logo
ಕನ್ನಡ ಸುದ್ದಿ  /  ಕರ್ನಾಟಕ  /  Kalaburagi News: ಶೀಘ್ರದಲ್ಲೇ ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಕೈಗಾರಿಕಾ ನೀತಿ ಜಾರಿ: ಸಚಿವ ಶರಣಬಸಪ್ಪಗೌಡ ದರ್ಶನಾಪುರ ಭರವಸೆ

Kalaburagi News: ಶೀಘ್ರದಲ್ಲೇ ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಕೈಗಾರಿಕಾ ನೀತಿ ಜಾರಿ: ಸಚಿವ ಶರಣಬಸಪ್ಪಗೌಡ ದರ್ಶನಾಪುರ ಭರವಸೆ

HT Kannada Desk HT Kannada

Jun 25, 2023 04:41 PM IST

google News

ಸಣ್ಣ ಕೈಗಾರಿಕಾ ಸಚಿವ ಶರಣಬಸಪ್ಪ ದರ್ಶನಾಪುರ

    • Kalaburagi News: ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ಕಲಬುರಗಿ ನಗರದ ಹೊರವಲಯ ನಂದೂರ ಕೈಗಾರಿಕಾ ವಸಾಹತು ಪ್ರದೇಶದಲ್ಲಿ 100 ಎಕರೆ, ಭೂಮಿ ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳ ಜೊತೆ ಚರ್ಚಿಸಿದ್ದೇನೆ ಎಂದು ಸಣ್ಣ ಕೈಗಾರಿಕಾ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.
ಸಣ್ಣ ಕೈಗಾರಿಕಾ ಸಚಿವ ಶರಣಬಸಪ್ಪ ದರ್ಶನಾಪುರ
ಸಣ್ಣ ಕೈಗಾರಿಕಾ ಸಚಿವ ಶರಣಬಸಪ್ಪ ದರ್ಶನಾಪುರ

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ (Kalyana Kara) ಕೈಗಾರಿಕಾ ಬೆಳವಣಿಗೆಗೆ ಪ್ರೋತ್ಸಾಹಿಸುವ ಹಾಗೂ ಹೊಸ ಯೋಜನೆ ರೂಪಿಸುವ ನಿಟ್ಟಿನಲ್ಲಿ ವಿಶೇಷ ಕೈಗಾರಿಕಾ ನೀತಿ ಶೀಘ್ರದಲ್ಲಿ ಜಾರಿಗೆ ತರಲಾಗುವುದು ಎಂದು ಸಣ್ಣ ಕೈಗಾರಿಕಾ ಸಚಿವ ಶರಣಬಸಪ್ಪ ದರ್ಶನಾಪುರ (Minister Sharanbasappa Darshanapura) ಹೇಳಿದರು.

ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ(ಕೆಕೆಸಿಸಿಐ) ಆಯೋಜಿಸಿದ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗಕ್ಕೆ ಪ್ರತ್ಯೇಕ ಕೈಗಾರಿಕಾ ನೀತಿ ರೂಪಿಸುವ ಬಗ್ಗೆ ಚುನಾವಣಾ ಪ್ರಣಾಳಿಕೆಯಲ್ಲೇ ಘೋಷಿಸಲಾಗಿದೆ ಎಂದರು.

ಈಗ ಅದನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಬೃಹತ್ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಅವರೊಂದಿಗೆ ಚರ್ಚಿಸಿ ಸಮಾಲೋಚಿಸಿ ವಿಶೇಷ ಕೈಗಾರಿಕಾ ನೀತಿ ಜಾರಿಗೆ ತರಲಾಗವುದು ಎಂದು ಸಚಿವರು ಸ್ಪಷ್ಟಪಡಿಸಿದರು.

ಅಧಿವೇಶನ ಮುಗಿದ ನಂತರ ಈ ಭಾಗದ ವಾಣಿಜ್ಯ ಸಂಸ್ಥೆ ಪದಾಧಿಕಾರಿಗಳ ಹಾಗೂ ಉದ್ಯಮಿಗಳೊಂದಿಗೆ ಉನ್ನತಾಧಿಕಾರ ಮಟ್ಟದ ಸಭೆಯನ್ನು ಬೆಂಗಳೂರಿನಲ್ಲಿ ಕರೆಯಲು ನಿರ್ಧರಿಸಲಾಗಿದೆ. ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ನಗರದ ಹೊರವಲಯ ನಂದೂರ ಕೈಗಾರಿಕಾ ವಸಾಹತು ಪ್ರದೇಶದಲ್ಲಿ 100 ಎಕರೆ, ಭೂಮಿ ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳ ಜೊತೆ ಚರ್ಚಿಸಿದ್ದೇನೆ ಎಂದರು.

