Kalaburagi News: ಬೆಂಬಿಡದೆ ಕಾಡುತ್ತಿದೆ ಹಾವು; ಆತಂಕಗೊಂಡು ದೇವರ ಮೊರೆ ಹೋದ ಪಾಲಕರು
Aug 31, 2023 01:38 PM IST
ಬೆಂಬಿಡದೆ ಕಾಡುತ್ತಿದೆ ಹಾವು; ಆತಂಕಗೊಂಡು ದೇವರ ಮೊರೆ ಹೋದ ಪಾಲಕರು
- ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಹಲಕರ್ಟಿ ಗ್ರಾಮದ ವಿಜಯಕುಮಾರ ಮತ್ತು ಉಷಾ ದಂಪತಿಯ ಪುತ್ರ ಪ್ರಜ್ವಲ್ (15) 9ನೇ ತರಗತಿಯಲ್ಲಿ ಓದುತ್ತಿರುವ ಬಾಲಕನಿಗೆ ಹಾವು ಕಚ್ಚಿದೆ. ಸದ್ಯ ಕಲಬುರಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ಕಳೆದ ಆಗಸ್ಟ್ 27 ರಿಂದ ಚಿಕಿತ್ಸೆ ಪಡೆಯುತ್ತಿದ್ದಾನೆ.
ಕಲಬುರಗಿ: ಬಾಲಕನೊಬ್ಬನಿಗೆ 9 ಬಾರಿ ಹಾವು ಕಚ್ಚಿದೆ. ಅಚ್ಚರಿವೆಂದರೆ ಮನೆಯಲ್ಲಿ ಹಲವಾರು ಜನ ಇದ್ದರೂ ಸಹ ಈ ಬಾಲಕನೊಬ್ಬನಿಗೆ ಹಾವು ಕಚ್ಚಿದೆ. ಕಚ್ಚಿದ ಹಾವು ಯಾರಿಗೂ ಕಾಣುವುದಿಲ್ಲ. ಆದರೆ, ಕಚ್ಚಿದ ಗಾಯಗಳು ಮಾತ್ರ ಕಂಡು ಬರುತ್ತಿರುವುದು ಆತಂಕಕಾರಿ ಮತ್ತು ಅಚ್ಚರಿಯನ್ನುಂಟು ಮಾಡಿದೆ.
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಹಲಕರ್ಟಿ ಗ್ರಾಮದ ವಿಜಯಕುಮಾರ ಮತ್ತು ಉಷಾ ದಂಪತಿಯ ಪುತ್ರ ಪ್ರಜ್ವಲ್ (15) 9ನೇ ತರಗತಿಯಲ್ಲಿ ಓದುತ್ತಿರುವ ಬಾಲಕನಿಗೆ ಹಾವು ಕಚ್ಚಿದೆ. ಸದ್ಯ ಕಲಬುರಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ಕಳೆದ ಆಗಸ್ಟ್ 27 ರಿಂದ ಚಿಕಿತ್ಸೆ ಪಡೆಯುತ್ತಿದ್ದಾನೆ.
ಹಾವಿನ ದ್ವೇಷ ಹನ್ನೆರೆಡು ವರ್ಷವೆಂದು ಹೇಳುತ್ತಾರೆ. ಆದರೆ, ಈ ಬಾಲಕನಿಗೆ ಹಾವಿನೊಂದಿಗೆ ಯಾವ ದ್ವೇಷ ಇದೆ ಎಂಬುದು ಗೊತ್ತಿಲ್ಲ. ಆದರೆ, ಬಾಲಕನಿಗೆ ಹಾವೊಂದು ಬೆಂಬಿಡದೆ ಕಾಡುತ್ತಿದೆ. ಈ ಬಾಲಕನಿಗೆ ಎರಡು ತಿಂಗಳಲ್ಲಿ ಒಂದಲ್ಲ ಎರಡಲ್ಲ ಬರೊಬ್ಬರಿ 9 ಬಾರಿ ತನಗೆ ಹಾವು ಕಚ್ಚಿದೆ ಎಂದು ಹೇಳುತ್ತಾನೆ ಬಾಲಕ ಪ್ರಜ್ವಲ್.
