logo
ಕನ್ನಡ ಸುದ್ದಿ  /  ಕರ್ನಾಟಕ  /  Jagadish Shettar Resigns: 'ಒಳ್ಳೆ ಕ್ಯಾಂಡಿಡೇಟ್‌' ಕಳೆದುಕೊಂಡ ಬಿಜೆಪಿ: ಶೆಟ್ಟರ್‌ ಮುಂದಿನ ರಾಜಕೀಯ ನಡೆಯೇ ತರಲಿದೆಯಂತೆ ಫಜೀತಿ

Jagadish Shettar Resigns: 'ಒಳ್ಳೆ ಕ್ಯಾಂಡಿಡೇಟ್‌' ಕಳೆದುಕೊಂಡ ಬಿಜೆಪಿ: ಶೆಟ್ಟರ್‌ ಮುಂದಿನ ರಾಜಕೀಯ ನಡೆಯೇ ತರಲಿದೆಯಂತೆ ಫಜೀತಿ

Nikhil Kulkarni HT Kannada

Apr 16, 2023 08:44 AM IST

google News

ಜಗದೀಶ್‌ ಶೆಟ್ಟರ್‌ (ಸಂಗ್ರಹ ಚಿತ್ರ)

    • ಹುಬ್ಬಳ್ಳಿ ಸೆಂಟ್ರಲ್‌ ಕ್ಷೇತ್ರದ ಬಿಜೆಪಿ ಟಿಕೆಟ್‌ ಪಡೆಯುವಲ್ಲಿ ವಿಫಲವಾಗಿರುವ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌, ಶಾಸಕ ಸ್ಥಾನ ಹಾಗೂ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಇದೀಗ ಜಗದೀಶ್‌ ಶೆಟ್ಟರ್‌ ಅವರ ಮುಂದಿನ ರಾಜಕೀಯ ನಡೆ, ಬಿಜೆಪಿಗೆ ಹೇಗೆ ಹೊಡೆತ ನೀಡಲಿದೆ ಎಂಬ ಚರ್ಚೆಗೆ ನಾಂದಿ ಹಾಡಿದೆ.
ಜಗದೀಶ್‌ ಶೆಟ್ಟರ್‌ (ಸಂಗ್ರಹ ಚಿತ್ರ)
ಜಗದೀಶ್‌ ಶೆಟ್ಟರ್‌ (ಸಂಗ್ರಹ ಚಿತ್ರ) (Verified Twitter)

ಹುಬ್ಬಳ್ಳಿ: ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಹುಬ್ಬಳ್ಳಿ ಸೆಂಟ್ರಲ್‌ ಕ್ಷೇತ್ರದ ಬಿಜೆಪಿ ಟಿಕೆಟ್‌ ಪಡೆಯುವಲ್ಲಿ ವಿಫಲವಾಗಿರುವ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌, ಶಾಸಕ ಸ್ಥಾನ ಹಾಗೂ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಇಂದು ಶಿರಸಿಗೆ ತೆರಳಿ ಸ್ಪೀಕರ್‌ ಕಾಗೇರಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸುವುದಾಗಿ ಜಗದೀಶ್‌ ಶೆಟ್ಟರ್‌ ಸ್ಪಷ್ಟಪಡಿಸಿದ್ದಾರೆ.

ಹುಬ್ಬಳ್ಳಿ ಸೆಂಟ್ರಲ್‌ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದ ಜಗದೀಶ್‌ ಶೆಟ್ಟರ್‌, ಈ ಭಾಗದ ಜನರಿಂದ 'ಒಳ್ಳೆ ಕ್ಯಾಂಡಿಡೇಟ್‌' ಎಂದೇ ಕರೆಸಿಕೊಂಡು ಬಂದವರು. ಶೆಟ್ಟರ್‌ ಉಮೇದುವಾರಿಕೆಯನ್ನು ಬೆಂಬಲಿಸುತ್ತಲೇ ಬಂದಿರುವ ಈ ಕ್ಷೇತ್ರದ ಜನತೆ, ಅವರ ಸ್ವಭಾವ, ರಾಜಕೀಯ ಮುತ್ಸದಿತನವನ್ನು ಮೆಚ್ಚಿಕೊಂಡವರು.

