Kalaburagi News: ಹಾಡುಹಗಲೇ ಪತ್ನಿಯನ್ನೆ ಗುಂಡಿಕ್ಕಿ ಕೊಂದ ಪತಿ; ಕೌಟುಂಬಿಕ ಕಲಹವೇ ಕೊಲೆಗೆ ಕಾರಣ
Sep 15, 2023 11:19 AM IST
ಹಾಡುಹಗಲೇ ಪತ್ನಿಯನ್ನೆ ಗುಂಡಿಕ್ಕಿ ಕೊಂದ ಪತಿ; ಕೌಟುಂಬಿಕ ಕಲಹವೇ ಕೊಲೆಗೆ ಕಾರಣ
- ಕಲಬುರಗಿ ಜಿಲ್ಲೆಯ ಅಲ್ಲೂರ(ಕೆ) ಗ್ರಾಮದಲ್ಲಿ ಗುರುವಾರ ಪ್ರತಿ ವರ್ಷದಂತೆ ಈ ವರ್ಷವೂ 100 ಎತ್ತುಗಳ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಇಂತಹ ಸಮಯದಲ್ಲಿ ಕುಡಿದ ಮತ್ತಿನಲ್ಲಿ ಪತ್ನಿ ಊರಾದ ಅಲ್ಲೂರ(ಕೆ) ಗ್ರಾಮಕ್ಕೆ ತೆರಳಿ ಪತ್ನಿಯೊಂದಿಗೆ ಜಗಳವಾಡಿ ಅವಳ ಎದೆಗೆ ಗುಂಡಿಕ್ಕಿ ಹೊಡೆದು ಪರಾರಿಯಾಗಿದ್ದಾನೆ.
ಕಲಬುರಗಿ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯೊಬ್ಬ ಕುಡಿದ ಅಮಲಿನಲ್ಲಿ ತವರು ಮನೆಯಲ್ಲಿದ್ದ ಪತ್ನಿ ಮನೆಗೆ ಹೋಗಿ ಗುಂಡಕ್ಕಿ ಕೊಲೆ ಮಾಡಿದ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ಅಲ್ಲೂರ (ಕೆ) ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ. ಹನಮವ್ವ (36) ವರ್ಷದ ಮಹಿಳೆ ಪತಿಯಿಂದ ಹತ್ಯೆಯಾದ ಮಹಿಳೆ ಎಂದು ತಿಳಿದು ಬಂದಿದ್ದು, ಬಸವರಾಜ ಎಂಬ ಪತಿಯೇ ಕೊಲೆ ಮಾಡಿದವ ಎಂದು ಹೇಳಲಾಗುತ್ತಿದೆ.
ಅಲ್ಲೂರ (ಬಿ) ಗ್ರಾಮದಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಬಸವರಾಜ ಅಲ್ಲೂರ(ಕೆ) ಗ್ರಾಮದ ಹಣಮವ್ವ ಎನ್ನುವವರೊಂದಿಗೆ ಮದುವೆಯಾಗಿದ್ದು ಇವರಿಗೆ 4 ಮಕ್ಕಳು ಇದ್ದು ಇವರಿಬ್ಬರ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಅವರ ಪತ್ನಿ ಹನಮವ್ವ ಕೆಲ ತಿಂಗಳಿಂದ ತವರು ಮನೆಯಲ್ಲಿ ಬಂದು ಸೇರಿದಳು. ಮದುವೆಯಾದಗಿನಿಂದ ಕಿರುಕುಳ ನೀಡುತ್ತಿದ್ದ ಎಂದು ಹೇಳಲಾಗುತ್ತಿದೆ. ಹಾಗಾಗಿ ಹನಮವ್ವ ಗಂಡನ ಕಿರುಕುಳ ಬೇಸತ್ತು ತವರು ಮನೆ ಸೇರಿದಳು. ಬಸವರಾಜ ಆಗಾಗ ತನ್ನ ಪತ್ನಿ ತವರು ಮನೆಗೆ ಬಂದು ಕಾರಣ ವಿಲ್ಲದೆ ಜಗಳ ಮಾಡುತ್ತಿದ್ದ ಎನ್ನಲಾಗುತ್ತಿದೆ.
ಗುರುವಾರ ಅಲ್ಲೂರ(ಕೆ) ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ 100 ಎತ್ತುಗಳ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಇಂತಹ ಸಮಯದಲ್ಲಿ ಕುಡಿದ ಮತ್ತಿನಲ್ಲಿ ಪತ್ನಿ ಊರಾದ ಅಲ್ಲೂರ(ಕೆ) ಗ್ರಾಮಕ್ಕೆ ತೆರಳಿ ಪತ್ನಿಯೊಂದಿಗೆ ಜಗಳವಾಡಿ ಅವಳ ಎದೆಗೆ ಗುಂಡಿಕ್ಕಿ ಹೊಡೆದು ಪರಾರಿಯಾಗಿದ್ದಾನೆ. ಗುಂಡು ಎದೆಗೆ ಬಿದ್ದ ಕಾರಣ ಹಣಮವ್ವ ಸ್ಥಳದಲ್ಲಿಯೇ ರಕ್ತದ ಮಡುವಿನಲ್ಲಿ ಬಿದ್ದು ಜೀವ ಕಳೆದುಕೊಂಡಿದ್ದಾಳೆ. ಘಟನಾ ಸ್ಥಳಕ್ಕೆ ಚಿತ್ತಾಪುರ ಸಿಪಿಐ ಪ್ರಕಾಶ ಯಾತನೂರ, ಪಿಎಸ್‌ಐ ಶ್ರೀಶೈಲ ಅಂಬಾಟಿ ಭೆಟ್ಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಶೊಧ ನಡೆಸಿದ್ದಾರೆ.
(ವರದಿ: ಎಸ್.ಬಿ.ರೆಡ್ಡಿ, ಕಲಬುರಗಿ)