ಪ್ರಜ್ವಲಗೆ ಜುಲೈ 3ರಂದು ಮನೆ ಅಂಗಳದಲ್ಲಿ ಆಟವಾಡುವಾಗ ಹಾವು ಕಚ್ಚಿದೆ. ಆಗ ಈ ಬಾಲಕನ ಪೋಷಕರು ಬೇವಿನ ಮರದ ಎಲೆ ಹಾಗೂ ಖಾರದ ಪುಡಿ ತಿನ್ನಿಸಿದ್ದಾರೆ. ಆಗ ಬಾಯಿಗೆ ಸಿಹಿ, ಖಾರ ಎರಡೂ ಹತ್ತುತ್ತಿಲ್ಲವೆಂದು ಬಾಲಕ ಹೇಳಿದ್ದಾನೆ. ಕೂಡಲೇ ಆತನನ್ನು ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದ್ದಾರೆ. ಅದಾದ ಬಳಿಕ ನಾಲ್ಕು-ಐದು ದಿನಗಳ ಮಧ್ಯೆದಲ್ಲಿ ಈ ಬಾಲಕನಿಗೆ ನಿರಂತರವಾಗಿ ಇಲ್ಲಿಯವರೆಗೆ ಒಟ್ಟು 9 ಬಾರಿ ಹಾವು ಕಚ್ಚಿರುವ ಕುರಿತು ಬಾಲಕ ಬಹಿರಂಗ ಪಡೆಸಿದ್ದಾನೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆದ ಬಳಿಕ ಎರಡ್ಮೂರು ದಿನದಲ್ಲೇ ಹಾವು ಮತ್ತೆ ಕಚ್ಚುತ್ತಿದೆ. ಸದ್ಯ ಇಲ್ಲಿಯವರೆಗೆ 9 ಬಾರಿ ಹಾವು ಕಚ್ಚಿರುವ ಗುರುತುಗಳು ಕೂಡ ಆತನ ಕೈ, ಕಾಲಿನಲ್ಲಿದೆ. ಅದರಲ್ಲಿ 5 ಬಾರಿ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರೆ, ಇನ್ನುಳಿದ 4 ಬಾರಿ ಸ್ಥಳೀಯ ನಾಟಿ ವೈದ್ಯರಿಂದ ಔಷಧಿಯನ್ನು ಪೋಷಕರು ಕೊಡಿಸಿದ್ದಾರೆ. ಆದರೆ ಇಲ್ಲಿಯವರೆಗೂ ಆ ಹಾವು ಪ್ರಜ್ವಲ್ ಬಿಟ್ಟು ಯಾರ ಕಣ್ಣಿಗೂ ಸಹ ಕಂಡಿಲ್ಲ ಇದು ಅಚ್ಚರಿಯನ್ನುಂಟು ಮಾಡಿದೆ. 9 ಬಾರಿ ಈ ಬಾಲಕನೊಬ್ಬನಿಗೆ ಮಾತ್ರ ಒಂದೇ ಹಾವು ಕಚ್ಚಿರುವುದಾಗಿ ಹೇಳುತ್ತಿರುವುದು ಸಹ ಹಲವು ಅನುಮಾನಕ್ಕೂ ಸಹ ಎಡೆಮಾಡಿಕೊಟ್ಟಿದೆ. ಇನ್ನು ಪ್ರತಿ ಬಾರಿ ಹಾವು ಕಚ್ಚಿದೆವೆಂದಾಗ ಸಾವಿರಾರು ರೂಪಾಯಿ ಖರ್ಚು ಮಾಡಿ ಈತನ ಪೋಷಕರು ಮಗನಿಗೆ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಹಾವಿನಿಂದ ಮುಕ್ತಿ ಕೊಡಿಸು ಎಂದು ಪಾಲಕರು ದೇವರುಗಳ ಮೊರೆ ಹೋಗುತ್ತಿದ್ದಾರೆ.