ಜಗದೀಶ್‌ ಶೆಟ್ಟರ್‌ ಕಾರ್ಯವೈಖರಿ ಬಗ್ಗೆ ಕೆಲವರಲ್ಲಿ ಅಸಮಾಧಾನವಿದೆಯಾದರೂ, ಅವರ ಒಟ್ಟಾರೆ ವ್ಯಕ್ತಿತ್ವದ ಬಗ್ಗೆ ಜನ ಚಕಾರ ಎತ್ತಿದ್ದು ಕಡಿಮೆ. ಅಲ್ಲದೇ ನಮ್ಮ ಕ್ಷೇತ್ರದ ನಾಯಕರೊಬ್ಬರು ರಾಜ್ಯದ ಮುಖ್ಯಮಂತ್ರಿಯಾದರು ಎಂಬ ಸಂತಸ ಕೂಡ ಇಲ್ಲಿನ ಜನರಲ್ಲಿದೆ. ಆದರೆ ಇದೀಗ ಟಿಕೆಟ್‌ ಸಿಗದ ಕಾರಣಕ್ಕೆ ಸ್ವತಃ ಶೆಟ್ಟರ್‌ ಬಿಜೆಪಿಯಿಂದ ದೂರವಾಗುತ್ತಿರುವುದು, ಇದು ಸಹಜವಾಗಿ ಕ್ಷೇತ್ರದ ಮತದಾರರ ಮೇಲೆ ಪ್ರಭಾವ ಬೀರಲಿದೆ ಎಂಬ ವಿಶ್ಲೇಷಣೆಗಳು ಆರಂಭಗೊಂಡಿವೆ.

ಬಿಜೆಪಿ ಹೈಕಮಾಂಡ್‌ ತಮಗೆ ಟಿಕೆಟ್‌ ನೀಡದ್ದಕ್ಕೆ ತೀವ್ರವಾಗಿ ಮುನಿಸಿಕೊಂಡಿರುವ ಜಗದೀಶ್‌ ಶೆಟ್ಟರ್‌, ಬಿಜೆಪಿ ಲಿಂಗಾಯತ ನಾಯಕರನ್ನು ಟಾರ್ಗೆಟ್‌ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೇ ತಮಗೆ ಮಾಡಿರುವ ಅವಮಾನದಿಂದ ಲಿಂಗಾಯತ ಸಮುದಾಯ ಬೇಸರಗೊಂಡಿದೆ ಎಂದೂ ಶೆಟ್ಟರ್‌ ಪ್ರತಿಪಾದಿಸಿದ್ದಾರೆ.

ಜಗದೀಶ್‌ ಶೆಟ್ಟರ್‌ ಬೇರೊಂದು ರಾಜಕೀಯ ಪಕ್ಷ ಸೇರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಾರೋ ಅಥವಾ ಪಕ್ಷೇತರರಾಗಿ ಕಣಕ್ಕಿಳಿಯುತ್ತಾರೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಜಗದೀಶ್‌ ಶೆಟ್ಟರ್‌ ಸ್ಪರ್ಧೆ ಈ ಕ್ಷೇತ್ರದಲ್ಲಿ ಬಿಜೆಪಿಗೆ ಹೊಡೆತ ನೀಡಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಏನೇ ಆದರೂ ನಾನು ಈ ಬಾರಿ ನನ್ನ ಕ್ಷೇತ್ರದಿಂದ ಸ್ಪರ್ಧೆ ಮಾಡುವುದು ಖಚಿತ ಎಂದು ಜಗದೀಶ್‌ ಶೆಟ್ಟರ್‌ ಈಗಾಗಲೇ ಘೋಷಿಸಿದ್ದಾರೆ. ಇದರಿಂದ ಹುಬ್ಬಳ್ಳಿ ಸೆಂಟ್ರಲ್‌ ಕ್ಷೇತ್ರದ ಚುನಾವಣಾ ಕಣ ರೋಚಕವಾಗಲಿದೆ ಎಂಬುದಂತೂ ಸತ್ಯ. ತಮಗೆ ಟಿಕೆಟ್‌ ನಿರಾಕರಿಸಿರುವುದನ್ನು ಪ್ರತಿಷ್ಠೆಯನ್ನಾಗಿ ಸ್ವೀಕರಿಸಿರುವ ಜಗದೀಶ್‌ ಶೆಟ್ಟರ್‌, ಈ ಭಾಗದಲ್ಲಿ ತಮ್ಮ ಪ್ರಾಬಲ್ಯ ಏನು ಎಂಬುದನ್ನು ಬಿಜೆಪಿ ತೋರಿಸಲು ಉತ್ಸುಕರಾಗಿದ್ದಾರೆ.

