logo
ಕನ್ನಡ ಸುದ್ದಿ  /  ಕರ್ನಾಟಕ  /  Kalaburagi News: ಕ್ರಿಮಿನಾಶಕ ದೇಹಕ್ಕೆ ಸೇರಿ ನಾಲ್ವರು ರೈತರು ಅಸ್ವಸ್ಥ

Kalaburagi News: ಕ್ರಿಮಿನಾಶಕ ದೇಹಕ್ಕೆ ಸೇರಿ ನಾಲ್ವರು ರೈತರು ಅಸ್ವಸ್ಥ

HT Kannada Desk HT Kannada

Oct 09, 2023 12:34 PM IST

google News

ಕ್ರಿಮಿನಾಶಕ ದೇಹಕ್ಕೆ ಸೇರಿ ನಾಲ್ವರು ರೈತರು ಅಸ್ವಸ್ಥ

    • ಬೆಳೆಗೆ ಕ್ರಿಮಿನಾಶಕ ಸಿಂಪಡಣೆ ಮಾಡುವ ಸಂದರ್ಭದಲ್ಲಿ ರೈತರ ದೇಹ ಸೇರಿದ ವಿಷ. ಆಸ್ಪತ್ರೆಯಲ್ಲಿ ಜೀವನ್ಮರಣಹೊಂದಿಗೆ ಹೋರಾಟ ಮಾಡುತ್ತಿರುವ ರೈತರು.
 ಕ್ರಿಮಿನಾಶಕ ದೇಹಕ್ಕೆ ಸೇರಿ ನಾಲ್ವರು ರೈತರು ಅಸ್ವಸ್ಥ
ಕ್ರಿಮಿನಾಶಕ ದೇಹಕ್ಕೆ ಸೇರಿ ನಾಲ್ವರು ರೈತರು ಅಸ್ವಸ್ಥ

ಕಲಬುರಗಿ: ಬೆಳೆಗಳನ್ನು ರಕ್ಷಿಸಲು ಕ್ರೀಮಿ ಕೀಟಗಳನ್ನು ಸಾಯಿಸಲು ಕ್ರಿಮಿನಾಶಕ ಔಷಧಿಗಳು ರೈತರು ಸಿಂಪಡಣೆ ಮಾಡುವುದು ಸಾಮಾನ್ಯ. ಆದರೆ, ಸ್ವಲ್ಪ ನಿರ್ಲಕ್ಷ್ಯ ವಹಿಸಿದ್ದರೆ ಅಪಾಯ ಎಂಬುದಕ್ಕೆ ಇತ್ತೀಚೆಗೆ ಕ್ರಿಮಿನಾಶಕ ದೇಹಕ್ಕೆ ಸೇರಿ ಚಿಕಿತ್ಸೆ ಫಲಕಾರಿಯಾಗದೆ ರೈತನೊಬ್ಬ ಮೃತಪಟ್ಟ ಘಟನೆ ಬೆನ್ನಲೆ ಮತ್ತೆ ನಾಲ್ವರು ರೈತರು ಕ್ರಿಮಿನಾಶಕ ದೇಹಕ್ಕೆ ಸೇರಿದ ಪರಿಣಾಮ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಚಿತ್ತಾಪುರ ತಾಲೂಕಿನ ಹಲಕಟ್ಟಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಆರ್.ಬಿ.ನಗರ ತಾಂಡಾದ ಒಂದೇ ಕುಟುಂಬದ ನಾಲ್ವರು ರೈತರ ದೇಹಕ್ಕೆ ಕ್ರಿಮಿನಾಶಕ ಸೇರಿ ಅಸ್ವಸ್ಥಗೊಂಡು ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಜೀವನ್ಮರಣದೊಂದಿಗೆ ಹೋರಾಟ ನಡೆಸುತ್ತಿದ್ದಾರೆ. ಸುನೀಲ್ ಜಾಧವ್(34), ಅನೀಲ್ ಜಾಧವ್(22), ಕುಮಾರ್(30) ಮತ್ತು ಖೇಮು ರಾಠೋಡ್(32) ಅಸ್ವಸ್ಥರಾಗಿದ್ದಾರೆ. ನಾಲ್ವರು ಕೂಡ ಒಂದೇ ಕುಟುಂಬದವರಾಗಿದ್ದು, ಕಳೆದ ಗುರುವಾರ ತಮ್ಮ ಜಮೀನಿನಲ್ಲಿ ಬೆಳದಿದ್ದ ಹತ್ತಿ ಬೆಳೆಗೆ ಕ್ರಿಮಿನಾಶಕ ಸಿಂಪಡಣೆ ಮಾಡಲು ಹೋಗಿದ್ದರು. ಹತ್ತಿ ಎಲೆಗಳಿಗೆ ಬರುವ ಎಲೆ ಚುಕ್ಕಿ ರೋಗ ಸೇರಿದಂತೆ ಇನ್ನಿತರ ಸಮಸ್ಯೆಗಳ ನಿವಾರಣೆಗಾಗಿ ಸಿಂಪಡಣೆ ಮಾಡುವ ಮೋನೋಕ್ರೋಟಾಪಸ್ ಸಿಂಪಡಣೆ ಮಾಡಿದ್ದರು.

