logo
ಕನ್ನಡ ಸುದ್ದಿ  /  ಕರ್ನಾಟಕ  /  Belagavi News: ಸೆಲ್ಪೀ ವಿಡಿಯೋ ವಿವಾದ: ಬೆಳಗಾವಿ ಹಿಂಡಲಗಾ ಜೈಲಿನ ಇಬ್ಬರು ಸಿಬ್ಬಂದಿ ಅಮಾನತು

Belagavi News: ಸೆಲ್ಪೀ ವಿಡಿಯೋ ವಿವಾದ: ಬೆಳಗಾವಿ ಹಿಂಡಲಗಾ ಜೈಲಿನ ಇಬ್ಬರು ಸಿಬ್ಬಂದಿ ಅಮಾನತು

HT Kannada Desk HT Kannada

Aug 11, 2023 11:29 AM IST

google News

ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಬೆಳಗಾವಿ ಹಿಂಡಲಗಾ ಜೈಲಿನ ಇಬ್ಬರು ಸಿಬ್ಬಂದಿಯನ್ನು ಅಮಾನತುಪಡಿಸಲಾಗಿದೆ.

    • Belagavi Hindalaga Jail ಸದಾ ಒಂದಿಲ್ಲೊಂದು ವಿವಾದದ ಮೂಲಕ ಸದ್ದು ಮಾಡುವ ಬೆಳಗಾವಿಯ ಶತಮಾನದಷ್ಟು ಹಳೆಯದಾದ ಹಿಂಡಲಗಾ ಜೈಲಿನಲ್ಲಿ ಸೆಲ್ಫಿ ವಿಡಿಯೋ ಸುದ್ದಿ ವೈರಲ್‌ ಆಗಿತ್ತು. ಹೊಡೆದಾಟದ ಕುರಿತೂ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಇಬ್ಬರು ಸಿಬ್ಬಂದಿಯನ್ನು ಅಮಾನತುಪಡಿಸಿ ಕಾರಾಗೃಹ ಇಲಾಖೆ ಅಧಿಕಾರಿಗಳು ಆದೇಶಿಸಿದ್ದಾರೆ. ಏನಿದು ಪ್ರಕರಣ ಇಲ್ಲಿದೆ ವರದಿ..
ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಬೆಳಗಾವಿ ಹಿಂಡಲಗಾ ಜೈಲಿನ ಇಬ್ಬರು ಸಿಬ್ಬಂದಿಯನ್ನು ಅಮಾನತುಪಡಿಸಲಾಗಿದೆ.
ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಬೆಳಗಾವಿ ಹಿಂಡಲಗಾ ಜೈಲಿನ ಇಬ್ಬರು ಸಿಬ್ಬಂದಿಯನ್ನು ಅಮಾನತುಪಡಿಸಲಾಗಿದೆ.

ಬೆಳಗಾವಿ: ಬೆಳಗಾವಿ ಹಿಂಡಲಗಾ ಕೇಂದ್ರ ಕಾರಾಗೃಹ ಒಂದಿಲ್ಲಾ ಒಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುವ ಜೈಲು. ಈಗ ಮತ್ತೆ ಸುದ್ದಿಯಲ್ಲಿದ್ದು, ರಾಜ್ಯಾದ್ಯಂತ ಸದ್ದು ಮಾಡುತ್ತಿದೆ.

ಒಂದೆರಡು ವಾರದ ಹಿಂದೆ ಕೈದಿಗಳಿಬ್ಬರು ಬಡಿದಾಡಿಕೊಂಡು ಆಸ್ಪತ್ರೆ ಸೇರಿದ್ದ ಸುದ್ದಿ ಮಾಸುವಾಗಲೇ ಜೈಲಿನಲ್ಲಿನಲ್ಲಿ ನಡೆಯುವ ಭಯಾನಕ ಚಟುವಟಿಕೆಗಳ ಬಗ್ಗೆ ವಿಡಿಯೋ ಒಂದು ವೈರಲ್ ಆಗಿದ್ದು, ಇದಕ್ಕೆ ಸಂಬಂಧಿಸಿದಂತೆ ಜೈಲಿನ ಇಬ್ಬರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.