ವೇಟ್‌ ಆ್ಯಂಡ್‌ ವಾಚ್‌ ಮೋಡ್‌ನಲ್ಲಿ ಕಾಂಗ್ರೆಸ್‌:

ಇನ್ನು ಜಗದೀಶ್‌ ಶೆಟ್ಟರ್‌ ರಾಜೀನಾಮೆ ಪ್ರಹಸನವನ್ನು ದೂರದಿಂದಲೇ ವೀಕ್ಷಿಸುತ್ತಿರುವ ಕಾಂಗ್ರೆಸ್‌, ಸೂಕ್ತ ಸಮಯದಲ್ಲಿ ತನ್ನ ರಾಜಕೀಯ ದಾಳ ಉರುಳಿಸುವ ನಿರ್ಧಾರ ಮಾಡಿದೆ. ಜಗದೀಶ್‌ ಶೆಟ್ಟರ್‌ ತಮ್ಮ ರಾಜಕೀಯ ಜೀವನದ ಆರಂಭದಿಂದಲೂ ಕಾಂಗ್ರೆಸ್‌ ವಿರೋಧಿ ರಾಜಕಾರಣವನ್ನು ಮಾಡುತ್ತಾ ಬಂದವರು. ಹೀಗಾಗಿ ಶೆಟ್ಟರ್‌ ಅವರಾಗಿಯೇ ಕಾಂಗ್ರೆಸ್‌ ಕದ ತಟ್ಟುವ ನಿರೀಕ್ಷೆಯನ್ನು ಇಟ್ಟುಕೊಳ್ಳಲು ಸಾಧ್ಯವಿಲ್ಲ.

ಹೀಗಾಗಿ ಕಾಂಗ್ರೆಸ್‌ ಶೆಟ್ಟರ್‌ ವಿಚಾರದಲ್ಲಿ ಕಾಂಗ್ರೆಸ್‌ ಎಚ್ಚರಿಕೆಯ ಹೆಜ್ಜೆ ಇಡುವ ತೀರ್ಮಾನ ಮಾಡಿದೆ. ಈ ವಿಚಾರವಾಗಿ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಗದೀಶ್‌ ಶೆಟ್ಟರ್‌ ಕಾಂಗ್ರೆಸ್‌ಗೆ ಬರುವುದಾದರೆ ಸ್ವಾಗತವಿದೆ ಎಂದು ಹೇಳಿರುವುದು ತೀವ್ರ ಕುತೂಹಲ ಕೆರಳಿಸಿದೆ.

ಆದರೆ ಜಗದೀಶ್‌ ಶೆಟ್ಟರ್‌ ಪಕ್ಷೇತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಕ್ಷೇತ್ರದಲ್ಲಿ ತಮ್ಮ ಪ್ರಾಬಲ್ಯ ಏನು ಎಂಬುದನ್ನು ತೋರಿಸುವ ಛಲ ತೊಟ್ಟಿರುವ ಜಗದೀಶ್‌ ಶೆಟ್ಟರ್‌, ಸ್ವಂತ ನಾಮಬಲದ ಮೇಲೆ ಚುನಾವಣೆ ಗೆಲ್ಲುವ ನಿರ್ಧಾರ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