logo
ಕನ್ನಡ ಸುದ್ದಿ  /  ಕರ್ನಾಟಕ  /  Electricity Bill: ಸರ್ಕಾರಿ ಇಲಾಖೆಗಳಿಂದಲೇ 1,715 ಕೋಟಿ ವಿದ್ಯುತ್​ ಶುಲ್ಕ ಬಾಕಿ; ಕಲಬುರಗಿ ಜೆಸ್ಕಾಂ ಅಧಿಕಾರಿಗಳಿಂದ ಜಾಣ ಕುರುಡು ಪ್ರದರ್ಶನ

Electricity Bill: ಸರ್ಕಾರಿ ಇಲಾಖೆಗಳಿಂದಲೇ 1,715 ಕೋಟಿ ವಿದ್ಯುತ್​ ಶುಲ್ಕ ಬಾಕಿ; ಕಲಬುರಗಿ ಜೆಸ್ಕಾಂ ಅಧಿಕಾರಿಗಳಿಂದ ಜಾಣ ಕುರುಡು ಪ್ರದರ್ಶನ

HT Kannada Desk HT Kannada

Jun 04, 2023 02:26 PM IST

google News

ಕಲಬುರಗಿ ವಿಭಾಗದ ವಿವಿಧ ಸರ್ಕಾರಿ ಇಲಾಖೆಗಳಿಂದ 1715 ಕೋಟಿ ವಿದ್ಯುಲ್​ ಬಿಲ್​ ಬಾಕಿ ಇದೆ

    • ಗುಲಬರ್ಗಾ ವಿದ್ಯುತ್‌ ಸರಬರಾಜು ನಿಗಮ ನಿಯಮಿತ (ಜೆಸ್ಕಾಂ) ವ್ಯಾಪ್ತಿಯಲ್ಲಿ ಬರುವ ವಿವಿಧ ಇಲಾಖೆ ಅಧಿಕಾರಿಗಳು ಹಲವಾರು ತಿಂಗಳು ವಿದ್ಯುತ್‌ ಕಟ್ಟಿಲ್ಲ. ಸರ್ಕಾರಿ ಬೊಕ್ಕಸಕ್ಕೆ ಕೊಕ್ಕೆ ಹಾಕಿದರೂ ಸಹ ಜೆಸ್ಕಾಂ ಮಾತ್ರ ಜಾಣ ಕುರುಡನಂತೆ ವರ್ತಿಸುತ್ತಿರುವುದು ಸಾರ್ವಜನಿಕರ ಕೆಂಗೆಣ್ಣಿಗೆ ಗುರಿಯಾಗಿದೆ.
ಕಲಬುರಗಿ ವಿಭಾಗದ ವಿವಿಧ ಸರ್ಕಾರಿ ಇಲಾಖೆಗಳಿಂದ 1715 ಕೋಟಿ ವಿದ್ಯುಲ್​ ಬಿಲ್​ ಬಾಕಿ ಇದೆ
ಕಲಬುರಗಿ ವಿಭಾಗದ ವಿವಿಧ ಸರ್ಕಾರಿ ಇಲಾಖೆಗಳಿಂದ 1715 ಕೋಟಿ ವಿದ್ಯುಲ್​ ಬಿಲ್​ ಬಾಕಿ ಇದೆ

ಕಲಬುರಗಿ: ನೂತನ ಕಾಂಗ್ರೆಸ್‌ ಸರ್ಕಾರ 200 ಯೂನಿಟ್‌ ವಿದ್ಯುತ್‌ ಬಿಲ್‌ ಉಚಿತ ಎಂದು ಘೋಷಿಸಿದೆ. ಇದರ ಬೆನ್ನಲ್ಲೇ ಬಾಕಿ ಉಳಿಸಿಕೊಂಡಿರುವ ವಿದ್ಯುತ್‌ ಬಿಲ್‌ ವಸೂಲಿಗೆ ಜೆಸ್ಕಾಂ ಮುಂದಾಗಿದೆ. ಒಂದೆರಡು ತಿಂಗಳು ಬಿಲ್​ ಪಾವತಿಸದೆ ಉಳಿಸಿಕೊಂಡಿದ್ದರೆ, ಜೆಸ್ಕಾಂ ಸಿಬ್ಬಂದಿ ವಿದ್ಯುತ್‌ ಕೂಡ ಕಡಿತಗೊಳಿಸುತ್ತಿದ್ದಾರೆ.

