇ ವೇಳೆ ಜಗದೀಶ್‌ ಶೆಟ್ಟರ್‌ ಸ್ಪಷ್ಟಪಡಿಸಿದರು. ಬಂಡಾಯವೆದ್ದಿದ್ದ ಜಗದೀಶ್‌ ಶೆಟ್ಟರ್‌ ಅವರನ್ನು ಸಮಾಧಾನಪಡಿಸಲು, ಸಿಎಂ ಬೊಮ್ಮಾಯಿ, ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್‌, ಪ್ರಹ್ಲಾದ್‌ ಜೋಶಿ ಅವರು ಶನಿವಾರ ತಡರಾತ್ರಿ ಸಭೆ ನಡೆಸಿದ್ದರು.

ಆದರೆ ಸಭೆಯ ಬಳಿಕ ಅಸಮಾಧಾನದಿಂದಲೇ ಹೊರಬಂದ ಶೆಟ್ಟರ್‌, ಶಾಸಕ ಸ್ಥಾನ ಹಾಗೂ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಘೊಷಿಸಿದರು. ಈ ಮೂಲಕ ಉತ್ತರ ಕರ್ನಾಟಕದಲ್ಲಿ ದಶಕಗಳ ಕಾಲ ಬಿಜೆಪಿ ಕಟ್ಟಿ ಬೆಳೆಸಿದ್ದ ಹಿರಿಯ ನಾಯಕರೊಬ್ಬರು ಟಿಕೆಟ್‌ ಸಿಗದ ಕಾರಣ ಪಕ್ಷವನ್ನು ತೊರೆದಂತಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