ಪ್ರಕರಣ ಒಂದರಲ್ಲಿ ಹಿಂಡಲಗಾ ಜೈಲು ಸೇರಿರುವ ಪ್ರಶಾಂತ ಮೊಗವೀರ ಎನ್ನುವ ಕೈದಿ ಜೈಲಿನಲ್ಲಿ ನಡೆಯುವ ಅವ್ಯವಸ್ಥೆ ವಿಡಿಯೋ ಮಾಡಿ ಹೊರ ಬಿಟ್ಟಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟಿ ವೈರಲ್ ಆಗಿತ್ತು. ಇದು ಹಿಂಡಲಗಾ ಜೈಲಿನ ಸಮಸ್ಯೆಗಳು ಹಾಗೂ ಅವ್ಯವಸ್ಥೆಯ ಕಾರಳಮುಖವನ್ನು ಅನಾವರಣಗೊಳಿಸಿತ್ತು. ‌ಶತಮಾನದ ಹೊಸ್ತಿಲಲ್ಲಿರುವ ಹಿಂಡಲಗಾ ಜೈಲು ಅವಾಗ ಅವಾಗ ಸದಾ ಸುದ್ದಿಯಲ್ಲಿರುತ್ತದೆ.

ಜೈಲಿನ ಇಬ್ಬರು ಸಿಬ್ಬಂದಿ ಅಮಾನತು

ಕರ್ತವ್ಯ ಲೋಪ ಆರೋಪದಲ್ಲಿ ಇಲ್ಲಿನ ಹಿಂಡಲಗಾ ಕಾರಾಗೃಹದ ಇಬ್ಬರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಜೈಲಿನ ಹೆಡ್ ವಾರ್ಡರ್ ಬಿ.ಎಲ್. ಮೆಳವಂಕಿ ಮತ್ತು ವಾರ್ಡರ್ ವಿ.ಟಿ. ವಾಗೋರೆ ಅಮಾನತುಗೊಂಡ ಸಿಬ್ಬಂದಿ.

ಈಚೆಗೆ ಹಿಂಡಲಗಾ ಜೈಲಿನಲ್ಲಿ ಸಾಯಿಕುಮಾರ ಮತ್ತು ಶಂಕರ ಭಜಂತ್ರಿ ಎಂಬ ಕೈದಿಗಳು ಹೊಡೆದಾಡಿಕೊಂಡಿದ್ದು ಇಬ್ಬರಿಗೂ ಗಾಯವಾಗಿತ್ತು. ಈ ವೇಳೆ ಬಿ.ಎಲ್. ಮೆಳವಂಕಿ ಮತ್ತು ವಿ.ಟಿ. ವಾಗೋರೆ ಕರ್ತವ್ಯದಲ್ಲಿದ್ದರು.

ಸೆಲ್ಸಿ ವಿಡಿಯೊ ವೈರಲ್

ಇದೇ ಅವಧಿಯಲ್ಲಿ ‘ಹಿಂಡಲಗಾ ಜೈಲಿನಲ್ಲಿ ಕೈದಿಗಳಿಗೆ ಕಿರುಕುಳ ನೀಡಲಾಗುತ್ತಿದೆ. ಕೈದಿಗಳಿಂದ ಹಣ ಪಡೆದು ಮೊಬೈಲ್ ಬಳಕೆಗೆ ಅವಕಾಶ ನೀಡಲಾಗುತ್ತಿದೆ ಎಂದು ಪ್ರಶಾಂತ ಮೊಗವೀರ ಎಂಬ ಕೈದಿ ಸೆಲ್ಪಿ ವಿಡಿಯೊ ಮಾಡಿದ್ದ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಈ ಘಟನೆಯಿಂದ ಎಚ್ಚೆತ್ತ ಬಂದಿಖಾನೆ ಎಡಿಜಿಪಿ ಮಾಲಿನಿ ಕೃಷ್ಣಮೂರ್ತಿ, ಪ್ರಕರಣದ ತನಿಖೆ ನಡೆಸುವಂತೆ ಉತ್ತರ ವಲಯ ಕಾರಾಗೃಹದ ಉಪ ಮಹಾನಿರೀಕ್ಷಕ ಟಿ.ಪಿ.ಶೇಷ ಅವರಿಗೆ ಆದೇಶಿಸಿದ್ದರು. ತನಿಖೆ ವೇಳೆ ಇಬ್ಬರು ಸಿಬ್ಬಂದಿಯ ಕರ್ತವ್ಯ ಲೋಪ ಸಾಬೀತಾದ ಹಿನ್ನೆಲೆಯಲ್ಲಿ ಹೆಡ್ ವಾರ್ಡರ್ ಮತ್ತು ವಾರ್ಡರ್ ಅವರನ್ನು ಅಮಾನತು ಮಾಡಲಾಗಿದೆ.