ಆದರೆ, ಗುಲಬರ್ಗಾ ವಿದ್ಯುತ್‌ ಸರಬರಾಜು ನಿಗಮ ನಿಯಮಿತ (ಜೆಸ್ಕಾಂ) ವ್ಯಾಪ್ತಿಯಲ್ಲಿ ಬರುವ ವಿವಿಧ ಇಲಾಖೆ ಅಧಿಕಾರಿಗಳು ಹಲವಾರು ತಿಂಗಳು ವಿದ್ಯುತ್‌ ಕಟ್ಟಿಲ್ಲ. ಸರ್ಕಾರಿ ಬೊಕ್ಕಸಕ್ಕೆ ಕೊಕ್ಕೆ ಹಾಕಿದರೂ ಸಹ ಜೆಸ್ಕಾಂ ಮಾತ್ರ ಜಾಣ ಕುರುಡನಂತೆ ವರ್ತಿಸುತ್ತಿರುವುದು ಸಾರ್ವಜನಿಕರ ಕೆಂಗೆಣ್ಣಿಗೆ ಗುರಿಯಾಗಿದೆ.

ಗ್ರಾಮೀಣಾಭಿವೃದ್ಧಿ ಇಲಾಖೆಯಿಂದಲೇ ಕೋಟಿ ಕೋಟಿ ಬಾಕಿ

ಜೆಸ್ಕಾಂ ವ್ಯಾಪ್ತಿಯ ಸರ್ಕಾರದ ವಿವಿಧ ಇಲಾಖೆಗಳು, 2023ರ ಮಾರ್ಚ್‌ ಅಂತ್ಯದವರೆಗೆ 1,715.81 ಕೋಟಿ ರೂಪಾಯಿ ವಿದ್ಯುತ್‌ ಶುಲ್ಕ ಬಾಕಿ ಉಳಿಸಿಕೊಂಡಿರುವುದು ಅಚ್ಚರಿಯನ್ನುಂಟು ಮಾಡಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯೇ (ಆರ್‌ಡಿಪಿಆರ್)‌ 1,556.69 ಕೋಟಿ ಪಾವತಿಸದೆ ಬಾಕಿ ಉಳಿಸಿಕೊಂಡಿದೆ.

ಬಾಕಿ ಪಾವತಿಗೆ ಹೋಗದ ಇಲಾಖೆಗಳು

2022 ಏಪ್ರಿಲ್‌ 1ರ ಅವಧಿಯಲ್ಲಿ ಆರ್‌ಡಿಪಿಆರ್‌ನ ಬಾಕಿ ಮೊತ್ತ 1,133.87 ಕೋಟಿ ಇತ್ತು. 2022-23ರ ಅವಧಿಯಲ್ಲಿ 506.17 ಕೋಟಿ ಸೇರ್ಪಡೆಯೊಂದಿಗೆ 1,640.04 ಕೋಟಿ ರೂಪಾಯಿ ತಲುಪಿದೆ. ಒಂದು ವರ್ಷದ ಅವಧಿಯಲ್ಲಿ 83.35 ಕೋಟಿ ರೂ, ಮಾತ್ರ ಶುಲ್ಕ ಪಾವತಿಸಿ ಕೈತೊಳೆದುಕೊಂಡಿದ್ದು, ಉಳಿದ 1,556.69 ಕೋಟಿ ಪಾವತಿಸಲು ಹಿಂದೇಟು ಹಾಕುತ್ತಿದೆ.