ಕೊವಿಡ್ ಸಮಯದಲ್ಲಿ ನಷ್ಟಕ್ಕೊಳಗಾದ ಉದ್ಯಮಿಗಳ ಪುನಶ್ಚೇತನಕ್ಕೆ ಕ್ರಮ‌ ಕೈಗೊಳ್ಳಬೇಕೆಂಬ ಉದ್ಯಮಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ಈ ಕುರಿತು ಅಧಿಕಾರಿಗಳೊಂದಿಗೆ ಒಂದು ಸುತ್ತಿನ‌ ಮಾತುಕತೆ ನಡೆಸಲಾಗಿದೆ. ಈಗ ಏನೇನು ರಿಯಾಯಿತಿ ನೀಡಲಾಗಿದೆ.‌ ಮುಂದೇನು ನೀಡಬೇಕೆಂಬುದನ್ನು ನಿರ್ಧರಿಸಲಾಗುವುದು ಎಂದು‌ ಸಚಿವರು ಭರವಸೆ ನೀಡಿದರು.

ಚಿತ್ತಾಪುರದಲ್ಲಿ 27 ಎಕರೆ ಕೈಗಾರಿಕಾ ವಸಾಹತು ಪ್ರದೇಶಕ್ಕೆ ಸಂಪರ್ಕ ರಸ್ತೆ ಇಲ್ಲದಿದ್ದಕ್ಕೆ ಕೈಗಾರಿಕಾ ಬೆಳವಣಿಗೆ ಕುಂಠಿತಗೊಂಡಿದೆ. ಆದರೆ ಈಗ ಮೂರು ಎಕರೆ ಭೂಮಿ ಸ್ವಾಧೀನಪಡಿಸಿಕೊಂಡು ಸಂಪರ್ಕ ರಸ್ತೆ ಅಭಿವೃದ್ಧಿಪಡಿಸಲಾಗಿದೆ.‌ ಆದರೆ ಇನ್ನೂ ಇಲಾಖೆಗೆ ಹಸ್ತಾಂತರಗೊಂಡಿಲ್ಲ.‌ ಇದನ್ನು ಬೇಗ ಸಾಕಾರಗೊಳಿಸಲಾಗುವುದು ಎಂದು ಸಚಿವರು ಉದ್ಯಮಿಗಳ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜುವೆಲ್ಲರಿ‌ ಪಾರ್ಕ್

ಕೇಂದ್ರ ಸರ್ಕಾರದ ನೆರವಿನ ಒಂದು ಕಲಬುರಗಿಯಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ಜುವೆಲ್ಲರಿ ಪಾರ್ಕ್ ತುಮಕೂರಿಗೆ ತೆಗೆದುಕೊಂಡು ಹೋಗುವ ಪ್ರಯತ್ನ ನಡೆದಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಹಿಂದಿನ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಮುರುಗೇಶ ನಿರಾಣಿ ಜುವೆಲ್ಲರಿ ಪಾರ್ಕ್ ಸ್ಥಾಪನೆ ಮಾಡುವ ಬಗ್ಗೆ ಆಸಕ್ತಿ ಹೊಂದಿದ್ದರು ಎಂದು ಚಿನ್ನದ ವ್ಯಾಪಾರಿ ರಾಘವೇಂದ್ರ ಮೈಲಾಪುರ ಸಚಿವರ ಗಮನಕ್ಕೆ ತಂದರು.

ಇದಕ್ಕೆ ಉತ್ತರ ನೀಡಿದ ಸಚಿವ ದರ್ಶನಾಪುರ, ಪಾರ್ಕ್ ಸ್ಥಾಪನೆಗಾಗಿ ಸಣ್ಣ ಕೈಗಾರಿಕಾ ಇಲಾಖೆಯಿಂದ 50 ಎಕರೆ ಭೂಮಿ ನೀಡಲಾಗುವುದು.‌ ಒಟ್ಟಾರೆ ಈ ವಿಷಯ ಯಾವ ಹಂತದಲ್ಲಿದೆ‌ ಎಂಬುದನ್ನು ಪರಾಮರ್ಶಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಈ ಭಾಗದಲ್ಲಿ ಕೈಗಾರಿಕೆಗಳು ಇಲ್ಲದೆ ಇರುವುದರಿಂದ ಇಲ್ಲಿನ ನಿರುದ್ಯೋಗಿಗಳು ವಾಣಿಜ್ಯ ನಗರಿಗಳಾದ ಮುಂಬೈ, ಬೆಂಗಳೂರು, ಪುಣೆಗಳಿಗೆ ವಲಸೆ ಹೋಗಿ ಕೆಲಸ ಮಾಡುವಂತಾಗಿದೆ. ಅದನ್ನು ತಪ್ಪಿಸಲು ಈ ಭಾಗದಲ್ಲಿಯೇ ಕೈಗಾರಿಕೆಗಳ ಸ್ಥಾಪನೆಗೆ ಸರ್ಕಾರ ಚಿಂತನೆ ನಡೆಸಲಿದೆ ಎಂದರು.

ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್, ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಶಶಿಕಾಂತ ಪಾಟೀಲ್, ಹಿಂದಿನ ಅಧ್ಯಕ್ಷ ಪ್ರಶಾಂತ ಮಾನಕರ, ಗೌರವ ಕಾರ್ಯದರ್ಶಿ ಮಂಜುನಾಥ ಜೇವರ್ಗಿ ಸೇರಿದಂತೆ ಇದ್ದರು.

ವರದಿ: ಎಸ್.ಬಿ.ರೆಡ್ಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