ಕೈದಿಗಳ ಹೊಡೆದಾಟ

ನಗರದ ಕೇಂದ್ರ ಕಾರಾಗೃಹದಲ್ಲಿ ಕೈದಿಯೊಬ್ಬನ ಕೊಲೆಗೆ ಮತ್ತೊಬ್ಬ ಕೈದಿ ಯತ್ನಿಸಿರುವ ಘಟನೆ 10 ದಿನಗಳ ಹಿಂದೆ ನಡೆದಿತ್ತು. ಕೊಲೆ ಪ್ರಕರಣದ ವಿಚಾರಣೆ ಎದುರಿಸುತ್ತಿರುವ ಮಂಡ್ಯ ಮೂಲದ ಸಾಯಿಕುಮಾರ್ ಮತ್ತು ಪ್ರಕರಣವೊಂದರಲ್ಲಿ ಶಿಕ್ಷೆ ಎದುರಿಸುತ್ತಿರುವ ಶಂಕರ ಭಜಂತ್ರಿ ಎಂಬುವವರ ಮಧ್ಯೆ ಹೊಡೆದಾಡಿಕೊಂಡಿದ್ದರು.

ಕೈದಿಗಳ ವಿರುದ್ಧವೂ ದೂರು

ಜೈಲಿನಲ್ಲಿ ಹೊಡೆದಾಡಿಕೊಂಡು ಗಾಯಗೊಂಡಿರುವ ಇಬ್ಬರು ಕೈದಿಗಳು ಹಾಗೂ ವಿಡಿಯೊ ಚಿತ್ರೀಕರಣ ಮಾಡಿದ ಕೈದಿ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇಬ್ಬರು ಸಿಬ್ಬಂದಿ ಮತ್ತು ಮೂವರು ಕೈದಿಗಳ ವಿರುದ್ಧ ತನಿಖೆ ನಡೆಸಲಾಗುತ್ತಿದೆ ಎಂದು ಹಿಂಡಲಗಾ ಕೇಂದ್ರ ಕಾರಾಗೃಹದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಜೈಲಿನಿಂದ ಗಡ್ಕರಿಗೂ ಬಂದಿತು ಕರೆ

ಕಳೆದ ಎರಡು ವಾರದ ಹಿಂದೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಕಚೇರಿಗೆ ಹಿಂಡಲಗಾ ಜೈಲಿನಲ್ಲಿದ್ದ ಕೈದಿಯಿಂದ ಬೆದರಿಕೆ ಕರೆಯೂ ಬಂದಿತ್ತು. ಈ ಹಿನ್ನೆಲೆ ಹಿಂಡಲಗಾ ಜೈಲಿನ ಕೈದಿಯೊಬ್ಬನ ವಿರುದ್ಧ ಮಹಾರಾಷ್ಟ್ರ ಪೊಲೀಸರು ಪ್ರಕರಣ ದಾಖಲಿಸಿದ್ದರು.

ಕರೆ ಮಾಡಿದ ವ್ಯಕ್ತಿ ತಾನು ಗ್ಯಾಂಗ್‌ಸ್ಟರ್ ದಾವೂದ್ ಇಬ್ರಾಹಿಂ ತಂಡದ ಸದಸ್ಯ ಎಂದು ಹೇಳಿಕೊಂಡಿದ್ದ. ಗಂಭೀರ ಪ್ರಕರಣಗಳ ಎದುರಿಸುತ್ತಿರುವ ರಾಜ್ಯದ ಕುಖ್ಯಾತ ಆರೋಪಿಗಳನ್ನು ಬೆಳಗಾವಿ ಹಿಂಡಲಗಾ ಕಾರಾಗೃಹಕ್ಕೆ ಕಳುಹಿಸಲಾಗುತ್ತದೆ. ಕೈದಿಗಳು ಪರಸ್ಪರ ಹೊಡೆದಾಡಿ ಕೊಂಡಿರುವ ಘಟನೆಗಳು ಆಗಾಗ ಇಲ್ಲಿ ಕೇಳಿಬರುತ್ತಿವೆ.

( ವರದಿ: ಪ್ರಹ್ಲಾದ ಗೌಡ ಬಿ.ಜಿ.)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