ವಿವಿಧ ಇಲಾಖೆಗಳ ಬಾಕಿ ಶುಲ್ಕ

ನಗರಾಭಿವೃದ್ಧಿ ಇಲಾಖೆ (ಯುಡಿಡಿ) 110.48 ಕೋಟಿ, ಸಣ್ಣ ನೀರಾವರಿ ಇಲಾಖೆ 23.12 ಕೋಟಿ ರೂಪಾಯಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ (ಬಹುಗ್ರಾಮ ಯೋಜನೆ; ಆರ್‌ಡಿಡಬ್ಲ್ಯು ಮತ್ತು ಎಸ್‌ಡಿ) ಇಲಾಖೆ 17.65 ಕೋಟಿ ರೂಪಾಯಿ, ಬೃಹತ್‌ ನೀರಾವರಿ ಇಲಾಖೆ 1.78 ಕೋಟಿ ರೂಪಾಯಿ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಇತರೆ ಇಲಾಖೆಗಳು ಕ್ರಮವಾಗಿ 5.57 ಕೋಟಿ ರೂಪಾಯಿ ಹಾಗೂ 38 ಲಕ್ಷದಷ್ಟು ಶುಲ್ಕ ಬಾಕಿ ಉಳಿಸಿಕೊಂಡಿದೆ. ಅದೇ ರೀತಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ 15 ಲಕ್ಷ ಪಾವತಿಸಿಲ್ಲ.

ಜೆಸ್ಕಾಂ ವ್ಯಾಪ್ತಿಯ ಕಲಬುರಗಿ ಜಿಲ್ಲೆಯ ವಿವಿಧ ಇಲಾಖೆಗಳು 322.73 ಕೋಟಿ ರೂಪಾಯಿ, ಯಾದಗಿರಿ ಜಿಲ್ಲೆಯ ವಿವಿಧ ಇಲಾಖೆಗಳು 68.89 ಕೋಟಿ ರೂಪಾಯಿ, ಬೀದರ್‌ ಜಿಲ್ಲೆಯ ವಿವಿಧ ಇಲಾಖೆಗಳು 402.16 ಕೋಟಿ ರೂಪಾಯಿ, ಬಳ್ಳಾರಿ ಜಿಲ್ಲೆಯ ವಿವಿಧ ಇಲಾಖೆಗಳು 192.24 ಕೋಟಿ ರೂಪಾಯಿ, ವಿಜಯನಗರ ಜಿಲ್ಲೆಯ ವಿವಿಧ ಇಲಾಖೆಗಳು 347.95 ಕೋಟಿ ರೂಪಾಯಿ, ರಾಯಚೂರು ಜಿಲ್ಲೆಯ ವಿವಿಧ ಇಲಾಖೆಗಳು 270.22 ಕೋಟಿ ರೂಪಾಯಿ ವಿದ್ಯುತ್‌ ಶುಲ್ಕ ಬಾಕಿ ಉಳಿಸಿಕೊಂಡಿವೆ.

ಸಿಬ್ಬಂದಿಗೆ ತರಾಟೆ

ಆದರೆ, ಪಾವತಿಸದ ವಿದ್ಯುತ್‌ ಬಿಲ್‌ ವಸೂಲಿಗೆ ಜೆಸ್ಕಾಂ ಮುತುವರ್ಜಿ ವಹಿಸದಿರುವುದು ಅಚ್ಚರಿಯ ಸಂಗತಿ. ಇಲಾಖೆಗಳ ವಿದ್ಯುತ್‌ ಸಂಪರ್ಕ ಕಡಿತದ ಬಿಸಿ ಮುಟ್ಟಿಸುವ ಕ್ರಮಕ್ಕೂ ಮುಂದಾಗುತ್ತಿಲ್ಲ. ಜೆಸ್ಕಾಂ ಸಿಬ್ಬಂದಿಯ ಈ ವರ್ತನೆಗೆ ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾರತಮ್ಯವೇಕೆ ಎಂದು ಪ್ರಶ್ನಿಸುತ್ತಿದ್ದಾರೆ. ಜನ ಸಾಮಾನ್ಯರು ಸ್ವಲ್ಪ ಹಣ ಬಾಕಿ ಉಳಿಸಿಕೊಂಡರೂ ತಕ್ಷಣ ವಿದ್ಯುತ್​ ಸಂಪರ್ಕ ಕಡಿತಗೊಳಿಸಿ ದರ್ಪ ತೋರುತ್ತಾರೆ ರಮೇಶ ನಾಯಕ ಎಂಬವರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