ಕ್ರಿಮಿನಾಶಕ ಸಿಂಪಡಣೆ ಮಾಡುವಾಗ ಯಾವುದೇ ಸಮಸ್ಯೆ ಆಗಿರಲಿಲ್ಲ. ಆದರೆ ಮಾರನೇ ದಿನದಿಂದ ಈ ನಾಲ್ವರಿಗೂ ಕೂಡ ವಾಂತಿ ಭೇದಿ, ತಲೆಸುತ್ತು ಆರಂಭವಾಗಿದೆ. ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಕೂಡ ಚಿಕಿತ್ಸೆ ಪಲಕಾರಿಯಾಗದೆ ಇರುವುದರಿಂದ ಕಲಬುರಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ರೈತರು ಯಾವುದೇ ಸುರಕ್ಷಿತ ಕ್ರಮ ಕೈಗೊಳ್ಳದೇ ಇರುವುದರಿಂದ ಬಾಯಿ ಮತ್ತು ಮೂಗಿನ ಮೂಲಕ ಈ ರೈತರ ದೇಹಕ್ಕೆ ಸೇರಿ ವಿಷವಾಗಿ ಮಾರ್ಪಾಟ್ಟಿದೆ ಹೀಗಾಗಿ ಈ ನಾಲ್ವರನ್ನು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕಳೆದ ವಾರದ ಹಿಂದೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ತರ್ಕಸಪೇಟ್ ಗ್ರಾಮದ ಅಂಬರೀಶ್ ( 26) ವರ್ಷದ ಯುವ ರೈತ ತನ್ನ ಜಮೀನಿನಲ್ಲಿ ಬೆಳದಿದ್ದ ಹತ್ತಿ ಬೆಳೆಗೆ ಕ್ರಿಮಿನಾಶಕ ಸಿಂಪಡಣೆ ಮಾಡಿದ ಬಳಿಕ ಮನೆಗೆ ಬಂದ ನಂತರ ವಾಂತಿಭೇದಿ ಆರಂಭವಾಗಿತ್ತು. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದರೂ ಕೂಡ ಚಿಕಿತ್ಸೆ ಫಲಕಾರಿಯಾಗದೆ ರೈತ ಅಂಬರೀಶ್ ಮೃತಪಟ್ಟಿದ್ದನು. ಮದುವೆಯಾಗಿ ಒಂದು ವರ್ಷ ಮಾತ್ರವಾಗಿತ್ತು. ಆದರೆ, ಹತ್ತಿ ಬೆಳೆ ರಕ್ಷಿಸಿಕೊಳ್ಳಲು ಹೋಗಿ ತನ್ನ ಜೀವವನ್ನೆ ಕಳೆದುಕೊಂಡಿದ್ದನು. ಇದೀಗ ಮತ್ತೆ ನಾಲ್ವರು ರೈತರು ಕ್ರಿಮಿನಾಶಕ ಸಿಂಪಡಣೆ ಮಾಡುವಾಗ ದೇಹಕ್ಕೆ ಸೇರಿ ಅಸ್ವಸ್ಥಗೊಂಡು ಜೀವನ್ಮರಣದೊಂದಿಗೆ ಹೋರಾಟ ನಡೆಸುತ್ತಿದ್ದಾರೆ. ರೈತರು ಕ್ರಿಮಿನಾಶಕ ಸಿಂಪಡಿಸುವ ಸಂದರ್ಭದಲ್ಲಿ ತುಂಬಾ ಎಚ್ಚರಿಕೆ ವಹಿಸಬೇಕು ಮತ್ತು ಮುಂಜಾಗ್ರತಕ್ರಮವಾಗಿ ದೇಹಕ್ಕೆ ಹೋಗದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಕ್ರಿಮಿನಾಶಕ ದೇಹಕ್ಕೆ ಸೇರಿದರೆ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯಬೇಕು. ವಿಳಂಬವಾದರೆ ಸಾವು ಸಹ ಸಂಭವಿಸುವ ಸಾಧ್ಯತೆಗಳಿವೆ. ಹೀಗಾಗಿ ರೈತರು ತಮ್ಮ ಬೆಳೆ ರಕ್ಷಣೆಗೆ ಹೋಗಿ ಅಪಾಯ ತಂದುಕೊಳ್ಳಬಾರದು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸಮದ್‌ ಪಟೇಲ್‌ ರೈತರಿಗೆ ಸಲಹೆ ನೀಡಿದ್ದಾರೆ.

(ವರದಿ: ಎಸ್.ಬಿ.ರೆಡ್ಡಿ, ಕಲಬುರಗಿ)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