ನನ್ನ ಮಗ ಚಿತ್ತಾಪುರ ತಾಲೂಕಿನ ರೇವೂರ ಗ್ರಾಮದಲ್ಲಿರುವ ಶ್ರೀ ಸಚ್ಚಿದಾನಂದ ಪ್ರೌಢ ಶಾಲೆಯಲ್ಲಿ 9ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದು, ಮನೆಯಿಂದ ದಿನಾಲು ಶಾಲೆಗೆ ಹೋಗಿ ಬರುತ್ತಿದ್ದಾನೆ. ಕಳೆದ ಜುಲೈ 3 ರಿಂದ ಇದುವರೆಗೂ ಅಂದರೆ ಸುಮಾರು ಒಂದುವರೆ, ಎರಡು ತಿಂಗಳೊಳಗಾಗಿ ನಿರಂತರವಾಗಿ 9 ಬಾರಿ ಹಾವು ಕಚ್ಚಿದೆ ಎಂದು ಮಗು ಹೇಳಿದ್ದಾನೆ. ಮಾನಸಿಕ ಮಾಡಿಕೊಂಡಿರಬೇಕೆಂದು ಎಂದುಕೊಂಡರೆ, ಹಾವು ಕಚ್ಚಿದ ಗಾಯ ಕೈಗೆ ಮತ್ತು ಕಾಲಿಗೆ ಕಾಣಿಸುತ್ತದೆ ಮತ್ತು ರಕ್ತ ಚಿಮ್ಮುತ್ತದೆ. ಕಾರದ ಪುಡಿ, ಬೆಣಸಿನ ಕಾಯಿ ಅವನಿಗೆ ತಿನಿಸಿದರೆ ಯಾವುದೇ ಪರಿಣಾಮ ಬೀರದೆ ಇದ್ದಾಗ ನಾವು ಹಾವು ಕಚ್ಚಿರುವುದು ಖಚಿತ ಪಡಿಸಿಕೊಂಡು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದೇವೆ. ಜೊತೆಗೆ ಜ್ಯೋತಿಷರ ಬಳಿ ಕೇಳಿ ನೋಡಿದಾಗ ನಾಗದೋಷ ಇರಬಹುದು ಎಂದಾಗ ನಮ್ಮ ಹೊಲದಲ್ಲಿ ತಾಯಮ್ಮ ದೇವಿ ಚಿಕ್ಕ ಗುಡಿ ನಿರ್ಮಿಸಿ ಅಲ್ಲಿ ಬೆಳ್ಳಿ ನಾಗಮೂರ್ತಿ ಸ್ಥಾಪಿಸಿ ವಿಶೇಷ ಪೊಜೆ ಸಹ ಕಳೆದ ನಾಗಪಂಚಮಿ ಹಬ್ಬದಂದು ಮಾಡಿದ್ದೇವೆ. ಆದರೂ ಸಹ ಮತ್ತೆ ಮೊನ್ನೆ ಅಂದರೆ ಆಗಸ್ಟ್ 27 ರಂದು ಹಾವು ಕಚ್ಚಿದೆ. ಒಂದೇ ಹಾವು ಪದೇ ಪದೇ ಹಾವು ಕಚ್ಚಿತ್ತಿದೆ ಎಂದು ಮಗ ಹೇಳುತ್ತಿದ್ದಾನೆ. ಏನು ಮಾಡಬೇಕೆಂದು ಗೊತ್ತಾಗುತ್ತಿಲ್ಲ. ದೇವರ ಮೊರೆ ಹೋಗುತ್ತಿದ್ದೇವೆ ಎನ್ನುತ್ತಾರೆ ಬಾಲಕನ ತಂದೆ ವಿಜಯಕುಮಾರ್. ಒಟ್ಟಾರೆ ಹಾವಿನ ಕಾಟ ಹೆಚ್ಚಾಗಿರುವುದರಿಂದ ಕುಟುಂಬಸ್ಥರು ತೊಂದರೆ ಅನುಭವಿಸುವಂತಾಗಿದೆ.
(ವರದಿ: ಎಸ್.ಬಿ.ರೆಡ್ಡಿ, ಕಲಬುರಗಿ)